ಚಿಲುಮೆ ಮಠದ ಬಸವಲಿಂಗಸ್ವಾಮೀಜಿ ಅವರ ಖಿನ್ನತೆಗೆ ಒಳಾಗಾಗಿ ಸಾವಿಗೆ ಶರಣಾದ ಘಟನೆ ಮಾಸುವ ಮುನ್ನವೇ, ಕಂಚುಗಲ್ ಬಂಡೆ ಮಠದ ಸ್ವಾಮೀಜಿ ಸಾವಿಗೆ ಶರಣಾಗಿದ್ದಾರೆ. ಇಬ್ಬರದ್ದೂ ಕೂಡ ಒಂದೇ ರೀತಿ ಕಿಟಕಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಮಠದ ಭಕ್ತರಲ್ಲಿ ಸಾಕಷ್ಟು ಅನುಮಾನ ಮೂಡಿಸಿದೆ.
ಸಾಯುವ ಮುನ್ನ ಸ್ವಾಮೀಜಿ ಮೂರು ಪುಟಗಳ ಡೆತ್ ನೋಟ್ ಬರೆದಿದ್ದು, ಮರ್ಯಾದೆಗೆ ಅಂಜಿ ಈ ರೀತಿ ಆತ್ಮಹತ್ಯೆ ದಾರಿ ಹಿಡಿದಿದ್ದಾರೆ ಎನ್ನಲಾಗಿದೆ. ಇನ್ನು ಡೆತ್ ನೋಟ್ನಲ್ಲೂ ಒಂದಿಷ್ಟು ವಿಚಾರಗಳನ್ನು ಬರೆದಿದ್ದಾರೆ ಶ್ರೀಗಳು. ಮುಖ್ಯವಾಗಿ ಕೆಲವರು ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ನನಗೆ ಯಾರ ಸಹಾಯವೂ ಇರಲಿಲ್ಲ. ಅಷ್ಟೆ ಅಲ್ಲ ಕೆಲವರಿಂದ ಬೆದರಿಕೆ ಕರೆಗಳು ಸಹ ಬಂದಿವೆ ಎಂದು ಬರೆದಿದ್ದಾರೆ.
ಡೆತ್ನೋಟ್ನಲ್ಲಿ ತಮಗೆ ಆಗುತ್ತಿದ್ದ ನೋವು, ಹಿಂಸೆಗಳ ಬಗ್ಗೆ ಉಲ್ಲೇಖಿಸದ್ದಾರಂತೆ. ಯಾರೋ ನನ್ನನ್ನು ತೇಜೋವಧೆ ಮಾಡಲು ಯತ್ನಿಸುತ್ತಿದ್ದಾರೆ. ನನಗೆ ಸಾಕಷ್ಟು ಹಿಂಸೆಯಾಗ್ತಿದೆ. ನಾನು ಕಳೆದ 6 ತಿಂಗಳಿನಿಂದ ಸಾಕಷ್ಟು ಖಿನ್ನತೆಗೆ ಒಳಗಾಗಿದ್ದೇನೆ. ನನ್ನ ಶತ್ರುಗಳಿಂದ ನಾನು ಮಾನಸಿಕ ಹಿಂಸೆಯನ್ನ ಅನುಭವಿಸುತ್ತಿದ್ದೇನೆ. ಅದಾವುದನ್ನು ತಡೆಯಲು ನನಗೆ ಸಾಧ್ಯವಾಗದೇ ನಾನು ಈ ಸಾವಿನ ದಾರಿ ಹಿಡಿದಿದ್ದೇನೆ ಅಂತ ಪತ್ರದಲ್ಲಿ ಬರೆದಿದ್ದಾರೆ ಎನ್ನಲಾಗಿದೆ. ಅಲ್ಲದೇ ಇಬ್ಬರು ವ್ಯಕ್ತಿಗಳ ಹೆಸರನ್ನು ಪತ್ರದಲ್ಲಿ ಉಲ್ಲೇಖಿಸಿದ್ದಾರಂತೆ.
ಡೆತ್ ನೋಟ್ನಲ್ಲಿ ಇರುವ ಅನೇಕ ವಿಚಾರಗಳನ್ನು ಪೊಲೀಸರು ಬಹಿರಂಗಪಡಿಸಿಲ್ಲ. ಆದರೂ ವೈಯಕ್ತಿಕ ವಿಚಾರಗಳಿಗೆ ಸ್ವಾಮೀಜಿ ಈ ರೀತಿ ಮಾಡಿಕೊಂಡ್ರಾ ಅಥವಾ ಬೇರೆಯವರ ಬೆದರಿಕೆಗೆ ಈ ರೀತಿ ನೇಣಿಗೆ ಕೊರಳೊಡ್ಡಿದ್ರಾ ಅನ್ನೋದು ತನಿಖೆಯಿಂದ ಬಯಲಾಗಬೇಕಿದೆ.