6೦ ವರ್ಷ ದಾಟಿದ ಮೇಲೆ ಪ್ರತಿ ತಿಂಗಳು ನಿಗದಿತ ಹಣ ಪಿಂಚಣಿಯಾಗಿ ಪಡೆಯಲು ಅಟಲ್ ಪಿಂಚಣಿ ಯೋಜನೆಗೆ ಸೇರಬಹುದು. ಇಂತಿಷ್ಟು ಹಣ ಪಾವತಿಸಿದರೆ 6೦
ವರ್ಷದ ನಂತರ ತಿಂಗಳಿಗೆ 1೦೦೦ದಿಂದ 5೦೦೦ದವರೆಗೂ ಪಿಂಚಣಿ ಪಡೆಯಬಹುದು. ಈ ಯೋಜನೆ ಕುರಿತ ಒಂದಿಷ್ಟು ಮಾಹಿತಿ ಇಲ್ಲಿದೆ….
ಹಿಂದುಳಿದ ವರ್ಗದವರಿಗೆ ಆಸರೆಯಾಗಿ ನಿಲ್ಲಲ್ಲು ಕೇಂದ್ರ ಸರ್ಕಾರದ ಹತ್ತು-ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳಲ್ಲಿ ಪ್ರಮುಖವಾದದ್ದು ಅಟಲ್ ಪಿಂಚಣಿ ಯೋಜನೆ. 2015ರಲ್ಲಿ ಜಾರಿಗೊಂಡ ಈ ಯೋಜನೆಯ ಲಾಭವನ್ನು ಈಗಾಗಲೇ ಹಲವು ಮಂದಿ ಪಡೆದುಕೊಳ್ಳುತ್ತಿದ್ದಾರೆ. ಇನ್ನೊಂದಿಷ್ಟು ಮಂದಿಗೆ ಇಂತಹ ಒಂದು ಯೋಜನೆ ಇರುವುದೇ ತಿಳಿದಿಲ್ಲ. ಅಂತಹವರಿಗೆ ಇಲ್ಲಿ ಒಂದಿಷ್ಟು ಮಾಹಿತಿ ಹಂಚಿಕೊಳ್ಳಲಾಗಿದೆ.

ಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿರುವವರಿಗಾದರೆ 6೦ ವರ್ಷ ದಾಟಿದ ನಂತರ ಇಂತಿಷ್ಟು ಎಂದು ಪ್ರತಿ ತಿಂಗಳು ಪಿಂಚಣಿ ರೂಪದಲ್ಲಿ ಹಣ ಕೈಸೇರುತ್ತದೆ. ಅದೇ ಸಂಘಟಿತ ವಲಯದಲ್ಲಿ ಕೆಲಸ ಮಾಡದೆ ಇರುವ ಲಕ್ಷಾಂತರ ಮಂದಿಯ ಒಳಿತಿಗಾಗಿ ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ. ವಯಸ್ಸಾದ ನಂತರ ಯಾರ ಹಂಗು ಇಲ್ಲದೆ ತಮ್ಮ ಬೇಕು-ಬೇಡಗಳನ್ನು ನೋಡಿಕೊಳ್ಳಲು ಈ ಯೋಜನೆ ಸಹಕಾರಿ. ನಿತ್ಯ ಕೂಲಿ ಮಾಡುವವರು, ಸಣ್ಣ-ಪುಟ್ಟ ವ್ಯಾಪಾರ ಮಾಡುವವರು, ಸ್ವಂತ ಕೆಲಸ ಮಾಡುವವರುಗಳು ಸಹ 6೦ ದಾಟಿದ ನಂತರ ತಮ್ಮ-ತಮ್ಮ ಪಿಂಚಣಿ ಹಣವನ್ನು ಪಡೆದುಕೊಳ್ಳಬೇಕೆನ್ನುವುದೇ ಈ ಯೋಜನೆಯ ಉದ್ದೇಶ.

