ಬೆಳಗ್ಗಿನ ಹೊತ್ತು ಮನುಷ್ಯರು ಭಕ್ತಿಯಿಂದ ದೇಗುಲ ಪ್ರದಕ್ಷಿಣೆ ಹಾಕುವುದು, ದೇವರಿಗೆ ಪೂಜೆ ಮಾಡುವುದನ್ನೆಲ್ಲ ನೀವು ಕಂಡಿರಬಹುದು. ಆದರೆ ನಾಯಿಯೊಂದು ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕುವುದನ್ನ ನೀವು ಕಂಡಿದ್ದೀರಾ?. ಅಂತಹದ್ದೊಂದು ವಿಚಿತ್ರ ಘಟನೆ ಇದೀಗ ನಡೆದಿದ್ದು, ಇದು ಗ್ರಾಮಸ್ಥರಲ್ಲಿ ಅಚ್ಚರಿ ಮೂಡಿಸಿದೆ. ಸದ್ಯ, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಈ ಘಟನೆ ನಡೆದಿರುವುದು ಬಸವನ ಬಾಗೇವಾಡಿ ತಾಲೂಕಿನ ಹುಣಶ್ಯಾಳ ಪಿ ಬಿ ಗ್ರಾಮದಲ್ಲಿ.ಇಲ್ಲಿನ ರಾಜ್ಯದ ಹೆದ್ದಾರಿ ಪಕ್ಕದಲ್ಲಿರುವ ಲಕ್ಕಮ್ಮ ದೇವಿಯ ಗುಡಿಯ ಸುತ್ತ ನಾಯಿಯೊಂದು ಬೆಳಗ್ಗೆ ನಾಲ್ಕು ಗಂಟೆಯಿಂದ ಪ್ರದಕ್ಷಿಣೆ ಹಾಕಲು ಪ್ರಾರಂಭಿಸಿದೆ. ನಿರಂತರವಾಗಿ ಗುಡಿಗೆ ಪ್ರದಕ್ಷಿಣೆ ಹಾಕುತ್ತಿದ್ದ ನಾಯಿಯನ್ನು ಕಂಡು ಗ್ರಾಮಸ್ಥರು ಅಚ್ಚರಿ ಪಟ್ಟಿದ್ದಾರೆ. ಜೊತೆಗೆ ಸ್ಥಳಿಯರು ಈ ಘಟನೆಯನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ.
ಬೆಳಗ್ಗಿನ ಹೊತ್ತು ಶ್ವಾನವೊಂದು ಈ ರೀತಿ ದೇಗುಲಕ್ಕೆ ಪ್ರದಕ್ಷಿಣೆ ಹಾಕುವುದನ್ನು ಕಂಡು ಕೆಲವರು ನಾಯಿಯನ್ನು ಹೊರಗೆ ಓಡಿಸಿದ್ದಾರೆ. ಆದರೆ ಆ ನಾಯಿ ಮತ್ತೆ ಬಂದು ಗುಡಿಯ ಸುತ್ತ ಪ್ರದಕ್ಷಿಣೆ ಹಾಕಿದೆ. ಸದ್ಯ, ಈ ಘಟನೆ ಎಲ್ಲರನ್ನೂ ಚಕಿತಗೊಳಿಸಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.



