ಅಂಗಡಿಗಳಿಗೆ ಹೋಗಿ ಯಾವುದಾದರೂ ಸಾಮಾನು ತೆಗೆದುಕೊಂಡರೆ ಅವುಗಳ ಮೇಲೆ ಕಾಣಸಿಗುವುದು ಇಂಗ್ಲಿಷ್ ಅಥವಾ ಹಿಂದಿಯ ಅಕ್ಷರಗಳು. ಹಿಂದಿ, ಇಂಗ್ಲಿಷ್ ಓದಲು ಬಾರದ ಎಷ್ಟೋ ಮಂದಿ ಅದರಲ್ಲಿ ಬರೆದಿರುವ ಅಂಶಗಳ ಬಗ್ಗೆ ತಿಳಿಯದೇ ಅಂಗಡಿಯವರನ್ನು ಕೇಳಿ ತಿಳಿದುಕೊಳ್ಳಬೇಕಾಗಿತ್ತು. ಇಲ್ಲವೆಂದರೆ, ಏನನ್ನು ಓದದೇ ಹಾಗೆಯೇ ಖರೀದಿಸಬೇಕಿತ್ತು. ಈ ರಗಳೆಗಳಿಗೆ ತೆರೆ ಎಳೆಯಲು ರಾಜ್ಯ ಸರ್ಕಾರ ಮಹತ್ವದ ನಿರ್ಣಯವೊಂದನ್ನು ಕೈಗೊಂಡಿದೆ.
ಹೌದು, ಇನ್ನು ಮುಂದೆ ಕರ್ನಾಟಕದಲ್ಲಿ ತಯಾರಾಗುವ ಎಲ್ಲಾ ಉತ್ಪನ್ನಗಳ ಮೇಲೆಯೂ ಕನ್ನಡದ ಲೇಬಲ್ ಕಡ್ಡಾಯಗೊಳಿಸಬೇಕು ಎಂದು ರಾಜ್ಯ ಸರ್ಕಾರ ನಿರ್ದೇಶನ ನೀಡಿದೆ. ಈ ಮೂಲಕ ವ್ಯವಹಾರದಲ್ಲಿಯೂ ಕನ್ನಡ ಭಾಷೆಯನ್ನು ಸಂಯೋಜಿಸಬೇಕು ಎಂದು ನಿರ್ದೇಶನ ಹೊರಡಿಸಿದೆ.
ಕೈಗಾರಿಕಾ ಹಾಗೂ ಗ್ರಾಹಕ ಮಾರುಕಟ್ಟೆಯಲ್ಲಿ ಕನ್ನಡದ ಉಪಸ್ಥಿತಿಯನ್ನು ಬಲಪಡಿಸುವ ನಿಟ್ಟಿನಲ್ಲಿ, ಕರ್ನಾಟಕದಲ್ಲಿ ತಯಾರಾಗುವ ಎಲ್ಲಾ ಉತ್ಪನ್ನಗಳ ಹೆಸರು ಹಾಗೂ ಬಳಕೆಯ ಸೂಚನೆಗಳನ್ನು ಕನ್ನಡದಲ್ಲಿ ಕಡ್ಡಾಯವಾಗಿ ಪ್ರಕಟಿಸಬೇಕು ಎಂದು ಹೇಳಿದೆ. ಫೆ.15ರಂದೇ ಸರ್ಕಾರಿ ಸುತ್ತೋಲೆಯ ಮೂಲಕ ಔಪಚಾರಿಕವಾಗಿ ನಿರ್ದೇಶನವನ್ನು ಹೊರಡಿಸಿದ್ದು, ಸಾರ್ವಜನಿಕ ಹಾಗೂ ಖಾಸಗಿ ವಲಯದ ಉತ್ಪಾದಕರಿಗೆ ಈ ಕುರಿತು ತಿಳಿಸಲಾಗಿದೆ. ಇನ್ನು ಇದರ ಮೇಲುಸ್ತುವಾರಿಯನ್ನು ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಕಾಯ್ದೆ, 2022ರ ಅಡಿಯಲ್ಲಿ ನೇಮಕಗೊಂಡಿರುವ ಜಾರಿ ಪ್ರಾಧಿಕಾರಿಗಳಿಗೆ ವಹಿಸಲಾಗಿದೆ. ಈ ನಿಯಮ ಜಾರಿಗೆ ತರುವ ಸಂಪೂರ್ಣ ಅಧಿಕಾರ ಅಧಿಕಾರಿಗಳ ಹೆಗಲಿಗೆ ಬಿದಿದೆ.

