ಕಳೆದ ಶುಕ್ರವಾರ ಭಾರತೀಯರೆಲ್ಲ ಹೆಮ್ಮೆ ಪಡುವಂತಹಾ ಕ್ಷಣವೊಂದು ನಿರ್ಮಾಣವಾಗಿತ್ತು. ಭಾರತೀಯ ವಿಜ್ಞಾನಿಗಳು ತಯಾರಿಸಿದ ಚಂದ್ರಯಾನ-3 ಯೋಜನೆ ನೇರವಾಗಿ ಚಂದ್ರ ಅಂಗಳದತ್ತ ಇಸ್ರೋ ಉಡಾಯಿಸಿತ್ತು.ಇಡೀ ದೇಶವೇ ಇದನ್ನು ಕಂಡು ಬೆರಗಾಗಿತ್ತು. ಆದರೆ ಇದೀಗ ಆಸ್ಟ್ರೇಲಿಯಾದ ಪಶ್ಚಿಮ ಭಾಗದ ಗ್ರೀನ್ ಹೆಡ್ ಕರಾವಳಿ ಪ್ರದೇಶದಲ್ಲಿ ನಿಗೂಢ ವಸ್ತುವೊಂದು ಪತ್ತೆಯಾಗಿದ್ದು, ಇದು ಚಂದ್ರಯಾನ-3ಕ್ಕೆ ಸಂಬಂಧಪಟ್ಟ ವಸ್ತು ಎಂದು ವಿಜ್ಞಾನಿಗಳ ವಲಯ ಅನುಮಾನ ವ್ಯಕ್ತಪಡಿಸಿದೆ.

ಚಂದ್ರಯಾನ-3 ಮಿಷನ್ ಅನ್ನು ಭಾರತದ ಅತ್ಯಂತ ಭಾರವಾದ ರಾಕೆಟ್, ಲಾಂಚ್ ವೆಹಿಕಲ್ ಮಾರ್ಕ್-III ಅನ್ನು ಇತ್ತೀಚೆಗೆ ಉಡಾಯಿಸಲಾಗಿದೆ. ರಾಕೆಟ್ ಉಡಾವಣೆಯಾದ ಬಳಿಕ ಅದು ರಾತ್ರಿಯ ವೇಳೆ ಆಸ್ಟ್ರೇಲಿಯಾದ ಆಕಾಶದಲ್ಲೂ ಪ್ರಕಾಶಮಾನವಾಗಿ ಕಂಡುಬಂದಿದ್ದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಇದೀಗ, ಆಸ್ಟ್ರೇಲಿಯಾದ ಸಮುದ್ರ ತೀರದಲ್ಲಿ ಪತ್ತೆಯಾಗಿರುವ ನಿಗೂಢ ವಸ್ತು ವಿಜ್ಞಾನಿಗಳಲ್ಲಿ ಅನುಮಾನ ಹುಟ್ಟಿಸಿದೆ.
ಇದು ಚಂದ್ರಯಾನ-3ಕ್ಕೆ ಸಂಬಂಧಪಟ್ಟ ವಸ್ತು ಎಂಬ ವಾದಗಳು ಕೇಳಿಬರುತ್ತಿವೆ. ರಾಕೆಟ್ ಉಡಾವಣೆಯಾದ ಬಳಿಕ ಅದರಿಂದ ಕಳಚಿಕೊಂಡ ಎಲ್ವಿಎಂ-3ರ ಹಂತಗಳಲ್ಲಿ ಒಂದಾಗಿರಬಹುದು ಎನ್ನಲಾಗಿದೆ. ಬಲ್ಲ ಮೂಲಗಳ ಪ್ರಕಾರ ಈ ನಿಗೂಢ ವಸ್ತು 2 ಮೀ. ಎತ್ತರ ಮತ್ತು ಸುಮಾರು 2 ಮೀ. ಅಗಲವಿದೆ. ಇದು ರಾಕೆಟ್ನ ಮೂರನೇ ಹಂತ ಎಂಬುದು ಕೆಲವರ ವಾದ. ಜನರ ಸುರಕ್ಷತೆಗೋಸ್ಕರ ರಾಕೆಟ್ನ ಬಿಡಿ ಭಾಗಗಳನ್ನು ಭೂಮಿಯ ಮೇಲೆ ಎಸೆಯದೇ ಸಮುದ್ರದಲ್ಲಿ ಕಳಚಿಕೊಳ್ಳುವಂತೆ ಮಾಡಲಾಗುತ್ತದೆ ಎನ್ನಲಾಗಿದೆ. ಈ ಬಗ್ಗೆ ಭಾರತ ಅಥವಾ ಆಸ್ಟ್ರೇಲಿಯಾದ ಬಾಹ್ಯಾಕಾಶ ವಿಜ್ಞಾನಿಗಳು ಯಾವುದೇ ಸ್ಪಷ್ಟತೆ ನೀಡಿಲ್ಲ.