ತೆಲುಗು ಚಿತ್ರರಂಗ ಎಂದರೆ ತಕ್ಷಣ ನೆನಪಿಗೆ ಬರುವುದು ನಿರ್ದೇಶಕ ಎಸ್ಎಸ್ ರಾಜಮೌಳಿ. ಟಾಲಿವುಡ್ಗೆ ಬ್ಯಾಕ್ ಟು ಬ್ಯಾಕ್ ಹಿಟ್ ಚಿತ್ರಗಳನ್ನು ಕೊಟ್ಟು ಹ್ಯಾಟ್ರಿಕ್ ನಿರ್ದೇಶಕ ಎನಿಸಿಕೊಂಡಿರುವ ರಾಜಮೌಳಿ ಸಿನಿಮಾದಲ್ಲಿ ಒಂದು ಶಾಟ್ನಲ್ಲಾದರೂ ನಟಿಸುವ ಅವಕಾಶ ದೊರೆಯಲಿ ಎಂದು ಕಲಾವಿದರು ಕಾಯುತ್ತಿರುತ್ತಾರೆ. ಆರ್ಆರ್ಆರ್ ಚಿತ್ರದ ಮೂಲಕ ಹಾಲಿವುಡ್ನಲ್ಲೂ ಹೆಸರಾದ ಸ್ಟಾರ್ ನಿರ್ದೇಶಕ ರಾಜಮೌಳಿ ಅವರ ವಿರುದ್ಧ ವ್ಯಕ್ತಿಯೊಬ್ಬರು ಗಂಭೀರವಾದ ಆರೋಪ ಮಾಡಿದ್ದಾರೆ. ಆತ ಮತ್ತ್ಯಾರೂ ಅಲ್ಲ ರಾಜಮೌಳಿ ಅವರ ಆಪ್ತ ಗೆಳೆಯ ಶ್ರೀನಿವಾಸ್ ರಾವ್ ಎಂದು ಹೇಳಿಕೊಳ್ಳುತ್ತಿರುವ ವ್ಯಕ್ತಿ. ಅಷ್ಟಕ್ಕೂ ಏನು ಆ ಆರೋಪ? ರಾಜಮೌಳಿ ಮಾಡಿದ ತಪ್ಪಾದ್ರೂ ಏನು? ಇಲ್ಲಿದೆ ಮಾಹಿತಿ.
ಶ್ರೀನಿವಾಸ್ ರಾವ್ ಎಂಬುವವರು ಮಾಡಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಆತ ಭಾರತದ ನಂಬರ್ ಒನ್ ನಿರ್ದೇಶಕ ಎಸ್ಎಸ್ ರಾಜಮೌಳಿ ಹಾಗೂ ಅವರ ಪತ್ನಿ ರಮಾ ರಾಜಮೌಳಿ ಅವರಿಂದ ನಾನು ಸಾ*ಯುತ್ತಿದ್ದೇನೆ, ಅದಕ್ಕೆ ಸಂಬಂಧಿಸಿದಂತೆ ನಾನು ಡೆ&ತ್ ನೋಟ್ ಬರೆದಿದ್ದೇನೆ. ನಾನು ಇದನ್ನೆಲ್ಲಾ ಪಬ್ಲಿಸಿಟಿಗೋಸ್ಕರ ಮಾಡುತ್ತಿರುವೆ ಎಂದುಕೊಳ್ಳಬೇಡಿ. ಪಬ್ಲಿಸಿಟಿ ಬಯಸುವವರು ಯಾರೂ ಸಾಯಲು ಸಿದ್ಧರಿರುವುದಿಲ್ಲ. ನನ್ನ ಹಾಗೂ ರಾಜಮೌಳಿ ಫ್ರೆಂಡ್ಶಿಪ್ ಬಗ್ಗೆ ಎಂಎಂ ಕೀರವಾಣಿ, ಅನಿಲ್ ರಾವಿಪುಡಿ ಸೇರಿದಂತೆ ಅನೇಕರಿಗೆ ಗೊತ್ತು. ನಮ್ಮಿಬ್ಬರದ್ದು 30 ವರ್ಷಕ್ಕೂ ಹಿಂದಿನ ಫ್ರೆಂಡ್ಶಿಪ್. ರಾಮಾಯಣ ಹಾಗೂ ಮಹಾಭಾರತ ಒಂದು ಹೆಣ್ಣಿನಿಂದ ನಡೆಯಿತು ಎಂಬುದನ್ನು ಕೇಳಿದ್ದೆ, ಆದರೆ ಒಂದು ಹೆಣ್ಣಿನಿಂದ ನಾನು ಕೂಡಾ ಈ ಪರಿಸ್ಥಿತಿಗೆ ಬರುತ್ತೇನೆ ಎಂದು ನಾನೂ ಊಹಿಸಿರಲಿಲ್ಲ.
