ರಾಜ್ಯ ಕಾಂಗ್ರೆಸ್ ನಲ್ಲಿ ಕುರ್ಚಿ ಬಡಿದಾಟ ಶುರುವಾಗಿದೆ. ಮೇಲ್ನೋಟಕ್ಕೆ ಸಿಎಂ ಡಿಸಿಎಂ ಚೆನ್ನಾಗಿಯೇ ಇದ್ರೂ ಕೂಡ ಅವರವರ ಆಪ್ತರುಗಳ ಶೀತಲ ಸಮರ ಮುಂದುವರೆದಿದೆ. ದಿನಕ್ಕೊಂದು ಹೇಳಿಕೆಗಳನ್ನ ನೀಡೋ ಮೂಲಕ ಚರ್ಚೆಗೆ ಎಡೆ ಮಾಡಿ ಕೊಡ್ತಿದ್ದಾರೆ ಕಾಂಗ್ರೆಸ್ ನಾಯಕರುಗಳು. ಇದು ಕೇವಲ ಕಾಂಗ್ರೆಸ್ ನಾಯಕರುಗಳು ಮಾತ್ರ ಅಲ್ಲ ಜೆಡಿಎಸ್ ನಾಯಕರುಗಳು ಕೂಡ ಸಿಎಂ ಬದಲಾವಣೆ ಬಗ್ಗೆ ಮಾತನಾಡುತ್ತಿದ್ದಾರೆ.
ಹೌದು, ಸದ್ಯ ರಾಜಕೀಯ ಪರಿಸ್ಥಿತಿ ಯಲ್ಲಿ ಸಿಎಂ ಕುರ್ಚಿ ಭದ್ರವೋ ಅಭದ್ರವೋ ಅನ್ನೋದೇ ಕುತೂಹಲ. ಪೂರ್ಣ ಪ್ರಮಾಣದ ಬಹುಮತ ಬಂದರೂ ಕೂಡಾ ಸಿಎಂ ಕುರ್ಚಿ ಅಲುಗಾಡುತ್ತಿದೆ. ಅದು ಸ್ವ ಪಕ್ಷದವರಿಂದಲೇ ಅನ್ನೋದೆ ಹಾಸ್ಯಾಸ್ಪದ. ಶತಾಯ ಗತಾಯ ಸಿಎಂ ಹುದ್ದೆಗೆ ಏರಲೇಬೇಕು ಅಂತ ಪ್ರಯತ್ನ ಮಾಡ್ತಾ ಇರೋ ಡಿಕರ ಶಿವಕುಮಾರ್ ಅವರಿಗೆ ಶಾಸಕ ಬೆಂಬಲ ಎಷ್ಟಿದೆ ಅನ್ನೋದು ಮುಖ್ಯವಾಗುತ್ತಿದೆ. ಶಾಸಕರ ಬೆಂಬಲ ಇಲ್ಲದೆ ಸಿಎಂ ಕನಸು ನನಸಾಗೋದಿಲ್ಲ ಅನ್ನೋದು ಗೊತ್ತಿರುವ ವಿಚಾರವೇ. ಈ ಮಧ್ಯೆ ಜೆಡಿಎಸ್ ಶಾಸಕ ಜಿ ಟಿ ದೇವೇಗೌಡ ಹೇಳಿರೋ ಹೇಳಿಕೆ ಸಾಕಷ್ಟು ಕುತೂಹಲ ಮೂಡಿಸಿದೆ.

