ಸಿಲಿಕಾನ್ ಸಿಟಿ, ಗಾರ್ಡನ್ ಸಿಟಿ, ಐಟಿಬಿಟಿ ಸಿಟಿ ಎಂದೆಲ್ಲಾ ಕರೆಸಸಿಕೊಳ್ಳುವ ಮಹಾನಗರಿ ಬೆಂಗಳೂರು ಈಗ ಮತ್ತಷ್ಟು ವಿಸ್ತರಣೆಗೊಳ್ಳಿದೆ. ಈಗಾಗಲೇ ಎಲ್ಲಾ ದಿಕ್ಕುಗಳಿಂದಲೂ ತನ್ನ ವ್ಯಾಪ್ತಿ ವಿಸ್ತಿರಿಸಿಕೊಳ್ಳುತ್ತಾ ಮಹಾನಗರಿಗಳಲ್ಲಿ ಒಂದಾಗಿರುವ ರಾಜ್ಯ ರಾಜಧಾನಿ, ಇದೀಗ ಮತ್ತಷ್ಟು ಗ್ರಾಮ ಪಂಚಾಯಿತಿಗಳು ತನ್ನ ತೆಕ್ಕೆಗೆ ಸೇರಿಸಿಕೊಳ್ಳಲಿದೆ. ಯಾವೆಲ್ಲಾ ಗ್ರಾಮ ಪಂಚಾಯಿತಿ ಬೆಂಗಳೂರಿನ ಅಂಗವಾಗಲಿವೆ ಎಂಬುದರ ಮಾಹಿತಿ ಇಲ್ಲಿದೆ….
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ-ಬಿಬಿಎಂಪಿ ಎಂಬ ಒಂದೇ ಪಾಲಿಕೆ ಅಧೀನದಲ್ಲಿ ಇಡೀ ಬೆಂಗಳೂರನ್ನು ನಿರ್ವಹಿಸುವುದು ಕಷ್ಟಸಾಧ್ಯ ಎಂಬುದು ರಾಜ್ಯ ಸರ್ಕಾರಕ್ಕೆ ಮನದಟ್ಟಾಗಿದೆ. ಆದ್ದರಿಂದಲೇ ಗ್ರೇಟರ್ ಬೆಂಗಳೂರು ಪರಿಕಲ್ಪನೆಯಡಿ ಮಹಾನಗರಿಯನ್ನು ಎರಡು ಅಥವಾ ಮೂರು ಪಾಲಿಕೆಗಳಾಗಿ ವಿಂಗಡಿಸಲು ತಯಾರಿ ನಡೆಯುತ್ತಿದೆ. ಇದೇ ವೇಳೆ ಬೆಂಗಳೂರಿಗೆ ಹೊಂದಿಕೊಂಡಂತ್ತಿರುವ ಹೊರ ವಲಯಗಳ ಗ್ರಾಮ ಪಂಚಾಯಿತಿಗಳನ್ನು ಕೂಡ ನಗರ ವ್ಯಾಪ್ತಿಗೆ ಸೇರಿಸಿಕೊಳ್ಳಲು ಸರ್ಕಾರ ಮುಂದಾಗಿದೆ. ಈ ಮೂಲಕ ಇನ್ನು ಕೆಲವು ವರ್ಷಗಳಲ್ಲಿ ಆ ಗ್ರಾಮಗಳ ಸ್ವರೂಪವೇ ಬದಲಾಗಲಿದೆ.
ಹೌದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ಪುನರ್ ರಚನೆ ಮಾಡುವ ರಾಜ್ಯ ಸರ್ಕಾರದ ನಿರ್ಧಾರದ ಭಾಗವಾಗಿ 25 ಪಂಚಾಯಿತಿಗಳನ್ನು ಹೊಸ ಮುನ್ಸಿಪಲ್ ಕಾರ್ಪೋರೇಷನ್ಗಳಿಗೆ ಸೇರಿಸಿಕೊಳ್ಳಲಾಗುತ್ತಿದೆ. ಉಪ ಪಾಲಿಕೆಗಳಾಗಿ ವಿಂಗಡನೆಗೊಳ್ಳಲಿರುವ ಪಾಲಿಕೆ ಗ್ರೇಟರ್ ಬೆಂಗಳೂರು ಅಥಾರಿಟಿಯಡಿಯಲ್ಲಿ ಕಾರ್ಯನಿರ್ವಹಿಸಲಿವೆ. ಬೆಂಗಳೂರು ಸಮೀಪದಲ್ಲಿರುವ ಬೊಮ್ಮಸಂದ್ರ, ಜಿಗಣಿ ಸೇರಿದಂತೆ 25 ಪಂಚಾಯಿತಿಗಳು ಹೊಸ ಬೆಂಗಳೂರು ಮಹಾನಗರ ಪಾಲಿಕೆಯ ಭಾಗವಾಗಲಿವೆ.

