ದೊಡ್ಡ ವ್ಯಕ್ತಿಗಳು ಸುಮ್ಮನೆ ದೊಡ್ಡವರಾಗಿರುವುದಿಲ್ಲ. ಅವರು ಹಣ ಅಥವಾ ಇನ್ನೇನೋ ವಿಚಾರಕ್ಕೆ ದೊಡ್ಡವರಾಗಿರುವುದಿಲ್ಲ. ಅವರ ಗುಣ, ವ್ಯಕ್ತಿತ್ವ ಅವರನ್ನು ದೊಡ್ಡ ಹಂತಕ್ಕೆ ಏರುವ ಹಾಗೆ ಮಾಡಿರುತ್ತದೆ. ಹೆಚ್ಚು ಸಾಧನೆ ಮಾಡಿರುವವರೆಲ್ಲ ಜೀವನದಲ್ಲಿ ಬಹಳ ಸರಳವಾಗಿ ಇರುತ್ತಾರೆ. ಅವರ ಮಾತುಗಳಲ್ಲಿ ಆಳ ಇರುತ್ತದೆ. ಇದನ್ನೆಲ್ಲಾ ನಾವು ಡಾ. ರಾಜ್ ಕುಮಾರ್ ಅವರಲ್ಲಿ, ವಿಷ್ಣುವರ್ಧನ್ ಅವರಲ್ಲಿ, ರೆಬೆಲ್ ಸ್ಟಾರ್ ಅಂಬರೀಶ್ ಅವರಲ್ಲಿ ನೋಡಿರುತ್ತೇವೆ. ಈಗಿನ ಕಲಾವಿದರು ದೊಡ್ಡವರಿಂದ ಈ ಎಲ್ಲಾ ಗುಣಗಳನ್ನು ಕೂಡ ಕಲಿಯಬೇಕು. ಇದೇ ಸಾಲಿಗೆ ಸೇರುವ ಮತ್ತೊಬ್ಬ ಮೇರು ನಟ ಸೂಪರ್ ಸ್ಟಾರ್ ರಜನಿಕಾಂತ್ ಅವರು. ಮೂಲತಃ ಬೆಂಗಳೂರಿನವರಾದ ರಜನಿಕಾಂತ್ ಅವರು ಇಂದು ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿರುವ ಹೀರೋ. ಇವರ ಬಗ್ಗೆ ನಮಗೆಲ್ಲಾ ಗೊತ್ತೇ ಇದೆ.

ರಜನಿಕಾಂತ್ ಅವರು ಎಷ್ಟು ಎತ್ತರಕ್ಕೆ ಬೆಳೆದಿದ್ದರು ಸಹ ತಾವು ನಡೆದುಬಂದ ಹಾದಿಯನ್ನು ಮರೆತಿಲ್ಲ. ಬೆಂಗಳೂರಿನಲ್ಲಿ ಬಸ್ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದ ರಜನಿಕಾಂತ್ ಅವರು ಕಷ್ಟಪಟ್ಟು, ನಟನೆ ಕಲಿತು, ನಟನೆ ಶುರು ಮಾಡಿ, ಅವಕಾಶಗಳನ್ನು ಪಡೆದು, ಚೆನ್ನಾಗಿ ಅಭಿನಯಿಸಿ, ಅಭಿಮಾನಿಗಳನ್ನು ಸಂಪಾದಿಸಿ ಇಂದು ಇಷ್ಟು ಎತ್ತರಕ್ಕೆ ಬೆಳೆದಿರುವುದು ಸಾಮಾನ್ಯ ವಿಷಯ ಅಂತೂ ಅಲ್ಲ. ಇವರಿಗೆ ಈಗ 70 ವರ್ಷ ದಾಟಿದ್ದರು ಸಹ, ಇಡೀ ಭಾರತ ಚಿತ್ರರಂಗ ಹಾಗೂ ಅಭಿಮಾನಿಗಳು ರಜನಿಕಾಂತ್ ಅವರ ಸಿನಿಮಾಗಾಗಿ ಕಾಯುತ್ತಿದ್ದಾರೆ. ವಯಸ್ಸಿಗೆ ತಕ್ಕಂಥ ಹೀರೋ ಪಾತ್ರಗಳಲ್ಲೇ ರಜನಿಕಾಂತ್ ಅವರು ಈಗಲೂ ನಟಿಸುವುದು. ಹಾಗಾಗಿ ಜನರಿಗೆ ಇವರ ಸಿನಿಮಾಗಳು ತುಂಬಾ ಇಷ್ಟ. ಇವರ ಮುಂದಿನ ಸಿನಿಮಾ ಕೂಲಿ.