ಎಲ್ಲರ ಜೀವನದಂತೆ ನನ್ನ ಜೀವನದಲ್ಲಿ ಕೂಡಾ ಯುವತಿಯೊಬ್ಬಳು ಪ್ರವೇಶಿಸಿದಳು. ನಮ್ಮದು ಟ್ರೈ ಆಂಗಲ್ ಲವ್ ಸ್ಟೋರಿ. ನಾವು ಮೂವರೂ ಕ್ಲೋಸ್ ಇದ್ದಿದ್ದರಿಂದ ಮುಂದೇನು ಮಾಡುವುದು ಎಂದು ನಾನು ರಾಜಮೌಳಿ ಬಳಿ ಕೇಳಿದೆ. ನೀನು ತ್ಯಾಗ ಮಾಡಬೇಕು ಎಂದು ಆತ ಹೇಳಿದ. ಅದು ನನಗೆ ಇಷ್ಟವಿಲ್ಲದಿದ್ದರೂ ವೃತ್ತಿ ಜೀವನ ಚೆನ್ನಾಗಿರಲಿ ಎಂಬ ಕಾರಣಕ್ಕೆ ನಾನು ತ್ಯಾಗ ಮಾಡಿದೆ. ನಾನು ಮಾಡಿದ ತ್ಯಾಗವನ್ನೂ ಮರೆತು ರಾಜಮೌಳಿ ನನಗೆ ಬಹಳ ಹಿಂಸೆ ಕೊಡುತ್ತಾ ಬಂದರು. ನನಗೆ ನ*ರಕದರ್ಶನ ಮಾಡಿಸಿದರು ಎಂದು ಶ್ರೀನಿವಾಸ್ ರಾವ್, ರಾಜಮೌಳಿ ವಿರುದ್ಧ ಮಾಡಿರುವ ವಿಡಿಯೋ ವೈರಲ್ ಆಗುತ್ತಿದೆ. ಶ್ರೀನಿವಾಸ್ ರಾವ್ ಈಗ ಕಣ್ಮರೆಯಾಗಿದ್ದಾರೆ.
ಈ ವಿಡಿಯೋ ನೋಡಿ ಸಿನಿಮಾಭಿಮಾನಿಗಳು ಪರ ವಿರೋಧ ಕಾಮೆಂಟ್ ಮಾಡುತ್ತಿದ್ದಾರೆ. ತಪ್ಪು ಯಾರು ಮಾಡಿದರೂ ತಪ್ಪು. ಪೊಲೀಸರು ಈ ವ್ಯಕ್ತಿಯನ್ನು ಹುಡುಕಬೇಕು, ರಾಜಮೌಳಿ ವಿರುದ್ಧ ತನಿಖೆ ನಡೆಸಿ ಆತ ಮಾಡಿರುವ ಅನ್ಯಾಯವನ್ನು ಬಯಲಿಗೆ ಎಳೆಯಬೇಕು ಎಂದರೆ ಇನ್ನೂ ಕೆಲವರು ವಿಡಿಯೋ ಮಾಡಿರುವ ವ್ಯಕ್ತಿ ರಾಜಮೌಳಿ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ ಎನ್ನುತ್ತಿದ್ದಾರೆ. ಇದು ಫೇಕ್ ನ್ಯೂಸ್. ಆತ ಎಲ್ಲವನ್ನೂ ನ್ಯೂಸ್ನಂತೆ ಬರೆದುಕೊಂಡು ಓದುತ್ತಿದ್ದಾನೆ. ಅಭಿಮಾನಿಗಳು ಇದರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ರಾಜಮೌಳಿ ವಿರುದ್ಧ ಕೇಳಿಬಂದಿರುವ ಆರೋಪದಿಂದ ಟಾಲಿವುಡ್ ಶಾಕ್ ಆಗಿರುವುದಂತೂ ನಿಜ.
