ರಾಜ್ಯದಲ್ಲಿ ಬಹುಮತದ ಸರ್ಕಾರ ಅಧಿಕಾರಕ್ಕೆ ಬಂದರೂ ನೆಮ್ಮದಿಯಾಗಿ ಆಡಳಿತ ನಡೆಸಲು ಸಾಧ್ಯವಾಗದ ಪರಿಸ್ಥಿತಿ ಇದ್ಯಾ ಅನ್ನೋ ಪ್ರಶ್ನೆ ಪದೇ ಪದೇ ಉದ್ಭವಿಸುತ್ತಲೇ ಇದೆ. ಒಂದು ಕಡೆ ಪದೇ ಪದೇ ಬಿಜೆಪಿ ನಾಯಕರು ಹೇಳುವ ಮಾತುಗಳು ಮತ್ತೊಂದು ಕಡೆ ಕುರ್ಚಿ ಕಿತ್ತಾಟ, ಇನ್ನೊಂದೆಡೆ ಇಡಿ, ಐಟಿ, ಮುಡಾ ಹೀಗೆ ಹಲವು ವಿಚಾರಗಳು.
ಇವೆಲ್ಲವುಗಳ ನಡುವೆ ನಿಜಕ್ಕೂ ಸರ್ಕಾರ ಬಿದ್ದೋಗುತ್ತಾ ಅನ್ನೋ ಚರ್ಚೆಯಂತೂ ಈಗ ಮತ್ತೆ ಶುರುವಾಗಿದೆ. ಪದೇ ಪದೇ ವಿಜಯೇಂದ್ರ, ಆರ್ ಅಶೋಕ್ ಸರ್ಕಾರ ಬೀಳುವ ಕುರಿತು ಮಾತನಾಡುತ್ತಿದ್ದಾರೆ. ಹೀಗಾಗಿ ಯಾವುದೋ ಸೂಚನೆಯಂತೂ ಇವರಿಗೆ ಇದೆ ಅನ್ನೋ ಮಾತು ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಲೇ ಇದೆ. ಈಗ ಮತ್ತೊಮ್ಮೆ ಈ ಸರ್ಕಾರ ಉರುಳಿಸುವ ಹೇಳಿಕೆ ಬಹಿರಂಗವಾಗಿದೆ.

ಹೌದು, 136 ಜನ ಶಾಸಕರು ಇದ್ದರೂ ರಾಜ್ಯದಲ್ಲಿ ಸುಭದ್ರ ಸರ್ಕಾರ ಇಲ್ವಾ ಅನ್ನೋ ಅನುಮಾನ ಹೆಚ್ಚಾಗುತ್ತಿದೆ. ಡಿಕೆಶಿ ಹಾಗೂ ಸಿದ್ದರಾಮಯ್ಯ ನಡುವಿನ ಒಳಜಗಳವನ್ನೇ ಬಿಜೆಪಿ ಬಂಡವಾಳ ಮಾಡಿಕೊಂಡು ಸರ್ಕಾರ ಉರುಳಿಸುವ ಕೆಲಸ ಮಾಡ್ತಾ ಇದ್ಯಾ ಅನ್ನೋ ಅನುಮಾನದ ಬೆನ್ನಲ್ಲೇ ಈಗ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ಮತ್ತಷ್ಟು ಪುಷ್ಟಿ ನೀಡುತ್ತಿದೆ.
ರಾಜ್ಯದಲ್ಲಿ ಪೂರ್ಣ ಪ್ರಮಾಣದ ಸರ್ಕಾರ ಇದೆ. 136 ಜನ ಶಾಸಕರನ್ನ ಹೊಂದಿರೋ ಕಾಂಗ್ರೆಸ್ ಸರ್ಕಾರಕ್ಕೆ ಪದೇ ಪದೇ ಪೆಟ್ಟು ಬೀಳುತ್ತಲೇ ಇದೆ. ಮುಡಾ ಸೇರಿದಂತೆ ಅನೇಕ ವಿಚಾರಗಳು ಒಂದು ಕಡೆಯಾದ್ರೆ, ಮತ್ತೊಂದು ಕಡೆ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಡುವಿನ ಒಳ ಜಗಳಗಳು ಹೀಗೆ ಅನೇಕ ವಿಚಾರಗಳು ಬಿಜೆಪಿಗೆ ಅಸ್ತ್ರವಾಗಿರೋದಂತೂ ಸತ್ಯ. ಇದರ ಮಧ್ಯೆ ಸರ್ಕಾರ ಉರುಳಿಸುವ ಚರ್ಚೆಗಳು ಕೂಡ ಆಗಿಂದಾಗ್ಲೇ ನಡೆಯುತ್ತಲೇ ಇವೆ.