ರಜನಿಕಾಂತ್ ಅವರು ಒಬ್ಬ ಹೀರೋ ಎನ್ನುವುದರ ಜೊತೆಗೆ, ಆಧ್ಯಾತ್ಮ ಹಾಗೂ ಇನ್ನಿತರ ಹಲವು ವಿಚಾರಗಳನ್ನು ತಿಳಿದುಕೊಂಡಿರುವ ವ್ಯಕ್ತಿ. ಇವರ ಮಾತುಗಳನ್ನು ಕೇಳಿದರೆ ಬಹಳ ಜ್ಞಾನ ಹೊಂದಿರುವವರು ಎಂದು ಗೊತ್ತಾಗುತ್ತದೆ. ರಜನಿಕಾಂತ್ ಅವರ ಮಾತಿನಲ್ಲಿ ಬಹಳ ಅರ್ಥ ಇರುತ್ತದೆ. ಇನ್ನು ಇವರು ಹೇಳಿದ ಒಂದು ಕಥೆ ಹಾಗೂ ಅದರ ಒಳ ಅರ್ಥವನ್ನು ಸೃಜನ್ ಲೋಕೇಶ್ ಅವರು ತಿಳಿಸಿದ್ದಾರೆ. ಗೋಲ್ಡ್ ಕ್ಲಾಸ್ ವಿತ್ ಮಯೂರ ಇಂಟರ್ವ್ಯೂ ನಲ್ಲಿ ಸೃಜನ್ ಲೋಕೇಶ್ ಅವರು ಬಂದಿದ್ದು, ತಮ್ಮ ಬಗ್ಗೆ ಹಾಗು ತಮ್ಮ ಜೀವನದ ಬಗ್ಗೆ ಅನೇಕ ವಿಚಾರಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಹಾಗೆಯೇ ರಜನಿಕಾಂತ್ ಅವರು ಹೇಳಿದ ಒಂದು ಕಥೆಯ ಬಗ್ಗೆ ಮಾತನಾಡಿದ್ದಾರೆ, ರಜನಿಕಾಂತ್ ಅವರು ಹೇಳಿದ ಆ ಒಂದು ಕಥೆ, ಸೃಜನ್ ಅವರ ಜೀವನಶೈಲಿಯನ್ನೇ ಬದಲಾಯಿಸಿದೆಯಂತೆ.

ಸೃಜನ್ ಅವರು ಆ ಕಥೆಯ ಬಗ್ಗೆ ಹೇಳಿದ್ದು ಹೀಗೆ.. “ರಜನಿಕಾಂತ್ ಅವರು ಒಂದು ಕಥೆ ಹೇಳಿದ್ರು, ಆ ಕಥೆ ನನಗೆ ತುಂಬಾ ಇಷ್ಟ. ಮೂರು ಜನರು ಬೆಟ್ಟ ಹತ್ತೋಕೆ ಶುರು ಮಾಡ್ತಾರೆ, ಅವರನ್ನ ನೋಡಿ ಅಲ್ಲಿದ್ದ ಜನರೆಲ್ಲ ಹಾವು ಬಂತು, ಚೇಳು ಬಂತು, ಹುಲಿ ಬಂತು ಅಂತ ಹೇಳೋಕೆ ಶುರು ಮಾಡ್ತಾರೆ. ಆ ಮೂವರಲ್ಲಿ ಬೆಟ್ಟ ಹತ್ತಿದ್ದು ಒಬ್ಬನೇ ಒಬ್ಬ ವ್ಯಕ್ತಿ ಮಾತ್ರ. ಅವನಿಂದ ಬೆಟ್ಟ ಹತ್ತೋಕೆ ಹೇಗೆ ಸಾಧ್ಯ ಆಯ್ತು ಅಂದ್ರೆ ಅವನು ಕಿವುಡನಾಗಿದ್ದ. ಜನ ಹೇಳಿದ ಯಾವ ಮಾತುಗಳು ಕೂಡ ಆತನಿಗೆ ಕೇಳಿಸಲಿಲ್ಲ, ತನ್ನ ಪಾಡಿಗೆ ತಾನು ಬೆಟ್ಟ ಹತ್ತುತ್ತಲೇ ಇದ್ದ. ಹಾಗಾಗಿ ಅವನಿಂದ ಬೆಟ್ಟ ಹತ್ತಲು ಸಾಧ್ಯವಾಯಿತು. ಇನ್ನೆಲ್ಲರು ಜನರ ಮಾತನ್ನ ಕೇಳಿಸಿಕೊಂಡು, ಭಯವಾಗಿ ಬೆಟ್ಟ ಹತ್ತದೆ ಹಾಗೆ ಸುಮ್ಮನಾದರು. ಜೀವನದಲ್ಲಿ ಕೂಡ ನಾವು ಏನೋ ಒಂದು ಕೆಲಸ ಮಾಡಲು ಹೊರಟಾಗ ನಮ್ಮನ್ನು ಡಿಸ್ಟರ್ಬ್ ಮಾಡೋಕೆ ಬರ್ತಾರೆ.

