ಭಾರತದಲ್ಲಿ ಆಧಾರ್ ಕಾರ್ಡ್ ಎಷ್ಟು ಅವಶ್ಯಕವೆಂದರೆ ಬ್ಯಾಂಕ್ನಲ್ಲಿ ಖಾತೆ ತೆರೆಯುವುದರಿಂದ ಹಿಡಿದು ಶಾಲಾ-ಕಾಲೇಜುಗಳಲ್ಲಿ ಅಡ್ಮಿಶನ್ ಮಾಡಿಸಲು ಸಹ ಇದು ಅತ್ಯವಶ್ಯಕ. 12 ಅಂಕಿಯ ಆಧಾರ್ ಸಂಖ್ಯೆ ಹೇಳಿದರೆ ಸಾಕು ನೀವು ಬಯಸುವ ಸರ್ಕಾರಿ ಸೇವೆಗಳನ್ನು ಯಾವುದೇ ತಕರಾರುಗಳಿಲ್ಲದೆ ಪಡೆದುಕೊಳ್ಳಬಹುದು. ಇಂತಿಪ್ಪ ಆಧಾರ್ಗೆ 12 ಅಂಕಿಗಳನ್ನೇ ಯಾಕೆ ನೀಡಲಾಗುತ್ತಿದೆ ಎನ್ನುವ ಅನುಮಾನ ಎಂದಾದರೂ ನಿಮ್ಮನ್ನು ಕಾಡಿದೆಯಾ….? 12 ಅಂಕಿ ಹಿಂದಿನ ಅಸಲಿ ಕಾರಣ ಇಲ್ಲಿದೆ…..ಒಮ್ಮೆ ಓದಿ ನೋಡಿ….
ದೇಶದ ಜನಸಂಖ್ಯೆಯ ಶೇ.90ಕ್ಕೂ ಹೆಚ್ಚು ಮಂದಿ ಆಧಾರ್ ಕಾರ್ಡನ್ನು ಹೊಂದಿದ್ದಾರೆ. ಆಧಾರ್ ಕಾರ್ಡನ್ನು ಯೂನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ(ಯುಐಡಿಎಐ) ನೀಡುತ್ತದೆ. ಈ ಸಂಸ್ಥೆಯು ಭಾರತದಲ್ಲಿ ವಾಸವಿರುವ ಭಾರತೀಯ ನಾಗರೀಕರ ವಿವರವನ್ನು ದಾಖಲಿಸಿಕೊಂಡು ಪ್ರತಿಯೊಬ್ಬರಿಗೂ 12 ಅಂಕಿಯ ಆಧಾರ್ ನಂಬರನ್ನು ಘೋಷಿಸುತ್ತದೆ. ಈ 12 ಅಂಕಿಯ ವಿಶಿಷ್ಟ ಆಧಾರ್ ಸಂಖ್ಯೆಯು ಉತ್ತರದಿಂದ ದಕ್ಷಿಣಕ್ಕೆ, ಪೂರ್ವದಿಂದ ಪಶ್ಚಿಮಕ್ಕೆ ದೇಶದ ಯಾವ ಭಾಗಕ್ಕೆ ಹೋದರು ಬದಲಾಗದೆ ಸ್ಥಿರವಾಗಿರುತ್ತದೆ.

12 ಅಂಕೆ ಏಕೆ?
