ಜೆಡಿಎಸ್ ಪಕ್ಷ ಹಂತಹಂತವಾಗಿ ಅಸ್ತಿತ್ವ ಕಳೆದುಕೊಳ್ತಾ ಇದ್ಯಾ ಅನ್ನೋ ಚರ್ಚೆ ವಿಧಾನಸಭಾ ಚುನಾವಣೆ ಆದಾಗಿನಿಂದಲೂ ಇದೆ. ಕೇವಲ ಎರಡಂಕಿ ಸ್ಥಾನಗಳನ್ನ ತೆಗೆದುಕೊಂಡಿರೋ ಜೆಡಿಎಸ್ ಗೆ ಅಸ್ತಿತ್ವದ ಪ್ರಶ್ನೆ ಎದ್ದಿರೋದಂತು ನಿಜ. ಅದರಲ್ಲೂ ಕುಮಾರಸ್ವಾಮಿ ಕೇಂದ್ರ ಸಚಿವ ಆದ ಬಳಿಕವಂತೂ ರಾಜ್ಯದಲ್ಲಿ ಜೆಡಿಎಸ್ ಪರಿಸ್ಥಿತಿ ತೀರ ಕೆಳಗೆ ಇಳಿದಿದ್ದೂ ಇದೆ.
ಪಕ್ಷ ಸಂಘಟನೆ ಮಾಡಬೇಕು, ಕಾರಯಕರ್ತರನ್ನ ಉಳಿಸಿಕೊಳ್ಳಬೇಕು ಅಂತ ದೇವೇಗೌಡರು ಆಗಿಂದಾಗ್ಲೇ ಅನೇಕ ಸಭೆಗಳನ್ನು ಮಾಡುತ್ತಲೇ ಬರುತ್ತಿದ್ದಾರೆ. ಆದರೂ ಅನೇಕ ಕಾರ್ಯಕರ್ತರು ಕಾಂಗ್ರೆಸ್ ಕಡೆ ಮುಖ ಮಾಡುತ್ತಲೇ ಇದ್ದಾರೆ. ಹೀಗಾಗಿ ಪಕ್ಷವನ್ನ ಸ್ವಂತ ಬಲದ ಮೇಲೆ ತರಬೇಕು ಅಂತ ಈಗ ನಿಖಿಲ್ ಕುಮಾರಸ್ವಾಮಿ ಅಖಾಡಕ್ಕೆ ಇಳಿದಿದ್ದಾರೆ. ದೇವೇಗೌಡರ ಮಾರ್ಗದರ್ಶನದಂತೆ ಪಕ್ಷ ಸಂಘಟನೆಯತ್ತ ಮುಖ ಮಾಡಿದ್ದಾರೆ.

ಆದರೆ ಹೊಸ ವಿಚಾರ ಏನಪ್ಪ ಅಂದ್ರೆ ನಿಖಿಲ್ ಕುಮಾರಸ್ವಾಮಿ ಈಗ ಹೊಸ ಇನ್ನಿಂಗ್ಸ್ ಶುರು ಮಾಡ್ತಿದ್ದಾರೆ ಎನ್ನಲಾಗುತ್ತಿದೆ. ಮೂರು ಬಾರಿ ಸೋತು ಸುಣ್ಣವಾಗಿದ್ದ ನಿಖಿಲ್ ಕುಮಾರಸ್ವಾಮಿ ಹೊಸ ಅಧ್ಯಾಯಕ್ಕೆ ಆಯ್ಕೆ ಮಾಡಿಕೊಂಡ ಕ್ಷೇತ್ರ ಹಾಸನ. ಇದು ಹಾಸ್ಪಾಸ್ಪದ ಅಂದರೂ ಕೂಡ ರಾಜಕೀಯ ಪರಿಸ್ಥಿತಿಯಲ್ಲಿ ಏನು ಬೇಕಾದರೂ ಆಗಬಹುದು. ಹೀಗಾಗಿ ಮುಂದೆ ಇಂತಹದೊಂದು ಪರಿಸ್ಥಿತಿ ಬರಬಹುದು ಎಂದು ಊಹಿಸಲಾಗುತ್ತಿದೆ.
