ಸಣ್ಣ ಹಳ್ಳಿಯಿಂದ ಗೂಗಲ್ ಸಿಇಓವರೆಗಿನ ಹಾದಿ ಸುಲಭವಲ್ಲ:
ಭಾರತದ ಮಧ್ಯಮ ವರ್ಗದ ಹಿನ್ನೆಲೆಯುಳ್ಳ ಸುಂದರ್ ಪಿಚೈ ಅವರ ಕಠಿಣ ಪರಿಶ್ರಮ, ದೃಢನಿಶ್ಚಯವೇ ಆಲ್ಫಾಬೆಟ್ ಇಂಕ್, ಗೂಗಲ್ ಸಿಇಓ ಆಗಿ ಕಾರ್ಯನಿರ್ವಹಿಸುತ್ತಿರುವುದಕ್ಕೆ ಕಾರಣ. ಪ್ರತಿಯೊಬ್ಬರ ಬದುಕಿನಲ್ಲಿ ಶಿಕ್ಷಣ ಮಹತ್ವವನ್ನು ಸಾರಿ ಹೇಳುತ್ತದೆ.
ಭಾರತದ ಒಂದು ಸಣ್ಣ ಪಟ್ಟಣದಲ್ಲಿ ಸಾಧಾರಣವಾಗಿ ಆರಂಭಗೊಂಡ ಇವರ ಜೀವನ, ಆಲ್ಫಾಬೆಟ್ ಇಂಕ್ ಮತ್ತು ಗೂಗಲ್ನ ಸಿಇಓ ಆಗುವವರೆಗಿಜೀವನ ಪ್ರಯಾಣವು ಗಮನಾರ್ಹವಾದ್ದುದು. ಅವರ ಕಥೆಯು ಕಠಿಣ ಪರಿಶ್ರಮ ಮತ್ತು ದೃಢನಿಶ್ಚಯ ಎಲ್ಲಾ ಅಡೆತಡೆಗಳನ್ನು ದಾಟಿ ಯಶಸ್ಸಿನತ್ತ ಕೊಂಡೊಯ್ಯಲು ಹೇಗೆ ಸಹಾಯ ಮಾಡುತ್ತದೆ ಎಂಬುದಕ್ಕೆ ಉದಾಹರಣೆಯಾಗಿದೆ.
ಪ್ರಪಂಚದ ಪ್ರಭಾವಶಾಲಿ ಕಂಪನಿಗಳಲ್ಲಿ ಒಂದಾಗಿರುವ ಗೂಗಲ್ ಅನ್ನು ಮುನ್ನಡಿಸುತ್ತಿರುವುದು ಸಾವಿರಾರು ಜನರಿಗೆ ಸ್ಫೂರ್ತಿದಾಯಕವಾಗಿದೆ. ಅವರ ಜೀವನ ಹಾಗೂ ಯಶಸ್ಸಿನ ಹಾದಿಯಲ್ಲಿ ಅವರು ಕಂಡ ಏಳು-ಬೀಳುಗಳು ಹಾಗೂ ಯಶಸ್ಸಿನ ಸಲಹೆಯ ಬಗ್ಗೆ ಇಲ್ಲಿ ಹಂಚಿಕೊಳ್ಳಲಾಗಿದೆ.

ಮಧ್ಯಮ ವರ್ಗದಲ್ಲಿ ಜನನ:
ಜೂನ್ 10, 1972ರಲ್ಲಿ ತಮಿಳುನಾಡಿನ ಮಧುರೈನಲ್ಲಿ ಜನಿಸಿದ ಸುಂದರ್ ಪಿಚೈ, ರೇಗುಣನಾಥ ಪಿಚೈ ಹಾಗೂ ಲಕ್ಷ್ಮಿ ದಂಪತಿಗಳ ಮಗ. ರೇಗುಣನಾಥ ಪಿಚೈ ಎಲೆಕ್ಟಿçಕ್ ಇಂಜಿನಿಯರ್ ಆಗಿದ್ದರೆ, ಲಕ್ಷ್ಮಿ ಅವರು ಸ್ಟೆನೋಗ್ರಾಫರ್. ಸುಂದರ್ ಪಿಚೈ ಅವರಿಗೆ ಶ್ರೀನಿವಾಸನ್ ಪಿಚೈ ಎಂಬ ಕಿರಿಯ ಸಹೋದರನ್ನು ಇದ್ದಾರೆ.