ಪ್ರತಿಯೊಬ್ಬ ವ್ಯಕ್ತಿಗೂ ವಿಶಿಷ್ಟವಾದ ಆಧಾರ್ ಸಂಖ್ಯೆ ಇರುತ್ತದೆ. ಅದು ಜಾತಿ, ಧರ್ಮ, ಮತ ಹಾಗೂ ಭೌಗೋಳಿಕ ವ್ಯಾಪ್ತಿಯನ್ನು ಮೀರಿ ನೀಡಿರುವ ರ್ಯಾಂಡಮ್ ಸಂಖ್ಯೆಯಾಗಿರತ್ತದೆ. ಇನ್ನು 12 ಅಂಕಿಗಳು ಸಂಖ್ಯೆಗಳಾಗಿದ್ದು, ಅನಕ್ಷರಸ್ಥರು ಸಹ ಸುಲಭವಾಗಿ ತಮ್ಮ ಆಧಾರ್ ಸಂಖ್ಯೆಯನ್ನು ನೆನಪಿನಲ್ಲಿಡಬಹುದಾಗಿದೆ. ಆದ್ದರಿಂದಲೇ ಯಾವುದೇ ಅಲ್ಫ್ಬೆಟ್ಸ್ಗಳನ್ನು ಈ 12 ಅಂಕಿಗಳ ನಡುವೆ ಬಳಸಿಲ್ಲ. ಹಾಗೆಯೇ, 12 ಅಂಕಿಗಳು ಸಂಖ್ಯೆಗಳೇ ಆಗಿರುವುದರಿಂದ ಇದರಲ್ಲಿ ವ್ಯಕ್ತಿಯ ಜನ್ಮದಿನಾಂಕ ಸೇರಿದಂತೆ ಮತ್ತಿತರ ಅಂಶಗಳನ್ನು ಬಳಸಲ್ಪಟ್ಟಿರುವುದಿಲ್ಲ. ಆದ್ದರಿಂದ ವ್ಯಕ್ತಿಯ ಹಿನ್ನೆಲೆಯನ್ನು ತಿಳಿಯಲು ಸಾಧ್ಯವಾಗುವುದಿಲ್ಲ.
ಆಧಾರ್ ಸಂಖ್ಯೆ ಹೇಗೆ ರಚಿತವಾಗಿದೆ?
ಯುಐಡಿಎಐ ರ್ಯಾಂಡಮ್ ನಂಬರ್ ಜನರೇಟರನ್ನು ಸಂಖ್ಯೆ ಸೃಷ್ಟಿಸಲು ಬಳಸಿಕೊಳ್ಳುತ್ತದೆ. ಇದರಲ್ಲಿ ಬರುವ ಅಲ್ಗೊರಿದಮ್ ಸಹ ರ್ಯಾಂಡಮ್ ನಂಬರ್ ಜನರೇಟರನ್ನು ಬಳಸಿಕೊಂಡು ಸಮವಾಗಿ ವಿತರಿಸಲಾದ ಸಂಖ್ಯೆಗಳನ್ನು ರಚಿಸುತ್ತದೆ. ಒಮ್ಮೆ 12 ಅಂಕಿಯ ಸಂಖ್ಯೆ ರಚಿತವಾದ ನಂತರ ಅಲ್ಗೊರಿದಮ್ ಸಂಖ್ಯೆಯಲ್ಲಿ ವಿಶಿಷ್ಟತೆ(ಯೂನಿಕ್ನೆಸ್) ಇದೆಯೇ ಎಂದು ದೃಢ ಪಡಿಸಿಕೊಳ್ಳುತ್ತದೆ.

ಆಧಾರ್ ಸಂಖ್ಯೆಗಿದೆ ಬಿಗಿ ಭದ್ರತೆ:
ಮೇಲೆ ತಿಳಿಸಿದಂತೆ ಆಧಾರ್ ಸಂಖ್ಯೆ ಎಲ್ಲಾ ವಲಯದಲ್ಲೂ ಬಳಸಲ್ಪಡುತ್ತಿರುವ ಮಾದರಿಯಾಗಿದ್ದು, ಸರ್ಕಾರಿ ಸವಲತ್ತಿಗೆ ಆಧಾರ್ ನಂಬರ್ ಜೋಡಣೆ ಅತ್ಯಗತ್ಯ ಮಾನದಂಡವಾಗಿದೆ. ಹಲವು ಆನ್ಲೈನ್ ಸೇವೆಗಳಿಗೆ ಆಧಾರ್ ಸಂಖ್ಯೆಯ ಮೂಲಕ ಸುಲಭವಾಗಿ ಪ್ರವೇಶ ಪಡೆಯಬಹುದಾಗಿದೆ. ಇಷ್ಟೆಲ್ಲಾ ವ್ಯವಹಾರಕ್ಕೆ ಉಪಯುಕ್ತವಾಗುವ ಆಧಾರ್ ಸಂಖ್ಯೆಗೆ ಅಷ್ಟೇ ಭದ್ರತೆಯನ್ನು ಒದಗಿಸಲಾಗಿದೆ. ಸೈಬರ್ ಅಪರಾಧಿಗಳು ಸುಲಭವಾಗಿ ಆಧಾರ್ ಡೇಟಾವನ್ನು ಕದಿಯಲು ಸಾಧ್ಯವಿಲ್ಲ. ಆದ್ದರಿಂದಲೇ ಮತ್ತೊಬ್ಬರ ಆಧಾರ್ ಡೇಟಾ ಪಡೆಯಬೇಕಿದ್ದರೆ ಪ್ರತಿಯೊಬ್ಬರು ತಮ್ಮ ಥಂಬ್ ಇಂಪ್ರೆಷನ್ ಅಥವಾ ಆಧಾರ್ನಲ್ಲಿ ನೋಂದಾಯಿಸಿರುವ ಮೊಬೈಲ್ ಸಂಖ್ಯೆಗೆ ಬರುವ ಓಟಿಪಿಯನ್ನು ಹಂಚಿಕೊಂಡಾಗ ಮಾತ್ರ ಮೂರನೆಯವರು ಮಾಹಿತಿ ಪಡೆದುಕೊಳ್ಳಬಹುದಾಗಿದೆ. ಹೀಗಾಗಿಯೇ, ಇತ್ತೀಚೆಗೆ ಆಧಾರ್ ಸಂಖ್ಯೆಯನ್ನು, ಆಧಾರ್ ಸಂಬಂಧಿತ ಓಟಿಪಿಗಳನ್ನು ಶೇರ್ ಮಾಡಬೇಡಿ ಎಂದು ಸರ್ಕಾರ ಜಾಹಿರಾತುಗಳನ್ನು ನೀಡುತ್ತ ಎಚ್ಚರಿಸುತ್ತಿರುವುದು.
ಮಾಸ್ಕ್ಡ್ ಆಧಾರ್ ಡೌನ್ಲೋಡ್ ಮಾಡಿಕೊಳ್ಳಿ:
ಇತರರು ದುರುಪಯೋಗ ಪಡಿಸಿಕೊಳ್ಳದಂತೆ ಆಧಾರ್ ಕಾರ್ಡನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿ. ಕೆಲವೊಮ್ಮೆ ಸಂಭವಿಸಬಹುದಾದ ಮಾಹಿತಿ ಸೋರಿಕೆಯಂತಹ ಅವಘಡಗಳನ್ನು ತಡೆಯಲು ಮಾಸ್ಕ್ಡ್ ಆಧಾರ್ ಕಾರ್ಡನ್ನು ಬಳಸುವುದು ಉತ್ತಮ. ಇದಕ್ಕೂ ಸಹ ಆಧಾರ್ ಕಾರ್ಡ್ನಷ್ಟೆ ಬೆಲೆಯಿದ್ದು, ಇದನ್ನು ಗುರುತಿನ ಪುರಾವೆಯಾಗಿ ಬಳಸಿಕೊಳ್ಳಬಹುದು. ಇದರಲ್ಲಿ ಆಧಾರ್ನ 12 ಅಂಕಿಗಳಲ್ಲಿ ಮೊದಲ 8 ಅಂಕಿಗಳನ್ನು ಮರೆಮಾಚಲಾಗಿರುತ್ತದೆ. ಕೊನೆಯ 4 ಅಂಕಿಗಳು ಮಾತ್ರ ಗೋಚರಿಸುತ್ತಿರುತ್ತವೆ. ಕೊನೆಯ 4 ಅಂಕಿಗಳನ್ನು ತೆಗೆದುಕೊಂಡು ಯಾರು ಸಹ ಯಾವುದೇ ವ್ಯಕ್ತಿಯ ಹಿನ್ನೆಲೆಯನ್ನು ಬಗೆಯಲು ಸಾಧ್ಯವಾಗುವುದಿಲ್ಲ. ಯಾಕೆಂದರೆ ಒಂದೊಂದು ಅಂಕಿಯು ಯೂನಿಕ್ ನಂಬರ್ಗಳಾಗಿದ್ದು, ಯಾರು ಸಹ ಮುಂದಿನ 8 ಅಂಕಿಗಳನ್ನು ಊಹಿಸಲು ಸಾಧ್ಯವಾಗುವುದಿಲ್ಲ.

