ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ಬ್ಯಾಂಕಾಕ್ ಪ್ರವಾಸದ ವೇಳೆ ಹೃದಯಾಘಾತದಿಂದ ಮೃತಪಟ್ಟಿದ್ದು, ನಿನ್ನೆ ತಡರಾತ್ರಿ ಮೃತದೇಹವನ್ನು ವಿದೇಶದಿಂದ ಬೆಂಗಳೂರಿಗೆ ತರಲಾಗಿದೆ. ಸ್ಪಂದನಾ ಅವರ ಅಂತ್ಯಸಂಸ್ಕಾರ ಬುಧವಾರ ಮದ್ಯಾಹ್ನ ಹರಿಶ್ಚಂದ್ರನ ಘಾಟ್ ನಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.ಅದಕ್ಕೂ ಮುನ್ನ ಮಲ್ಲೇಶ್ವರಂ ನಲ್ಲಿರುವ ಸ್ಪಂದನಾ ತಂದೆ ನಿವೃತ್ತ ಐಪಿಎಸ್ ಅಧಿಕಾರಿ ಬಿ.ಕೆ.ಶಿವರಾಂ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಮಂಗಳವಾರ ರಾತ್ರಿ ವಿದೇಶಿ ಪ್ರಕ್ರಿಯೆಗಳನ್ನೆಲ್ಲಾ ಮುಗಿಸಿ ಥಾಯ್ಲೆಂಡ್ ಏರ್ಲೈನ್ಸ್ನ ವಿಶೇಷ ವಿಮಾನದ ಮೂಲಕ ಸ್ಪಂದನಾ ಮೃತದೇಹವನ್ನು ಬೆಂಗಳೂರಿಗೆ ತರಲಾಗಿದೆ. ಥಾಯ್ಲೆಂಡ್ನಲ್ಲಿದ್ದ ವಿಜಯ ರಾಘವೇಂದ್ರ, ಬಿ.ಕೆ. ಶಿವರಾಮ್ ಹಾಗೂ ಸೋದರ ರಕ್ಷಿತ್ ಶಿವರಾಮ್ ಆಗಮನದ ಬಳಿಕ ಮುಂದೆ ನಡೆಸಬೇಕಾದ ಕ್ರಮಗಳ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮಂಗಳವಾರ ರಾತ್ರಿಯಿಂದಲೇ ವಿಜಯ ರಾಘವೇಂದ್ರ ಹಾಗೂ ಶಿವರಾಮ್ ಕುಟುಂಬದ ಸದಸ್ಯರು, ಸ್ನೇಹಿತರು, ಆಪ್ತರು, ಗಣ್ಯರು, ಅಭಿಮಾನಿಗಳು ಮನೆಗೆ ಭೇಟಿ ನೀಡಿ ಸಂತಾಪ ಸೂಚಿಸುತ್ತಿದ್ದಾರೆ. ಬುಧವಾರ ಸಾರ್ವಜನಿಕ ದರ್ಶನ ಮುಗಿದ ಬಳಿಕ ಸಂಪ್ರದಾಯದ ಪ್ರಕಾರ ಅಂತ್ಯಸಂಸ್ಕಾರ ನಡೆಯಲಿದೆ. ಇತ್ತೀಚೆಗಷ್ಟೇ ಸ್ಪಂದನಾ ವರ್ಕೌಟ್ ಮೂಲಕ 16 ಕೆಜಿ ತೂಕ ಇಳಿಸಿಕೊಂಡಿದ್ದು, ಇದೇ ಸಾವಿಗೆ ಕಾರಣ ಎನ್ನಲಾಗುತ್ತಿದೆ.