ಭಾರತ್ ಜೋಡೊ ಯಾತ್ರೆ ವೇಳೆ ಕೆಜಿಎಫ್-2 ಚಿತ್ರದ ಸಂಗೀತವನ್ನು ಅನುಮತಿ ಇಲ್ಲದೆ ಬಳಕೆ ಮಾಡಿಕೊಂಡಿರುವುದಕ್ಕೆ ಎಂಆರ್ಟಿ ಸಂಗೀತ ಕಂಪನಿಯಿಂದ ನ್ಯಾಯಾಲಯಕ್ಕೆ ದಾವೆ ಹೂಡಿರುವ ಹಿನ್ನೆಲೆಯಲ್ಲಿ ನಟಿ ರಮ್ಯಾ ಅವರು ಲಹರಿ ಮ್ಯೂಸಿಕ್ ಸಂಸ್ಥೆಯ ಲಹರಿ ವೇಲು ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೆಜಿಎಫ್-2 ಚಿತ್ರದ ಸಂಗೀತವನ್ನು ಅನುಮತಿ ಇಲ್ಲದೆ ಬಳಸಿಕೊಂಡಿರುವ ಆರೋಪದ ಮೇರೆಗೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐಎನ್ಸಿ) ಮತ್ತು ಭಾರತ್ ಜೋಡೊ ಯಾತ್ರೆಯ ಅಧಿಕೃತ ಟ್ವಿಟರ್ ಖಾತೆಗಳನ್ನು ಇದೇ 21ರವರೆಗೆ ತಾತ್ಕಾಲಿಕವಾಗಿ ನಿರ್ಬಂಧಿಸಲು ನಗರದ ವಾಣಿಜ್ಯ ನ್ಯಾಯಾಲಯ ಮಧ್ಯಂತರ ಆದೇಶ ಮಾಡಿತ್ತು. ಕೆಜಿಎಫ್-2 ಚಿತ್ರದ ಸಂಗೀತದ ಹಕ್ಕುಸ್ವಾಮ್ಯ ಹೊಂದಿರುವ ಎಂಆರ್ಟಿ ಮ್ಯೂಸಿಕ್ ಕಂಪನಿ ಸಲ್ಲಿಸಿರುವ ಅಸಲು ದಾವೆ ವಿಚಾರಣೆ ನಡೆಸಿದ ನಗರದ 86ನೇ ವಾಣಿಜ್ಯ ನ್ಯಾಯಾಲಯ ಈ ಕುರಿತಂತೆ ಆದೇಶಿಸಿದೆ.

ಯಾತ್ರೆಗೆ ಸಂಬಂಧಿಸಿದಂತೆ ಸೋಶಿಯಲ್ ಮೀಡಿಯಾದಲ್ಲಿ ಕೆಜಿಎಫ್-2 ಚಿತ್ರದ ಹಾಡನ್ನು ಇತ್ತೀಚೆಗೆ ಕಾಂಗ್ರೆಸ್ ಪಕ್ಷ ಬಳಸಿತ್ತು. ಅದರ ವಿರುದ್ಧ ಲಹರಿ ವೇಲು, ಹಕ್ಕು ಸ್ವಾಮ್ಯ ಕಾಯ್ದೆ (ಕಾಪಿ ರೈಟ್) ಉಲ್ಲಂಘನೆ ದೂರು ದಾಖಲಿಸಿದ್ದರು. ಈ ವಿಷಯ ಕೋರ್ಟ್ ಮೆಟ್ಟಿಲೇರಿತ್ತು. ಇದರಿಂದಾಗಿ ಕಾಂಗ್ರೆಸ್ ಟ್ವಿಟರ್ ಖಾತೆ ತಾತ್ಕಾಲಿಕವಾಗಿ ಬ್ಲಾಕ್ ಆಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ನ ಮಾಜಿ ಸಂಸದೆ ರಮ್ಯಾ, ಲಹರಿ ಆಡಿಯೋ ಕಂಪನಿ ಮುಖ್ಯಸ್ಥ ಲಹರಿ ವೇಲು ವಿರುದ್ಧ ಕಿಡಿಕಾರಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಮ್ಯಾ ಅವರು, ಲಹರಿ ವೇಲು ಬಿಜೆಪಿ ಟಿಕೆಟ್ ಪಡೆದು ಚುನಾವಣೆಗೆ ಸ್ಪರ್ಧಿಸುವ ತಯಾರಿಯಲ್ಲಿದ್ದಾರೆಯೇ? ಎಂದು ಪ್ರಶ್ನಿಸಿದ್ದಾರೆ. ‘ತುಂಬಾ ಜನ ಜನಪ್ರಿಯ ಕೆಜಿಎಫ್ ಚಿತ್ರದ ಹಾಡುಗಳನ್ನು ಅವರ ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡಿದ್ದಾರೆ. ಅದಕ್ಕೆ ಆಕ್ಷೇಪ ಎತ್ತದ ಲಹರಿ ವೇಲು, ಕಾಂಗ್ರೆಸ್ ಬಳಸಿದರೇ ಮಾತ್ರ ಅವರಿಗೆ ಸಮಸ್ಯೆಯಾಗಿದೆ’ ಎಂದು ಖಾರವಾಗಿ ಟ್ವೀಟ್ ಮಾಡಿದ್ದಾರೆ. ಲಹರಿ ವೇಲು ಅವರಿಗೆ ಬಿಜೆಪಿ ಟಿಕೆಟ್ ಬೇಕಾಗಿರಬಹುದು. ಅದಕ್ಕಾಗಿ ಅವರು ಪ್ರಯತ್ನಿಸುತ್ತಿರಬಹುದು. ಆ ಕಾರಣಕ್ಕೆ ಈ ರೀತಿ ಮಾಡುತ್ತಿರುವುದು ಬೇಸರದ ಸಂಗತಿ ಎಂದು ಲಹರಿ ವೇಲು ವಿರುದ್ಧ ನಟಿ ರಮ್ಯಾ ಕಿಡಿಕಾರಿದ್ಧಾರೆ.