ಸಿಹಿಯಾದ ಹಣ್ಣು ದಾಳಿಂಬೆ ಯಾರಿಗಿಷ್ಟ ಇಲ್ಲ ಹೇಳಿ? ಮಕ್ಕಳಿಂದ ಹಿಡಿದು ಹಿರಿಯರೂ ಇಷ್ಟಪಡುವ ಈ ಕೆಂಪಾದ ಹಣ್ಣು ಹೇರಳವಾದ ಪೌಷ್ಟಿಕಾಂಶಗಳಿಂದ ಕೂಡಿದೆ. ಪ್ರೊಟೀನ್ ಹಾಗೂ ವಿಟಮಿನ್ ಹಾಗೂ ನ್ಯೂಟ್ರೀನ್ ಗಳ ಆಗರವಾಗಿರುವ ದಾಳಿಂಬೆಯು ಲೀತ್ರೇಸಿ ಕುಟುಂಬಕ್ಕೆ ಸೇರಿದೆ. ಪೋಮೋಗ್ರನೇಟ್ ಎಂದು ಕರೆಯಲ್ಪಡುವ ದಾಳಿಂಬೆಯು ಹತ್ತು ಹಲವು ಔಷಧೀಯ ಗುಣಗಳನ್ನು ಹೊಂದಿದೆ. ಬಹಳ ಮುಖ್ಯವಾದ ಸಂಗತಿಯೆಂದರೆ ಇದು ದೇಹದಲ್ಲಿನ ಹಿಮೋಗ್ಲೋಬಿನ್ ಅಂಶ ಹೆಚ್ಚಿಸುವಲ್ಲಿ ನೆರವಾಗುತ್ತದೆ. ಮಕ್ಕಳಲ್ಲಿ ಕಾಣಿಸಿಕೊಳ್ಳುವ ಜಂತುಹುಳಗಳ ನಿವಾರಣೆಗಾಗಿ ದಾಳಿಂಬೆ ಸೇವಿಸುವುದು ಉತ್ತಮ.ಹೊಟ್ಟೆಯಲ್ಲಿನ ಜಂತುಹುಳುಗಳ ನಾಶ ಮಾಡುವ ಶಕ್ತಿ ಇದಕ್ಕಿದೆ. ಇನ್ನು ವಿಟಮಿನ್ ಸಿ , ಈ ,ಪೊಟ್ಯಾಶಿಯಂ, ಪ್ರೊಟೀನ್ ಗಳು ಈ ಹಣ್ಣಿನಲ್ಲಿದ್ದು ಉತ್ತಮ ಆರೋಗ್ಯಕ್ಕೆ ಸಹಕಾರಿ. ದೇಹದ ಶಕ್ತಿ ಹೆಚ್ಚಿಸುವ ಇದು ನಿಶ್ಯಕ್ತಿ, ಕೊಲೆಸ್ಟ್ರಾಲ್ ಹಾಗೂ ರಕ್ತದೊತ್ತಡವನ್ನು ಕಡಿಮೆ ಮಾಡುವಲ್ಲಿಯೂ ಇದು ಉಪಯೋಗಕಾರಿ.

ದಾಳಿಂಬೆ ಹಣ್ಣು ಮಾತ್ರವಲ್ಲ, ಇದರ ಎಲೆಯೂ ಔಷಧೀಯ ಗುಣ ಹೊಂದಿದೆ. ಇದನ್ನು ತಿಂದರೆ ಕೆಮ್ಮು ದೂರಾಗುತ್ತದೆ. ಇದರ ಜೊತೆಗೆ ಸುಟ್ಟ ಗಾಯಗಳಿಗೆ ಇದು ರಾಮಬಾಣ. ದಾಳಿಂಬೆ ಎಲೆಯನ್ನು ಜಜ್ಜಿ ಸುಟ್ಟ ಗಾಯಗಳಿಗೆ ಹಚ್ಚಿದರೆ ಬಹುಬೇಗನೇ ವಾಸಿಯಾಗುತ್ತದೆ.ಆಯುರ್ವೇದದಲ್ಲಿಯೂ ಮಹತ್ವದ ಸ್ಥಾನ ಹೊಂದಿರುವ ದಾಳಿಂಬೆ ಬರೀ ಆರೋಗ್ಯವರ್ಧಕ ಮಾತ್ರವಲ್ಲ, ಸೌಂದರ್ಯವರ್ಧಕವೂ ಹೌದು. ಆದರೆ ಅದನ್ನು ತಿಳಿಯದ ನಾವು ದಾಳಿಂಬೆ ತಿಂದ ಬಳಿಕ ಅದರ ಸಿಪ್ಪೆಯನ್ನು ಹೆಚ್ಚಾಗಿ ಎಸೆಯುತ್ತೇವೆ. ಬದಲಿಗೆ ಇದನ್ನು ಎಸೆಯದೆ ಒಣಗಿಸಿ ಇಟ್ಟುಕೊಳ್ಳುವುದರಿಂದ ಹಲವು ಪ್ರಯೋಜನಗಳಿವೆ.
