ಮತ್ತೆ ರಾಜ್ಯ ರಾಜಕೀಯದಲ್ಲಿ ಮತ್ತೆ ಫೋನ್ ಕದ್ದಾಲಿಕೆ ವಿಚಾರ ಚರ್ಚೆಗೆ ಬಂದಿದೆ. ಇಷ್ಟು ದಿನ ಸುಮ್ಮನಿದ್ದ ಈ ವಿಚಾರ ಈಗ ಮತ್ತೆ ಜೀವ ಪಡೆದುಕೊಂಡಿದೆ. ಕಳೆದ ಸಮ್ಮಿಶ್ರ ಸರ್ಕಾರದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದ್ದಷ್ಟೆ ಅಲ್ಲ ರಾಜಕೀಯ ಬಡಿದಾಟಕ್ಕೂ ಕಾರಣವಾಗಿತ್ತು. ಸಮ್ಮಿಶ್ರ ಸರ್ಕಾರದಲ್ಲಿ ಅನೇಕ ನಾಯಕರ ಮುನಿಸಗೂ ಕಾರಣವಾಗಿದ್ದ ಈ ಪ್ರಕರಣ ಇದೀಗ ಕಾಂಗ್ರೆಸ್ ಸರ್ಕಾರದಲ್ಲೂ ಸಹ ಮುಂದುವರೆದಿದೆ. ಕಾಂಗ್ರೆಸ್ ಶಾಸಕರ ಸಚಿವರ ಫೋನ್ ಕದ್ದಾಲಿಕೆ ಆಗ್ತಾ ಇದೆ ಅದು ಅವರದ್ದೇ ಸರ್ಕಾರದ ನಾಯಕರದ್ದು ಅನ್ನೋದೇ ಆಶ್ಚರ್ಯದ ಸಂಗತಿ.
ಈ ಹಿಂದೆ ಸಮ್ಮಿಶ್ರ ಸರ್ಕಾರದಲ್ಲಿ ದೊಡ್ಡ ಸಂಚಲನವನ್ನು ಸೃಷ್ಟಿ ಮಾಡಿದ ಫೋನ್ ಕದ್ದಾಲಿಕೆ ಪ್ರಕರಣ ಇದೀಗ ಮತ್ತೆ ಸದ್ದು ಮಾಡಿದೆ. ಸದ್ಯ ಅನೇಕ ಆರೋಪಗಳು, ಹೇಳಿಕೆಗಳಿಂದ ಸರ್ಕಾರ ಮುಜುಗರಕ್ಕೆ ಒಳಗಾಗಿರೋ ಸಂದರ್ಭದಲ್ಲಿ ಈಗ ಮತ್ತೊಂದು ಸೇರ್ಪಡೆ ಎನ್ನುವಂತೆ ಫೋನ್ ಕದ್ದಾಲಿಕೆ ಆರೋಪ ಕೇಳಿ ಬರುತ್ತಿದೆ. ಈ ಬಗ್ಗೆ ಖುದ್ದಾಗಿ ಕಾಂಗ್ರೆಸ್ ನಾಯಕರೇ ಆರೋಪ ಮಾಡಿರೋದು ಇದೀಗ ವಿಪಕ್ಷಗಳಿಗೆ ಮತ್ತೊಂದು ಅಸ್ತ್ರ ಸಿಕ್ಕಂತಾಗಿದೆ.

ಹೌದು, ಸದಾ ಒಂದಲ್ಲ ಒಂದು ಸುದ್ದಿಯಲ್ಲಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಇದೀಗ ಕದ್ದಾಲಿಕೆಯ ಸುದ್ದಿಯಲ್ಲಿ ಸದ್ದು ಮಾಡಿದೆ. ಸ್ವತಃ ಖುದ್ದಾಗಿ ಕಾಂಗ್ರೆಸ್ ಸರ್ಕಾರದ ನಾಯಕರೇ ಫೋನ್ ಕದ್ದಾಲಿಕೆ ಯಾಗುತ್ತಿದೆ ಎಂದು ದೊಡ್ಡ ಆರೋಪ ಮಾಡಿರೋದು ಇದೀಗ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಹನಿಟ್ರ್ಯಾಪ್ ಪ್ರಕರಣದ ಬೆನ್ನಲ್ಲೇ ಇದೀಗ ಫೋನ್ ಕದ್ದಾಲಿಕೆಯ ಪ್ರಕರಣ ಸಹ ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ಕಾಂಗ್ರೆಸ್ನ ಕೆಲವು ನಾಯಕರೇ ನಮ್ಮ ಫೋನ್ ಕದ್ದಾಲಿಕೆಯಾಗುತ್ತಿದೆ ಎಂದು ಸ್ವತಃ ಸಿಎಂ ಗಮನಕ್ಕೆ ತಂದಿದ್ದಾರೆ ಎನ್ನಲಾಗಿದೆ.