ಎಸ್ಎಸ್ ರಾಜಮೌಳಿ 1973ರಲ್ಲಿ ರಾಯಚೂರಿನಲ್ಲಿ ಜನಿಸಿದರು. ತಂದೆ ವಿಜಯೇಂದ್ರ ಪ್ರಸಾದ್, ತಾಯಿ ರಾಜನಂದಿನಿ. ಇವರ ಕುಟುಂಬದಲ್ಲಿ ತಂದೆ ವಿಜಯೇಂದ್ರ ಪ್ರಸಾದ್ ಸೇರಿದಂತೆ ಅನೇಕರು ರಂಗಭೂಮಿ, ಚಿತ್ರರಂಗದಲ್ಲಿ ಇದ್ದಿದ್ದರಿಂದ ಸಹಜವಾಗಿ ರಾಜಮೌಳಿಗೆ ಸಿನಿಮಾ ಬಗ್ಗೆ ಒಲವು ಬೆಳೆಯಿತು. ತೆಲುಗಿನ ಖ್ಯಾತ ನಿರ್ದೇಶಕ ಕೆ ರಾಘವೇಂದ್ರ ರಾವ್ ಅವರ ಮಾರ್ಗದರ್ಶನದಲ್ಲಿ ಶಾಂತಿ ನಿವಾಸಂ ಎಂಬ ತೆಲುಗು ಧಾರಾವಾಹಿಯನ್ನು ನಿರ್ದೇಶಿಸುವುದರ ಮೂಲಕ ರಾಜಮೌಳಿ ನಿರ್ದೇಶಕರಾಗಿ ಟಾಲಿವುಡ್ಗೆ ಎಂಟ್ರಿ ಕೊಟ್ಟರು. ಈ ಧಾರಾವಾಹಿ ಈಟಿವಿ ತೆಲುಗು ವಾಹಿನಿಯಲ್ಲಿ ಪ್ರಸಾರವಾಗಿ ಒಳ್ಳೆ ಹೆಸರು ತಂದುಕೊಟ್ಟಿತು.
2001 ರಲ್ಲಿ ಜ್ಯೂನಿಯರ್ ಎನ್ಟಿಆರ್ ಜೊತೆ ಸ್ಟೂಡೆಂಟ್ ನಂ 1 ಸಿನಿಮಾ ಮಾಡಿದರು. ಈ ಸಿನಿಮಾ ಸೂಪರ್ ಹಿಟ್ ಆಯ್ತು. ಸಿಂಹಾದ್ರಿ, ಸೈ, ಛತ್ರಪತಿ, ವಿಕ್ರಮಾರ್ಕುಡು, ಯಮದೊಂಗ, ಮಗಧೀರ, ಮರ್ಯಾದಾ ರಾಮಣ್ಣ, ಈಗ, ಬಾಹುಬಲಿ, ಆರ್ಆರ್ಆರ್ ಸಿನಿಮಾಗಳನ್ನು ನಿರ್ದೇಶಿಸಿ ತೆಲುಗು ಚಿತ್ರರಂಗಕ್ಕೆ ಸಾಲು ಸಾಲು ಹಿಟ್ ಚಿತ್ರಗಳನ್ನು ರಾಜಮೌಳಿ ನೀಡಿದ್ದಾರೆ. ರಾಮ್ಚರಣ್, ಜ್ಯೂನಿಯರ್ ಎನ್ಟಿಆರ್ ನಟಿಸಿರುವ ಆರ್ಆರ್ಆರ್ ಚಿತ್ರದ ನಾಟು ನಾಟು ಹಾಡಿಗೆ ಆಸ್ಕರ್ ಪ್ರಶಸ್ತಿ ಕೂಡಾ ದೊರೆತಿದೆ. ಈ ಚಿತ್ರಕ್ಕೆ ಎಂಎಂ ಕೀರವಾಣಿ ಸಂಗೀತ ನಿರ್ದೇಶಿಸಿದ್ದಾರೆ. ಸದ್ಯಕ್ಕೆ ತಮ್ಮ ವಿರುದ್ದ ಬಂದಿರುವ ಆರೋಪಕ್ಕೆ ರಾಜಮೌಳಿ ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಕಾದು ನೋಡಬೇಕು.



