ವಾರಣಾಸಿಯ ಸ್ಮಶಾನದಲ್ಲಿ ಆಚರಿಸಲಾಗುತವ ಆಧ್ಯಾತ್ಮಿಕ ಹಬ್ಬವೆಂದರೆ ಮಸಾನ್ ಕಿ ಹೋಳಿ, ಇದು ಜೀನದ ಅಶಾಶ್ವತತೆ ಹಾಗೂ ಮರಣವನ್ನು ಸಂಕೇತಿಸುತ್ತದೆ. ಇಲ್ಲಿ ಬಣ್ಣಗಳ ಬದಲಿಗೆ ಬೂದಿಯನ್ನು ಬಳಸಲಾಗುತ್ತದೆ. ಇದನ್ನು ಸಾಮಾನ್ಯ ಮನುಷ್ಯರು ಆಡುವಂತಿಲ್ಲ. ತಪಸ್ವಿಗಳು, ಶಿವಭಕ್ತರು ಮಾತ್ರ ಆಚರಿಸುವ ಒಂದು ರೋಮಾಂಚನಕಾರಿ ಆಚರಣೆಯೇ ಈ ಮಸಣದ ಹೋಳಿ.

ವಾರಣಾಸಿಯಲ್ಲಿ ಆಚರಿಸಲಾಗುವ ಹೋಳಿಯ ಒಂದು ವಿಧವಾಗಿರುವ ಮಸಣದ ಹೋಳಿ, ಆಧ್ಯಾತ್ಮಿಕವಾಗಿ ವಿಶಿಷ್ಟ ಹಬ್ಬವಾಗಿದೆ. ಇಲ್ಲಿ ಶಿವ ಭಕ್ತರು ಈ ಹೋಳಿಯನ್ನು ಆಡುವವರಾಗಿದ್ದು, ಮಣಿಕರ್ಣಿಕ ಹಾಗೂ ಹರಿಶ್ಚಂದ್ರ ಘಾಟ್ಗಳಂತಹ ಸ್ಮಶಾನಗಳಲ್ಲಿ ಈ ಆಚರಣೆಯನ್ನು ನೋಡಬಹುದು. ಚಿತೆಗಳ ಭಸ್ಮಗಳನ್ನು ಬಳಸುವುದೇ ಇಲ್ಲಿಯ ಪ್ರಮುಖ ವಿಶೇಷ. ಇದು ಜೀವನ ಮತ್ತು ಸಾವಿನ ಚಕ್ರವನ್ನು ಸಂಕೇತಿಸುತ್ತದೆ.
ಸಾಮಾನ್ಯರು ಇದರ ಭಾಗವಾಗಲು ಸಾಧ್ಯವೇ ಇಲ್ಲ. ಇದಕ್ಕೆ ಅದರದ್ದೇ ಆದ ಆಧ್ಯಾತ್ಮಿಕ ಪ್ರಾಮುಖ್ಯತೆ ಹಾಗೂ ತಾತ್ವಿಕ ಅರ್ಥವಿದೆ. ಇದನ್ನು ತಪಸ್ವಿಗಳು, ಅಘೋರಿಗಳು, ಸಾಧುಗಳು ಹಾಗೂ ಶಿವ ಭಕ್ತರು ಆಚರಿಸುತ್ತಾರೆ. ಅವರು ಚಿತಾಭಸ್ಮವನ್ನು ಶುದ್ಧೀಕರಣ ಮತ್ತು ದೈವಿಕ ಸಂಪರ್ಕದ ರೂಪವಾಗಿ ಸ್ವೀಕರಿಸುತ್ತಾರೆ. ಸಾಮಾನ್ಯವಾಗಿ ಹೋಳಿ ಎಂಬುದು ಮನರಂಜನೆಯ ಹಬ್ಬವಾಗಿರತ್ತದೆ. ಆದರೆ, ಮಸಾನ್ ಕಿ ಹೋಳಿ ಮನರಂಜನೆಯ ಹಬ್ಬವಲ್ಲ. ಇದು ಲೌಕಿಕ ಸುಖಗಳನ್ನು ಮೀರಿದ ಪವಿತ್ರ ಆಚರಣೆಯಾಗಿದೆ.

