ಗ್ರಹಣಮೋಕ್ಷ ಕಾಲಕ್ಕೆ ಉಂಟಾದ ಗೊಂದಲಕ್ಕೆ ಸಂಬಂಧಿಸಿ ಜ್ಯೋತಿಷ್ಯಾಸ್ತ್ರದ ವಿದ್ವಾಂಸರು ನೀಡಿದ ಸ್ಪಷ್ಟ ಅಭಿಪ್ರಾಯ ವಿಳಂಬವಾಗಿ ಸಿಕ್ಕಿದ್ದರಿಂದ ಮಂಗಳವಾರ ಸಂಭವಿಸಲಿರುವ ಸೂರ್ಯಗ್ರಹಣದ ವಿಷಯದಲ್ಲಿ ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನ ಮರು ಪ್ರಕಟಣೆ ನೀಡಿದೆ.
ಅ.25 ಮಂಗಳವಾರ ಸಂಜೆ 5 ಘಂಟೆ 4 ನಿಮಿಷಕ್ಕೆ ಸೂರ್ಯಗ್ರಹಣದ ಸ್ಪರ್ಶಕಾಲವಾಗಲಿದೆ. 5-48 ನಿಮಿಷಕ್ಕೆ ಮಧ್ಯಕಾಲವಾಗಿದೆ. 6-29 ನಿಮಿಷಕ್ಕೆ ಮೋಕ್ಷಕಾಲ ಇದೆ.
ಆದ್ಯಂತ ಪುಣ್ಯಕಾಲ 1 ಘಂಟೆ 25 ನಿಮಿಷಗಳಾಗಿವೆ. ಸೂರ್ಯಾಸ್ತದ ನಂತರವೂ ಗ್ರಹಣ ಮುಂದುವರೆದಿದೆ. ಆದ್ದರಿಂದ ಗ್ರಹಣಮೋಕ್ಷದ ನಂತರ ಸ್ನಾನ ಮಾಡಿ, ಲಘು ಉಪಹಾರವನ್ನು ಸ್ವೀಕರಿಸಬಹುದಾಗಿದೆ ಎಂದಿದೆ.
ಮರುದಿನ ಬೆಳಗ್ಗೆ ಸೂರ್ಯೋದಯದ ನಂತರ ಸೂರ್ಯಬಿಂಬ ನೋಡಿ, ಸ್ನಾನ ಮಾಡಿ ಭೋಜನ ಮಾಡಬೇಕಿದೆ. ಈ ಎರಡು ಬದಲಾವಣೆಗಳೊಂದಿಗೆ ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ ಗಳವರ ಅಪ್ಪಣೆಯಂತೆ ಪ್ರಕಟಣೆ ನೀಡಲಾಗಿದೆ ಎಂದು ತಿಳಿಸಲಾಗಿದೆ.