ಕನ್ನಡ ಚಿತ್ರರಂಗದ ಮೂಲಕ ವೃತ್ತಿ ಜೀವನ ಆರಂಭಿಸಿ, ಪೋಷಕ ನಟಿಯಾಗಿ ಮಿಂಚಿದ್ದ ಪವಿತ್ರಾ ಲೋಕೇಶ್ ಈಗ ಟಾಲಿವುಡ್ನಲ್ಲಿ ಸೆಟಲ್ ಆಗಿದ್ದಾರೆ. ನಾಯಕಿ, ನಾಯಕನ ಅಮ್ಮನಾಗಿ ಅತ್ತಿಗೆಯಾಗಿ ಮಿಂಚುತ್ತಿದ್ದಾರೆ. ಜೊತೆಗೆ ತೆಲುಗಿನ ಖ್ಯಾತ ನಟ ನರೇಶ್ ಕೃಷ್ಣ ಅವರೊಂದಿಗೆ ಲಿವಿಂಗ್ ರಿಲೇಶನ್ಶಿಪ್ನಲ್ಲಿದ್ದಾರೆ. ವಿವಾದಗಳಿಗೆ ಸೆಡ್ಡು ಹೊಡೆದು ನಿಂತಿರುವ ಈ ಜೋಡಿ ಯಾರಿಗೂ ಹೆದರದೆ ಪ್ರಣಯ ಪಕ್ಷಿಗಳಾಗಿ ಜೀವನ ನಡೆಸುತ್ತಿದ್ದಾರೆ. ಹೈದರಾಬಾದ್ ನರೇಶ್ ನಿವಾಸದಲ್ಲೇ ಪವಿತ್ರಾ ಕೂಡಾ ನೆಲೆಸಿದ್ದಾರೆ.
ನರೇಶ್ ಅವರನ್ನು ಪವಿತ್ರಾ ಲೋಕೇಶ್ ಎಷ್ಟು ಕೇರ್ ಮಾಡುತ್ತಿದ್ದಾರೆ ಎಂದರೆ ನರೇಶ್ ಕೃಷ್ಣ ಎಲ್ಲಿ ಹೋದರೂ ಅವರಿಗೆ ಹೊರಗಿನ ಊಟ ಮಾಡಲು ಬಿಡುವುದಿಲ್ಲವಂತೆ. ನರೇಶ್ಗೆ ಈಗ 64 ವರ್ಷ ವಯಸ್ಸು. ಅದಕ್ಕಾಗಿ ನರೇಶ್ ಸ್ಟ್ರಿಕ್ಟ್ ಡಯಟ್, ವರ್ಕೌಟ್ ಫಾಲೋ ಮಾಡುತ್ತಿದ್ದಾರಂತೆ. ಅದಕ್ಕಾಗಿ ಬೇರೆ ಯಾರನ್ನೂ ಶೆಫ್ ಆಗಿ ನೇಮಿಸಲು ಬಿಡದೆ ಪವಿತ್ರಾ, ತಾವೇ ಖುದ್ದು ತಮ್ಮ ಸಂಗಾತಿಗೆ ಅಡುಗೆ ಮಾಡಿ ಬಡಿಸುತ್ತಿದ್ದಾರಂತೆ. ಶೂಟಿಂಗ್ ಸೆಟ್ಗೆ ಹೋಗಲಿ, ಎಲ್ಲಿಗೇ ಹೋಗಲಿ ಅಡುಗೆ ಮನೆ ಸಾಮಗ್ರಿಗಳನ್ನು ಜೊತೆಗೆ ಕೊಂಡೊಯ್ಯುತ್ತಿದ್ದಾರಂತೆ. ನರೇಶ್ಗೆ ಇಷ್ಟವಾಗುವ, ಅವರ ಆರೋಗ್ಯಕ್ಕೆ ಸರಿ ಹೊಂದುವ ಅಡುಗೆಯನ್ನು ಮಾಡಿ ಬಡಿಸುತ್ತಿದ್ದಾರಂತೆ.