ದಾಳಿಂಬೆ ಸಿಪ್ಪೆ ಮುಖದಲ್ಲಿ ಮೂಡುವ ಮೊಡವೆಗಳನ್ನು ನಿವಾರಿಸುವಲ್ಲಿ ಸಹಕಾರಿ. ಸಿಪ್ಪೆಯಲ್ಲಿರುವ ಆಂಟಿ ಆಕ್ಸಿಡೆಂಟ್ ಗಳಿಗೆ ಮೊಡವೆಗಳನ್ನು ನಿವಾರಿಸುವ ಶಕ್ತಿ ಇದೆ. ಸೂರ್ಯನಿಂದ ಬರುವ ಅಪಾಯಕಾರಿ ಯುವಿ ಕಿರಣಗಳನ್ನು ತಡೆಯುವ ಸಾಮರ್ಥ್ಯ ಇರುವ ದಾಳಿಂಬೆಯನ್ನು ಸನ್ ಸ್ಕ್ರೀನ್ ಲೋಷನ್ ಆಗಿಯೂ ಬಳಸಬಹುದಾಗಿದೆ. ಕೂದಲಿನ ಆರೋಗ್ಯ ಕಾಪಾಡಿಕೊಳ್ಳುವುದು ಇತ್ತೀಚೆಗೆ ಎಲ್ಲರಿಗೂ ಇರುವ ಚಿಂತೆ. ಕೂದಲು ಉದುರುವುದನ್ನು ತಡೆಗಟ್ಟಿ ಕೂದಲು ಸೊಂಪಾಗಿ ಬೆಳೆಯಲು ಹಾಗೂ ತಲೆ ಹೊಟ್ಟಿನ ನಿವಾರಣೆಗೆ ದಾಳಿಂಬೆ ಸಹಾಯ ಮಾಡುತ್ತದೆ.
ಜೀರ್ಣಕ್ರಿಯೆಗೂ ನೆರವಾಗುವ ದಾಳಿಂಬೆಯ ಸಿಪ್ಪೆಯನ್ನು ಒಣಗಿಸಿ ಮಜ್ಜಿಗೆಯಲ್ಲಿ ಅರೆದು ಕುಡಿದರೆ ಭೇದಿ ಶಮನವಾಗುತ್ತದೆ. ದಾಳಿಂಬೆ ಸಿಪ್ಪೆಯ ತಂಬುಳಿ ಮಾಡಿ ಕುಡಿಯುವುದೂ ಅಜೀರ್ಣ ಸಮಸ್ಯೆಗೆ ಉತ್ತಮ. ಒಣಗಿಸಿದ ಸಿಪ್ಪೆಯನ್ನು ತುಪ್ಪದಲ್ಲಿ ಹುರಿದು ತೆಂಗಿನ ತುರಿಯೊಂದಿಗೆ ರುಬ್ಬಿ ನಂತರ ಅಗತ್ಯಕ್ಕೆ ತಕ್ಕಂತೆ ಉಪ್ಪು ಹಾಗೂ ನೀರು ಹಾಕಬೇಕು. ಈ ರುಚಿಯಾದ ತಂಬುಳಿ ದೇಹಕ್ಕೆ ಹಿತ ನೀಡುವುದು. ಇಷ್ಟೆಲ್ಲಾ ಪ್ರಯೋಜನವಿರುವ ದಾಳಿಂಬೆಯನ್ನು ಸೇವಿಸಿ ಉತ್ತಮ ಆರೋಗ್ಯ ವೃದ್ದಿಸಿಕೊಳ್ಳಿ.