ರಾಜ್ಯ ರಾಜಕೀಯದಲ್ಲಿ ಏನೋ ನಡೀತಾ ಇದೆ ಅನ್ನೋ ಚರ್ಚೆಯಂತೂ ತೆರೆ ಮರೆಯಲ್ಲಿ ನಡೀತಾ ಇದೆ. ಅದು ಬಿಜೆಪಿ ಕಾಂಗ್ರೆಸ್ ಅಂತಲ್ಲ. ಮೂರು ಪಕ್ಷಗಳಿಂದಲೂ ಆಗ್ತಾ ಇದೆ. ಸಿದ್ದರಾಮಯ್ಯರನ್ನ ಕೆಳಗಿಸಿಸೋ ವಿಚಾರ ಆಗಿರಬಹುದು ಅಥವಾ ಇಡೀ ಸರ್ಕಾರವನೇ ಕೆಡವೋ ವಿಚಾರವೂ ಆಗಿರಬಹುದು. ಇಂತಹದೊಂದು ಡೆವಲ್ಪಮೆಂಟ್ ಅಂತೂ ರಾಜ್ಯ ರಾಜಕೀಯದಲ್ಲಿ ನಡಿತಾ ಇದೆ ಅನ್ನೋ ಗುಮಾನಿ ಇದ್ದೇ ಇದೆ. ಅದಕ್ಕೆ ಪೂರಕವಾಗುವಂತೆ ಒಬ್ಬೊಬ್ಬ ನಾಯಕ ಒಂದೊಂದು ಸ್ಟೇಟ್ ಮೆಂಟ್ ಮಾಡ್ತಾ ಇದ್ದಾರೆ. ಇತ್ತ ಡಿಕೆಶಿ ಸಿಎಂ ಆಗಲಿ ಅನ್ನೋವ್ರು ಒಂದಿಷ್ಟು ಜನವಾದ್ರೆ, ಮತ್ತೊಂದಿಷ್ಟು ಜನ ಸಿಎಂ ಸಿದ್ದರಾಮಯ್ಯ ಕುರ್ಚಿ ಉಳಿಸಲು ಪ್ರಯತ್ನ ಮಾಡ್ತಾ ಇದ್ದಾರೆ. ಮತ್ತೊಂದಿಷ್ಟು ಜನ ರಾಜ್ಯ ರಾಜಕೀಯಲ್ಲಿ ಬಿರುಸಿನ ಬೆಳವಣಿಗೆಯೊಂದು ಆಗಲಿದೆ ಅನ್ನೋ ಮಾತುಗಳನ್ನೂ ಹೇಳುತ್ತಿದ್ದಾರೆ.
ಹೌದು, ರಾಜ್ಯ ರಾಜಕೀಯದಲ್ಲಿ ಏನು ಬೇಕಾದ್ರೂ ರಾತ್ರೋ ರಾತ್ರಿ ನಡೆಯಬಹುದು. ಅದಕ್ಕೆ ಸಾಕಷ್ಟು ಉದಾಹರಣೆಗಳು ಇವೆ. ಇದ್ದ ಪಕ್ಷದಿಂದ ಬೇರೆ ಪಕ್ಷಕ್ಕೆ ಶಾಸಕರು ರಾತ್ರೋ ರಾತ್ರಿ ಹೋದ ಪರಿಸ್ಥಿತಿಗಳೂ ನಮ್ಮ ಮುಂದೆ ಇದ್ದಾವೆ. ಇದೀಗ ಸಿದ್ದರಾಮಯ್ಯ ಸರ್ಕಾರ ಉರುಳೀಸೋಕೋ ಅಥವಾ ಸಿಎಂ ಬದಲಾವಣೆ ಮಾಡೋಕೋ ಅಂತಹದೊಂದು ವೇದಿಕೆ ಸಿದ್ದ ಆಗ್ತಾ ಇದೆ ಅನ್ನೋ ವಾಸನೆ ಹಲವರ ಮೂಗಿಗೆ ಬಡಿದಿದೆ. ಇದರ ಮಧ್ಯೆ ಆಗಿಂದಾಗ್ಲೇ ಡಿನ್ನರ್ ಮೀಟಿಂಗ್ ಗಳು ಮುಂದುವರೆದಿವೆ. ಇಷ್ಟು ದಿನ ಆಯಾಯ ಪಕ್ಷದ ನಾಯಕರುಗಳೂ ಮಾತ್ರ ಸಭೆಗಳನ್ನು ಮಾಡ್ತಾ ಇದ್ರು. ಆದ ರೆ ಈಗ ಮೂರು ಪಕ್ಷದವರು ಊಟಕ್ಕೆ ಸೇರುತ್ತಿರೋದು ಹಲವು ಕುತೂಹಲಗಳಿಗೆ ಕಾರಣವಾಗಿದೆ.
