ಹಿಂದೂ ಸಂಪ್ರದಾಯದಲ್ಲಿ ದಿನಕ್ಕೊಮ್ಮೆ ಅಥವಾ ವಾರಕೊಮ್ಮೆಯಾದರೂ ದೇವಸ್ಥಾನಗಳಿಗೆ ಹೋಗುವುದು ವಾಡಿಕೆ. ಕುಟುಂಬ ಸಮೇತರಾಗಿ ಭೇಟಿ ನೀಡುವ ಒಂದು ಸ್ಥಳವೆಂದರೆ ಅದು ದೇವಾಲಯ. ದೇವಸ್ಥಾನಕ್ಕೆ ಭೇಟಿ ನೀಡಿದರೆ ಮನಸ್ಸು ಶಾಂತವಾಗಿರುತ್ತದೆ. ಅಲ್ಲಿಯ ವಾತಾವರಣದಲ್ಲಿ ಸಕಾರಾತ್ಮಕತೆಯೇ ತುಂಬಿದೆ ಎಂಬುದು ನಮ್ಮೆಲ್ಲರ ಅಭಿಪ್ರಾಯ. ಹೀಗೆ ದೇವಸ್ಥಾನಗಳಿಗೆ ಹೋಗುವಾಗ ಕೆಲವೊಂದಿಷ್ಟು ತಪ್ಪುಗಳನ್ನು ಮಾಡಬಾರದಂತೆ. ಹಾಗಾದ್ರೆ ಯಾವ ತಪ್ಪುಗಳ ಬಗ್ಗೆ ಹೇಳುತ್ತಿದ್ದಾರೆ ಎಂದು ಯೋಚಿಸುತ್ತಿದ್ದೀರಾ…..ಕೆಳಗಿರುವ ಮಾಹಿತಿಯನ್ನು ಓದಿ.

ಪಾದರಕ್ಷೆ ಕಳಚಿಡಿ:
ಮೊದಲನೆಯದಾಗಿ ದೇವಸ್ಥಾನದ ಪ್ರಾಗಂಣಕ್ಕೆ ಕಾಲಿಡುವ ಮುನ್ನವೇ ಪಾದರಕ್ಷೆಗಳನ್ನು ದೂರ ಬಿಟ್ಟು ದೇವಾಲಯವನ್ನು ಪ್ರವೇಶ ಮಾಡಿ. ದೇವಸ್ಥಾನವನ್ನು ಶುದ್ಧ ಹಾಗೂ ಪವಿತ್ರ ಸ್ಥಳವೆಂದು ಪರಿಗಣಿಸಲಾಗಿದೆ. ನಮ್ಮ ಪಾದವು ದೇವಾಲಯದ ಭೂಮಿಯನ್ನು ಸ್ಪರ್ಶಿಸಬೇಕು. ಆದರೆ, ಕೆಲವರು ಚಪ್ಪಲಿ, ಬೂಟುಗಳನ್ನು ಹೊರಗೆ ಬಿಟ್ಟರು ಸಹ ಸಾಕ್ಸ್ಗಳನ್ನು ಧರಿಸಿ ದೇವಾಲಯದ ಅಂಗಳವನ್ನು ಪ್ರವೇಶಿಸುತ್ತಾರೆ. ದೇವಸ್ಥಾನದಲ್ಲಿ ಸಕಾರಾತ್ಮಕ ವಾತಾವರಣ ಇರುವುದರಿಂದ ಆದಷ್ಟು ಬರಿಗಾಲಿನಲ್ಲಿ ದೇವರ ದರ್ಶನಕ್ಕೆ ಹೋಗುವುದು ಉತ್ತಮ. ಆದ್ದರಿಂದ ಪಾದರಕ್ಷೆ ಹಾಗೂ ಇನ್ನಿತರ ವಸ್ತುಗಳನ್ನು ಕಾಲಿಗೆ ಏರಿಸಿಕೊಂಡು ದೇವರ ದರ್ಶನಕ್ಕೆ ಹೋಗದಿರುವುದೇ ಒಳಿತು.
