ಭಾರತೀಯ ಸಿನಿಮಾರಂಗದ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ‘ಜೈಲರ್’ ಸಿನಿಮಾ ಇಂದು ದೇಶದಾದ್ಯಂತ 10 ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಿದೆ. ರಜನಿಕಾಂತ್ ಸಿನಿಮಾ ಎಂದರೆ ಅಭಿಮಾನಿಗಳಿಗೆ ಹಬ್ಬವಿದ್ದಂತೆ, ಸದ್ಯ ಜೈಲರ್ ಸಿನಿಮಾವನ್ನು ತಲೈವಾ ಅಭಿಮಾನಿಗಳು ದೇಶದಾದ್ಯಂತ ಪಟಾಕಿ ಸಿಡಿಸಿ, ಶಿಳ್ಳೆ, ಚಪ್ಪಾಳೆ ಹೊಡೆದು ಸಂಭ್ರಮಿಸುತ್ತಿದ್ದಾರೆ.

ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಕೂಡ ಈ ಸಿನಿಮಾದಲ್ಲಿ ನಟಿಸಿರುವ ಕಾರಣ ಕರ್ನಾಟಕದಲ್ಲೂ ‘ಜೈಲರ್’ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ರಾಜ್ಯದಾದ್ಯಂತ ಒಟ್ಟು 300 ಚಿತ್ರಮಂದಿರಗಳಲ್ಲಿ ಜೈಲರ್ ಬಿಡುಗಡೆಯಾಗಿದ್ದು, ಇಂದು 2000 ಶೋ ಗಳು ನಡೆಯಲಿದೆ. ಎಲ್ಲಾ ಥಿಯೇಟರ್ ಹೌಸ್ ಫುಲ್ ಆಗಿದ್ದು, ಸಿನಿಮಾ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುವುದು ಪಕ್ಕಾ ಆಗಿದೆ.
‘ಜೈಲರ್’ ಸಿನಿಮಾವನ್ನು ನೆಲ್ಸನ್ ನಿರ್ದೇಶನ ಮಾಡಿದ್ದು, ಸಿನಿಮಾದಲ್ಲಿ ರಜನಿಕಾಂತ್ ಅವರೊಂದಿಗೆ ನಟ ಶಿವರಾಜ್ ಕುಮಾರ್, ಮೋಹನ್ ಲಾಲ್, ರಮ್ಯಾ ಕೃಷ್ಣಾ, ಜಾಕಿ ಶ್ರಾಪ್, ತಮನ್ನಾ, ಹಾಸ್ಯ ನಟ ಯೋಗಿ ಬಾಬು ತೆರೆ ಹಂಚಿಕೊಂಡಿದ್ದಾರೆ. ಚಿತ್ರಕ್ಕೆ ಅನಿರುಧ್ ರವಿಚಂದ್ರನ್ ಸಂಗೀತ ನೀಡಿದ್ದಾರೆ. ‘ಪೇಟಾ’ ಸಿನಿಮಾದ ನಂತರ ಎರಡು ವರ್ಷಗಳ ಬಳಿಕ ರಜನಿಕಾಂತ್ ಸಿನಿಮಾ ಬಿಡುಗಡೆಯಾಗಿದ್ದು, ಅಭಿಮಾನಿಗಳು ಸೂಪರ್ ಸ್ಟಾರ್ ನಟನೆಗೆ ಫಿದಾ ಆಗಿದ್ದಾರೆ.