ಮಾಸ್ಕ್ಡ್ ಆಧಾರ್ ಇಲ್ಲಿ ಸಿಗುತ್ತೆ ನೋಡಿ….
ವಂಚನೆಯಂತಹ ಅಪರಾಧಗಳಿಂದ ತಪ್ಪಿಸಿಕೊಳ್ಳಲು ಬಯಸುವವರು ಮಾಸ್ಕ್ಡ್ ಆಧಾರ್ ಕಾರ್ಡನ್ನು ಡೌನ್ಲೋಡ್ ಮಾಡಿಕೊಂಡು ನಿಮ್ಮ ದಿನನಿತ್ಯದ ವ್ಯವಹಾರಕ್ಕೆ ಬಳಸಿಕೊಳ್ಳಿ. ಯುಐಡಿಎಐನ ಅಧಿಕೃತ ವೆಬ್ಸೈಟ್ನಲ್ಲಿಯೇ ಇದನ್ನು ಸಹ ಡೌನ್ಲೋಡ್ ಮಾಡಿಕೊಳ್ಳಬಹುದು. www.uidai.com ತೆರೆದು, ಆಧಾರ್ ವಿಭಾಗಕ್ಕೆ ಹೋಗಿ ನನ್ನ ಆಧಾರ್ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ನಿಮ್ಮ ಆಧಾರ್ ಸಂಖ್ಯೆ ಹಾಗೂ ಕ್ಯಾಪ್ಚ ಕೋಡ್ ನಮೂದಿಸಿ. ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರ್ಗೆ ಬರುವ ಓಟಿಪಿಯನ್ನು ನಮೂದಿಸಿ, ಡೌನ್ಲೋಡ್ ಆಯ್ಕೆಯನ್ನು ಆರಿಸಿ. ನಂತರ ಚೆಕ್ ಬಾಕ್ಸ್ನಲ್ಲಿ ಕಾಣಿಸಿಕೊಳ್ಳುವ ಡೌನ್ಲೋಡ್ ಮಾಸ್ಕ್ಡ್ ಆಧಾರ್ ಆಯ್ಕೆಯನ್ನು ಆಯ್ಕೆ ಮಾಡಿ, ಸಲ್ಲಿಸು ಆಯ್ಕೆ ಮೇಲೆ ಕ್ಲಿಕ್ ಮಾಡಿ. ಆ ಕ್ಷಣವೇ ಮಾಸ್ಕ್ಡ್ ಆಧಾರ್ ಡೌನ್ಲೋಡ್ ಆಗುತ್ತದೆ. ಈ ಡೌನ್ಲೋಡ್ ಫೈಲ್ ಪಾಸ್ವರ್ಡ್ನಿಂದ ಸುರಕ್ಷಿತವಾಗಿದ್ದು, ನಿಮ್ಮ ಹೆಸರಿನ ಅಕ್ಷರ, ನಿಮ್ಮ ಜನ್ಮ ದಿನಾಂಕ ಹಾಗೂ ವರ್ಷವನ್ನು ನಮೂದಿಸಿ ಫೈಲನ್ನು ಓಪನ್ ಮಾಡಬೇಕಿದೆ.
ಇತ್ತೀಚೆಗೆ ಸೈಬರ್ ವಂಚನೆಯಂತಹ ಪ್ರಕರಣಗಳು ಎಗ್ಗಿಲ್ಲದೆ ಸಾಗುತ್ತಿದ್ದು, ಪ್ರತಿನಿತ್ಯ ಹಲವು ಸೈಬರ್ ಪ್ರಕರಣಗಳು ದಾಖಲಾಗುತ್ತಿವೆ. ಅನಾಹುತ ಸಂಭವಿಸಿದ ನಂತರ ಎಚ್ಚೆತ್ತುಕೊಳ್ಳುವ ಬದಲು, ನಡೆಯುವ ಮುನ್ನವೇ ಜಾಗರೂಕರಾಗಿರುವುದು ಒಳ್ಳೆದಯದಲ್ಲವೇ.