ಹೆಣ್ಣು ಮಕ್ಕಳ ಸೌಂದರ್ಯ ವರ್ಧಕಗಳಿಗೆ ಭಾರೀ ಡಿಮಾಂಡ್ ಇದೆ. ಮಿನಿಮಮ್ ಐಲೈನರ್, ಲಿಪ್ ಜೆಲ್, ಲಿಪಿಸ್ಟಿಕ್ ಇಲ್ಲದೆ ಹೊರ ಬರುವ ಹೆಣ್ಣು ಮಕ್ಕಳ ಸಂಖ್ಯೆ ತೀರ ಕಡಿಮೆ. ಹೆಣ್ಣು ಮಕ್ಕಳು ಸೌಂದರ್ಯಕ್ಕೆ ನೀಡುವ ಪ್ರಾಮುಖ್ಯತೆಯೇ ಎಲ್ಲೆಂದರಲ್ಲಿ ಸೌಂದರ್ಯ ವರ್ಧಕಗಳು ಅಂದರೆ ಕಾಸ್ಮೆಟಿಕ್ಸ್ಗಳನ್ನು ಮಾರಲು ಕಾರಣ ಎಂದರೂ ತಪ್ಪಲ್ಲ. ಬೀದಿ ಬದಿ ತರಕಾರಿಕೊಂಡಂತೆ ಹೆಣ್ಣು ಮಕ್ಕಳು ಮುಖಕ್ಕೆ ಹಚ್ಚುವ ಸೌಂದರ್ಯ ವರ್ಧಕಗಳನ್ನು ಕೊಂಡುಕೊಳ್ಳುತ್ತಾರೆ. ಯಾವ ಬ್ರಾಂಡಿನ ಪ್ರಾಡೆಕ್ಟ್? ಇಷ್ಟು ಕಡಿಮೆ ಬೆಲೆಯ ಕಾಸ್ಮೆಟಿಕ್ಸ್ ಗಳು ತ್ವಚೆಗೆ ಒಳ್ಳೆಯದೇ? ಎಂದು ಹಿಂದು ಮುಂದು ಯೋಚಿಸದೆ ತೊಂದರೆಗೆ ಸಿಲುಕುತ್ತಿದ್ದಾರೆ. ಇನ್ನು ಮುಂದೆ ಈ ರೀತಿ ತೊಂದರೆಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಳ್ಳಲಿದೆ.

ರಸ್ತೆ ಬದಿಯಲ್ಲಿ ಮಾರಾಟ ಮಾಡುವ ಲಿಪ್ಸ್ಟಿಕ್, ಲಿಪ್ಕೇರ್ ಹಾಗೂ ಇನ್ನಿತರ ಸೌಂದರ್ಯ ವರ್ಧಕಗಳಿಗೆ ನಿರ್ಬಂಧ ಹೇರಲು ಕೇಂದ್ರ ಸರ್ಕಾರ ಹೊಸ ನಿಯಮ ಜಾರಿಗೆ ತರಲಿದೆ. ಕಳಪೆ ಗುಣಮಟ್ಟದ ಕಾಸ್ಮೆಟಿಕ್ಸ್ಗಳನ್ನು ಎಲ್ಲೆಂದರಲ್ಲಿ ಎಗ್ಗಿಲ್ಲದೆ ಮಾರುತ್ತಿರುವುದು ಸರ್ವೇ ಸಾಮಾನ್ಯವಾಗಿದ್ದು, ಹೆಣ್ಣು ಮಕ್ಕಳು ಸಹ ಯೋಚಿಸದೆ ಅವುಗಳನ್ನು ಖರೀದಿಸಿ ಬಳಸುತ್ತಿದ್ದಾರೆ. ಇದರಿಂದ ಚರ್ಮದ ಸಮಸ್ಯೆಗಳು ಉಲ್ಬಣಗೊಳ್ಳುತ್ತಿವೆ. ಇವೆಲ್ಲವನ್ನು ಗಮನದಲ್ಲಿಟ್ಟಿಕೊಂಡು ಕೇಂದ್ರ ಸರ್ಕಾರ ಕಳಪೆ ಗುಣಮಟ್ಟದ ಕಾಸ್ಮೆಟಿಕ್ಸ್ ಮಾರಟಕ್ಕೆ ತಡೆವೊಡ್ಡಲು ಕಾಸ್ಮೆಟಿಕ್ಸ್ ಆಕ್ಟ್ ಜಾರಿಗೆ ತರಲು ಮುಂದಾಗಿದೆ. ಇನ್ನೂ ಈ ಕುರಿತಂತೆ ಸಚಿವ ದಿನೇಶ್ ಗುಂಡೂರಾವ್ ಕೇಂದ್ರ ಆರೋಗ್ಯ ಇಲಾಖೆಗೆ ಪತ್ರ ಬರೆಯಲು ಮುಂದಾಗಿದ್ದರೆ.

