ಕರ್ನಾಟಕದಲ್ಲಿ ಮಹಾರಾಷ್ಟ್ರ ರಾಜ್ಯ ರಸ್ತೆ ನಿಗಮದ ಬಸ್ ಮೇಲೆ ದಾಳಿ ನಡೆಸಿ, ಬಸ್ ಚಾಲಕನ ಮುಖಕ್ಕೆ ಕಪ್ಪು ಮಸಿ ಬಳಿದು ಹಲ್ಲೆ ನಡೆಸಿದ್ದಾರೆ ಎಂದು ಮಹಾರಾಷ್ಟ್ರ ಸಾರಿಗೆ ಸಚಿವರು ಆರೋಪಿಸಿದ್ದಾರೆ. ದಾಳಿಗೆ ಸಬ್ಬಂದಿಸಿದಂತೆ ಕರ್ನಾಟಕ ಸರ್ಕಾರ ಸ್ಪಷ್ಟನೆ ನೀಡುವವರೆಗೂ ಸಂಚಾರ ಪುನರಾರಂಭಗೊಳ್ಳುವುದಿಲ್ಲ ಎಂದು ಆದೇಶ ಹೊರಡಿಸಿದ್ದಾರೆ.

ಶುಕ್ರವಾರ(ಫೆ.21) ರಾತ್ರಿ ಬೆಂಗಳೂರಿನಿಂದ ಮಹಾರಾಷ್ಟ್ರಕ್ಕೆ ತೆರಳುತ್ತಿದ್ದ ಎಂಎಸ್ಆರ್ಟಿಸಿ ಬಸ್ಸನ್ನು ಕನ್ನಡ ಪರ ಹೋರಾಟಗಾರರು ತಡೆದು ಚಾಲಕ ಭಾಸ್ಕರ್ ಜಾಧವ್ ಅವರ ಮುಖಕ್ಕೆ ಕಪ್ಪು ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿದ್ದರು. ಘಟನೆ ತೀವ್ರ ಸ್ವರೂಪ ಪಡೆದಿದ್ದು, ಇದೀಗ ಮಹಾರಾಷ್ಟ್ರ ಸರ್ಕಾರ ಕರ್ನಾಟಕಕ್ಕೆ ಬಸ್ ಸೇವೆಯನ್ನು ಸ್ಥಗಿತಗೊಳಿಸಿದೆ.
ಪ್ರಕರಣದ ಸಂಬಂಧ ಸೇವೆ ಸ್ಥಗಿತಗೊಳಿಸಲು ಮಹಾರಾಷ್ಟ್ರ ಸಾರಿಗೆ ಸಚಿವ ಪ್ರತಾಪ್ ಸರ್ನಾಯಕ್ ಆದೇಶ ಹೊರಡಿಸಿದ್ದಾರೆ. ಸಾರಿಗೆ ಸಚಿವರ ನಿರ್ದೇಶನದಂತೆ ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಗಳ ನೌಕರರು ಹಾಗೂ ಪ್ರಯಾಣಿಕರ ಸುರಕ್ಷತೆಯ ದೃಷ್ಠಿಯಿಂದ ಕೊಲ್ಹಾಪುರದಿಂದ ಕರ್ನಾಟಕಕ್ಕೆ ಹೋಗುವ ಎಲ್ಲಾ ರಾಜ್ಯ ಸಾರಿಗೆ ಬಸ್ಗಳ ಸಂಚಾರವನ್ನು ಅನಿರ್ಧಿಷ್ಟಾವಧಿಗೆ ರದ್ದುಗೊಳಿಸಲಾಗಿದೆ ಎಂದು ಎಂಎಸ್ಆರ್ಟಿಸಿ ವಕ್ತಾರ ಅಭಿಜಿತ್ ಭೋಸಲೆ ತಿಳಿಸಿದ್ದಾರೆ.
ಮರಾಠಿ ಮಾತಾಡಲು ಒತ್ತಾಯಿಸಿದ್ದ ಯುವಕ
ಬೆಳಗಾವಿ ತಾಲೂಕಿನ ಸುಳೇಬಾವಿಯ ಹೊರವಲಯದ ಬಸ್ನಲ್ಲಿ ಸಂಚರಿಸುತ್ತಿದ್ದ ಯುವತಿಯ ಬಳಿ ಕಂಡ್ಕ್ಟರೊಬ್ಬರು ಕನ್ನಡದಲ್ಲಿ ಮಾತನಾಡಿ ಆಧಾರ್ ಕಾರ್ಡ್ ತೋರಿಸಲು ಹೇಳಿದ್ದಾರೆ. ಈ ವೇಳೆ ಯುವತಿಯ ಜೊತೆಯಲ್ಲಿದ್ದ ಯುವಕನೊರ್ವ ಮರಾಠಿಯಲ್ಲಿ ಮಾತನಾಡಿ ಎಂದು ಒತ್ತಾಯಿಸಿದ್ದಾನೆ. ಇದರಿಂದ ಯುವಕ ಹಾಗೂ ಬಸ್ ನಿರ್ವಹಕರ ನಡುವೆ ಮಾತಿನ ಚಕಮಕಿ ನಡೆದಿದ್ದು, ಯುವಕ ತನ್ನ ಸ್ನೇಹಿತರನ್ನು ಕರೆಸಿ ನಿರ್ವಾಹಕರ ಮೇಲೆ ಹಲ್ಲೆ ನಡೆಸಿದ್ದಾನೆ. ಈ ಘಟನೆ ಬಳಿಕ ಮರಾಠಿಗರ ದೌರ್ಜನ್ಯದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿಯ ಮಾರಿಹಾಳ ಠಾಣೆ ಪೊಲೀಸರು ಅಪ್ರಾಪ್ತನೊಬ್ಬನನ್ನು ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ. ಮಾರುತಿ ತುರುಮುರಿ, ರಾಹುಲ್ ರಾಜು ನಾಯ್ಡು, ಬಾಳು ಗೋಜಗೇಕರ್ ಬಂಧಿತ ಆರೋಪಿಗಳು.
ಬೆಳಗಾವಿ ಘಟನೆಗೆ ಚಿತ್ರದುರ್ಗದಲ್ಲಿ ಆಕ್ರೋಶ
ಈ ಘಟನೆ ನಂತರ ಚಿತ್ರದುರ್ಗದ ಕರ್ನಾಟಕ ನವ ನಿರ್ಮಾಣ ಸೇನೆಯ ಕಾರ್ಯಕರ್ತರು ಐಮಂಗಲದ ಟೋಲ್ ಬಳಿ ಎಂಎಸ್ಆರ್ಟಿಸಿ ಬಸ್ಸನ್ನು ತಡೆದು ಚಾಲಕನಿಗೆ ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಈ ಘಟನೆಯೇ ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬಸ್ ಸಂಚಾರ ತಡೆಹಿಡಿಯಲು ಕಾರಣವಾಗಿದೆ.