ಏನಿಲ್ಲಾ ಎಂದರೂ ಪ್ರತ್ಯೇಕ ವಾಹನದಲ್ಲಿ ಸುಮಾರು 40 ಕಿಲೋಗೂ ಹೆಚ್ಚು ಅಡುಗೆ ಮನೆ ಸಾಮಗ್ರಿಗಳನ್ನು ಪವಿತ್ರಾ ತಮ್ಮ ಜೊತೆಗೆ ಕೊಂಡೊಯ್ಯುತ್ತಿದ್ದಾರಂತೆ. ಕೆಲವು ದಿನಗಳ ಹಿಂದೆ ನರೇಶ್ಗೆ ಫುಡ್ ಪಾಯ್ಸನ್ ಆಗಿ ಆರೋಗ್ಯ ಸಮಸ್ಯೆ ಆಗಿತ್ತಂತೆ ಅಂದಿನಿಂದ ಪವಿತ್ರಾ ತಮ್ಮ ಸಂಗಾತಿಯನ್ನು ಖುದ್ದು ಕೇರ್ ಮಾಡುತ್ತಿದ್ದಾರೆ. ಪವಿತ್ರಾ ಒಳ್ಳೆ ಅಡುಗೆ ಮಾಡುತ್ತಾರೆ, ಅವರು ಮಾಡುವ ಅಡುಗೆ ನನಗೆ ಬಹಳ ಇಷ್ಟ, ನನ್ನ ಮಗ ನವೀನ್ ಕೂಡಾ ಪವಿತ್ರಾ ಮಾಡುವ ಅಡುಗೆಯನ್ನು ಬಹಳ ಇಷ್ಟಪಟ್ಟು ತಿನ್ನುತ್ತಾನೆ ಎಂದು ನರೇಶ್ ಕೃಷ್ಣ ಒಮ್ಮೆ ಸಿನಿಮಾ ಪ್ರಮೋಷನ್ ಇಂಟರ್ವ್ಯೂನಲ್ಲಿ ಹೇಳಿಕೊಂಡಿದ್ದರು.
ಕನ್ನಡ ನಟಿಯೊಬ್ಬರು ತೆಲುಗು ಖ್ಯಾತ ನಟರೊಬ್ಬರನ್ನು ಗುಟ್ಟಾಗಿ ಮದುವೆ ಆಗುತ್ತಿದ್ದಾರೆ ಎಂಬ ಸುದ್ದಿ 2 ವರ್ಷಗಳ ಹಿಂದೆ ಹರಿದಾಡಿತ್ತು. ಅದು ಯಾರಿರಬಹುದು ಎಂದು ಹುಡುಕಾಡಿದಾಗ ಮಾಧ್ಯಮಗಳ ಕಣ್ಣಿಗೆ ಸೆರೆ ಸಿಕ್ಕವರೇ ನರೇಶ್ ಹಾಗೂ ಪವಿತ್ರಾ ಲೋಕೇಶ್. ನಾನು ಬದುಕಿರುವಾಗಲೇ ಆತ ಮತ್ತೊಂದು ಮದುವೆ ಆಗಲು ಬಿಡುವುದಿಲ್ಲ ಎಂದು ಮೂರನೇ ಪತ್ನಿ ರಮ್ಯಾ ರಘುಪತಿ ನರೇಶ್ ವಿರುದ್ಧ ದೂರು ನೀಡಿದ್ದರು. ಪ್ರಕರಣ ಕೋರ್ಟ್ ಮೆಟ್ಟಿಲು ಕೂಡಾ ಏರಿತ್ತು. ಮಾಧ್ಯಮಗಳ ಕಣ್ಣಿನಿಂದ ತಪ್ಪಿಸಿಕೊಳ್ಳಲು ಪವಿತ್ರಾ ಹಾಗೂ ನರೇಶ್ ಮೈಸೂರಿನ ಐಷಾರಾಮಿ ಹೋಟೆಲ್ನಲ್ಲಿ ರೂಮ್ ಮಾಡಿದ್ದರು. ಆಗಲೂ ಕೂಡಾ ಇವರು ಕ್ಯಾಮರಾಗೆ ಸೆರೆಯಾಗಿದ್ದರು.