ಹೌದು, ರಾಜ್ಯರಾಜಕಾರಣದಲ್ಲಿ ದಿನಕ್ಕೊಂದು ಬೆಳವಣಿಗೆ ಎಂಬಂತೆ ಆಗ್ತಾ ಇದೆ. ಮತ್ತೆ ಸದ್ದು ಮಾಡಿದೆ ಡಿನ್ನರ್ ಪಾಲಿಟಿಕ್ಸ್. ಊಟದ ನೆಪದಲ್ಲಿ ರಾಜಕೀಯ ನಾಯಕರು ರಾಜಕೀಯ ಪಥ ಬದಲಾವಣೆಯ ಬಗ್ಗೆ ಚರ್ಚೆ ಮಾಡಿದ್ದಾರೆ ಎನ್ನಲಾಗಿದೆ. ಪ್ರತಿ ಬಾರಿಯಂತ ಡಿನ್ನರ್ ಮೀಟಿಂಗ್ ಇದಲ್ಲ ಅನ್ನೋದೆ ಕುತೂಹಲಕ್ಕೆ ಕಾರಣವಾಗಿರೋ ವಿಚಾರ. ಮೂರು ಪಕ್ಷದ ಹಿರಿಯ ನಾಯಕರು ನಿಬ್ಬೆರಗಾಗೋ ರೀತಿಯಲ್ಲಿ ಈ ಡಿನ್ನರ್ ಮೀಟಿಂಗ್ ನಡೆದಿದೆಯಂತೆ. ಅಂದ್ರೆ ಇದು ಸಚಿವ ಸ್ಥಾನಕ್ಕೋ ಅಥವಾ ಅಧಿಕಾರಕ್ಕೋ ನಡೆದ ಸಚಿವರ ಮೀಟಿಂಗ್ ಅಲ್ಲ ಅನ್ನೋದಂತೂ ಕನ್ಫರ್ಮ್. ಯಾಕಂದ್ರೆ ಸೇರಿದ ಎಲ್ಲರೂ ಕೂಡ ಹಿರಿಯ ನಾಯಕರಲ್ಲ. ಮೊದಲ ಬಾರಿ ಶಾಸಕರಾದವರು.

ಎಸ್ ನಾವೆಲ್ಲಾ ಸಚಿವರೋ ಹಿರಿಯ ನಾಯಕರೋ ಸಭೆ ಸೇರಿದ್ದಾರೆ ಅಂದುಕೊಂಡಿದ್ವಿ. ಆದರೆ ಸಭೆ ಸೇರಿದ್ದು ಮೊದಲ ಬಾರಿ ಶಾಸಕರಾದವರು. ನಿನ್ನೆ ರಾತ್ರಿ ಖಾಸಗಿ ಹೋಟೆಲ್ ನಲ್ಲಿ ಮೊದಲ ಬಾರಿ ಗೆದ್ದ ಶಾಸಕರು ಸಭೆ ನಡೆಸಿದ್ದಾರೆ. ಊಟಕ್ಕೆಂಧು ಸೇರಿದ್ದ ೫೬ಕ್ಕೂ ಹೆಚ್ಚು ಶಾಸಕರು ರಾಜಕೀಯ ಚದುರಂಗದಾಟದ ಮುಂದಿನ ದಿನಗಳ ಬಗ್ಗೆ ಮಾತನಾಡಿದ್ದಾರೆ ಎನ್ನಲಾಗಿದೆ. ಇಲ್ಲಿ ಬಿಜೆಪಿ-ಜೆಡಿಎಸ್-ಕಾಂಗ್ರೆಸ್ ಮೂರು ಪಕ್ಷದವರೂ ಇದ್ದರು ಎನ್ನಲಾಗಿದೆ. ಈ ಬಗ್ಗೆ ಶಾಸಕರುಗಳು ಹೇಳ್ತಾ ಇರೋ ಮಾತು ಒಂದೇ. ಸದನ ನಡೆಯುತ್ತಿದೆ. ಎಲ್ಲರೂ ಒಟ್ಟಾಗಿ ಇದ್ವಿ ಹಾಗಾಗಿ ಊಟಕ್ಕೆ ಸೇರಿದ್ದೆವೆ ಅಂತ. ಅದೆಷ್ಟರ ಮಟ್ಟಿಗೆ ನಿಜವೋ ಗೊತ್ತಿಲ್ಲ. ಆದರೆ ಈ ಹೊಸ ಶಾಸಕರು ಸಭೆ ಸೇರಿರೋದಕ್ಕೆ ಹಿರಿಯರು ತಳೆಯಲ್ಲಿ ಉಳ ಬಿಟ್ಟುಕೊಂಡಿರೋದಂತೂ ಸತ್ಯ.
