ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 7 ಗಂಟೆಗೆ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ 747ರ ಎಪಿಸೋಡ್ ಕಥೆ ಇಲ್ಲಿದೆ. ಭಾಗ್ಯಾ ಜೋಕರ್ ಕೆಲಸ ಕಳೆದುಕೊಂಡಿದ್ದಾಳೆ. ಇನ್ಮುಂದೆ ಬೇರೆ ಕೆಲಸಕ್ಕೆ ಹೋಗದೆ ಮನೆಯಲ್ಲೇ ತಾನೇ ಏನಾದರೂ ಬಿಸ್ನೆಸ್ ಆರಂಭಿಸಬೇಕು ಎಂದು ಪ್ಲ್ಯಾನ್ ಮಾಡುತ್ತಾಳೆ. ತನಗೆ ಅಡುಗೆ ಕೆಲಸ ಚೆನ್ನಾಗಿ ಗೊತ್ತಿರುವುದರಿಂದ ಅದನ್ನೇ ಮಾಡಿದರೆ ನಾನು ಯಶಸ್ವಿಯಾಗಬಹುದು ಎಂದು ನಿರ್ಧರಿಸುತ್ತಾಳೆ. ಈ ವಿಚಾರವನ್ನು ಮನೆಯವರಿಗೂ ತಿಳಿಸುತ್ತಾಳೆ.
ಸುನಂದಾ ಹೊರತುಪಡಿಸಿ ಉಳಿದವರೆಲ್ಲಾ ಭಾಗ್ಯಾಗೆ ಬೆಂಬಲ ಸೂಚಿಸುತ್ತಾರೆ. ಇದೆಲ್ಲಾ ಆಗದ ಕೆಲಸ, ಹೊಸ ಬಿಸ್ನೆಸ್ ಶುರು ಮಾಡಿ ನೀನೇನೋ ದೊಡ್ಡ ಸಾಧನೆ ಮಾಡುವೆ ಎಂಬ ಭ್ರಮೆಯಿಂದ ಹೊರ ಬಾ ಎಂದು ಸುನಂದಾ, ಮಗಳಿಗೆ ಬುದ್ಧಿ ಹೇಳುತ್ತಾಳೆ. ಆದರೆ ಭಾಗ್ಯಾ ಮಾತ್ರ ನಾನು ಗೆದ್ದೇ ಗೆಲ್ಲುವೆ ಎಂಬ ವಿಶ್ವಾಸ ವ್ಯಕ್ತಪಡಿಸುತ್ತಾಳೆ. ಭಾಗ್ಯಾ ಬಿಸ್ನೆಸ್ಗೆ ಗುಂಡಣ್ಣ ಕೈತುತ್ತು ಎಂಬ ಹೆಸರನ್ನು ಸೂಚಿಸುತ್ತಾನೆ. ಈ ಹೆಸರು ಎಲ್ಲರಿಗೂ ಇಷ್ಟವಾಗುತ್ತದೆ. ಬಿಸ್ನೆಸ್ಗೆ ಹೊಂದಿಕೊಳ್ಳೂವಂತ ಚಿತ್ರ ಬಿಡಿಸಿ, ಅದರಲ್ಲಿ ಕೈ ತುತ್ತು ಎಂದು ಬರೆದು ಪಾಂಪ್ಲೆಟ್ ತಯಾರಿ ಮಾಡುತ್ತಾರೆ.
ಕಾಲೇಜಿನಿಂದ ಹುಡುಗಿಯರು ಟ್ರಿಪ್ ಹೋಗುತ್ತಿದ್ದು ತನ್ವಿ ಕೂಡಾ ಅವರೊಂದಿಗೆ ಹೋಗಲು ಬಯಸುತ್ತಾಳೆ. ಆದರೆ ಭಾಗ್ಯಾ ಅದಕ್ಕೆ ಒಪ್ಪುವುದಿಲ್ಲ. ನೀನು ಎಲ್ಲಿಗೂ ಹೋಗುವಂತಿಲ್ಲ ಎಂದು ಕುಸುಮಾ ಕೂಡಾ ಕಂಡಿಷನ್ ಮಾಡುತ್ತಾಳೆ. ಇದರಿಂದ ತನ್ವಿ, ಮನೆಯವರ ಮೇಲೆ ಕೋಪಗೊಳ್ಳುತ್ತಾಳೆ. ಎಷ್ಟೇ ಕರೆದರೂ ತನ್ವಿ ಊಟ ಮಾಡುವುದಿಲ್ಲ. ಆದರೆ ಮಧ್ಯರಾತ್ರಿ ಹಸಿವಿನಿಂದ ಒದ್ದಾಡುತ್ತಾಳೆ. ಕೋಪಕ್ಕೆ ಊಟ ಬೇಡ ಎಂದೆ, ಆದರೆ ಈಗ ಹಸಿವಾಗುತ್ತಿದೆ. ಊಟ ಇದೆಯಾ ನೋಡೋಣ ಎಂದು ಅಡುಗೆ ಮನೆಗೆ ಬರುತ್ತಾಳೆ. ಮಗಳ ಬಗ್ಗೆ ಗೊತ್ತಿದ್ದ ಭಾಗ್ಯಾ ಅವಳಿಗಾಗಿ ಊಟ ತೆಗೆದಿಡುತ್ತಾಳೆ. ತನ್ವಿ ಕದ್ದು ಊಟ ಮಾಡುವಾಗ ಭಾಗ್ಯಾ ಅದನ್ನು ಗಮನಿಸುತ್ತಾಳೆ. ಅಮ್ಮನನ್ನು ನೋಡಿ ತನ್ವಿ ಗಾಬರಿಯಾಗುತ್ತಾಳೆ. ಅಷ್ಟಾದರೂ ತನ್ವಿ ಅಮ್ಮನ ಮೇಲೆ ಮುನಿಸು ತೋರುತ್ತಾಳೆ. ಭಾಗ್ಯಾ ಮಗಳನ್ನು ಸಮಾಧಾನ ಮಾಡುತ್ತಾಳೆ.