ಕರ್ನಾಟಕ ವಿಧಾನಸಭೆಯ ಜಂಟಿ ಪರಿಶೀಲನಾ ಸಮಿತಿಯು ಈಗಾಗಲೇ ಬೃಹತ್ ಬೆಂಗಳೂರು ಆಡಳಿತ ಮಸೂದೆ-2024ರ ಕುರಿತು ಕಾನೂನು ತಜ್ಞರು, ನಾಗರಿಕ ಗುಂಪುಗಳು ಹಾಗೂ ಸಾರ್ವಜನಿಕರೊಂದಿಗೆ ಸಮಾಲೋಚನ ಸಭೆ ನಡೆಸಿದೆ. ಕಾಂಗ್ರೆಸ್ ಶಾಸಕ ರಿಜ್ಞಾನ್ ಅರ್ಷದ್ ನೇತೃತ್ವದ ಸಮಿತಿ ಕೂಡ ಇದರ ಕುರಿತು ವರದಿಯನ್ನು ಸ್ಪೀಕರ್ ಅವರಿಗೆ ಸಲ್ಲಿಸಿದೆ. ಬಜೆಟ್ ಅಧಿವೇಶನದಲ್ಲಿ ಮಸೂದೆ ಮಂಡನೆಯಾಗಲಿದೆ.
ಬೆಂಗಳೂರು ವಿಂಗಡಣೆಯ ಹಿಂದಿನ ಲಾಭವೇನು?
ಬಿಬಿಎಂಪಿ ಬದಲಾವಣೆ ಮಾಡಲು ತಜ್ಞರ ಸಮಿತಿ ಸೂಚಿಸಿದ್ದು, ಸಣ್ಣ-ಸಣ್ಣ ಪಾಲಿಕೆ ಅಥವಾ ನಗರಸಭೆಗಳನ್ನು ಸ್ಥಾಪಿಸಲು ಶಿಫಾರಸ್ಸು ಮಾಡಿದೆ. 2೦೦ ಚ.ಕಿ.ಮೀ. ವ್ಯಾಪ್ತಿಯ ಬೆಂಗಳೂರು ಮಹಾನಗರ ಪಾಲಿಕೆಯ ಮಿತಿಯನ್ನು ಉಳಿಸಿಕೊಂಡು, ಉಳಿದ ಭಾಗವನ್ನು ಉತ್ತರ, ದಕ್ಷಿಣ, ಪೂರ್ವ ಹಾಗೂ ಪಶ್ಚಿಮ ಎಂಬ ವಲಯಗಳನ್ನಾಗಿ ಸರ್ಕಾರ ವಿಭಜಿಸಿ 5 ಪಾಲಿಕೆಗಳನ್ನು ರಚಿಸುವ ಸಾಧ್ಯತೆಯಿದೆ. ಇದರಿಂದ ಪ್ರತಿ ಪುರಸಭೆಯು ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಸಮರ್ಥವಾಗಲಿದೆ.
ಇನ್ನೂ ಆಸ್ತಿ ತೆರಿಗೆ ಸಂಗ್ರಹಣೆ ಹಾಗೂ ಅನುದಾನ ಹಂಚಿಕೆಯ ಮೇಲೂ ಸಂಪೂರ್ಣ ನಿಯಂತ್ರಣ ಹೊಂದಿರುತ್ತವೆ. ಬೆಂಗಳೂರಿಗೆ ಸೇರ್ಪಡೆಗೊಳ್ಳಲಿರುವ ಗ್ರಾಮ ಪಂಚಾಯಿತಿಗಳ ಭೂಮಿಗೆ ಬಂಗಾರದ ಬೆಲೆ ದೊರಕುತ್ತದೆ. ಅದರಂತೆಯೇ, ರಿಯಲ್ ಎಸ್ಟೇಟ್ ಉದ್ಯಮಕ್ಕೆ ಈ ಭಾಗ ಹೆಚ್ಚು ಬೇಡಿಕೆ ಕಂಡುಕೊಳ್ಳಲಿದ್ದು, ಈಗಲೇ ಭೂಮಿಗಳನ್ನು ಮಾರಿಕೊಳ್ಳದಂತೆ ಅಲ್ಲಿನ ಜನರಿಗೆ ತಜ್ಞರು ಸಲಹೆ ನೀಡಿದ್ದಾರೆ.