ಕಳೆದ ವಿಧಾನಸಭಾ ಚುನಾವಣೆವರೆಗೂ ಹಾಸನ ಅಂದ್ರೆ ಜೆಡಿಎಸ್ ಜೆಡಿಎಸ್ ಅಂದ್ರೆ ಹಾಸನ ಅನ್ನೋ ಮಾತುಗಳು ಇತ್ತು. ಜೆಡಿಎಸ್ ಭದ್ರಕೋಟೆ ಹಾಸನ ಅನ್ನೋ ಮಾತು ಸಹಜವಾಗಿತ್ತು. ಆದರೆ ಈಗ ಎಲ್ಲವೂ ಬದಲಾಗಿದೆ. ಹಾಸನ ಜೆಡಿಎಸ್ ಕೈ ತಪ್ಪಿದೆ. ಮುಂದಿನ ಚುನಾವಣೆಯಲ್ಲಿ ರೇವಣ್ಣ ಕುಟುಂಬದ ಅಸ್ತಿತ್ವ ಇರುತ್ತಾ ಅನ್ನೋ ಮಾತುಗಳು ಕೇಳಿ ಬರುತ್ತಿವೆ. ಕಾರಣ ಅವರ ಪುತ್ರರು ಮಾಡಿದ್ದ ಮಹಾನ್ ಕಾರ್ಯಗಳು. ಚುನಾವಣಾ ಹೊತ್ತಲ್ಲೇ ಹೊರ ಬಿದ್ದ ಪೆನ್ ಡ್ರೈವ್ ಗಳು ಇಂದಿಗೂ ರೇವಣ್ಣ ತಲೆ ಎತ್ತಿ ಓಡಾಡದಂತೆ ಮಾಡಿವೆ.
ಇದೆಲ್ಲದರ ಬೆನ್ನಲ್ಲೇ ಹೇಗಾದರೂ ಹಾಸನ ಉಳಿಸಿಕೊಳ್ಳಬೇಕು ಅಂತ ದೇವೇಗೌಡರು ಹೊಸ ಲೆಕ್ಕಾಚಾರ ಹಾಕಿದ್ದಾರೆ. ನಿಖಿಲ್ ಕುಮಾರಸ್ವಾಮಿರನ್ನ ಈಗಿನಿಂದಲೇ ತಯಾರಿ ಮಾಡ್ತಾ ಇದ್ದಾರೆ. ನಿಖಿಲ್ ಕುಮಾರಸ್ವಾಮಯ ಮುಂದಿನ ರಾಜಕೀಯ ಜರ್ನಿ ಹಾಸನದಿಂದ ಪ್ರಾರಂಭ ಆಗಬೇಕು ಅಂತ ವೇದಿಕೆ ಸಿದ್ದ ಮಾಡ್ತಾ ಇದ್ದಾರೆ ಎಂದು ಹೇಳಲಾಗುತ್ತಿದೆ. ಅದಕ್ಕೆ ಪುಷ್ಟಿ ನೀಡುವಂತೆ ಇತ್ತೀಚೆಗೆ ಹಾಸನ ಭಾಗದಲ್ಲಿ ನಿಖಿಲ್ ಕುಮಾರಸ್ವಾಮಿ ಸಭೆಗಳ ಮೇಲೆ ಸಭೆ ನಡೆಸುತ್ತಿದ್ದಾರೆ.
ಹೌದು, ಇತ್ತೀಚೆಗಷ್ಟೆ ಹಾಸನದಲ್ಲಿ ಚಿಕ್ಕಮಗಳೂರು, ಹಾಸನ ಸೇರಿ ಆ ಭಾಗದ ಜೆಡಿಎಸ್ ಮುಖಂಡರ ಸಭೆ ಮಾಡಿದ್ದರು ನಿಖಿಲ್ ಕುಮಾರಸ್ವಾಮಿ, ರಾಜ್ಯ ಸರ್ಕಾರದ ವೈಫಲ್ಯ, ಜೆಡಿಎಸ್ ಪಕ್ಷದ ಸಂಘಟನೆಯ ಕುರಿತು ಸಭೆಯಲ್ಲಿ ಮಾತನಾಡಿದ್ದರು ಎನ್ನಲಾಗಿದೆ. ಮುಂಬರುವ ದಿನಗಳಲ್ಲಿ ಹಾಸನ ಭಾಗದಲ್ಲಿ ಯಾವ ರೀತಿ ಕಾರ್ಯಕ್ರಮಗಳು ಆಗಬೇಕು ಎಂಬಿತ್ಯಾದಿ ಬಗ್ಗೆ ಸುದೀರ್ಘ ಚರ್ಚೆ ಮಾಡಿದ್ದರು ಎನ್ನಲಾಗಿದೆ.

