ಬಹುಪಾಲು ಭಾರತೀಯರಲ್ಲಿ ಹೆಚ್ಚು ಬಾಧಿಸುತ್ತಿರುವ ಸಮಸ್ಯೆಯೆಂದರೆ ಬೊಜ್ಜು. ಬೊಜ್ಜು ಮನುಷ್ಯನಲ್ಲಿ ಮಧುಮೇಹ, ಅಧಿಕ ರಕ್ತದೊತ್ತಡ ಹಾಗೂ ಕೊಲೆಸ್ಟ್ರಾಲ್ ಅಪಾಯವನ್ನು ಹೆಚ್ಚಿಸುತ್ತಿದೆ. ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿರುವವರು ಬೇಗ ಕೊಬ್ಬು ಕರಗಿಸಿಕೊಳ್ಳುವುದು ಒಳ್ಳೆಯದು ಎಂಬುದು ತಜ್ಞರ ಅಭಿಪ್ರಾಯ.
ಕೆಲವರು ಹೇಳುವ ಪ್ರಕಾರ ಜಂಕ್ ಫುಡ್ ತಿನ್ನದಿದ್ದರು ಸಹ ಬೊಜ್ಜಿನ ಸಮಸ್ಯೆ ಬಾಧಿಸುತ್ತದೆ. ಹಾಗಾಗಿ ಬೊಜ್ಜಿಗೆ ಜಂಕ್ ಫುಡ್ ಮಾತ್ರ ಕಾರಣವಲ್ಲ. ಬೇರೆ-ಬೇರೆ ಕಾರಣಗಳು ಸಹ ಮನುಷ್ಯರನ್ನು ದಪ್ಪವಾಗಿಸುತ್ತವೆ. ಹಾಗಾದ್ರೆ, ಯಾವೆಲ್ಲಾ ಅಂಶಗಳು ಬೊಜ್ಜಿಗೆ ಕಾರಣವಾಗುತ್ತವೆ ಎಂಬುದರ ಮಾಹಿತಿ ಇಲ್ಲಿದೆ.
ಮೇಲ್ನೋಟಕ್ಕೆ ಬೊಜ್ಜಿನ ಸಮಸ್ಯೆ ಬಹಳ ಮಂದಿಗೆ ಸಹಜವಾಗಿ ಕಾಣುತ್ತದೆ. ಹಾಗಾಗಿ ಕೆಲವರು ಜಿಮ್, ಯೋಗ, ಡಯೆಟ್, ವರ್ಕೌಟ್ ಹೀಗೆ ಹಲವಾರು ಪ್ರಯತ್ನಗಳನ್ನು ಮಾಡುತ್ತಾರೆ. ಹೀಗಿದ್ದರೂ ಎಷ್ಟೋ ವೇಳೆ ಉತ್ತಮ ಫಲಿತಾಂಶ ಸಿಗುವುದಿಲ್ಲ.
ಜಡ ಜೀವನಶೈಲಿಯೇ ದೇಹದ ಭಾರ ಹೆಚ್ಚಲು ಕಾರಣ:
ನಗರೀಕರಣವು ಎಲ್ಲರನ್ನೂ ಒಂದೇ ಸ್ಥಳದಲ್ಲಿ ಉಳಿಯುವಂತೆ ಮಾಡಿದೆ. ಕೆಲಸಕ್ಕಾಗಿ ಅಥವಾ ಓದು, ವಿದ್ಯಾಭ್ಯಾಸಕ್ಕಾಗಿ ಅಗತ್ಯಕ್ಕಿಂತ ಹೆಚ್ಚಾಗಿ ಗ್ಯಾಜೆಟ್ಗಳನ್ನು ಬಳಸಲು ಪ್ರಾರಂಭಿಸಿದ್ದೇವೆ. ಇದು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಬೊಜ್ಜು, ಮಾನಸಿಕ ಒತ್ತಡ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳು ಬಾಧಿಸುತ್ತೀವೆ.