ಇದ್ದಿಷ್ಟು ಕಾಸ್ಮೆಟಿಕ್ಸ್ನ ವಿಷಯವಾದರೆ, ಮತ್ತೊಂದೆಡೆ ಟ್ಯಾಟೂ ಪ್ರಿಯರಿಗೆ ಬಿಗ್ಶಾಕ್ ಕೊಡಲು ಸರ್ಕಾರ ಚಿಂತನೆ ನಡೆಸಿದೆ. ಹೌದು, ಎಲ್ಲೆಂದರಲ್ಲಿ, ಯಾರೂ ಬೇಕಾದರು ಟ್ಯಾಟೂ ಹಾಕುತ್ತಿರುವ ವಿಷಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಅವೈಜ್ಞಾನಿಕ ಮಾದರಿಯಲ್ಲಿ ಬೇಕಾಬಿಟ್ಟಿಯಾಗಿ ಟ್ಯಾಟೂ ಹಾಕುತ್ತಿರುವವರಿಗೆ ಹಾಗೂ ಹಾಕಿಸಿಕೊಳ್ಳುತ್ತಿರುವವರಿಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಹೊಸ ಕಾನೂನು ಜಾರಿಗೊಳಿಸಲು ನಿರ್ಧರಿಸಿದೆ.
ಈಗಾಗಲೇ ಟ್ಯಾಟೂವಿನಿಂದ ಚರ್ಮ ಕ್ಯಾನ್ಸರ್, ಹೆಚ್ಐವಿ ಹಾಗೂ ಚರ್ಮರೋಗ, ಹೆಪೆಟೈಟಿಸ್ ಬಿ, ಸಿ ಹಾಗೂ ಸ್ಟ್ಯಾಂಫಿಲೋಕೊಕಸ್ ಔರೆಸ್ ನಂತಹ ಮಾರಣಾಂತಿಕ ಸೋಂಕುಗಳು ಜನರಲ್ಲಿ ಹೆಚ್ಚಾಗುತ್ತಿದೆ ಎಂದು ಸುದ್ದಿ ಹರಿದಾಡುತ್ತಿತ್ತು. ಈ ಆರೋಪವನ್ನು ಗಂಭೀರವಾಗಿ ಪರಿಗಣಿಸಿದ ಆರೋಗ್ಯ ಇಲಾಖೆ ಪರಿಶೀಲನೆ ನಡೆಸಿದೆ. ಆಗ ಸೋಂಕುಗಳು ಹರಡಲು ಟ್ಯಾಟೋ ಕೂಡ ಕಾರಣ ಎಂಬುದು ದೃಢಪಟ್ಟಿದೆ. ಹಾಗಾಗಿ, ಸರ್ಕಾರ ಹೊಸ ನಿಯಮ ಜಾರಿಗೆ ತರಲು ಚಿಂತನೆ ನಡೆಸಿದೆ.

