ನಟ ಕಮಲ್ ಹಾಸನ್ ಕನ್ನಡದ ಕುರಿತು ನೀಡಿದ್ದ ಹೇಳಿಕೆ ಇದೀಗ ಕನ್ನಡಿಗರಲ್ಲಿ ಕಿಚ್ಚು ಹೆಚ್ಚಿಸಿದೆ. ಕನ್ನಡ ಹುಟ್ಟಿದ್ದೇ ತಮಿಳಿನಿಂದ ಅನ್ನೋ ಹೇಳಿಕೆಗೆ ಕನ್ನಡಿಗರು ರೊಚ್ಚಿಗೆದ್ದಿದ್ದಾರೆ. ಈಗಾಗಲೇ ಅವರು ಕ್ಷಮೆ ಯಾಚಿಸಲೇಬೇಕು ಅಂತ ಪಟ್ಟು ಹಿಡಿದಿದ್ದಾರೆ. ಆದರೂ ಯಾವುದೇ ಕಾರಣಕ್ಕೂ ಕ್ಷಮೆ ಯಾಚಿಸೋದಿಲ್ಲ ಅನ್ನೋ ದುರಂಹಕಾರ ಕಮಲ್ ಹಾಸನ್ ದು. ಇದರ ಮಧ್ಯೆ ರಾಜ್ಯದ ಸಚಿವರು ಶಾಸಕರು ಕೂಡ ಇವರ ವಿರುದ್ಧ ಕೆಂಡ ಕಾರುತ್ತಿದ್ದಾರೆ.
ನಟ ಕಮಲ್ ಹಾಸನ್ ಹೇಳಿಕೆ ಇಡೀ ಕರ್ನಾಟಕ, ಕನ್ನಡಿಗರ ಅಸ್ಮಿತೆಯನ್ನ ಪ್ರಶ್ನೆ ಮಾಡಿದೆ. ಇಷ್ಟಾದರೂ ನಮ್ಮ ಕನ್ನಡದ ನಟರು ಇದನ್ನ ಪ್ರಶ್ನೆ ಮಾಡದೇ ಸಮರ್ಥನೆ ಮಾಡಿಕೊಳ್ಳುವ ಕೆಲಸ ಮಾಡ್ತಾ ಇದ್ದಾರೆ. ಅವರು ಹೇಳಿದ್ದರಲ್ಲಿ ತಪ್ಪೇನು ಅಂತ ಮರು ಪ್ರಶ್ನೆ ಮಾಡ್ತಾ ಇದ್ದಾರೆ. ಕಮಲ್ ಹಾಸನ್ ಹೇಳಿಕೆ ಹಾಗೂ ಕನ್ನಡ ನಟ ನಟಿಯರ ಅಭಿಪ್ರಾಯಕ್ಕೆ ರಾಜ್ಯದ ಸಚಿವರು ಹಾಗೂ ಶಾಸಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಇಂದು ವಿಧಾನಸೌಧದಲ್ಲಿ ಮಾತನಾಡಿದ ಶಾಸಕ ರವಿಗಣಿಗ, ಇದು ಕಮಲ್ ಹಾಸನ್ ದುರಹಂಕಾರದ ಹೇಳಿಕೆ. ನಾಲಗೆ ಬಿಗಿ ಹಿಡಿದು ಕಮಲ್ ಹಾಸನ್ ಮಾತನಾಡಲಿ. ಕಮಲ ಹಾಸನ್ ತನ್ನ ಹೆಸರಿನಲ್ಲಿ ಕಮಲ ಎಂಬ ಕನ್ನಡ ಲಿಪಿಯನ್ನು ಇಟ್ಟುಕೊಂಡಿದ್ದಾರೆ. ಕಮಲಕ್ಕೆ ತಮಿಳು ಪದ ತೇವರ ಅನ್ನುತ್ತಾರೆ. ಹಾಗಾಗಿ ಅವರ ಹೆಸರು ತೇವರ ಹಾಸನ್ ಎಂದು ಇಡಲಿ ಎಂದಿದ್ದಾರೆ.