ಎಲ್ಲಿ ನಡೆಯುತ್ತದೆ…?
ರಂಗಭರಿ ಏಕಾದಶಿಯ ನಂತರ ಪ್ರಾರಂಭವಾಗುವ ಮಸಣ್ ಕಿ ಹೋಳಿ ಕಾರ್ಯಕ್ರಮವು ವಾರಣಾಸಿಯ ಪವಿತ್ರ ದಹನ ಸ್ಥಳಗಳಾದ ಮಣಿಕರ್ಣಿಕಾ ಮತ್ತು ಹರಿಶ್ಚಂದ್ರ ಘಾಟ್ಗಳಲ್ಲಿ ನಡೆಯುತ್ತದೆ. ಶಿವನಿಗೆ ಅರ್ಪಿತವಾದ ಮಹಾಸ್ಮಶಾನನಾಥ ದೇವಸ್ಥಾನದಲ್ಲಿ ಭವ್ಯ ಆರತಿಯೊಂದಿಗೆ ಈ ಆಚರಣೆ ಪ್ರಾರಂಭವಾಗುತ್ತದೆ. ಅಘೋರಿ ಸಾಧುಗಳು ಹಾಗೂ ತಪಸ್ವಿಗಳು ಸೇರಿದಂತೆ ಭಕ್ತರು ಬೂದಿಯನ್ನು ಪರಸ್ಪರ ಹಚ್ಚಿಕೊಂಡು ಹರ ಹರ ಮಹಾದೇವ ಎಂದು ಒಗ್ಗಟ್ಟಿನಿಂದ ಜಪಿಸುತ್ತಾ ಮಸಣದ ಹೋಳಿಯನ್ನಾಡುತ್ತಾರೆ.
ಶಿವನನ್ನು ಸಂತೋಷ ಪಡಿಸಲು ಆಡುವ ಭಸ್ಮ ಹೋಳಿ:
ಬೂದಿಯೆನ್ನುವುದು ಶಿವನಿಗೆ ಬಹಳ ಪ್ರಿಯವಾದ ವಸ್ತು. ಹಾಗೆಯೇ, ಶಿವನನ್ನು ಸ್ಮಶಾನ ವಾಸಿಯೆಂದು ಸಹ ಕರೆಯಲಾಗುತ್ತದೆ. ಶಿವನಿಗೆ ಅತಿ ಪ್ರಿಯವಾದ ಜಾಗವೇ ಈ ಸ್ಮಶಾಣಯೆನ್ನುವುದುಂಟು. ಆದ್ದರಿಂದಲೇ ಶಿವನನ್ನು ಸಂತೋಷಪಡಿಸಲು ಆತನ ಪ್ರಿಯ ಸ್ಥಳದಲ್ಲಿ ನಿಂತು, ಆತನ ಆರಾಧನೆಗೆ ಪ್ರಿಯಪಾತ್ರವಾದ ಭಸ್ಮವನ್ನು ಎರಚಿಕೊಂಡು ಹೋಳಿ ಆಡುವುದೇ ಮಸಣ್ ಕಿ ಹೋಳಿಯ ಮೂಲ ಉದ್ದೇಶ. ಸಂತುಷ್ಟಗೊಂಡ ಶಿವನು ಆಧ್ಯಾತ್ಮಿಕ ಶುದ್ಧೀಕರಣವನ್ನು ತರುತ್ತಾನೆ ಎಂಬುದು ಹಲವರ ನಂಬಿಕೆ. ಆಧ್ಯಾತ್ಮಿಕ ಅಭ್ಯಾಸಗಳನ್ನು ಮಾಡುವ ಅಘೋರಿ ಸಾಧುಗಳು ಈ ಆಚರಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಅವರು ತಾಂತ್ರಿಕ ಪಠಣದೊಂದಿಗೆ ಇದನ್ನು ಆಚರಿಸುತ್ತಾರೆ.