ಟ್ಯಾಟೂ ಇಂಕ್ಗಳು ಕ್ಯಾನ್ಸರ್ ಕಾರಕ:
ಬಿಂಘ್ಯಾಮ್ಟನ್ ವಿವಿಯ ರಾಸಾಯನಿಕ ವಿಷಯದ ಸಹಾಯಕ ಪ್ರಾಧ್ಯಕರಾಗಿರುವ ಜಾನ್ ಸ್ವಿರ್ಕ್ ನೇತೃತ್ವದ ಸಂಶೋಧಕರ ತಂಡ ಟ್ಯಾಟೂ ಹಾಕಲು ಬಳಸಲಾಗುವ ಹಲವು ಮಾದರಿಯ ಇಂಕ್ಗಳನ್ನು ಸಂಶೋಧನೆಗೆ ಒಳಪಡಿಸಿತ್ತು. ಪರೀಕ್ಷೆಯ ವೇಳೆ ಗಂಭೀರ ವಿಷಯ ಬೆಳಕಿಗೆ ಬಂದಿದೆ. ಅದೇನೆಂದರೆ ಟ್ಯಾಟೂ ಇಂಕ್ಗಳಲ್ಲಿ ಶೇ.50ರಷ್ಟು ಪ್ರಮಾಣ ಕ್ಯಾನ್ಸರ್ ಹರಡುವ ಘಾತಕ ರಾಸಾಯನಿಕ ಅಡಗಿರುವುದು ತಿಳಿದು ಬಂದಿದೆ. ಶಿಕಾಗೋದಲ್ಲಿ ನಡೆದ ಅಮೆರಿಕನ್ ಕೆಮಿಕಲ್ ಸೊಸೈಟಿ ಸಭೆಯಲ್ಲಿ ಈ ಅಂಶವನ್ನು ಚರ್ಚಿಸಲಾಗಿದೆ. ಸಂಶೋಧನಕಾರರ ಪ್ರಕಾರ ಟ್ಯಾಟೂಗೆ ಬಳಸುವ ಇಂಕ್ಗಳಲ್ಲಿ ಒಂದು ಪಿಗ್ಮೆಂಟ್ ಹಾಗೂ ಮತ್ತೊಂದು ಕ್ಯಾರಿಯರ್ ಎಂಬ ಎರಡು ವಿಧಧ ದ್ರಾವಣಾಂಶಗಳಿರುತ್ತವೆ. ಪಿಗ್ಮೆಂಟ್ ಎಂಬುದು ಮಾಲೆಕ್ಯೂಲರ್ ಅಥವಾ ಘನ ಘಟಕವಾಗಿದ್ದರೆ, ಕ್ಯಾರಿಯರ್ ದ್ರವ್ಯವಾಗಿದೆ. ಕ್ಯಾರಿಯರ್ ಅಂಶವು ಪಿಗ್ಮೆಂಟ್ ಅಂಶಗಳನ್ನು ಚರ್ಮದ ವಿವಿಧ ಪದರಗಳಿಗೆ ಸಾಗಿಸುವ ಕೆಲಸ ಮಾಡುತ್ತದೆ. ಇನ್ನೂ ಟ್ಯಾಟೂ ಹಾಕಲು ಬಳಸಲಾಗುತ್ತಿರುವ ಇಂಕ್ ಬಾಟಲ್ಗಳ ಮೇಲೆ ಕ್ಯಾನ್ಸರ್ ಉಂಟು ಮಾಡಬಹುದಾದ ರಾಸಾಯನಿಕದ ಹೆಸರೇ ನಮೂದಿಸದಿರುವುದು ಸಹ ಬೆಳಕಿಗೆ ಬಂದಿದೆ.

ಹೊಸ ಕಾನೂನು ಏನು ಹೇಳುತ್ತದೆ?
ಟ್ಯಾಟೂ ನಿಯಂತ್ರಿಸಲು ದೇಶದಲ್ಲಿ ಯಾವುದೇ ಕಾನೂನುಗಳು ಇಲ್ಲದೇ ಇರುವ ನಿಟ್ಟಿನಲ್ಲಿಯೇ ಅವೈಜ್ಞಾನಿಕ ಮಾದರಿಯ ಟ್ಯಾಟೂ ಹಾವಳಿ ಹೆಚ್ಚಾಗಿರುವುದು. ಹೊಸ ಕಾನೂನಿನ ಅನ್ವಯ ಟ್ಯಾಟೂ ಹಾಕುವವರು ತಾವು ಬಳಸುವ ರಾಸಾಯನಿಕ, ಬಣ್ಣ, ಸೂಜಿ ಹಾಗೂ ಹಾಕುವಾಗ ಕೈಗೊಳ್ಳುವ ಸ್ವಚ್ಛತೆಯ ಕ್ರಮದ ಬಗ್ಗೆ ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕಿದೆ. ಇನ್ನೂ ಹಾಕಿಸಿಕೊಳ್ಳುವವರು ವೈದ್ಯರಿಂದ ತಪಾಸಣೆ ಮಾಡಿಸಿರುವ ಪತ್ರ ಪಡೆದಿರ ಬೇಕಿರುವುದು ಕಡ್ಡಾಯವಾಗಲಿದೆ.