ಅಟಲ್ ಪಿಂಚಣಿ ಯೋಜನೆಗೆ ಸೇರಿದವರು 6೦ ವರ್ಷದ ನಂತರ ಪ್ರತಿ ತಿಂಗಳು 1೦೦೦, 2೦೦೦, 3೦೦೦, 4೦೦೦ ಹಾಗೂ 5೦೦೦ ರೂಪಾಯಿ ವರೆಗೆ ಪಿಂಚಣಿ ಸೌಲಭ್ಯ ಪಡೆಯಬಹುದು. ಹೇಗೆ ಎಂದು ಯೋಚಿಸುತ್ತೀದ್ದೀರ…? ಹೆಚ್ಚೆನು ಶ್ರಮವಿಲ್ಲ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ನಲ್ಲಿ ತಿಂಗಳಿ ಇಂತಿಷ್ಟು ಹಣವನ್ನು ರೆಕರಿಂಗ್ ಡೆಪಾಸಿಟ್(ಆರ್ಡಿ) ಕಟ್ಟುವಂತೆ ವಯಸ್ಸಿಗೆ ಅನುಗುಣವಾಗಿ ನಿಗದಿಗೊಂಡಿರುವ ಮೊತ್ತವನ್ನು ಪ್ರತಿ ತಿಂಗಳು ಕಟ್ಟಬೇಕಿರುತ್ತದೆ. 18ರಿಂದ 4೦ ವರ್ಷದವರೆಗಿನವರು ಈ ಯೋಜನೆಯಡಿಯಲ್ಲಿ ಹಣ ಪಾವತಿಸಬಹುದಾಗಿದೆ. ರೈತರು, ಕೂಲಿ ಕಾರ್ಮಿಕರು, ಸ್ವಯಂ ಉದ್ಯೋಗಿಗಳು ಹೀಗೆ ವಲಯ ಹಾಗೂ ಲಿಂಗ ಭೇದವಿಲ್ಲದೆ ಯಾರು ಬೇಕಾದರು ಈ ಯೋಜನೆಯ ಲಾಭ ಪಡೆದುಕೊಳ್ಳಬಹುದು.
ಉದಾಹರಣೆಗೆ 18 ವರ್ಷದ ಯುವಕ/ಯುವತಿ 42 ರೂಪಾಯಿಯನ್ನು ಪ್ರತಿ ತಿಂಗಳು ಕಟ್ಟಿದರೆ, ಆ ವ್ಯಕ್ತಿ 6೦ ವರ್ಷ ತುಂಬಿದ ನಂತರ ಪ್ರತಿ ತಿಂಗಳು 5೦೦೦ ರೂಪಾಯಿ ಪಿಂಚಣಿಯನ್ನು ಪಡೆಯಬಹುದು. ಹಾಗೆಯೇ, 4೦ ವರ್ಷದವರು ತಿಂಗಳಿಗೆ 1454 ರೂಪಾಯಿ ಪಾವತಿಸಿದರೆ ಅವರೂ ಸಹ 6೦ ವರ್ಷದ ನಂತರ 5೦೦೦ ರೂಪಾಯಿಯನ್ನು ಪಿಂಚಣಿಯಾಗಿ ಪಡೆಯಬಹುದು. ಪ್ರತಿಯೊಬ್ಬರು ತಮ್ಮ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಮಾಸಿಕ ಪಾವತಿ ಮಾಡಲು ಇಲ್ಲಿ ಅವಕಾಶವಿದೆ. ಹಾಗಾಗಿ ಕಡಿಮೆ ಪ್ರೀಮಿಯಂ ಕಟ್ಟಲು ಸಹ ಅವಕಾಶವಿದೆ. ವೃದ್ಧಾಪ್ಯದಲ್ಲಿ ಆರ್ಥಿಕ ಆಸರೆ ನೀಡಲು ಈ ಯೋಜನೆ ಸಮರ್ಥವಾಗಿದ್ದು, ಈಗಿನ ಯುವ ಪೀಳಿಗೆ ತಮ್ಮ ಅಪ್ಪ-ಅಮ್ಮನ ಹೆಸರಿನಲ್ಲಿಯೂ ಹಣ ಪಾವತಿ ಮಾಡಲು ಅವಕಾಶವಿದೆ.

ಒಟ್ಟಾರೆ, ಅಸಂಘಟಿತ ವಲಯ, ಸ್ವಯಂ ಉದ್ಯೋಗ ಅಥವಾ ವಿದ್ಯಾರ್ಥಿಗಳಾಗಿದ್ದರು ಸಹ ತಮ್ಮ ಕೈಲಾಗುವ ಹಣವನ್ನು ಭವಿಷ್ಯದ ಹಿತದೃಷ್ಟಿಯಿಂದ ಕೂಡಿಡಲು ಇದೊಂದು ಸುವರ್ಣ ಅವಕಾಶವಾಗಿದೆ. ಒಂದು ಯೋಜನೆ ಸಫಲವಾಗುವುದು ಕೇವಲ ಘೋಷಣೆಯಿಂದಲ್ಲ, ಅದರಿಂದ ಸಾರ್ವಜನಿಕರು ಲಾಭ ಪಡೆದುಕೊಂಡಾಗ ಮಾತ್ರ.