ಸದ್ಯ ಜೆಡಿಎಸ್ ನಿಂದ ದೂರವೇ ಉಳಿದಿರೋ ಜಿಟಿ ದೇವೇಗೌಡರು, ಆಗ್ಗಾಗ್ಗೆ ಸಿಎಂ ಸಿದ್ದರಾಮಯ್ಯ ಪರ ಮಾತನಾಡುತ್ತಲೇ ಇರುತ್ತಾರೆ. ಇದು ಕೇವಲ ಅನುದಾನಕ್ಕಾಗಿ ಅಂತ ಹೇಳಲು ಸಾಧ್ಯವೇ ಇಲ್ಲ. ಯಾಕಂದ್ರೆ ಜಿಟಿ ದೇವೇಗೌಡರು ಹಾಗೂ ಸಿದ್ದರಾಮಯ್ಯ ಅವರ ಬಾಂಧವ್ಯ ಮೊದಲಿನಿಂದಲೂ ಚೆನ್ನಾಗಿದೆ. ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣಾ ವೇಳೆಯಲ್ಲೂ ಪಕ್ಷಕ್ಕೆ ಆಹ್ವಾನ ನೀಡಿದ್ದರು ಸಿದ್ದರಾಮಯ್ಯ. ಆದರೆ ಜೆಡಿಎಸ್ ಪಕ್ಷದಲ್ಲೇ ಉಳಿಯುವ ಮಾತನಾಡಿದ್ದರು ಜಿಟಿ ದೇವೇಗೌಡ. ಸದ್ಯ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಪಕ್ಷದ ಸ್ಥಾನ ಮಾನ ವಿಚಾರವಾಗಿ ಪಕ್ಷದಿಂದ ದೂರ ಉಳಿದಿರೋ ಜಿಟಿಡಿ ಈಗ ಸಿದ್ದರಾಮಯ್ಯ ಬೆನ್ನಿಗೆ ನಿಂತಂತಿದೆ.

ಇನ್ನು ನಿತ್ಯದ ಸಿಎಂ ಬದಲಾವಣೆ ಚರ್ಚೆ ವಿಚಾರವಾಗಿ ಇಂದು ಮಾತನಾಡಿರೋ ಜಿಟಿ ದೇವೇಗೌಡರ ಒಂದು ಹೇಳಿಕೆ ಹೊಸ ತಿರುವು ಪಡೆಯುತ್ತಾ ಅನ್ನೋ ಅನುಮಾನ ಮೂಡಿದೆ. ಮುಖ್ಯಮಂತ್ರಿ ಬದಲಾವಣೆ ಎನ್ನುವ ವಿಚಾರವನ್ನು ಕೇಳಿ ಕೇಳಿ ಸಾಕಾಗಿ ಹೋಗಿದೆ. ಮುಖ್ಯಮಂತ್ರಿ ಬದಲಾವಣೆ ಆಗಲು ಶಾಸಕರ ಬಲ ಬೇಡವೇ ಎಂದು ಪ್ರಶ್ನೆ ಮಾಡಿದ್ದಾರೆ. ಬರೀ ಸಿಎಂ ಬದಲಾವಣೆ ಎಂದು ಹೇಳಿಕೆ ನೀಡುತ್ತಿದ್ದರೆ ಆಗುವುದಿಲ್ಲ. ಜನರಿಗೂ ಈ ಮಾತನ್ನು ಕೇಳಿಕೇಳಿ ಬೇಸರವಾಗಿ ಹೋಗಿದೆ. ಮುಖ್ಯಮಂತ್ರಿಯಾಗಲು 10 ಶಾಸಕರ ಬೆಂಬಲವಿದ್ದರೆ ಸಾಲುವುದಿಲ್ಲ ಎಂದು ಪರೋಕ್ಷವಾಗಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಗೆ ತಿವಿದಂತೆ ಕಾಣ್ತಾ ಇದೆ. ಮುಂದುವರೆದು ಮಾತನಾಡಿದ ಅವರು ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ ಅದು ಮುಂದೊಂದು ದಿನ. ಡಿಕೆ ಶಿವಕುಮಾರ್ ಸಿಎಂ ಆಗೋದಕ್ಕೂ ಕೂಡ ಸಿದ್ದರಾಮಯ್ಯ ಬೆಂಬಲ ಬೇಕು ಎಂದಿದ್ದಾರೆ.

