ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಸೋದರ ಮಗನ ನಿಗೂಢ ಸಾವು ಕುರಿತು ತನಿಖಾ ತಂಡ ವಿನಯ್ ಗುರೂಜಿ ಅವರಿಂದ ಮಾಹಿತಿ ಪಡೆದಿದೆ.ಚಿಕ್ಕಮಗಳೂರಿನ ಗೌರಿಗದ್ದೆಯಲ್ಲಿರುವ ವಿನಯ್ ಗುರೂಜಿ ಅವರ ಮಠಕ್ಕೆ ತಡರಾತ್ರಿ ದಾವಣಗೆರೆ ಜಿಲ್ಲೆಯ ಚನ್ನಗಿರಿಯಿಂದ ಆಗಮಿಸಿದ ತನಿಖಾ ತಂಡ, ಪ್ರಕರಣಕ್ಕೆ ಸಂಬಂಧಿಸಿದಂತೆ ವಿನಯ್ ಗುರೂಜಿ ಅವರಿಂದ ಕೆಲವು ಮಾಹಿತಿಯನ್ನು ಪಡೆದುಕೊಂಡಿದೆ ಎಂದು ತಿಳಿದುಬಂದಿದೆ.
ಕೊನೆಯ ಬಾರಿಗೆ ವಿನಯ್ ಗುರೂಜಿ ಭೇಟಿಯಾಗಿದ್ದ ಚಂದ್ರು ನಾಪತ್ತೆಯಾಗುವ ಮೊದಲು ಚಂದ್ರಶೇಖರ್ ಕೊಪ್ಪ ತಾಲೂಕಿನ ಗೌರಿಗದ್ದೆಯಲ್ಲಿರುವ ವಿನಯ್ ಗುರೂಜಿ ಆಶ್ರಮಕ್ಕೆ ಭೇಟಿ ನೀಡಿದ್ದರು.ಭಾನುವಾರ ರಾತ್ರಿ 9 ಗಂಟೆಗೆ ಆಶ್ರಮಕ್ಕೆ ಬಂದಿದ್ದ ಚಂದ್ರಶೇಖರ್ ಹಾಗೂ ಆತನ ಸ್ನೇಹಿತ ಕಿರಣ್ 9.40ರವರೆಗೂ ವಿನಯ್ ಗುರೂಜಿಗಾಗಿ ಕಾದಿದ್ದರು. ಬಳಿಕ ವಿನಯ್ ಗುರೂಜಿ ಆರ್ಶೀವಾದ ಪಡೆದು ರಾತ್ರಿ 9.45ಕ್ಕೆ ಆಶ್ರಮದಿಂದ ತೆರಳಿದ್ದರು. ಆಶ್ರಮದಿಂದ ತೆರಳುವ ಮುನ್ನ ವಿನಯ್ ಗುರೂಜಿ ಆಶೀರ್ವಾದ ಮಾಡುವಾಗ ಜಾಗ್ರತೆ ಎಂದು ಕಿವಿಮಾತು ಹೇಳಿದ್ದರು ಎನ್ನಲಾಗಿದೆ.
ವಿನಯ್ ಗುರೂಜಿ ಆಶ್ರಮಕ್ಕೆ ಭೇಟಿ ನೀಡಿ ಮರಳಿದ ಬಳಿಕ ಮಧ್ಯರಾತ್ರಿ 1 ಗಂಟೆಗೆ ಚಂದ್ರಶೇಖರ್ ಕಾರು ಶಿವಮೊಗ್ಗದ ಹತ್ತಿರದ ಸುರಹೊನ್ನೆಯಲ್ಲಿರುವ ಪೆಟ್ರೋಲ್ ಬಂಕ್ ಮುಂದಿನ ರಸ್ತೆ ಮೂಲಕ ಹಾದು ಹೋಗುತ್ತಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿಯಾಗಿತ್ತು.
ಆಶ್ರಮದ ಸಿಬ್ಬಂದಿ, ಆಶ್ರಮದ ಉಸ್ತುವಾರಿ ವಹಿಸಿರುವ ಭಕ್ತರಿಂದ ಪೊಲೀಸರು ಮಾಹಿತಿ ಪಡೆದುಕೊಂಡಿದ್ದಾರೆ. ಚಂದ್ರು ಯಾವ ವಿಚಾರವನ್ನು ನಿಮ್ಮ ಜೊತೆ ಮಾತನಾಡಿದರು. ಭೇಟಿ ವೇಳೆ ಏನಾದರೂ ಸಮಸ್ಯೆಯನ್ನು ನಿಮ್ಮೊಂದಿಗೆ ಹೇಳಿಕೊಂಡಿದ್ದರಾ..? ಚಂದ್ರು, ಕಿರಣ್ ಹಾಗೂ ನಿಮ್ಮ ಮಧ್ಯೆ ಏನಾದರೂ ಚರ್ಚೆ ನಡೆಯಿತಾ..? ಈ ಎಲ್ಲಾ ಪ್ರಶ್ನೆಗಳನ್ನು ಪೊಲೀಸರು ವಿನಯ್ ವಿನಯ್ ಗುರೂಜಿ ಅವರ ಬಳಿ ಕೇಳಿದ್ದಾರೆ ಎನ್ನಲಾಗಿದೆ.
ಚಂದ್ರು ಸಾವಿನ ಬಗ್ಗೆ ನನಗೂ ನೋವಿದೆ ಎಂದಿರುವ ವಿನಯ್ ಗುರೂಜಿ ಅವರು, ಚಂದ್ರು ಆಶ್ರಮದ ಭಕ್ತ. ಪ್ರತಿ ಬಾರಿಯಂತೆ ಈ ಬಾರಿಯೂ ಬಂದು ಹೋಗಿದ್ದಾನೆ. ತಡವಾಗಿ ಬಂದಿದ್ದರಿಂದ ಆತನ ಬಳಿ ಹೆಚ್ಚೆನೂ ನಾನು ಮಾತನಾಡಿಲ್ಲ ಎಂದು ಪೊಲೀಸರಿಗೆ ತಿಳಿಸಿದ್ದಾರೆ ಎಂದು ಹೇಳಲಾಗಿದೆ.
ತಡವಾಗಿ ಬಂದಿದ್ದಕ್ಕೆ ಇದು ಆಶ್ರಮಕ್ಕೆ ಭೇಟಿ ನೀಡುವ ಸಮಯವಾ ಎಂದು ಕೇಳಿದ್ದೇನೆ. ಬೇಗ ಹೋಗಿ, ಜಾಗೃತೆಯಿಂದ ಹೋಗಿ ಎಂದು ಇಬ್ಬರನ್ನು ಕಳುಹಿಸಿದ್ದೇನೆ. ಆಶ್ರಮದಲ್ಲಿ ನಡೆದಿರುವುದು ಇಷ್ಟು. ಆ ಬಳಿಕ ನಡೆದ ಘಟನೆ ಬಗ್ಗೆ ನನಗೆ ನೋವಿದೆ ಎಂದು ವಿನಯ್ ಗುರೂಜಿ ಹೇಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.