ಕೆಂಪು ಕಲ್ಲಿನಿಂದ ನಿರ್ಮಿತವಾದ, ತಾಮ್ರದ ಹೊದಿಕೆಯೊಂದಿಗೆ ವಿಶೇಷವಾಗಿ ಕಾಣುವ ಬನಹೊಂದಿರುವ ಶಿವನ ದೇಗುಲವು ಪತ್ತೆಯಾಗಿದೆ.
ವಿರಾಜಪೇಟೆ ತಾಲೂಕಿನ ಕಾಕೋಟುಪರಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಾದ ಕುಂಜಿಲಗೇರಿ, ಅರಪಟ್ಟು, ಬೆಳ್ಳುಮಾಡು, ಕಂಡಂಗಮರೂರು, ಬೆಪ್ಪುನಾಡು ಖ್ಯಾತಿಯ ಗ್ರಾಮವಾಗಿದ್ದ ಬೆಳ್ಳುಮಾಡು ಗ್ರಾಮದ ಸರ್ವೇ ಸಂಖ್ಯೆ 76/10ರಲ್ಲಿ ಇಂದಿನ ಬೆಳ್ಳುಮಾಡು ದವಸ ಭಂಡಾರ ಸಹಕಾರ ನಿಯಮಿತ ಕಟ್ಟಡದ ಹಿಂಭಾಗದ ಸ್ಥಳದಲ್ಲಿ ಸುಮಾರು 13ನೇ ಶತಮಾನದಲ್ಲಿ ನಾಡು ದೇವನಾಗಿ ಸ್ಥಿತನಾಗಿದ್ದ ಶ್ರೀ ಮಾದೇವರಪ್ಪ ದೇವನ ದೇಗುಲ ಇದಾಗಿದೆ ಎಂದು ಗುರುತಿಸಲಾಗಿದೆ.
ಗ್ರಾಮದಲ್ಲಿ ಏಳಿಗೆ, ಅಭಿವೃದ್ಧಿ ಇಲ್ಲದೆ ಸಾವು- ನೊವುಗಳು ಸಂಭವಿಸುತಿತ್ತು. ಇದನ್ನು ಮನಗಂಡ ಗ್ರಾಮಸ್ಥರು 2009ರ ಅಕ್ಟೋಬರ್ನಲ್ಲಿ ಗ್ರಾಮದ ಶ್ರೀ ಅಯ್ಯಪ್ಪ ಶಾಸ್ತಾವು ದೇಗುಲದ ಜೀರ್ಣೋದ್ಧಾರ ಮಾಡುವ ಸಲುವಾಗಿ ದೇವಾಲದಯ ಆವರಣದಲ್ಲಿ ಪ್ರಶ್ನಾರ್ಥ ಕಾರ್ಯ ನಡೆಸಲಾಗಿತ್ತು. ಪ್ರಶ್ನಾಚಿಂತನೆಯಲ್ಲಿ ಕಂಡುಬಂದಂತೆ ಗ್ರಾಮಸ್ಥರು ದೇಗುಲದ ಕುರುಹುಗಳನ್ನು ಹುಡುಕಿ ತೆರಳಿದ ಸಂದರ್ಭದಲ್ಲಿ ದಟ್ಟಕಾಡು ಆವರಿಸಿಕೊಂಡಿದ್ದ ಜಾಗದಲ್ಲಿ ಭಗ್ನಗೊಂಡ ದೇವಾಲಯವು ಪತ್ತೆಯಾಯಿತು ಎಂದು ಮಾತಂಡ ಮನೆತನದ ಸದಸ್ಯರು ಹೇಳುತ್ತಾರೆ.
ಅನತಿ ದೂರದಲ್ಲಿ ಲಿಂಗದ ಪಾಣಿಪೀಠವು ದೊರಕಿತ್ತು. ದೇಗುಲದ ಮುಖ ಮಂಟಪ, ಪ್ರಾಂಗಣ, ಕೆಂಪು ಕಲ್ಲಿನಿಂದ ನಿರ್ಮಿತವಾದ ಬಲಿಪೀಠ ಮುಂತಾದವುಗಳು ಪತ್ತೆಯಾಗಿದೆ. ದೇವಾಲಯದ ಆವರಣಕ್ಕೆ ಹೊಂದಿಕೊಂಡಿರುವ ಕಾಫಿ ತೋಟದಲ್ಲಿ ಜೋಡಿ ನಾಗದೇವರ ನಾಗ ಕಲ್ಲು, ದೇಗುಲದ ಗರ್ಭಗುಡಿಗೆ ಅಳವಡಿಸುವ ಕುಂಭ ಕಳಶ ಮುಂತಾದವುಗಳು ಪತ್ತೆಯಾಗಿವೆಯ ಗ್ರಾಮದಲ್ಲಿ ನೆಲೆಸಿರುವ ಮಾತಂಡ ಕುಟುಂಬಸ್ಥರ ಮುಂದಾಳತ್ವದಲ್ಲಿ ಇದೀಗ ದೇಗುಲ ಪತ್ತೆಯಾದ 13 ವರ್ಷಗಳ ಬಳಿಕ ಜೀರ್ಣೋದ್ಧಾರಕ್ಕೆ ಗ್ರಾಮಸ್ಥರು ಮುಂದಾಗಿದ್ದಾರೆ.
ದೇಗುಲವು ಸುಮಾರು 700-800 ವರ್ಷಗಳ ಇತಿಹಾಸ ಹೊಂದಿರಬಹುದೆಂದು ಊಹಿಸಬಹುದಾಗಿದೆ. ಉತ್ಖನನ ಮಾಡಿದಂತೆ ದೇಗುಲದ ಅವಶೇಷಗಳು ಮತ್ತು ಇತಿಹಾಸವನ್ನು ತಿಳಿಯಬಹುದಾಗಿದೆ. ಗರ್ಭದೊಳಗೆ ಶಿವಲಿಂಗ ಪೀಠ ಮತ್ತು ರುದ್ರ ಭಾಗವು ದೊರೆತಿರುವುದರಿಂದ ಈಶ್ವರ ದೇವಾಲಯವೆಂದು ಗುರುತಿಸಲಾಗುತ್ತದೆ. ದೇಗುಲವು ಸಂಪೂರ್ಣವಾಗಿ ಸುಣ್ಣ ಮತ್ತು ಮರಳು ಹಾಗೂ ಕೆಂಪುಕಲ್ಲಿನಿಂದ ನಿರ್ಮಿಸಿದ್ದು, ಹೆಂಚುಗಳನ್ನು ಬಳಸಲಾಗಿದೆ. ಪ್ರಸ್ತುತ ಇನ್ನಷ್ಟುಅನ್ವೇಶಣೆ ಮಾಡಿದಲ್ಲಿ ಇತಿಹಾಸ ಅರಿಯಲು ಸಾಧ್ಯವಾಗುತ್ತದೆ