ಸಂಸ್ಕರಿಸಿದ ಆಹಾರ ಹಾಗೂ ಖಾಲಿ ಕ್ಯಾಲೋರಿ:
ಅನಾರೋಗ್ಯಕರ ಪದಾರ್ಥಗಳನ್ನು ಹೊಂದಿರುವ ಸಂಸ್ಕರಿಸಿದ ಆಹಾರವನ್ನು ತಿನ್ನುವುದರಿಂದ ಹಿಡಿದು ಜೀರೋ ಕ್ಯಾಲೋರಿಗಳಿಂದ ಕೂಡಿರುವ ನಾನಾ ಆಹಾರ ಪದಾರ್ಥಗಳನ್ನು ಆಗಾಗೆ ತಿನ್ನುತ್ತಿರುತ್ತೇವೆ. ಇವು ವಿವಿಧ ರೀತಿಯ ಅಂಶಗಳ ಮೂಲಕ ದೇಹದಲ್ಲಿ ಬೊಜ್ಜಿನ ಸಮಸ್ಯೆ ಹೆಚ್ಚಿಸುತ್ತದೆ.
ಹಾರ್ಮೊನ್ಗಳ ಅಸಮತೋಲನ, ದೀರ್ಘಕಾಲದ ಕಾಯಿಲೆಗಳು:
ಪಿಸಿಒಡಿ, ಥೈರಾಯ್ಡ್ ಸಮಸ್ಯೆಗಳು ನಮ್ಮ ಚಯಾಪಚಯ ಕ್ರಿಯೆಯ ಮೇಲೆ ಪರಿಣಾಮ ಬೀರುತ್ತವೆ ಹಾಗೂ ತೂಕ ಹೆಚ್ಚಳಕ್ಕೆ ಕಾರಣವಾಗಬಹುದು. ಮುಖ್ಯವಾಗಿ ಮಧುಮೇಹದಂತಹ ದೀರ್ಘಕಾಲದ ಕಾಯಿಲೆಗಳಿಂದಾಗಿ ಬೊಜ್ಜಿನ ಸಮಸ್ಯೆಯನ್ನು ತಡೆಗಟ್ಟುವುದು ಸವಾಲಿನ ಕೆಲಸವಾಗಿದೆ.
ಬಾಲ್ಯದ ಬೊಜ್ಜು:
ಗರ್ಭಧಾರಣೆಯಿಂದ ಹಿಡಿದು ಜನನದ ನಂತರ ಮಗುವಿನ ಬಾಲ್ಯಾವಸ್ಥೆಯಲ್ಲಿ ಹೆಚ್ಚುಹೆಚ್ಚು ಪೋಷಕಾಂಶಗಳನ್ನು ಒದಗಿಸುವುದರೆಡೆಗೆ ಗಮನ ಹರಿಸಬೇಕಾಗುತ್ತದೆ. ಈ ಮೂಲಕ ಅನಗತ್ಯ ಆಹಾರವನ್ನು ಮಕ್ಕಳಿಗೆ ನೀಡುವ ಮೂಲಕ ಗುಂಡಗುಂಡಗೆ ಮಾಡುವುದರ ಬದಲು ಸ್ವಾಸ್ಥ್ಯ ಆಹಾರ ಒದಗಿಸಬೇಕಿದೆ.
ಫಾಸ್ಟ್ ಫುಡ್ ಸಂಸ್ಕೃತಿ:
ಫಾಸ್ಟ್ ಫುಡ್ ಸಂಸ್ಕೃತಿಯು ಅಧಿಕ ಒತ್ತಡದೊಂದಿಗೆ ಬೊಜ್ಜು ಸಮಸ್ಯೆಗೆ ಕಾರಣವಾಗಿದೆ. ಹೆಚ್ಚುವರಿಯಾಗಿ, ಹಣ್ಣು ಮತ್ತು ತರಕಾರಿಗಳಲ್ಲಿರುವ ಕೀಟನಾಶಕಗಳು ಚಯಾಪಚಯ ಕ್ರಿಯೆಯನ್ನು ಅಡ್ಡಿಪಡಿಸಿ ತೂಕ ಹೆಚ್ಚಾಗಲು ಕಾರಣವಾಗುತ್ತದೆ.