ಸರಿಯಾದ ಆರ್ಶೀವಾದ ಬೇಡಿ:
ಹೆಚ್ಚಿನ ಜನರು ದೇವಸ್ಥಾನಗಳಿಗೆ ಭೇಟಿ ನೀಡುವುದೇ ದೇವರಲ್ಲಿ ಆರ್ಶೀವಾದ ಬೇಡಲು. ಹಾಗೇ ದೇವರಲ್ಲಿ ಪ್ರಾರ್ಥಿಸುವಾಗ ಎಂದಿಗೂ ನಿಮ್ಮ ಮನಸ್ಸನ್ನು ನಕಾರಾತ್ಮಕ ಯೋಚನೆಗಳಿಂದ ತುಂಬಿಕೊಳ್ಳಬೇಡಿ. ನಿಮ್ಮ ವಿನಂತಿ, ಪ್ರಾರ್ಥನೆ, ಆಸೆಗಳು ದಯೆ ಹಾಗೂ ಶುದ್ಧತೆಯ ಭಾವದಿಂದ ಬರಬೇಕು. ಬದಲಾಗಿ ಅಸೂಯೆ, ಸೇಡು, ದ್ವೇಷ ಅಥವಾ ವೈಯಕ್ತಿಕ ಲಾಭದಿಂದಲ್ಲ.

ದೇವರ ಮುಂದೆ ಶಿರಭಾಗಿಸುವುದನ್ನು ಮರೆಯಬೇಡಿ:
ದೇವರಿಗೆ ಗೌರವ ತೋರಿಸುವ ಒಂದು ವಿಧಾನವೆಂದರೆ ಶಿರಭಾಗಿ ನಮಸ್ಕರಿಸುವುದು. ಕೆಲವರು ಸ್ವಾಭಾವಿಕವಾಗಿ ಎರಡು ಕೈ ಜೋಡಿಸಿ ವಂದನೆ ಅರ್ಪಿಸಿದರೆ, ಮತ್ತೂ ಕೆಲವರು ದೀರ್ಘದಂಡ ನಮಸ್ಕಾರ ಮಾಡುತ್ತರೆ. ಅವರವರ ಭಕ್ತಿಗೆ ಬಿಟ್ಟ ವಿಚಾರ. ಆದರೆ, ನೆನಪಿಡಿ ಬೇರೆ ಯಾವುದೇ ವಿಧದಲ್ಲಿಯೂ ದೇವರಿಗೆ ಗೌರವ ತೋರುವ ಆಚರಣೆ ಮಾಡದಿದ್ದರೂ ಸಹ ಕನಿಷ್ಠ ಪಕ್ಷ ದೇವರ ಮುಂದೆ ನಮಸ್ಕರಿಸುವ ಮೂಲಕ ಕೃತಜ್ಞತೆಯನ್ನು ಅರ್ಪಿಸಿ.
ಏನನ್ನಾದರೂ ಅರ್ಪಿಸಿ, ನಂತರ ಬೇಡಿ:
ದೇವಸ್ಥಾನಕ್ಕೆ ಪ್ರವೇಶಿಸುವ ಮುನ್ನ ದೇವಾಲಯದ ಸಮೀಪ ಒಂದಷ್ಟು ಹಣ್ಣು-ಕಾಯಿ-ಹೂಗಳನ್ನು ಮಾರುವ ಅಂಗಡಿಯಿರುತ್ತದೆ ಅಲ್ಲವೇ. ಅಲ್ಲಿಂದ ನಿಮ್ಮ ಕೈಯಲ್ಲಿ ಆಗುವುದನ್ನು ಖರೀದಿಸಿ ದೇವರಿಗೆ ಅರ್ಪಿಸುವ ರೂಢಿ ಬೆಳೆಸಿಕೊಳ್ಳಿ. ದೇವರಲ್ಲಿ ಏನನ್ನಾದರೂ ಬೇಡುವ ಮುನ್ನ ಖಾಲಿ ಕೈಯಲ್ಲಿ ಬೇಡುವ ಬದಲು ದೇವರಿಗೆ ಏನನ್ನಾದರೂ ಅರ್ಪಿಸಿ ನಂತರ ಬೇಡಿ ನೋಡಿ. ದೇವರನ್ನು ಸಮಾಧಾನಪಡಿಸಲು ನೀಡಬೇಕೇ ಎಂದು ತಿಳಿಯುವ ಬದಲು ಈವರೆಗೂ ನಮ್ಮೊಟ್ಟಿಗೆ ಸದಾ ಇರುವುದಕ್ಕಾಗಿ ಕೃತಜ್ಞತೆ ಅರ್ಪಿಸುತ್ತಿದ್ದೇವೆ ಎಂದು ಭಾವಿಸಿ.