ಮರುದಿನ ಭಾಗ್ಯಾ, ಸುಂದ್ರಿ, ಪೂಜಾ ಮೂವರೂ ಒಂದೊಂದು ಸ್ಥಳಕ್ಕೆ ಹೋಗಿ ಭಾಗ್ಯಾ ತಯಾರಿ ಮಾಡಿರುವ ಪಾಂಪ್ಲೆಟ್ಸ್ ಹಂಚಿ ಬರುತ್ತಾರೆ. ಕೆಲವರು ಅದನ್ನು ತೆಗೆದುಕೊಂಡು, ಊಟ ಬೇಕಾದರೆ ಆರ್ಡರ್ ಮಾಡುತ್ತೇವೆ ಎಂದರೆ, ಇನ್ನೂ ಕೆಲವರು ಎಸೆಯುತ್ತಾರೆ. ಸಿಟಿ ಆಫ್ ಲೈಟ್ಸ್ ಹೋಟೆಲ್ನ ಶೆಫ್ ಭಾಗ್ಯಾ ಹೊಸ ಬಿಸ್ನೆಸ್ ಶುರು ಮಾಡಿದ್ದಾರೆ, ನಿಮಗೆ ಊಟ ಬೇಕಾದರೆ ಆರ್ಡರ್ ಮಾಡಬಹುದು, ಅವರು ಬಹಳ ಚೆನ್ನಾಗಿ ಅಡುಗೆ ಮಾಡುತ್ತಾರೆ ಎಂದು ಸುಂದ್ರಿ, ಭಾಗ್ಯಾ ಬಿಸ್ನೆಸ್ ಪ್ರಮೋಟ್ ಮಾಡುತ್ತಾಳೆ. ಪೂಜಾ ಪಾಂಪ್ಲೆಟ್ಸ್ ಹಂಚುವಾಗ ಹುಡುಗನೊಬ್ಬ ಅವಳನ್ನು ನೋಡಿ ಇಷ್ಟಪಡುತ್ತಾನೆ. ಅವಳ ಹೆಸರು ಕೇಳುತ್ತಾನೆ. ಆದರೆ ಪೂಜಾ ಅದಕ್ಕೆ ಪ್ರತಿಕ್ರಿಯಿಸದೆ ನಿಮಗೆ ಊಟ ಬೇಕಿದ್ದರೆ ಆ ನಂಬರ್ಗೆ ಕರೆ ಮಾಡಿ ಎಂದು ಹೇಳಿ ಅಲ್ಲಿಂದ ಹೊರಡುತ್ತಾಳೆ.