ಚೆನ್ನೈನ ಜವಹಾರ್ ವಿದ್ಯಾಲಯದಲ್ಲಿ ಸೀನಿಯರ್ ಸೆಕೆಂಡರಿ ಶಾಲೆ ಹಾಗೂ ಮದ್ರಾಸ್ನ ವಾಣಿ ಶಾಲೆಯಿಂದ ಶಾಲಾ ಶಿಕ್ಷಣವನ್ನು ಪೂರೈಸಿದ ನಂತರ, ಪಿಚೈ ಅವರು ಐಐಟಿ ಖರಗ್ಪುರದಿಂದ ಮೆಟಲರ್ಜಿಕಲ್ ಇಂಜಿನಿಯರಿಂಗ್ನಲ್ಲಿ ಪದವಿ ಪಡೆದಿದ್ದಾರೆ. ಸ್ಟ್ಯಾನ್ ಫೋರ್ಡ್ ವಿಶ್ವವಿದ್ಯಾಲಯದಿಂದ ಮೆಟೀರಿಯಲ್ ಸೈನ್ಸ್ ಹಾಗೂ ಇಂಜಿನಿಯರಿಂಗ್ನಲ್ಲಿ ಎಂಎಸ್ ಪದವಿ ಪಡೆಯಲು ಅಮೆರಿಕಾಕ್ಕೆ ತೆರಳಿದರು. ಹಾಗೆಯೇ, ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ವಾರ್ಟನ್ ಶಾಲೆಯಿಂದ ಎಂಬಿಎ ಪದವಿ ಪಡೆದಿದ್ದಾರೆ.

ಆಲ್ಫಾಬೆಟ್ ಇಂಕ್, ಗೂಗಲ್ ಸಿಇಓ ಆಗಿ ಸೇವೆ:
ಉತ್ಪನ್ನ ನಿರ್ವಹಣೆ ಮತ್ತು ಅಭಿವೃದ್ಧಿಯ ಮುಖ್ಯಸ್ಥರಾಗಿ 2004ರಲ್ಲಿ ಸುಂದರ್ ಪಿಚೈ ಅವರು ಗೂಗಲ್ಗೆ ಸೇರ್ಪಡೆಗೊಂಡರು. ಆರಂಭದಲ್ಲಿ ಇಂಟರ್ನೆಟ್ ಎಕ್ಸ್ಪ್ಲೋರರ್ ಮತ್ತು ಮೊಜಿಲಾ ಫೈರ್ಫಾಕ್ಸ್ ನಂತಹ ಸರ್ಚ್ ಇಂಜಿನನ್ನು ಬಳಕೆದಾರರಿಗೆ ಸುಲಭವಾಗಿ ಲಭ್ಯವಾಗುವಂತೆ ಮಾಡುವಲ್ಲಿ ತಮ್ಮ ಕೆಲಸ ಪ್ರಾರಂಭಿಸಿದರು. ನಂತರ ಗೂಗಲ್ ಕ್ರೋಮ್ ಅನ್ನು ಅಭಿವೃದ್ಧಿಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಇದೀಗ ಗೂಗಲ್ ಕ್ರೋಮ್ ಪ್ರಪಂಚದಾದ್ಯಂತ ವ್ಯಾಪಕವಾಗಿ ಬಳಕೆಯಲ್ಲಿರುವ ಸರ್ಚ್ ಇಂಜಿನ್ ಆಗಿರುವುದು ಗಮನಾರ್ಹ ವಿಷಯ. 2008ರಲ್ಲಿ ಉತ್ಪನ್ನ ಅಭಿವೃದ್ಧಿಯ ಉಪಾಧ್ಯಕ್ಷರಾಗಿದ್ದ ಇವರು, 2012ರಲ್ಲಿ ಹಿರಿಯ ಉಪಾಧ್ಯಕ್ಷರಾಗಿ ಬಡ್ತಿ ಪಡೆದುಕೊಂಡರು. 2014ರಲ್ಲಿ ಉತ್ಪನ್ನ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದ ಪಿಚೈ, 2015ರಲ್ಲಿ ಗೂಗಲ್ ಸಿಇಓ ಆಗಿ ಅಧಿಕಾರ ವಹಿಸಿಕೊಂಡರು. 2019ರಲ್ಲಿ ಆಲ್ಫಾಬೆಟ್ ಇಂಕ್ನ ಸಿಇಓ ಆಗಿಯೂ ನೇಮಕಗೊಂಡರು.