ಬೊಜ್ಜಿನ ಸಮಸ್ಯೆಗೆ ಕಾರಣವಾಗುವ ಅಂಶಗಳು:
ತಳಿಶಾಸ್ತ್ರ, ಆಹಾರ ಪದ್ಧತಿ ಹಾಗೂ ದೈಹಿಕ ಚಟುವಟಿಕೆಯಂತಹ ಅಂಶಗಳ ಕೊರತೆ ಬೊಜ್ಜು ಬೆಳೆಯಲು ಕಾರಣವಾಗಿವೆ. ಕರುಳಿನಲ್ಲಿ ಕಂಡು ಬರುವ ಸೂಕ್ಷ್ಮ ಜೀವಿಯು ಬೊಜ್ಜಿಗೆ ಪ್ರಮುಖ ಪಾತ್ರ ವಹಿಸುತ್ತದೆ. ಕೆಲವು ಕರುಳಿನ ಬ್ಯಾಕ್ಟೀರಿಯಾಗಳು ಕೊಲೆಸ್ಟಾçಲನ್ನು ಸಂಗ್ರಹಿಸಿ, ಉರಿಯೂತಕ್ಕೆ ಕಾರಣವಾಗುತ್ತವೆ. ಹಾಗೆಯೇ, ಬೊಜ್ಜಿಗೂ ಕಾರಣವಾಗುತ್ತವೆ.
ಸಾಮಾನ್ಯವಾಗಿ ಎಲ್ಲರಿಗೂ ಏನನ್ನೂ ತಿಂದರೆ ಒಳ್ಳೆಯದು. ಯಾವುದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂಬುದರ ಅರಿವಿರುತ್ತದೆ. ಆದರೂ, ಸಹ ಕೆಲವೊಮ್ಮೆ ಬಾಯಿ ಚಪಲಕ್ಕೆ ಒಳಗಾಗಿ ರುಚಿಸದ್ದನೆಲ್ಲಾ ತಿನ್ನಲು ಮುಂದಾಗುತ್ತಾರೆ. ಇನ್ನು ಕೆಲವರು ಕುಳಿತಲ್ಲಿಯೇ ಕೆಲಸ ಮಾಡುತ್ತಾ ಆರೋಗ್ಯ ಕೆಡಿಸಿಕೊಳ್ಳುತ್ತಾರೆ. ಮತ್ತೂ ಕೆಲವರು ಅನಗತ್ಯ ಒತ್ತಡಕ್ಕೆ ತುತ್ತಾಗಿ ದೇಹದ ತೂಕ ಹೆಚ್ಚಿಸಿಕೊಳ್ಳುತ್ತಾರೆ. ತಪ್ಪೆಂದು ತಿಳಿದರು ಅದನ್ನು ಮುಂದುವರೆಸುವುದು ಸಹ ಕೆಲವೊಮ್ಮೆ ದೊಡ್ಡ ಖಾಯಿಲೆಗೆ ಕಾರಣವಾಗಬಹುದು ಎಚ್ಚರವಿರಲಿ. ಸಣ್ಣವಿರುವುದು ಕೇವಲ ಬಾಹ್ಯ ಸೌಂದರ್ಯದ ದೃಷ್ಟಿಯಿಂದ ಮಾತ್ರವಲ್ಲ, ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದು. ಡಯೆಟ್ ಮಾಡುತ್ತಿದ್ದೀರಾ ಎಂದು ಉದ್ಘಾರ ತೆಗೆಯುವವರಿಗೆ, ಇಲ್ಲ ಆರೋಗ್ಯ ಕಾಪಾಡಿಕೊಳ್ಳುತ್ತಿದ್ದೀನಿ ಎಂದು ಉತ್ತರಿಸಿ.