ಕನ್ನಡ ಚಿತ್ರರಂಗದ ಹೆಸರಾಂತ ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ಅವರ ದಿಢೀರ್ ಸಾವು ಇಡೀ ಕನ್ನಡ ಚಿತ್ರರಂಗಕ್ಕೆ ಶಾಕ್ ನೀಡಿದೆ. ಆರೋಗ್ಯವಾಗಿದ್ದ ಸ್ವಂದನಾ ಮೂರು ದಿನಗಳ ಹಿಂದೆಯಷ್ಟೇ ತಮ್ಮ ಆಪ್ತ ಸ್ನೇಹಿತರೊಂದಿಗೆ ಬ್ಯಾಂಕಾಕ್ ಪ್ರವಾಸ ತೆರಳಿದ್ದರು. ಈ ವೇಳೆ ಲೋ ಬೀಪಿಯಿಂದ ಹಾರ್ಟ್ ಅಟ್ಯಾಕ್ ಆಗಿದ್ದು, ಆಸ್ಪತ್ರೆಗೆ ಸೇರಿಸುವ ಮುನ್ನ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಆದರೆ ಇದೀಗ ಸ್ಪಂದನಾ ಇತ್ತೀಚೆಗೆ ದೇಹ ತೂಕ ಇಳಿಸಿಕೊಂಡಿದ್ದೇ ಸಾವಿಗೆ ಕಾರಣ ಎಂಬ ಮಾತು ಕೇಳಿ ಬರುತ್ತಿದೆ.

ಹೌದು, ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ಇತ್ತೀಚೆಗೆ ಹೆಚ್ಚು ಜಿಮ್ ಹಾಗೂ ಡಯೆಟ್ ಮಾಡುತ್ತಿದ್ದರು. ದೇಹದ ತೂಕ ಇಳಿಸುವ ನಿಟ್ಟಿನಲ್ಲಿ ಜಿಮ್ ಮೊರೆ ಹೋಗಿದ್ದ ಇವರು ಆಹಾರವನ್ನು ಕೂಡ ನಿಯಮಿತವಾಗಿ ಸೇವಿಸುತ್ತಿದ್ದರು. ಇದರಿಂದಾಗಿ 16ಕೆಜಿ ತೂಕ ಇಳಿಸಿಕೊಂಡಿದ್ದರು. ಸದ್ಯದ ಮಾಹಿತಿಯ ಪ್ರಕಾರ ಸ್ಪಂದನಾ ಮಿತಿ ಮೀರಿ ಡಯೆಟ್ ಹಾಗೂ ಜಿಮ್ ಮಾಡುತ್ತಿದ್ದ ಕಾರಣ ದೇಹದ ತೂಕ ಇಳಿದಿದೆ ಜೊತೆಗೆ ಇದು ದೇಹದೊಳಗೆ ವ್ಯತಿರಿಕ್ತ ಪರಿಣಾಮ ಬೀರಿದೆ. ಇದೇ ಕಾರಣದಿಂದ ಬಿಪಿ ಲೋ ಆಗಿ ಹೃದಯಾಘಾತ ಆಗಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ.
2007 ರಲ್ಲಿ ನಟ ವಿಜಯ ರಾಘವೇಂದ್ರ ಅವರನ್ನು ವರಸಿದ ಸ್ಪಂದನಾ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ನಿವೃತ್ತ ಪೊಲೀಸ್ ಅಧಿಕಾರಿ ಶಿವರಾಂ ಅವರ ಮಗಳಾಗಿರುವ ಸ್ಪಂದನಾ 2016ರಲ್ಲಿ ‘ಅಪೂರ್ವ’ ಸಿನಿಮಾದಲ್ಲಿ ನಟಿಸಿದ್ದಾರೆ. ಇದೀಗ ಹಠಾತ್ ಹೃದಯಾಘಾತದಿಂದ ಸ್ಪಂದನಾ ವಿಧಿವಶರಾಗಿದ್ದು, ನಾಳೆ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ತರಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.