ನಾವು ನಮ್ಮ ಗುರಿ ತಲುಪದ ಹಾಗೆ ಮಾಡೋಕೆ ಪ್ರಯತ್ನ ಮಾಡ್ತಾನೆ ಇರ್ತಾರೆ. ಆದರೆ ನಾವು ಆ ಮಾತುಗಳನ್ನೆಲ್ಲಾ ಕೇಳಿಸಿಕೊಳ್ಳದೆ, ನಮ್ಮ ಕೆಲಸದ ಬಗ್ಗೆ ಮಾತ್ರ ಯೋಚನೆ ಮಾಡುತ್ತಾ, ಕೆಲಸ ಮಾಡುತ್ತಾ ಹೋದರೆ, ನಮ್ಮನ್ನು ಯಾರು ತಡೆಯೋಕೆ ಆಗೋದಿಲ್ಲ. ನಾವು ಅಂದುಕೊಂಡಿದನ್ನ ಸಾಧಿಸುತ್ತೀವಿ. ಆದರೆ ಜನರ ಮನಸ್ಸಿಗೆ ಕಿವಿಗೊಟ್ಟು, ಮಾಡೋ ಕೆಲಸವನ್ನ ಬಿಟ್ಟರೆ, ಮುಂದೆ ಸಮಸ್ಯೆ ಆಗುತ್ತದೆ. ನಾವು ಅಂದುಕೊಂಡಿದನ್ನ ಸಾಧಿಸಲು ಆಗೋದಿಲ್ಲ…” ಎಂದಿರುವ ಸೃಜನ್ ಲೋಕೇಶ್ ಅವರು ಈ ಕಥೆಯ ಒಳ ಅರ್ಥ ತಿಳಿದಿಕೊಂಡು, ತಮ್ಮ ಜೀವನದಲ್ಲಿ ಕೂಡ ಅಳವಡಿಸಿಕೊಂಡಿರುವುದಾಗಿ ಹೇಳಿದ್ದಾರೆ. ಈ ಮಾತುಗಳು ನಿಜಕ್ಕೂ ಎಲ್ಲಾ ಜೆನೆರೇಷನ್ ನವರಿಗೂ ಸ್ಪೂರ್ತಿ. ರಜನಿಕಾಂತ್ ಅವರಿಗೆ ಸಲಾಂ.