ಸುತ್ತೋಲೆ ಏನು ಹೇಳುತ್ತದೆ?
ಭಾಷೆಯು ಆ ನೆಲದ ಸಂಸ್ಕೃತಿ, ಸಂಪ್ರದಾಯ ಹಾಗೂ ಮೌಲ್ಯಗಳನ್ನು ಪ್ರತಿಬಿಂಬಿಸುತ್ತದೆ. ಒಂದು ಭಾಷೆ ಬೆಳವಣಿಗೆಯಾಗಬೇಕಾದರೆ ಆ ನೆಲದಲ್ಲಿನ ಉತ್ಪಾದನೆ, ಮಾರುಕಟ್ಟೆ ಹಾಗೂ ವ್ಯವಹಾರಗಳು ಸ್ಥಳೀಯ ಭಾಷೆಯಲ್ಲಿರಬೇಕು. ಕನ್ನಡ ಭಾಷೆಯ ಸಮಗ್ರ ಅಭಿವೃದ್ಧಿಗಾಗಿ ಮತ್ತು ಕನ್ನಡಿಗರಿಗೆ ಎಲ್ಲಾ ಕ್ಷೇತ್ರಗಳಲ್ಲಿ ಉತ್ತಮ ಅವಕಾಶ ಕಲ್ಪಿಸುವ ಉದ್ದೇಶದಿಂದ ಸರ್ಕಾರವು ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ, 2022 ಅನ್ನು 2024 ಮಾರ್ಚ್ 12ರಂದು ಜಾರಿಗೆ ತಂದಿದೆ. ಸದರಿ ಅಧಿನಿಯಮದ ಕಲಂ 17(7)ರಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ರಾಜ್ಯದೊಳಗೆ ತಯಾರಿಸಿದ ಹಾಗೂ ಮಾರಾಟವಾಗುವ ಎಲ್ಲಾ ಕೈಗಾರಿಕಾ ಮತ್ತು ಇತರ ಗ್ರಾಹಕ ಉತ್ಪನ್ನಗಳ ಹೆಸರು ಮತ್ತು ಅವುಗಳ ಬಳಕೆಯ ಕುರಿತಾದ ನಿರ್ದೇಶನಗಳು ಇತರ ಭಾಷೆಯ ಜೊತೆಗೆ ಕನ್ನಡದಲ್ಲಿಯೂ ಇರತಕ್ಕದೆಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಕರ್ನಾಟಕದಲ್ಲಿ ಭಾಷಾ ನೀತಿಗಳ ಕುರಿತು ವ್ಯಾಪಕ ಚರ್ಚೆ ನಡೆಯುತ್ತಿರುವಾಗಲೇ ಈ ನಿರ್ದೇಶನ ಜಾರಿಗೆ ಬಂದಿದೆ. ಸ್ಥಳೀಯ ಉದ್ಯೋಗ ಕೋಟಾ ಹಾಗೂ ಸರ್ಕಾರಿ ಮತ್ತು ಕಾರ್ಪೋರೇಟ್ ವಲಯಗಳಲ್ಲಿ ಕನ್ನಡದ ಪ್ರಾಮುಖ್ಯತೆಯ ಕುರಿತು ನಡೆಯುತ್ತಿರುವ ಚರ್ಚೆಗೆ ಭಾಷಾ ಗುರುತಿನ ಈ ನಿಯಮ ಮತ್ತಷ್ಟು ಪುಷ್ಠಿ ನೀಡಿದೆ.