ಪ್ರಕರಣ ಈಗ ತಣ್ಣಗಾಗಿದೆ. ಪವಿತ್ರಾ ಹಾಗೂ ನರೇಶ್ ಹೈದರಾಬಾದ್ನಲ್ಲಿ ಜೊತೆಯಾಗಿ ಬದುಕುತ್ತಿದ್ದಾರೆ. ವಿವಾದದ ನಂತರ ಪವಿತ್ರಾ ಹಾಗೂ ನರೇಶ್ ಇಬ್ಬರೂ ಜೊತೆ ಸೇರಿ ಮತ್ತೆ ಮದುವೆ ಎಂಬ ಸಿನಿಮಾದಲ್ಲಿ ನಟಿಸಿದ್ದರು. ಸಿನಿಮಾವನ್ನು ಸ್ವತಃ ನರೇಶ್ ತಮ್ಮ ವಿಜಯ ಕೃಷ್ಣ ಮೂವೀಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿದ್ದರು. ಈ ಚಿತ್ರಕ್ಕಾಗಿ ಇವರು ಬಿಡುಗಡೆ ಮಾಡಿದ ಪ್ರೋಮೋದಲ್ಲಿ ಇಬ್ಬರೂ ಲಿಪ್ ಲಾಕ್ ಮಾಡಿ ಸುದ್ದಿಯಾಗಿದ್ದರು. ಈ ಸಿನಿಮಾ 26 ಮೇ 2023 ರಂದು ತೆರೆ ಕಂಡಿತ್ತು. ತೆಲುಗಿನಲ್ಲಿ ಮಳ್ಳಿ ಪೆಳ್ಳಿ ಹೆಸರಿನಲ್ಲಿ ಸಿನಿಮಾ ರಿಲೀಸ್ ಆಗಿತ್ತು. ಆದರೆ ಚಿತ್ರ ಹೇಳಿಕೊಳ್ಳುವಂಥ ಸದ್ದು ಮಾಡಲಿಲ್ಲ. ಇದಕ್ಕೂ ಮುನ್ನ ಪವಿತ್ರಾ ಹಾಗೂ ನರೇಶ್ ಅನೇಕ ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದ್ದಾರೆ.
ನರೇಶ್ ಕೃಷ್ಣ, ಖ್ಯಾತ ನಿರ್ಮಾಪಕಿ ವಿಜಯ ನಿರ್ಮಲಾ ಅವರ ಪುತ್ರ. ನಿರ್ಮಲಾ ಅವರು ತೆಲುಗು ಚಿತ್ರರಂಗದಲ್ಲಿ ನಿರ್ಮಾಪಕಿಯಾಗಿ ಮಾತ್ರವಲ್ಲದೆ ನಿರ್ದೇಶಕಿಯಾಗಿ, ನಟಿಯಾಗಿ ಕೂಡಾ ಗುರುತಿಸಿಕೊಂಡಿದ್ದವರು. ನರೇಶ್, ವಿಜಯ ನಿರ್ಮಲಾ ಹಾಗೂ ಕೆಎಸ್ ಮೂರ್ತಿ ದಂಪತಿಯ ಪುತ್ರ. ಪತಿ ನಿಧನವಾದ ನಂತರ ವಿಜಯ್ ನಿರ್ಮಲಾ ತೆಲುಗು ಸೂಪರ್ ಸ್ಟಾರ್ ಕೃಷ್ಣ ಅವರನ್ನು ಮದುವೆ ಆಗಿದ್ದರು.



