ಯಾವುದೇ ಹುದ್ದೆಯಾದ್ರು ತಮ್ಮ ಬೆಂಬಲಿಗರಿಗೆ ಸಿಗಬೇಕು ಅನ್ನೋ ಆಸೆ ಎಲ್ಲಾ ನಾಯಕರಿಗೂ ಇದ್ದೇ ಇರುತ್ತದೆ. ತಮ್ಮ ಬೆಂಬಲಿಗರಿಗೆ ಹುದ್ದೆ ಸಿಕ್ಕರೆ ಮುಂದೆ ತಮ್ಮ ಬೆನ್ನ ಹಿಂದೆ ನಿಲ್ತಾರೆ ಅನ್ನೋದು ಲೆಕ್ಕಾಚಾರ. ತಮ್ತಮ್ಮ ಬೆಂಬಲಿಗರುಗಳಿಗೆ ಹುದ್ದೆ ಕೊಡಿಸೋ ನಿಟ್ಟಿನಲ್ಲಿ ಜಗಳಗಳೇ ಆಗಿ ಹೋಗಿರೋದಕ್ಕೆ ಅನೇಕ ಉದಾಹರಣೆ ಇದ್ದಾವೆ. ಈಗ ಅದೇ ರೀತಿ ಮತ್ತೊಂದು ವಾಗ್ಯುದ್ದವೇ ಆಗಿ ಹೋಗಿದೆ.
ಹೌದು, ಈ ಗಲಾಟೆ ನಡೆದಿರೋದು ಸಚಿವ ಜಮೀರ್ ಅಹ್ಮದ್ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ನಡುವೆ ಎನ್ನಲಾಗಿದೆ.
ವಕ್ಫ್ ಬೋರ್ಡ್ ಅಧ್ಯಕ್ಷ ಸ್ಥಾನಕ್ಕೆ ಸಚಿವ ಹಾಗೂ ಎಐಸಿಸಿ ಅಧ್ಯಕ್ಷರ ನಡುವೆ ಜಟಾಪಟಿಯೇ ನಡೆದು ಹೋಗಿದೆಯಂತೆ. ಸಿಎಂ ನಿವಾಸದಲ್ಲಿ ಮಧ್ಯರಾತ್ರಿವರೆಗೂ ನಡೆದ ಸಂಧಾನ ಸಭೆ ನಡೆದು ವಿಫಲವಾಗಿದೆ ಎನ್ನಲಾಗಿದೆ. ಕೊನೆಗೂ ಜಮೀರ್ ಕಾಂಗ್ರೆಸ್ ಹೈಕಮಾಂಡ್ ಮುಂದೆ ಮಂಡಿಯೂರುವಂತಾಗಿದೆ ಎಂದು ಹೇಳಲಾಗುತ್ತಿದೆ.

ರಾಜ್ಯ ವಕ್ಫ್ ಬೋರ್ಡ್ ನೂತನ ಅಧ್ಯಕ್ಷರ ವಿಚಾರದಲ್ಲಿ ಕಾಂಗ್ರೆಸ್ನಲ್ಲಿ ಜಟಾಪಟಿ ನಡೆದಿದೆ. ಹೈಕಮಾಂಡ್ ನಾಯಕ ಮಲ್ಲಿಕಾರ್ಜುನ ಖರ್ಗೆ ಸಚಿವ ಜಮೀರ್ ಅಹ್ಮದ್ ನಡುವೆ ಜೋರು ಗಲಾಟೆ ಏರ್ಪಟ್ಟಿದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆ ಆಗ್ತಿದೆ. ಈ ಜಟಾಪಟಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮೇಲುಗೈ ಸಾಧಿಸಿದ್ದು ಅವರ ಬೆಂಬಲಿಗ ಸೈಯದ್ ಮೊಹಮ್ಮದ್ ಅಲಿ ಹುಸೈನಿ ಅವರು ಆಯ್ಕೆಯಾಗಿದ್ದಾರೆ.
ಜಮೀರ್ ಅಹ್ಮದ್ ತಮ್ಮ ಬೆಂಬಲಿಗ ಹಾಗೂ ಪ್ರಸ್ತುತ ವಕ್ಫ್ ಬೋರ್ಡ್ ಅಧ್ಯಕ್ಷನಾಗಿದ್ದ ಚಿತ್ರದುರ್ಗದ ಅನ್ವರ್ ಬಾಷಾರಿಗೆ ಅಧ್ಯಕ್ಷಗಾಧಿ ಸಿಗಬೇಕು ಅಂತ ಬಾರೀ ಪ್ರಯತ್ನ ಪಟ್ಟಿದ್ದಾರೆ. ಇತ್ತ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಹಾಗೂ ರಾಜ್ಯ ಸಭಾ ಸದಸ್ಯ
ನಾಸೀರ್ ಹುಸೇನ್ ಅವರ ಬೆಂಬಲಿಗ ಮುಹಮ್ಮದ್ ಅಲಿ ಹುಸೈನಿ ಅವರಿಗೆ ಪಟ್ಟ ಕಟ್ಟಬೇಕು ಅಂತ ನಿರ್ಧಾರ ಮಾಡಿದ್ದರು. ಈ ವಿಚಾರವಾಗಿ ಜಮೀರ್ ಲಾಭಿಗೆ ಇಳಿದಿದ್ದರು ಎನ್ನಲಾಗಿದೆ. ಜಮೀರ್ ಎಷ್ಟೇ ಪ್ರಯತ್ನ ಮಾಡಿದರೂ ಪ್ರಯೋಜನವಾಗಿಲ್ಲ.