ಈಗ ಇದಕ್ಕೆಲ್ಲಾ ಪುಷ್ಟಿ ನೀಡುವಂತೆ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ನೀಡಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಜೆಪಿ ವಿಚಾರವಾಗಿ ಹೊಸ ಬಾಂಬ್ ಸಿಡಿಸಿದ್ದಾರೆ. ಸರ್ಕಾರ ಕೆಡವಲು ಕರ್ನಾಟಕದಲ್ಲಿ ಅಂಥದ್ದೊಂದು ಪ್ರಯತ್ನ ನಡೆದಿದೆ ಎಂದು ಹೇಳಿದ್ದಾರೆ. ಕಲಬುರ್ಗಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ಹೌದಯ, ಇಂತಹದೊಂದು ಪ್ರಯತ್ನ ಆಗಿದೆ. ಸಿದ್ದರಾಮಯ್ಯ, ಡಿಕೆಶಿ ಆದಷ್ಟು ಹುಷಾರಾಗಿರಬೇಕು. ನಿಮ್ಮಲ್ಲಿ ಏನೇ ಬೇಧ-ಭಾವ ಇದ್ರೂ ಬದಿಗೊತ್ತಿ, ಒಗ್ಗಟ್ಟಾಗಿರಿ ಎಂದಿದ್ದಾರೆ.
ಈ ವಿಚಾರವನ್ನ ಬಹಿರಂಗ ವೇದಿಕೆಯಲ್ಲೇ ಮಾತನಾಡಿರೋದು ಗಂಭೀರ ಸ್ವರೂಪ ಪಡೆದಿದೆ. ಇನ್ನು ಮುಂದುವರೆದು ಮಾತನಾಡಿರುವ ಅವರು, ಐಟಿ, ಇಡಿ ಮೂಲಕ ಕಾಂಗ್ರೆಸ್ ಸರ್ಕಾರಗಳನ್ನು ಗುರಿಯಾಗಿಸಿದ್ದಾರೆ. ಮೋದಿ-ಶಾ ಜೋಡಿ ಕಾಂಗ್ರೆಸ್ ಸರ್ಕಾರಗಳನ್ನೇ ಟಾರ್ಗೆಟ್ ಮಾಡ್ತಿದೆ. ಸದ್ಯ ಕುರ್ಚಿ ಕಿತ್ತಾಟ ಮುಂದುವರೆದಿರೋದೆ ಇಷ್ಟಕ್ಕೆ ಕಾರಣ ಎನ್ನುತ್ತಿವೆ ಹಲವು ಮೂಲಗಳು. ಈಗ ಖರ್ಗೆಯೇ ಈ ಮಾತು ಹೇಳಿರೋದು ಒಂದು ಕಡೆ ಸಿಎಂ ಹಾಗೂ ಡಿಸಿಎಂ ಗೆ ಎಚ್ಚರಿಕೆಯಾದ್ರೆ, ಮತ್ತೊಂದು ಕಡೆ ಕೇಂದ್ರ ನಾಯಕರು ಮಾಡ್ತಾ ಇರೋದನ್ನ ಜನತೆ ಮುಂದೆಯೇ ತೆರೆದಿಟ್ಟಂಗಾಗಿದೆ.