ವೈಯಕ್ತಿಕ ಜೀವನವನ್ನು ಸರಿದೂಗಿಸಿರುವ ಪಿಚೈ:
ಯಶಸ್ವಿ ವೃತ್ತಿ ಜೀವನ ಹೊಂದಿರುವ ಸುಂದರ್ ಪಿಚೈ, ವೈಯಕ್ತಿಕ ಜೀವನದಲ್ಲಿಯೂ ಸಹ ತಮ್ಮ ಮನ ಮೆಚ್ಚಿದ ಹುಡುಗಿಯನ್ನೇ ಮದುವೆಯಾಗಿದ್ದು, ವೃತ್ತಿಪರ ಹಾಗೂ ವೈಯಕ್ತಿಕ ಜೀವನವನ್ನು ಸಮನಾಗಿ ತೂಗಿಸಿಕೊಂಡು ಹೋಗುತ್ತಿದ್ದಾರೆ. ಐಐಟಿ ಖರಗ್ಪುರದಲ್ಲಿ ಒಟ್ಟಿಗೆ ಓದುತ್ತಿದ್ದ ಅಂಜಲಿಯವರನ್ನೇ ಸುಂದರ್ ಪಿಚೈ ಮದುವೆಯಾಗಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.

ವೃತ್ತಿಪರ ಕ್ರಿಕೆಟಿಗನಾಗುವ ಬಯಕೆ ಹೊಂದಿದ್ದ ಪಿಚೈ:
ಸುಂದರ್ ಪಿಚೈ ಕ್ರಿಕೆಟ್ ಹಾಗೂ ಫುಟ್ಬಾಲ್ ಬಗ್ಗೆಯೂ ಒಲವನ್ನು ಹೊಂದಿದ್ದು, ಸಂದರ್ಶನವೊಂದರಲ್ಲಿ ಬಾಲ್ಯದಲ್ಲಿ ಕ್ರಿಕೆಟಿಗನಾಗಬೇಕೆಂದು ಬಯಸಿದ್ದೆ ಎಂದು ಹೇಳಿಕೊಂಡಿದ್ದಾರೆ.
ಯಶಸ್ಸಿನ ಟಿಪ್ಸ್:
ಕಲಿಯುವುದನ್ನು ಮುಂದುವರೆಸಿ, ಹೊಂದಿಕೊಳ್ಳಿ:
ನಿರಂತರ ಕಲಿಕೆ ಮತ್ತು ಹೊಂದಿಕೊಳ್ಳುವ ಗುಣ ಮಹತ್ವವಾದದ್ದು. ಕುತೂಹಲ ಹಾಗೂ ಹೊಸ ವಿಚಾರಗಳಿಗೆ ಮುಕ್ತರಾಗಿರುವುದು ವೈಯಕ್ತಿ ಮತ್ತು ವೃತ್ತಿಪರ ಬೆಳವಣಿಗೆಗೆ ಸಹಾಯಕ ಎಂಬುದು ಸುಂದರ್ ಪಿಚೈ ಅವರ ಅಭಿಪ್ರಾಯ.
ನಮ್ರತೆ, ಸಹಾನುಭೂತಿಯಿಂದ ಮುನ್ನಡೆಯಿರಿ:
ಶಾಂತ ಹಾಗೂ ವಿನಮ್ರ ನಾಯಕತ್ವಕ್ಕೆ ಸುಂದರ್ ಪಿಚೈ ಅವರು ಜನಪ್ರಿಯ. ತಂಡದಲ್ಲಿರುವ ಸಹೋದ್ಯೋಗಿಗಳ ಮಾತನ್ನು ಆಲಿಸುವುದು, ವಿಭಿನ್ನ ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳುವುದು, ಸಬಲೀಕರಣಗೊಳಿಸುವ ಮೌಲ್ಯವನ್ನು ಅವರ ನಾಯಕತ್ವ ಒತ್ತಿ ಹೇಳುತ್ತದೆ.
ಸವಾಲುಗಳಿಗೆ ಬೆನ್ನು ಹಾಕಬೇಡಿ:
ಸವಾಲುಗಳನ್ನು ಸ್ವೀಕರಿಸುವ ಹಾಗೂ ಕಂಫರ್ಟ್ ಜೋನ್ನಿಂದ ಹೊರ ಬರುವುದರಿಂದ ಮಾತ್ರ ಯಶಸ್ಸಿಗೆ ಹತ್ತಿರವಾಗಲು ಸಾಧ್ಯ ಎಂಬುದು ಪಿಚೈ ಅವರ ಜೀವನ ಸಾಬೀತುಪಡೆಸುತ್ತದೆ. ದೀರ್ಘಕಾಲಿನ ಚಿಂತನೆ ಹಾಗೂ ನಾವೀನ್ಯತೆಯ ಮೇಲೆ ಗಮನ ಕೇಂದ್ರೀಕರಿಸಬೇಕು ಎಂಬುದು ಪಿಚೈ ಅವರ ಸಲಹೆಯಾಗಿದೆ.