ಇತ್ತ ತಮ್ಮ ಮಾತಿಗೆ ಯಾವಾಗ ಬೆಲೆ ಸಿಕ್ತಾ ಇಲ್ಲ ಅಂತ ಗೊತ್ತಾಯ್ತೋ ಮತ್ತೊಂದು ದಾಳ ಉರುಳಿಸಲು ಮುಂದಾದ್ರಂತೆ. ಈ ವಿಚಾರವಾಗಿ ಭಿನ್ನಮತ ಹೆಚ್ಚಾಗುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ಅವರನ್ನ ಮಧ್ಯೆ ತಂದಿದ್ದಾರೆ ಜಮೀರ್. ಸಿನೀಯರ್ ಖರ್ಗೆ ಆಪ್ತರು ಹಾಗೂ ಜಮೀರ್ ನಡುವೆ ಸಂಧಾನ ಮಾಡಲು ಪ್ರಯತ್ನ ಪಟ್ಟಿದ್ದಾರಂತೆ ಸಿಎಂ. ಈ ಸಂಧಾನ ಸಂದರ್ಭದಲ್ಲಿ ಅಧಿಕಾರ ಹಂಚಿಕೆ ಸೂತ್ರದ ಪ್ರಸ್ತಾಪ ಕೂಡ ಆಗಿದೆ. ಎರಡುವರೆ ವರ್ಷಗಳ ಕಾಲ ಅಧಿಕಾರ ಹಂಚಿಕೆ ಸೂತ್ರವನ್ನ ಮುಂದಿಟ್ಟಿದ್ದರಂತೆ. ಆದರೆ ಮಲ್ಲಿಕಾರ್ಜುನ ಖರ್ಗೆ ಇದಕ್ಕೆ ಒಪ್ಪಿಲ್ಲ ಎನ್ನಲಾಗಿದೆ.
ಇತ್ತ ಇದ್ಯಾವುದಕ್ಕೂ ಖರ್ಗೆ ಒಪ್ತಾ ಇಲ್ಲ ಎಂಬುದು ಗೊತ್ತಾಯ್ತೋ ಆಗ ಸಿಟ್ಟಿಗೆದ್ದಿದ್ದಾರೆ ಜಮೀರ್. ಸಂಧಾನದ ವೇಳೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಬೆದರಿಕೆ ಹಾಕಿದ್ರಂತೆ ಜಮೀರ್ ಅಹ್ಮದ್. ಜಮೀರ್ ಬೆದರಿಕೆಗೆ ಡೋಂಟ್ ಕೇರ್ ಎಂದಿರುವ ಕಾಂಗ್ರೆಸ್ ಹೈಕಮಾಂಡ್ ಫೈನಲಿ ವಕ್ಫ್ ಅಧ್ಯಕ್ಷರಾಗಿ ಸಯ್ಯದ್ ಮುಹಮದ್ ಅಲಿ ಹುಸೇನಿಯನ್ನ ಅವಿರೋಧ ಆಯ್ಕೆ ಮಾಡಿದ್ದಾರೆ. ಈ ಎಲ್ಲಾ ಕಸರತ್ತು ಸಿಎಂ ನಿವಾಸದಲ್ಲಿ ನಡೆದಿದೆ. ತಡರಾತ್ರಿ 3 ಗಂಟೆವರೆಗೂ ಸಂಧಾನ ಸಭೆ ನಡೆದಿದೆಯಂತೆ. ಈ ಸಭೆ ವಿಫಲವಾಗುತ್ತಿದ್ದಂತೆ ಸಿಎಂ ಮನೆಯಿಂದ ಸಿಟ್ಟಿನಿಂದ ಹೊರನಡೆದ್ದಾರೆ ಜಮೀರ್ ಅಹ್ಮದ್.
ಈ ಮೂಲಕ ಮತ್ತೊಂದು ಅಸಮಾಧಾನ ಬಹಿರಂಗವಾಗಿದೆ. ಅದಯ ಸಚಿವರ ನಡುವೆ ಅಲ್ಲ. ಹೈ ಕಮಾಂಡ್ ಹಾಗೂ ಜಮೀರ್ ಅಹ್ಮದ್ ನಡುವೆ. ಒಟ್ನಲ್ಲಿ ತಮ್ಮ ಬೆಂಬಲಿಗನಿಗೆ ಅಧ್ಯಕ್ಷ ಗಾಧಿ ಕೊಡಿಸುವಲ್ಲಿ ಮಲ್ಲಿಕಾರ್ಜುನ ಖರ್ಗೆ ಯಶಸ್ವಿಯಾಗಿದ್ದು, ಅನಿವಾರ್ಯವಾಗಿ ಖರ್ಗೆ ಮುಂದೆ ಮಂಡಿಯೂರಿದ್ದಾರೆ ಜಮೀರ್.



