ಸರ್ಕಾರಿ ಜಮೀನನ್ನ ಕುಮಾರಸ್ವಾಮಿ ಒತ್ತುವರಿ ಮಾಡಿಕೊಂಡಿದ್ದಾರೆ ಅನ್ನೊ ಆರೋಪ ಕೇಳಿ ಬಂದಿತ್ತು. ತನಿಖೆ ನಡೆಸಲು ರಾಜ್ಯ ಸರ್ಕಾರ ವಿಶೇಷ ತನಿಖಾ ದಳ ರಚನೆ ಮಾಡಿದ ಬೆನ್ನಲ್ಲೇ ಹೈಕೋರ್ಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಸರ್ಕಾರದ ವಿರುದ್ಧ ಚಾಟಿ ಬೀಸಿತ್ತು. ಯಾರೇ ಆದರೂ ಎಂತದ್ದೇ ಅಧಿಕಾರದಲ್ಲಿ ಇದ್ದರೂ ಕೂಡ ಸರ್ಕಾರಿ ಜಮೀನು ಒತ್ತುವರಿ ಮಾಡುವ ಅವಕಾಶ ಇಲ್ಲ. ಕೂಡಲೇ ಒತ್ತುವರಿ ತೆರವು ಮಾಡಿ ಅಂತ ಆದೇಶ ನೀಡಿತ್ತು.
ನ್ಯಾಯಮೂರ್ತಿ ಕೆ ಸೋಮಶೇಖರ್ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿದ್ದು, ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತ್ತು. ಮೊದ ಮೊದಲು ಒತ್ತುವರಿ ವಿಚಾರ ಕೇವಲ ಆರೋಪ ಅಂತ ಹೇಳಲಾಗುತ್ತಿದ್ದರೂ, ಸರ್ವೇ ಕಾರ್ಯಕ್ಕೆ ಸರ್ಕಾರ ಸೂಚನೆ ನೀಡಿತ್ತು. ಅದರಂತೆ ಇಂದು ಕುಮಾರಸ್ವಾಮಿ ತೋಟದಲ್ಲಿ ಜೆಸಿಬಿಗಳ ಸದ್ದು ಜೋರಾಗಿದೆ.
ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಕುಟುಂಬದ ವಿರುದ್ಧ ಭೂ ಒತ್ತುವರಿ ಆರೋಪ ಹಿನ್ನೆಲೆಯಲ್ಲಿ ಒತ್ತುವರಿ ತೆರವು ಮಾಡುವಂತೆ ಖಡಕ್ ಹೈಕೋರ್ಟ್ ಸೂಚನೆ ನೀಡಿದ ಬೆನ್ನಲ್ಲೇ ಇಂದು ಒತ್ತುವರಿ ತೆರವು ಕಾರ್ಯಾಚರಣೆಗೆ ಕಂದಾಯ ಇಲಾಖೆ ಮುಂದಾಗಿದೆ. ಬಿಡದಿಯ ಕೇತಗಾನಹಳ್ಳಿಯ ಸರ್ವೇ 7,8,9,10,16,17 ಮತ್ತು 79ರಲ್ಲಿ ಒತ್ತುವರಿ ಆರೋಪ ಕೇಳಿ ಬಂದಿದ್ದರಿಂದ ಇಂದು ಸರ್ವೇ ಕಾರ್ಯಕ್ಕೆ ಮುಂದಾಗಿದ್ದಾರೆ ಅಧಿಕಾರಿಗಳು.
ಕಂದಾಯ ಇಲಾಖೆ ಹಾಗೂ ಸರ್ವೇ ಇಲಾಖೆಯಿಂದ ಇಂದು ಜಂಟಿ ಸರ್ವೇ ನಡೆದಿದೆ. ಕುಮಾರಸ್ವಾಮಿ ತೋಟದ ಮನೆ ಒಳಗೆ ಮಾರ್ಕಿಂಗ್ ಕಾರ್ಯವನ್ನ ಅಧಿಕಾರಿಗಳು ಮಾಡಿದರು. ಇದರ ಜೊತೆಗೆ
ತೋಟದ ಸುತ್ತ ಮಾರ್ಕಿಂಗ್ ಮಾಡಿದ್ದಾರೆ. ಸುಮಾರು ಮೂರು ಗಂಟೆಗಳ ಕಾಲ ಸರ್ವೇ ಕಾರ್ಯ ಆಗಿದೆ. ಇಂದು ಮತ್ತು ನಾಳೆ ಎರಡು ದಿನಗಳ ಕಾಲ ಮಾರ್ಕಿಂಗ್ ಮಾಡಿ ಅಳತೆ ಕಲ್ಲುಗಳ ಅಳವಡಿಕೆ ಮಾಡಲಾಗುತ್ತದೆಯಂತೆ. ಬಳಿಕ ಜೆಸಿಬಿಗಳ ಮೂಲಕ ಒತ್ತುವರಿ ತೆರವಿಗೆ ಮುಂದಾಗಲಿದ್ದಾರೆ ಅಧಿಕಾರಿಗಳು.