ಇನ್ನು ಅನೇಕ ವಿಚಾರಗಳನ್ನು ಸೃಜನ್ ಲೋಕೇಶ್ ಈ ಶೋನಲ್ಲಿ ತಿಳಿಸಿದ್ದಾರೆ.. ಫ್ಯಾಮಿಲಿ ಬಗ್ಗೆ ಮಾತನಾಡಿ, “ನನಗೆ ಪ್ರಶ್ನೆ ಮಾಡೋ ಹಕ್ಕು ನನ್ನ ಅಮ್ಮ, ಅಕ್ಕ, ಹೆಂಡತಿ, ಮಕ್ಕಳು ಮತ್ತು ನನ್ನ ಶತ್ರುಗಳಿಗೂ ಇದೆ. ಅವರಿಗೆಲ್ಲಾ ನಾನು ನನ್ನ ಲೈಫ್ ನಲ್ಲಿ ಸ್ಥಾನ ಕೊಟ್ಟಿದ್ದೀನಿ. ನಾವೆಲ್ಲ ಒಬ್ಬರ ಬಗ್ಗೆ ಏನಾದರೂ ಹೇಳಬೇಕು ಅಂದ್ರೆ 10 ಸಾರಿ ಯೋಚನೆ ಮಾಡ್ತೀವಿ. ಆದರೆ ಈಗ ಜನರು ಹಾಗಲ್ಲ, ಯಾರ ಬಗ್ಗೆನಾದ್ರು ಬಾಯಿಗೆ ಬಂದ ಹಾಗೆ ಮಾತಾಡ್ತಾರೆ. ಮೊಬೈಲ್ ಇರೋರೆಲ್ಲಾ ಜರ್ನಲಿಸ್ಟ್ ಆಗಿದ್ದಾರೆ..” ಎಂದು ಈಗಿನ ಸೋಷಿಯಲ್ ಮೀಡಿಯಾ ಸ್ಥಿತಿಯನ್ನು ವಿವರಿಸಿದ್ದಾರೆ ಸೃಜನ್ ಲೋಕೇಶ್. ದರ್ಶನ್ ಅವರ ವಿಚಾರಕ್ಕೆ ಹಾಗೂ ಇನ್ನು ಕೆಲವು ವಿಷಯಕ್ಕೆ ಸೃಜನ್ ಲೋಕೇಶ್ ಅವರ ಬಗ್ಗೆ ಕೆಲವು ಗಾಸಿಪ್ ಗಳು ಕೇಳಿಬಂದಿದ್ದವು. ಅದಕ್ಕೆಲ್ಲಾ ಈ ರೀತಿಯಾಗಿ ಉತ್ತರ ಕೊಟ್ಟಿದ್ದಾರೆ.

ಇನ್ನು ಸೃಜನ್ ಲೋಕೇಶ್ ಕನ್ನಡದ ಖ್ಯಾತ ಹಿರಿಯನಟ ಗೆಂಡೆತಿಮ್ಮ ಲೋಕೇಶ್ ಹಾಗೂ ಗಿರಿಜಾ ಲೋಕೇಶ್ ದಂಪತಿಯ ಮಗ. ಇವರು ಮೊದಲಿಗೆ ಚಿತ್ರರಂಗಕ್ಕೆ ಹೀರೋ ಆಗಿ ಎಂಟ್ರಿ ಕೊಟ್ಟರು. ಆದರೆ ಲಕ್ ಕೈ ಹಿಡಿಯಲಿಲ್ಲ. ನಂತರ ಕಿರುತೆರೆಗೆ ನಿರೂಪಕನಾಗಿ ಎಂಟ್ರಿ ಕೊಟ್ಟರು. ಕಾರ್ಯಕ್ರಮಗಳ ನಿರೂಪಣೆ ಇವರಿಗೆ ದೊಡ್ಡದಾಗಿ ಹೆಸರು ತಂದುಕೊಟ್ಟಿತು. ಹಲವು ಶೋಗಳನ್ನು ನಿರೂಪಣೆ ಮಾಡಿ, ಬಳಿಕ ತಮ್ಮ್ ತಂದೆಯ ಹೆಸರಿನಲ್ಲಿ ಒಂದು ಪ್ರೊಡಕ್ಷನ್ ಕಂಪನಿ ಶುರು ಮಾಡಿ, ಮಜಾ ಟಾಕೀಸ್, ಮಜಾ ವೀಕೆಂಡ್ ಸೇರಿದಂತೆ ಕೆಲವು ಧಾರಾವಾಹಿಗಳನ್ನು ಸಹ ನಿರ್ಮಾಣ ಮಾಡಿದ್ದಾರೆ. ಇವರ ಸೂಪರ್ ಹಿಟ್ ಶೋ ಮಜಾ ಟಾಕೀಸ್ ಈಗ ಮತ್ತೆ ಶುರುವಾಗಿದೆ. ಕಲರ್ಸ್ ಕನ್ನಡದಲ್ಲಿ ಪ್ರತಿ ವೀಕೆಂಡ್ ಶೋ ನೋಡಬಹುದು.