ಸಾಮಾನ್ಯರು ಇದನ್ನು ಆಡಬಾರದು:
ಲೌಕಿಕ ಹಾಗೂ ಭೌತಿಕ ಆಸೆಗಳಿಗೆ ಅಂಟಿಕೊಂಡಿರುವ ನಮ್ಮಂತಹವರು ಮಸಣದ ಹೋಳಿ ಆಡುವುದನ್ನು ತಪ್ಪಿಸಬೇಕು. ಸ್ಮಶಾನವೆಂಬುದು ಪವಿತ್ರ ಸ್ಥಳವಾಗಿದ್ದು, ಇಲ್ಲಿ ಪ್ರವೇಶಿಸುವಾಗ ನಿರ್ದಿಷ್ಟ ನಿಯಮಗಳನ್ನು ಪಾಲಿಸಬೇಕಿರುತ್ತದೆ. ಆದರೆ, ಇತ್ತೀಚೆಗೆ ಜನರು ಮಸಣದ ಹೋಳಿಯ ಅರ್ಥ ಹಾಗೂ ಮಹತ್ವವನ್ನು ಅರಿತುಕೊಳ್ಳುವುದರ ಬದಲು ಒಂದು ಪ್ರವೃತ್ತಿಯಾಗಿ ಪರಿಗಣಿಸಿ ಅದರಲ್ಲಿ ಭಾಗವಹಿಸುತ್ತಿರುವುದು ನಿರಾಶಾದಾಯಕ ಎಂಬುದು ಹಲವರ ಅಭಿಪ್ರಾಯ.
ಅದರಲ್ಲಿಯೂ ವಿವಾಹಿತರು, ಕುಟುಂಬವನ್ನು ಹೊಂದಿರುವವರು, ವಿದ್ಯಾರ್ಥಿಗಳು ಇಂತಹ ಆಚರಣೆಗಳಲ್ಲಿ ಭಾಗಿಯಾಗಬಾರದು. ಸತ್ತವರ ಚಿತಾಭಸ್ಮವನ್ನು ಹಚ್ಚಿಕೊಳ್ಳುವುದು ಲೌಕಿಕ ಬದುಕಿನ ಸಂಬಂಧಗಳಿಗೆ ವಿರುದ್ಧವಾಗಿದೆ. ಲೌಕಿಕ ಸಂಪರ್ಕಗಳನ್ನು ಹೊಂದಿರುವವರು ಸತ್ತವರಿಗೆ ಸಂಬಂಧಿಸಿದ ಅಭ್ಯಾಸಗಳಲ್ಲಿ ಭಾಗವಹಿಸಬಾರದು. ಇದು ಅವರ ಜೀವನದ ಘಟಗಳಲ್ಲಿ ಹಾಗೂ ಸಂಬಂಧಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ತಿಳಿದವರು ಹೇಳುತ್ತಾರೆ.

ಪುರಾಣದಲ್ಲಿ ಏನಿದೆ….?
ಶಿವನು ನಗರವನ್ನು ತೊರೆಯಲು ನಿರ್ಧರಿಸಿದರೆ ಮಾತ್ರ ಕಾಶಿಯ ನಾಶ ಸಂಭವಿಸುತ್ತದೆ. ಮಸಾನ್ ಕಿ ಹೋಳಿಯ ಅನುಪಸ್ಥಿತಿಯನ್ನು ಅನೇಕರು ಅವನಿಗೆ ಗೌರವ ಸಲ್ಲಿಸುವ ಆಚರಣೆಯೆಂದು ಪರಿಗಣಿಸಿದ್ದು, ಅದಕ್ಕೆ ಅಡ್ಡಿ ಪಡಿಸಿದರೆ ಶಿವನ ಕೋಪಕ್ಕೆ ಕಾರಣವಾಗಬಹುದು ಎಂಬ ನಂಬಿಕೆ ಹಿಂದಿನಿಂದ ನಡೆದುಕೊಂಡು ಬಂದಿದೆ. ಕಾಶಿಯ ಅವನತಿ ಸಂಭವಿಸಬಾರದು ಎಂದರೆ ಈ ಆಚರಣೆಯನ್ನು ನಡೆಸಿಕೊಂಡು ಹೋಗಬೇಕು ಎಂಬುದು ಶಿವನ ಆರಾಧಕರಲ್ಲಿ ನೆಲೆಯೂರಿದೆ.