ಇನ್ನು ಫೋನ್ ಟ್ರಾಕಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ವಿಪಕ್ಷ ನಾಯಕ ಆರ್ ಅಶೋಕ್ ಕೂಡ ಗಂಭೀರ ಆರೋಪ ಮಾಡಿದ್ದಾರೆ. ಸರ್ಕಾರದಲ್ಲಿ ಫೋನ್ ಕದ್ದಾಲಿ ಮಾಡ್ತಿರೋದು ನಿಜ. ಈ ಸರ್ಕಾರ ಬಂದಾಗಿನಿಂದಲೂ ನಾನು ಮತ್ತು ಕುಮಾರಸ್ವಾಮಿ ಸೇರಿದಂತೆ ಅನೇಕರ ಫೋನ್ ಕದ್ದಾಲಿಕೆ ನಡೆಯುತ್ತಿದೆ. ಇದೀಗ ಅವರ ಶಾಸಕರೇ ಈ ಬಗ್ಗೆ ಗಂಭೀರ ಅರೋಪ ಮಾಡ್ತಿದ್ದಾರೆ. ಹೀಗಾಗಿ ಅವರ ಪೋನ್ ಅಲ್ಲ ನಮ್ಮ ಪೋನ್ ಸಹ ಟ್ರ್ಯಾಪ್ ಅಗ್ತಿದೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ.

ಸಚಿವರು, ಶಾಸಕರ ಪೋನ್ ಕದ್ದಾಲಿಕೆ ವಿಚಾರಕ್ಕೆ ಗೃಹ ಸಚಿವ ಜಿ ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ. ರಾಜ್ಯದಲ್ಲಿ ಪೋನ್ ಕದ್ದಾಲಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ದೂರುಗಳು ಇಲ್ಲಿಯವರೆಗೂ ದಾಖಲಾಗಿಲ್ಲ. ನೀವು ಬೆಳಿಗ್ಗೆ ಕೇಳಿದ ಬಳಿಕ ನಾನು ಪರಿಶೀಲನೆ ನಡೆಸಿದ್ದೇನೆ ಆದ್ರೆ ಎಲ್ಲಿಯೂ ಕೂಡ ಒಂದೇ ಒಂದು ಕೇಸ್ ದಾಖಲಾಗಿಲ್ಲ. ಈ ಬಗ್ಗೆ ದೂರು ದಾಖಲಾದ್ರೆ ಸರ್ಕಾರ ಕ್ರಮ ಕೈಗೊಳ್ಳುತ್ತದೆ.. ನಾನು ಗೃಹ ಸಚಿವರಾಗಿ ನನಗೆ ಇದರ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದಿದ್ದಾರೆ.
ಈ ರೀತಿ ಫೋನ್ ಟ್ಯಾಪಿಂಗ್ ಮಾಡ್ತಾ ಇರೋದು ಸರಕಾರದವರೇ ಅನ್ನೋದು ಒಂದು ಆರೋಪವಾದ್ರೆ ಈ ರೀತಿ ಮಾಡ್ತಾ ಇರೋದು ಯಾಕೆ ಅನ್ನೋದು ಚರ್ಚೆ. ಸರ್ಕಾರದಲ್ಲಿ ಯಾರು ಏನು ಮಾತಾಡ್ತಾ ಇದ್ದಾರೆ. ಪ್ರಸ್ತುತ ಬೆಳವಣಿಗೆಗಳೇನು ಅನ್ನೋದನ್ನ ತಿಳಿದುಕೊಳ್ಳೋದಕ್ಕೆ ಹೀಗೆ ಮಾಡ್ತಾ ಇದ್ದಾರೆ ಎನ್ನಲಾಗುತ್ತಿದೆ. ಸದ್ಯ ಸರಕಾರದ ಸಚಿವರಲ್ಲಿಯೇ ಗುಂಪುಗಾರಿಕೆ ಇರೋದ್ರಿಂದ ಏನಾಗ್ತಿದೆ ಅನ್ನೋದನ್ನ ತಿಳಿಯೋದಕ್ಕೆ ಈ ರೀತಿ ಮಾಡುತ್ತಿದ್ದಾರೆ ಅನ್ನೋದು ಚರ್ಚೆಯಲ್ಲಿ ಇರೋ ವಿಚಾರ.