ಇದೆಲ್ಲವೂ ಕೂಡ ನಿಖಿಲ್ ಮುಂದಿನ ರಾಜಕೀಯ ಹಾಸನದಿಂದ ಅಂತ ಹೇಳೋದಕ್ಕೆ ಸಾಕ್ಷಿ ನುಡಿದಂತಿದೆ. ಹಾಸನಕ್ಕೆ ಶಿಪ್ಟ್ ಆಗ್ತಾರಾ ನಿಖಿಲ್ ಅನ್ನೋ ಪ್ರಶ್ನೆಗೆ ಉತ್ತರಿಸಿದಂತಿದೆ. ದೇವೇಗೌಡರ ತವರು ಹಾಸನ. ಸದ್ಯ ರೇವಣ್ಣ ಪುತ್ರರು ಮಾಡಿರೋ ಕೆಲಸಕ್ಕೆ ಒಂದಿಷ್ಟು ಕಾರ್ಯಕರ್ತರು ಅವರ ವಿರುದ್ಧ ಇರೋದೇನೋ ನಿಜ. ಆದರೆ ದೇವೇಗೌಡರ ಮೇಲಿನ ಗೌರವ ಹಾಗೆಯೇ ಇದೆ. ಇದನ್ನ ಮತ್ತೆ ಪುಟಿದೆಬ್ಬಿಸಿ ಜೆಡಿಎಸ್ ಅಸ್ತಿತ್ವ ಉಳಿಸಲು ಪರ್ಯಾಯ ಮಾರ್ಗ ಎಂದರೆ ಅದು ನಿಖಿಲ್ ಕುಮಾರಸ್ವಾಮಿ ಎಂಬ ನಿಲುವಿಗೆ ದೇವೇಗೌಡರು ಬಂದಂತಿದೆ. ಹೀಗಾಗಿಯೇ ಅಲ್ಲಿಂದ ಮತ್ತೆ ನಿಖಿಲ್ ಕುಮಾರಸ್ವಾಮಿಗೆ ರಾಜಕೀಯ ಹುಟ್ಟು ಕೊಡಬೇಕು ಅಂತ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಒಂದು ಕಡೆ ಮೂರು ಬಾರಿ ಸೋತಿರುವ ನಿಖಿಲ್ ಗೆ ಸೋತ ಕ್ಷೇತ್ರಗಳಿಗೆ ಹೋಗಿ ಸ್ಪರ್ಧೆ ಮಾಡೋದು ಸುಲಭವಲ್ಲ, ಇತ್ತ ಹಾಸನ ಉಳಿಸಿಕೊಳ್ಳಲು ಅವರ ಕುಟುಂಬದವರೇ ಸ್ಪರ್ಧೆ ಮಾಡಬೇಕು. ಹೀಗಾಗಿ ನಿಖಿಲ್ ಸರಿಯಾದ ಆಯ್ಕೆ ಅಂತ ಡಿಸೈಡ್ ಮಾಡಿದಂತಿದೆ.
ಸದ್ಯ ನಿಖಿಲ್ ಕುಮಾರಸ್ವಾಮಿಗೆ ಪಕ್ಷದ ರಾಜ್ಯಾಧ್ಯಕ್ಷ ಪಟ್ಟ ಕಟ್ಟೋಕು ಮುಂದಾಗಿದ್ದರು ದೇವೇಗೌಡರು. ಆದರೆ ಒಂದಿಷ್ಟು ವಿರೋಧ ಕೇಳಿ ಬಂದಿದ್ದರಿಂದ ತಡೆಯಾಗಿತ್ತು. ಆದರೆ ಈಗ ಪಕ್ಷ ಸಂಘಟನೆಯಲ್ಲಿ ತೊಡಗಿಸೋ ಮೂಲಕ ಆ ಹಾದಿ ಸುಲಭ ಮಾಡಬಹುದು ಅನ್ನೋದು ಮತ್ತೊಂದು ಲೆಕ್ಕಾಚಾರ. ಇದರ ಜೊತೆಗೆ ಮುಂದಿನ ರಾಜಕೀಯ ಭವಿಷ್ಯ ಕೂಡ ಮುಖ್ಯ ಆಗಿರೋದ್ರಿಂದ ಹಾಸನದಲ್ಲೇ ನೆಲೆಯೂರಿಸೋಕೆ ಈಗಿನಿಂದಲೇ ಬುನಾದಿ ಹಾಕಿದ್ದಾರೆ ಎನ್ನಲಾಗಿದೆ.

