ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿರುವ ಸೆಲೆಬ್ರಿಟಿಗಳಲ್ಲಿ ನಟ ಜಗ್ಗೇಶ್ ಕೂಡ ಪ್ರಮುಖರು. ಸಿನಿಮಾ ಮಾತ್ರವಲ್ಲದೆ ಹಲವು ವಿಚಾರಗಳನ್ನು ಹಂಚಿಕೊಳ್ಳುವ ಅವರು ಸದಾ ಕಾಲ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿ ಇರುತ್ತಾರೆ. ಜಗ್ಗೇಶ್ ಈಗ ಎಸ್ಎಸ್ಎಲ್ಸಿ (SSLC) ಅಂಕಪಟ್ಟಿಯನ್ನು ಹಂಚಿಕೊಂಡಿದ್ದಾರೆ. ತಮ್ಮ ಎಸ್ಎಸ್ಎಲ್ಸಿ ದಿನಗಳನ್ನು ಟ್ವಿಟರ್ ಮೂಲಕ ನಟ ಮತ್ತೊಮ್ಮೆ ನೆನಪಿಸಿಕೊಂಡಿದ್ದಾರೆ. ಅವರಿಗೆ ಕಡಿಮೆ ಅಂಕ ಬಂದಾಗ ತಂದೆಯ ಬೂಟಿನ ರುಚಿ, ಅಮಾನದಲ್ಲಿ ಆತ್ಮಹತ್ಯೆಗೆ ಯತ್ನಸಿದ್ದನ್ನೂ ನೆನಪಿಸಿಕೊಂಡಿದ್ದಾರೆ. 1979ರಲ್ಲಿ ಜಗ್ಗೇಶ್ ಎಸ್ಎಸ್ಎಲ್ಸಿ ಪರೀಕ್ಷೆ ಬರೆದಿದ್ದು, ಎರಡನೇ ದರ್ಜೆಯಲ್ಲಿ ಪಾಸ್ ಆಗಿದ್ದಾರೆ. ಜಗ್ಗೇಶ್ ಅಷ್ಟೇನೂ ಸ್ಮಾರ್ಟ್ ಸ್ಟೂಡೆಂಟ್ ಅಲ್ಲ. ಅವರು 10ನೇ ತರಗತಿ ಪರೀಕ್ಷೆಯಲ್ಲಿ 600ಕ್ಕೆ 342 ಅಂಕ ಪಡೆದುಕೊಂಡಿದ್ದರು ಅಷ್ಟೆ. ಕನ್ನಡದಲ್ಲಿ 150ಕ್ಕೆ ಅವರು 101 ಅಂಕ ಪಡೆದರೆ, ಇಂಗ್ಲಿಷ್ನಲ್ಲಿ 100ಕ್ಕೆ 54, ಹಿಂದಿಯಲ್ಲಿ 50ಕ್ಕೆ 20, ಗಣಿತದಲ್ಲಿ 100ಕ್ಕೆ 57, ವಿಜ್ಞಾನದಲ್ಲಿ 100ಕ್ಕೆ 52 ಹಾಗೂ ಸಮಾಜ ವಿಜ್ಞಾನದಲ್ಲಿ 100ಕ್ಕೆ 58 ಮಾರ್ಕ್ಸ್ ಪಡೆದಿದ್ದರು.
ಇಂದಿನ ಜಗ್ಗೇಶ ಶಾಲೆಯ ಈಶ್ವರ. ಭಾಷಾಭಿಮಾನ ಬಾಲ್ಯದಿಂದ ಬಂದಾಗ ಮಾತ್ರ ಅವನು ಸಾಯುವವರೆಗೆ ಕನ್ನಡ ಹೃದಯಬಡಿತದ ಜೊತೆಯಲ್ಲೇ ಉಳಿಯುತ್ತದೆ’ ಎಂದು ಅವರು ಬರಹ ಆರಂಭಿಸಿದ್ದಾರೆ. ‘ಈ ಅಂಕಕ್ಕೆ ಅಪ್ಪ ನಡುರೋಡಲ್ಲಿ ಬೂಟಿನಲ್ಲಿ ಹೊಡೆದಿದ್ದರು. ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದೆ. ಒಂದುವೇಳೆ ಹೋಗಿದ್ದರೆ ಇಂದು ಜಗ್ಗೇಶ ಸತ್ತವರಲ್ಲಿ ಒಬ್ಬ. ಮಕ್ಕಳನ್ನು ತಂದೆ ತಾಯಿ ಹುರಿದುಂಬಿಸಿ. ಸಾಧಕ ಹುಟ್ಟುತ್ತಾನೆ’ ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.
ತಂದೆತಾಯಿ ಮಕ್ಕಳನ್ನ ಬರಿ ಓದಿನ ಯಂತ್ರವಾಗಿ ಬೆಳೆಸದೆ ಜಗದ ಪಾಠ ಕಲಿಸುವ ಯತ್ನಮಾಡಿ. ಓದಿದ ಮಕ್ಕಳು ಸರ್ಕಸ್ ಸಿಂಹದಂತೆ. ಓದಿನ ಜೊತೆಗೆ ಜಗದ ಪಾಠ ಕಲಿತವರು ಬೇಟೆಯಾಡುವ ಕಾಡಿನ ಸಿಂಹದಂತೆ. ಇಂದಿನ ಜಗತ್ತಿಗೆ ಮಕ್ಕಳು ಬೇಟೆಯಾಡುವ ಸಿಂಹದಂತೆ ಬಾಳಬೇಕು. ಕಾರಣ ಜಗ ಕಾಡಿನಂತೆ ಆಗಿದೆ, ಮನುಷ್ಯ ಬೇಟೆಯಾಡುವ ಪ್ರಾಣಿಯಂತೆ. ಈ ಸಮಯದಲ್ಲಿ ಮಕ್ಕಳು ಕಾಡಿನ ಸಿಂಹವಾದರೆ, ಕೆಣಕುವವರು ದೂರ ಉಳಿಯುತ್ತಾರೆ. ಎಸ್ಸೆಸ್ಸೆಲ್ಸಿ ಫಲಿತಾಂಶ ಏನೇ ಬರಲಿ ನಿಮ್ಮ ಮಕ್ಕಳನ್ನು ಸಿಂಹದಂತೆ ಸಾಕಿ. ಮಿಕ್ಕಂತೆ ಜಗತ್ತೇ ಮನುಜನಿಗೆ ಜೀವನಪಾಠ ಕಲಿಸುತ್ತದೆ’ ಎಂದಿದ್ದಾರೆ ಜಗ್ಗೇಶ್.