ಇನ್ನು ಶಿವರಾಜ ಕುಮಾರ್ ವಿಚಾರವಾಗಿಯೂ ಆಕ್ರೋಶ ವ್ಯಕ್ತಪಡಿಸಿರೋ ಅವರು, ವೇದಿಕೆಯಲ್ಲಿ ಇದ್ದು ಕಮಲ್ ಹಾಸನ್ ಅವರನ್ನು ರಕ್ಷಣೆ ಮಾಡ್ತಿದ್ದಾರೆ. ಸ್ನೇಹ ಇದ್ದರೆ ಮನೆಗೆ ಕರೆದು ಊಟ ಹಾಕಿಸಿ. ಕನ್ನಡದ ಅನ್ನ ತಿನ್ನೋ ನಟ ನೀವು, ಕನ್ನಡದ ಬಗ್ಗೆ ದುರಂಕಾರದಿಂದ ಮಾತನಾಡುತ್ತಿರುವಾಗ ಒಪ್ಪಿಕೊಳ್ಳುತ್ತಿರುವುದು ಕನ್ನಡಿಗರಿಗೆ ಶಿವರಾಜ್ ಕುಮಾರ್ ಮಾಡುತ್ತಿರುವ ಅವಮಾನ. ಕನ್ನಡಕ್ಕೆ ಸಾಯುತ್ತೇನೆ ಎಂದು ಶಿವರಾಜ್ ಕುಮಾರ್ ಹೇಳಿಕೆ ನೋಡಿದೆ. ಕನ್ನಡದ ತಾಯಿಗೆ ತಮಿಳುನಾಡಿನಲ್ಲಿ ಅವಮಾನ ಆದಾಗ ಸುಮ್ಮನಿದ್ದಿದ್ದು, ರಕ್ಷಣೆ ಮಾಡುತ್ತಿರುವುದು ಸರಿಯಲ್ಲ. 1799 ವರೆಗೆ ಹೊಸೂರ್ ಮೈಸೂರಿನ ಭಾಗವಾಗಿತ್ತು. ಹಾಗಾದರೆ ಇವಾಗ ಕರ್ನಾಟಕಕ್ಕೆ ಅದನ್ನು ಕೊಟ್ಟು ಬಿಡಲಿ.
ಕೂಡಲೇ ಕಮಲ್ ಹಾಸನದ ಕ್ಷಮೆ ಕೇಳಬೇಕು. ಇಲ್ಲಾಂದ್ರೆ ಟಗ್ ಲೈಫ್ ನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಬಿಡಲ್ಲ. ವಾಣಿಜ್ಯ ಮಂಡಳಿ ಬೆಣ್ಣೆ ಮಾತು ಬಿಡಲಿ. ಕರ್ನಾಟಕ ದಲ್ಲಿ ಕಮಲ್ ಹಾಸನ್ ಸಿನಿಮಾ ಬ್ಯಾನ್ ಮಾಡುತ್ತೇವೆ ಎಂದು ಆದೇಶ ಹೊರಡಿಸಲಿ. ಬೆಣ್ಣೆ ಹಚ್ಚಿ ಟೈಂ ಪಾಸ್ ಮಾಡುವುದು ಬೇಡ. ನೀವು ಕಠಿಣ ನಿರ್ಧಾರ ಕೈಗೊಳ್ಳದೆ ಇದ್ದರೆ ಸರ್ಕಾರವೇ ಬ್ಯಾನ್ ಮಾಡುತ್ತೆ ಎಂದರು. ಇನ್ನು ರಮ್ಯಾ ಸಮರ್ಥನೆ ವಿಚಾರವಾಗಿ ಮಾತನಾಡಿದ ಅವರು, ಶಿವರಾಜ್ ಕುಮಾರ್, ರಮ್ಯಾಗೆ ಏನಾಗಿದೆ ಎಂದು ಗೊತ್ತಿಲ್ಲ. ಕನ್ನಡದ ಅನ್ನ ತಿನ್ನೋರು ಕನ್ನಡಕ್ಕೆ ಅನ್ಯಾಯವಾದಾಗ ಮಾತನಾಡಬೇಕು. ದರ್ಶನ್ ಪರವಾಗಿಲ್ಲ, ಕನ್ನಡಿಗರು ಒಂದಾಗಬೇಕು ಎಂದು ಹೇಳಿದ್ದಾರೆ. ಬೆಣ್ಣೆ ಹಚ್ಚುವುದನ್ನು ಬಿಟ್ಟು ನಮ್ಮ ಭಾಷೆ ಬಗ್ಗೆ ಬೇರೆ ನಟರು ಮಾತನಾಡುವಾಗ ಸರಿಯಾದ ಟಾಂಗ್ ಕೊಡುವುದನ್ನು ಕಲಿಯಬೇಕು ಎಂದಿದ್ದಾರೆ.
ಇನ್ನು ಮೈಸೂರ್ ಸ್ಯಾಂಡಲ್ ಸೋಪಿಗೆ ತಮನ್ನಾ ರಾಯಭಾರಿ ಆಗಿರೋದನ್ನ ಸಮರ್ಥನೆ ಮಾಡಿಕೊಂಡಿರೋ ರವಿ ಗಣಿಗ, ನಾವು ಇಂಟರ್ ನ್ಯಾಷನಲ್ ನಲ್ಲಿ ಗುರುತಿಸಬೇಕು ಹಾಗು ಬ್ಯುಸಿನೆಸ್ ಆಗಬೇಕು ಅಂದರೆ ಅಂತಹ ನಟಿಯರನ್ನೇ ಆಯ್ಕೆ ಮಾಡಬೇಕಾಗುತ್ತದೆ. ಅದರಲ್ಲಿ ತಪ್ಪೇನು ಅಂತ ಪ್ರಶ್ನೆ ಮಾಡಿದರು. ತಮನ್ನ ಗ್ಲೋಬಲ್ ಆಕ್ಟರ್.ಅವರ ರೀಚ್ ದೊಡ್ಡದಿದೆ. ವ್ಯಾಪಾರದ ಉದ್ದೇಶದಿಂದಲೇ ಮಾಡಿದ್ದು ಅಂತ ಸಮರ್ಥನೆ ಮಾಡಿದರು.