ಕನ್ನಡ ರಾಜ್ಯೋತ್ಸವದಂದು ಮಾತು ಕೊಟ್ಟಿದ ಸಿಎಂ:
ಕನ್ನಡ ರಾಜ್ಯೋತ್ಸವದಂದು 69 ಜನರನ್ನು ಸನ್ಮಾನಿಸಿ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ, ಕನ್ನಡದ ದೈನಂದಿನ ಬಳಕೆ ಮತ್ತು ಕಲಿಕೆ ಪ್ರೋತ್ಸಾಹಿಸುವ ವಾತಾವರಣವನ್ನು ಸೃಷ್ಟಿಸುವ ಮಹತ್ವದ ಕುರಿತು ಚರ್ಚಿಸಿದ್ದರು. ಹಾಗೆಯೇ, ಕರ್ನಾಟಕದಲ್ಲಿ ತಯಾರಾಗುವ ಉತ್ಪನ್ನಗಳ ಮೇಲೆ ಕನ್ನಡ ಭಾಷೆಯ ಲೇಬಲ್ಗಳನ್ನು ಕಡ್ಡಾಯಗೊಳಿಸಲು ಕ್ರಮ ಕೈಗೊಳ್ಳಲಾಗುವುದಾಗಿಯೂ ಘೋಷಿಸಿದ್ದರು. ಇದೀಗ ಅದರಂತೆ ಕರ್ನಾಟಕದ ಉತ್ಪನ್ನಗಳ ಮೇಲೆ ಕನ್ನಡ ಭಾಷಾ ಲೇಬಲ್ ಇರಲೇಬೇಕೆಂದು ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ.
ರಾಜ್ಯ ಸರ್ಕಾರದ ನಡೆ ಶ್ಲಾಘನೀಯ:
ಹೌದು, ಇತ್ತೀಚೆಗೆ ಕನ್ನಡ ಭಾಷೆ ರಾಜ್ಯ ಮಾತ್ರವಲ್ಲ ದೇಶದ ಚಿತ್ತವನ್ನು ತನ್ನತ್ತ ಸೆಳೆಯುತ್ತಿದೆ. ಬೆಳಗಾವಿಯಲ್ಲಿ ಕನ್ನಡ ಮಾತನಾಡಿದ್ದ ಕೆಎಸ್ಆರ್ಟಿಸಿ ಬಸ್ ಕಂಡಕ್ಟರ್ ಮೇಲೆ ಮರಾಠಿ ಪುಂಡ ಯುವಕರು ಹಲ್ಲೆ ಮಾಡಿ, ಮರಾಠಿ ಮಾತಾಡುವಂತೆ ತಾಕೀತು ಮಾಡಿದ್ದರು. ಈ ಪ್ರಕರಣಕ್ಕೆ ರಾಜ್ಯದೆಲ್ಲೆಡೆ ಆಕ್ರೋಶ ವ್ಯಕ್ತವಾಗಿತ್ತು. ಈ ಹಿಂದೆಯೂ ರಾಜ್ಯ ಸರ್ಕಾರ ಕನ್ನಡ ಭಾಷಾ ಉಳಿವಿಗಾಗಿ ಹಲವು ಕ್ರಮ ಕೈಗೊಂಡಿತ್ತು, ಅದರಲ್ಲಿ ಒಂದು ಕರ್ನಾಟದಲ್ಲಿರುವ ಅಂಗಡಿ-ಮುಂಗಟ್ಟುಗಳ ಮುಂದೆ ಕನ್ನಡ ಭಾಷೆಯಲ್ಲಿಯೇ ಬೋರ್ಡ್ಗಳನ್ನು ಹಾಕಬೇಕು ಎಂಬುದಾಗಿತ್ತು. ಇದೀಗ ಉತ್ಪದಾನೆಗಳ ಮೇಲೂ ಕನ್ನಡ ಲೇಬಲ್ ಕಡ್ಡಾಯಗೊಳಿಸಿದ್ದು, ಕನ್ನಡ ಭಾಷೆಯ ಅಳಿವು-ಉಳಿವು ಹಾಗೂ ಅಭಿವೃದ್ಧಿಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿರುವುದು ಶ್ಲಾಘನೀಯ.