ಮೂವರೂ ಮನೆಗೆ ಬಂದು ಯಾವುದಾದರೂ ಆರ್ಡರ್ ಸಿಗಬಹುದು ಎಂದು ಆಸೆಯಿಂದ ಎಲ್ಲರೂ ಫೋನ್ ಮುಂದೆಯೇ ಕೂರುತ್ತಾರೆ. ಖಂಡಿತ ಯಾವ ಫೋನ್ ಕಾಲ್ ಕೂಡಾ ಬರುವುದಿಲ್ಲ, ನೀವು ಮಾಡುತ್ತಿರುವುದೆಲ್ಲಾ ವ್ಯರ್ಥ ಎಂದು ಸುನಂದಾ ಹೇಳುತ್ತಾಳೆ. ದಯವಿಟ್ಟು ಅಡ್ಡಬಾಯಿ ಹಾಕಬೇಡಿ ಎಂದು ಕುಸುಮಾ ಮನವಿ ಮಾಡುತ್ತಾಳೆ. ಎಲ್ಲರೂ ಮಾತನಾಡುವಾಗ ಫೋನ್ ರಿಂಗ್ ಆಗುತ್ತದೆ. ಆ ಕಡೆಯಿಂದ ಮಾತನಾಡುವ ವ್ಯಕ್ತಿ, ನಿಮಗೆ ಲೋನ್ ಬೇಕಾ ಎಂದು ಕೇಳುತ್ತಾನೆ. ಪೂಜಾ ಬೇಸರದಿಂದ ಫೋನ್ ಇಡುತ್ತಾಳೆ. ಮತ್ತೊಮ್ಮೆ ಫೋನ್ ರಿಂಗ್ ಆಗುತ್ತದೆ, ಈ ಬಾರಿ ಕುಸುಮಾ ರಿಸೀವ್ ಮಾಡುತ್ತಾಳೆ. ಕೈ ತುತ್ತು ಅಂತ ಬಿಸ್ನೆಸ್ ಶುರು ಮಾಡಿದ್ದಾರಲ್ಲ, ಇದು ಅವರ ಮನೆನಾ ಎಂದು ಆ ವ್ಯಕ್ತಿ ಕೇಳುತ್ತಾನೆ. ಅದನ್ನು ಕೇಳಿ ಕುಸುಮಾ ಖುಷಿಯಾಗುತ್ತಾಳೆ. ಮೊದಲ ಆರ್ಡರ್ ಸಿಕ್ಕೇಬಿಡ್ತು ಎಂದುಕೊಳ್ಳುತ್ತಾಳೆ. ಆದರೆ ಆತ ಪೂಜಾಗಾಗಿ ಕರೆ ಮಾಡಿರುತ್ತಾನೆ. ಒಬ್ಬಳು ಸುಂದರವಾದ ಹುಡುಗಿ ಪಾಂಪ್ಲೆಟ್ಸ್ ಕೊಟ್ಟಳು, ನನಗೆ ಅವಳ ನಂಬರ್ ಬೇಕಿತ್ತು ಎನ್ನುತ್ತಾನೆ. ಆತನ ಮಾತು ಕೇಳಿ ಕುಸುಮಾ ಕೋಪಗೊಳ್ಳುತ್ತಾಳೆ. ಮತ್ತೆ ಕಾಲ್ ಮಾಡಿದರೆ ಪೊಲೀಸರಿಗೆ ಹಿಡಿದುಕೊಡುತ್ತೇನೆ ಎಂದು ಎಚ್ಚರಿಸುತ್ತಾಳೆ. ವಿಚಾರ ತಿಳಿದು ಸುನಂದಾ ಕೂಡಾ ಕೋಪಗೊಳ್ಳುತ್ತಾಳೆ.
ಇತ್ತ ತನ್ವಿ, ತಾಂಡವ್ನನ್ನು ಭೇಟಿಯಾಗುತ್ತಾಳೆ. ತಾಂಡವ್, ಮಗಳನ್ನು ಭೇಟಿ ಆಗುತ್ತಿದ್ದಾನೆ ಎಂದು ತಿಳಿದು ಶ್ರೇಷ್ಠಾ ಕೋಪಗೊಳ್ಳುತ್ತಾಳೆ. ಹೇಗಾದರೂ ಮಾಡಿ ಇದಕ್ಕೆಲ್ಲಾ ಬ್ರೇಕ್ ಹಾಕಲೇಬೇಕು ಎಂದುಕೊಳ್ಳುತ್ತಾಳೆ. ತನ್ವಿ, ಅಪ್ಪನ ಬಳಿ ತನ್ನ ಕಾಲೇಜ್ ಟ್ರಿಪ್ ಕನ್ಸರ್ನ್ ಲೆಟರ್ಗೆ ಸಹಿ ಹಾಕಿಸಿಕೊಳ್ಳುತ್ತಾಳೆ. ಅಮ್ಮನಿಗಿಂತ ನೀನೇ ನನ್ನನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿರುವುದು ಎನ್ನುತ್ತಾಳೆ. ಆ ಮಾತು ಕೇಳಿ ತಾಂಡವ್ ಖುಷಿಯಾಗುತ್ತಾನೆ.
ಭಾಗ್ಯಾಗೆ ಆರ್ಡರ್ ಸಿಗುವುದಾ? ತನ್ವಿ ಮನೆಗೆ ಹೇಳದೆ ಗೆಳತಿಯರ ಜೊತೆ ಟ್ರಿಪ್ ಹೋಗುತ್ತಾಳಾ? ಮುಂದಿನ ಸಂಚಿಕೆಗಳಲ್ಲಿ ತಿಳಿಯಲಿದೆ.