ಇನ್ನು ಶಾಸಕರ ಜೊತೆ ಸಿದ್ದರಾಮಯ್ಯ ಅವರ ಆಪ್ತ ಸಚಿವರೊಬ್ಬರೂ ಊಟಕ್ಕೆ ಹೋಗಿದ್ದರು ಎನ್ನಲಾಗಿದೆ. ಆ ಸಚಿವರು ಸಿಎಂ ಗೆ ಅತ್ಯಾಪ್ತರು ಅಂತಲೂ ಹೇಳುತ್ತಿದ್ದಾರೆ. ಕೇವಲ ಕಾಂಗ್ರೆಸ್ ಶಾಸಕರು ಮಾತ್ರ ಇದ್ದ ಡಿನ್ನರ್ ಮೀಟಿಂಗ್ ಇದಾಗಿದ್ದು, ಆ ಸಚಿವ ಅಲ್ಲಿ ಇದ್ದಿದ್ದರೆ ಅಷ್ಟಾಗಿ ಯಾರೂ ತಲೆ ಕೆಡಿಸಿಕೊಳ್ತಾ ಇರಲಿಲ್ಲ. ಆದರೆ ಕಮಲ-ದಳದ ಶಾಸಕರು ಇದ್ದ ಸ್ಥಳದಲ್ಲಿ ಇವರೂ ಊಟಕ್ಕೆ ಹೋಗಿರೋದು ಸಹಜವಾಗಿಯೇ ಕುತೂಹಲದ ಜೊತೆಗೆ ಚರ್ಚೆಗೂ ಗ್ರಾಸವಾಗಿದೆ. ಆ ಸಚಿವ ಈ ಹೊಸ ಶಾಸಕರ ಜೊತೆ ಹೋಗಿದ್ದು ಔತಣಕೂಟದಲ್ಲಿ ಭಾಗಿಯಾಗಿರೋದು ಯಾಕೆ ಅನ್ನೋ ಪ್ರಶ್ನೆ ಕೂಡ ಮೂಡಿದೆ. ಈ ಸಭೆಯಲ್ಲಿ ಲಿಂಗಾಯತ ಹಾಗೂ ಒಕ್ಕಲಿಗ ಶಾಸಕರು ಹೆಚ್ಚಾಗಿದ್ದರು ಅನ್ನೋದು ಮತ್ತೊಂದು ಅಂಶ.
ಶರಣಗೌಡ ಕಂದಕೂರ್, ಶಿವಗಂಗಾ ಬಸವರಾಜ್, ಸೇರಿದಂತೆ ಹಲವು ಹೊಸ ಶಾಸಕರು ಭಾಗಿಯಾಗಿದ್ದಾರೆ ಎನ್ನಲಾಗಿದೆ. ಇತ್ತ ಈ ಸಭೆಯಲ್ಲಿ ಭಾಗಿಯಾದ ಸಚಿವ ಸಂತೋಷ್ ಲಾಡ್ ಅಂತಲೂ ಹೇಳಲಾಗುತ್ತಿದೆ. ಆದರೆ ಯಾವುದೂ ಸ್ಪಷ್ಟತೆ ಇಲ್ಲ. ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಸಿಎಂ ಬದಲಾವಣೆ ಸದ್ದು ಜೋರಾಗಿದೆ. ಇತ್ತ ಡಿಕೆ ಶಿವಕುಮಾರ್ ಕೂಡ ಶಾಸಕರೊಟ್ಟಿಗೆ ಒನ್ ಟು ಒನ್ ಮಾತುಕತೆ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ. ಈ ಮಧ್ಯೆ ಈ ಡಿನ್ನರ್ ಮೀಟಿಂಗ್ ನಡೆದಿರೋದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಸಿಎಂ ಆಪ್ತ ಸಚಿವರೇನಾದ್ರೂ ಶಾಸಕರನ್ನ ಹಿಡಿದಿಟ್ಟುಕೊಳ್ಳುವ ಸಾಹಸಕ್ಕೆ ಕೈ ಹಾಕಿದ್ರಾ ಅನ್ನೋದು ಕೂಡ ಸದ್ಯದ ಪ್ರಶ್ನೆ. ಯಾವುದೇ ಡಿನ್ನರ್ ಮೀಟಿಂಗ್ ನ ಅಷ್ಟು ಸುಲಭಕ್ಕೆ ತೆಗೆದುಕೊಳ್ಳುವಂತಿಲ್ಲ. ಹೀಗಾಗಿ ಈ ಸಭೆಯ ಉದ್ದೇಶವನ್ನ ಅಲ್ಲಿ ಸೇರಿದ್ದ ಶಾಸಕರೇ ಬಹಿರಂಗಪಡಿಸಬೇಕು.