ನಿಜಕ್ಕೂ ಇಂತಹದೊಂದು ಪ್ರಯತ್ನವನ್ನ ಕೇಂದ್ರ ಸರ್ಕಾರ ಮಾಡಿದ್ಯಾ ಅನ್ನೋ ಪ್ರಶ್ನೆ ನಡುವೆ, ಹೀಗೆ ಸರ್ಕಾರ ಬೀಳಿಸುವ ಕುರಿತು ಬಹಿರಂಗ ಹೇಳಿಕೆಯನ್ನ ಕೊಟ್ಟಿರೋದು ಒಂದಿಷ್ಟು ಚರ್ಚೆಗಂತು ಗ್ರಾಸವಾಗಿದೆ. ಯಾಕಂದ್ರೆ ಮಾತನಾಡಿರೋದು ಯಾವುದೋ ಶಾಸಕನೋ ಅಥವಾ ಮುಖಂಡರೊ ಅಲ್ಲ. ಎಐಸಿಸಿ ಅಧ್ಯಕ್ಷ. ಹಾಗಾಗಿ ಸರ್ಕಾರ ಬೀಳಿಸುವ ವಾಸನೆ ಇವರಿಗೆ ಬಡಿದ ಮೇಲೆಯೇ ಈ ರೀತಿ ಮಾತನಾಡಿರಬೇಕು ಅನ್ನೋದು ಹಲವು ಲೆಕ್ಕಾಚಾರ.
ಇದರ ಮಧ್ಯೆ ರಾಜ್ಯದಲ್ಲಿ ಜಾತಿ ಗಣತಿಯ ಕಿಚ್ಚು ಹೆಚ್ಚಾಗಿದ್ದು ಸ್ವ ಪಕ್ಷದವರೇ ಸರ್ಕಾರದ ವಿರುದ್ಧ ತಿರುಗಿ ಬೀಳುವಂತಾಗಿದೆ. ಹೀಗಾಗಿ ಇದನ್ನ ಮರೆ ಮಾಚಲು ಈ ರೀತಿ ಹೇಳಿಕೆಯನ್ನೇನಾದ್ರೂ ನೀಡಿದ್ರಾ ಅನ್ನೋದು ಕೂಡ ಮತ್ತೊಂದು ವ್ಯಾಖ್ಯಾನ. ಇದರ ಬಿಸಿ ಕಡಿಮೆ ಮಾಡೋದಿಕ್ಕೆ ಅಂತಾನೆ ಮಲ್ಲಿಕಾರ್ಜುನ್ ಖರ್ಗೆ ಡೈವರ್ಡ್ ಮಾಡಲು ಪ್ರಯತ್ನ ಪಟ್ಟರಾ ಎಂಬ ಅಭಿಪ್ರಾಯ ಅನೇಕರದ್ದು.
ಸದ್ಯ ಈ ಎಲ್ಲ ಬೆಳವಣಿಗೆಗಳ ನಡುವೆ ಈಗ ಸೃಷ್ಟಿ ಆಗಿರೋ ಪ್ರಶ್ನೆ ಎಂದರೆ ಶಾಸಕರ ಮೇಲೆ ಎಐಸಿಸಿಗೆ ನಂಬಿಕೆ ಇಲ್ವಾ ಹಾಗಾದ್ರೆ ಅನ್ನೋದು, ಜೊತೆಗೆ ಈ ಕುರ್ಚಿ ಕಿತ್ತಾಟದಿಂದ ಹೈ ಕಮಾಂಡ್ ಕೂಡ ಕಂಗಾಲಾಗಿದ್ಯಾ ಅನ್ನೋ ಪ್ರಶ್ನೆ ಕೂಡ ಎದ್ದಿದೆ. ಅದೇನೆ ಇದ್ರು ಬಹಿರಂಗ ವಾಗಿ ಇಂದು ಡಿಸಿಎಂ ಹಾಗೂ ಸಿಎಂ ಗೆ ಖರ್ಗೆ ಎಚ್ಚರಿಕೆ ಕೊಟ್ಟಿದ್ದು ಇನ್ನಾದ್ರೂ ಪವರ್ ಶೇರಿಂಗ್ ಚರ್ಚೆಗೆ ತೆರೆ ಬೀಳುತ್ತಾ ಅಂತ.