ಜಿಟಿ ದೇವೇಗೌಡರ ಮಾತಿನಲ್ಲೂ ಅರ್ಥ ಇದೆ. ಯಾವುದೇ ಒಬ್ಬ ಪ್ರಬಲ ನಾಯಕನಾದರೂ ಸಿಎಂ ಸ್ಥಾನಕ್ಕೆ ಏರಬೇಕು ಎಂದಾದರೆ ಶಾಸಕರ ಬೆಂಬಲ ಅತ್ಯಗತ್ಯ. ಅದು ಡಿಕೆ ಶಿವಕುಮಾರ್ ಅವರಿಗೇನು ಗೊತ್ತಿಲ್ಲ ಅಂತಲ್ಲ. ಹೀಗೆ ಪರಿಸ್ಥಿತಿ ಮುಂದೆ ಆಗಬಹುದು ಅನ್ನೋ ಕಾರಣಕ್ಕೂ ಕೂಡ ಒಂದು ತಂತ್ರವನ್ನ ಡಿಕೆ ಮಾಡಿದ್ದರು ಎನ್ನಲಾಗಿದೆ. ಶಾಸಕರುಗಳ ವಿಶ್ವಾಸ ಪಡೆಯಲು ಇತ್ತೀಚೆಗೆ ಸಭೆಗಳನ್ನು ಮಾಡಿದ್ದರು. ಒಬ್ಬೊಬ್ಬರೇ ಶಾಸಕರನ್ನ ಕರೆದು ನೀವು ನಮ್ಮ ಬೆಂಬಲಕ್ಕೆ ನಿಲ್ಲಿ, ನಿಮಗೆ ಅನುದಾನ ಸೇರಿದಂತೆ ಬೇರೆ ಸಮಯದಲ್ಲಿ ನಾನು ನಿಮ್ಮ ಬೆಂಬಲಕ್ಕೆ ನಿಲ್ತೀನಿ ಅಂತ ಮಾತನಾಡಿದ್ದರು ಎಂದು ಹೇಳಲಾಗಿತ್ತು. ಮುಂದೆ ರಾಜಕೀಯ ಪರಿಸ್ಥಿತಿ ಬದಲಾದರೆ ಅಥವಾ ಹೈ ಕಮಾಂಡ್ ನಿಮ್ಮ ಬಳಿ ಎಷ್ಟು ಜನ ಶಾಸಕರು ಇದ್ದಾರೆ ಅಂತ ಕೇಳಿದಾಗ ಇಷ್ಟು ಜನ ಇದ್ದಾರೆ ಅನ್ನೋದನ್ನ ಹೇಳಬೇಕಾಗುತ್ತದೆ. ಹೀಗಾಗಿ ಈಗಿನಿಂದಲೇ ವೇದಿಕೆ ನಿರ್ಮಾಣ ಮಾಡ್ತಾ ಇದ್ದಾರೆ ಅನ್ನೋ ಚರ್ಚೆ ಇದ್ದೇ ಇದೆ.
ಸದ್ಯ ಈಗ ಜಿಟಿ ದೇವೇಗೌಡರ ಈ ಒಂದು ಹೇಳಿಕೆ ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಸದ್ಯದ ಪರಿಸ್ಥಿತಿಯಲ್ಲಿ ಯಾವ್ಯಾವ ಶಾಸಕ ಯಾವ ನಾಯಕನ ಪರ ಇದ್ದಾರೆ ಅನ್ನೋದು ಮುಖ್ಯವಾಗ್ತಾ ಇದೆ. ಈಗಾಗಲೇ ಬಹುತೇಕ ಶಾಸಕರು ಸಿದ್ದರಾಮಯ್ಯಗೆ ಜೈ ಎನ್ನುತ್ತಿರೋ ಹೊತ್ತಲ್ಲಿ. ಜಿ.ಟಿ.ದೇವೇಗೌಡರ ಹೇಳಿಕೆ ಮಹತ್ವ ಪಡೆದುಕೊಂಡಿದೆ.