ಹಾಗಾದ್ರೆ ನಿಜಕ್ಕೂ ಅಷ್ಟು ಸುಲಭ ಇದ್ಯಾ ನಿಖಿಲ್ ಹಾಸನ ಜರ್ನಿ ಅಂತ ನೋಡೋದಾದ್ರೆ, ಅದೂ ಸುಲಭಕ್ಕಿಲ್ಲ. ಯಾಕಂದ್ರೆ ರೇವಣ್ಣ ಕುಟುಂಬದಿಂದ ಆದ ದೊಡ್ಡ ಡ್ಯಾಮೇಜ್ ಅಲ್ಲಿ ಜೆಡಿಎಸ್ ಗೆ ಹೊಡೆತ ಕೊಡುತ್ತಲೇ ಇದೆ. ಯಾಕಂದ್ರೆ ಮುಂಬರುವ ಚುನಾವಣೆಗಳಲ್ಲಿ ಏನಾದ್ರೂ ವಿಷ್ಯ ತೆಗೆದುಕೊಂಡು ಹೋಗುತ್ತೆ ಕಾಂಗ್ರೆಸ್ ಅಂದ್ರೆ ಅದು ಪೆನ್ ಡ್ರೈವ್ ವಿಚಾರ. ಹೀಗಾಗಿ ನಿಖಿಲ್ ಗೆ ಯಾವುದೇ ಕಪ್ಪು ಚುಕ್ಕೆ ಇಲ್ಲ ಅಂದರೂ ಈ ಪರನ್ ಡ್ರೈವ್ ಡ್ಯಾಮೇಜ್ ಎಫೆಕ್ಟ್ ಆಗೇ ಆಗುತ್ತದೆ.
ಒದರ ಜೊತೆಗೆ ಪ್ರೀತಂ ಗೌಡ ಅನ್ನೋ ಒಳ ಏಟು. ಮೊದಲೇ ಮೈತ್ರಿ ಇದ್ದಾಗಲೂ ಕೂಡ ಕುಮಾರಸ್ವಾಮಿ ವಿರುದ್ಧ ಕಿಡಿ ಕಾರುತ್ತಿದ್ದ ಪ್ರೀತಂ ಗೌಡ, ಮುಂದೆ ಚುನಾವಣೆ ಸಮಯದಲ್ಲಿ ಎಡವಟ್ಟು ಮಾಡಲ್ಲ ಅಂತೇನಿಲ್ಲ. ಯಾಕಂದ್ರೆ ಲೋಕಸಭಾ ಚುನಾವಣೆಯಲ್ಲೇ ಪ್ರಜ್ವಲ್ ರೇವಣ್ಣ ವಿರುದ್ಧ ಕೆಲಸ ಮಾಡಿ, ಶ್ರೇಯಸ್ ಪಟೇಲ್ ಗೆಲುವಿಗೆ ಕಾರಣವಾಗಿದ್ದರು ಎಂಬುದು ಅಲ್ಲಿನ ಜನರ ಮಾತು. ಹೀಗಾಗಿ ಇದು ಕೂಡ ನಿಖಿಲ್ ಗೆ ಎಫೆಕ್ಟ್ ಆಗಬಹುದು.
ಹೀಗಾಗಿ ಹಾನಸದಿಂದ ಮತ್ತೆ ರಾಜಕೀಯ ಶುರು ಮಾಡುವ ನಿಖಿಲ್ ಹಾದಿ ಅಷ್ಟು ಸುಲಭದಲ್ಲ. ಹಾಗಂತ ದೇವೇಗೌಡರು ಒಂದಿಷ್ಟು ತಂತ್ರ ಮಾಡದೇಯೂ ಇರೋದಿಲ್ಲ. ಇದೆಲ್ಲದರ ಮಧ್ಯೆ ನಿಖಿಲ್ ಹಾಸನಕ್ಕೆ ಹೋಗ್ತಾರೆ ಅಂದ್ರೆ ರೇವಣ್ಣ ಕುಟುಂಬ ಸುಮ್ಮನಿರುತ್ತಾ ಅನ್ನೋದೆ ಮುಂದಿನ ಪ್ರಶ್ನೆ.