ಇತರರಿಗೆ ಕಿರಿಕಿರಿ ಮಾಡಬೇಡಿ:
ದೇವಸ್ಥಾನಕ್ಕೆ ಹೋಗುವುದೇ ಮನಸ್ಸಿನ ನೆಮ್ಮದಿಗಾಗಿ. ಆದರೆ, ಅಲ್ಲಿ ಹೋಗಿ ಜೋರಾಗಿ ಮಾತನಾಡುವುದು, ಮೊಬೈಲ್ ಜೋರು ಸದ್ದು ಮಾಡುವಂತೆ ರಿಂಗ್ಟೋನ್ ಇಟ್ಟುಕೊಳ್ಳುವುದು, ಹೋಗಿ ಬರುವವರನ್ನು ದಿಟ್ಟಿಸಿ ನೋಡುವುದು ಹೀಗೆ ಇತರರಿಗೆ ಕಿರಿಕಿರಿ ಉಂಟು ಮಾಡುವ ಯಾವ ಕೆಲಸವನ್ನು ಮಾಡಬೇಡಿ. ನಿಮ್ಮ ಮನಸ್ಸು ಪ್ರಫುಲ್ಲವಾಗಿದ್ದರೆ ಇತರರು ದುಃಖ ಮನಸ್ಥಿತಿಯಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿರಬಹುದು ಅಲ್ಲವೇ…..ಒಮ್ಮೆ ಯೋಚಿಸಿ ನೋಡಿ….
ಪ್ರಸಾದ ಸ್ವೀಕರಿಸುವಾಗ ದೇವರ ಸ್ಮರಿಸಿ:
ನಮ್ಮಲ್ಲಿ ಎಷ್ಟೋ ಮಂದಿ ಪ್ರಸಾದ ಸಿಕ್ಕಿದ ತಕ್ಷಣ ತಿನ್ನಲು ಪ್ರಾರಂಭಿಸುತ್ತಾರೆ. ಪ್ರಸಾದ ದೇವರಿಂದ ನಮಗೆ ಸಿಕ್ಕಂತಹ ಆರ್ಶೀವಾದವಿರಬಹುದು. ಆದ್ದರಿಂದ ಪ್ರಸಾದವನ್ನು ಸ್ವೀಕರಿಸುವಾಗ ಹರಿ, ಹರ, ದುರ್ಗಿಯ ಹೆಸರನ್ನು ಸ್ಮರಿಸಿಕೊಂಡು ಪ್ರಸಾದ ಸ್ವೀಕರಿಸುವುದು ಉತ್ತಮ ಅಭ್ಯಾಸ.
ಎಲ್ಲವನ್ನೂ ಅನುಮಾನಿಸ ಬೇಡಿ:
ನಂಬಿಕೆ ಹಾಗೂ ಪವಾಡವನ್ನು ಪದೇ ಪದೆ ಪ್ರಶ್ನಿಸುವುದು ಅನಿವಾರ್ಯವು ಅಲ್ಲ, ಒಳ್ಳೆಯದೂ ಅಲ್ಲ. ದೇವಸ್ಥಾನಕ್ಕೆ ಕಾಲಿಟಾಕ್ಷಣ ದೇವರಲ್ಲಿ ಪೂರ್ಣ ನಂಬಿಕೆಯಿಟ್ಟು ದರ್ಶನ ಪಡೆಯಿರಿ. ದೈವಿಕ ಕಾರ್ಯಗಳ ಬಗ್ಗೆ ಮನಸ್ಸಿನಲ್ಲಿ ಹಲವು ಆಲೋಚನೆಗಳು ಹುಟ್ಟುವುದು ಸಹಜವಾದರೂ, ಅನುಮಾನದ ದೃಷ್ಟಿಯಲ್ಲಿ ನೋಡುವುದು ತಪ್ಪು. ಇದು ದೇವಾಲಯದಲ್ಲಿರುವ ಸಕಾರಾತ್ಮಕ ಹಾಗೂ ಆಧ್ಯಾತ್ಮಿಕ ಶಕ್ತಿಯನ್ನು ಅನುಭವಿಸಲು ದಾರಿ ಮಾಡಿಕೊಡುವುದಿಲ್ಲ.