ಮಹಾರಾಷ್ಟ್ರ: ೩೦ ವರ್ಷಗಳ ಹಳೆಯ ದಾಖಲೆ ತಿರುಚುವಿಕೆ ಹಾಗೂ ವಂಚನೆ ಪ್ರಕರಣದಲ್ಲಿ ಭಾಗಿಯಾಗಿದ್ದಕ್ಕಾಗಿ ಮಹಾರಾಷ್ಟ್ರ ಕೃಷಿ ಸಚಿವ ಮಾಣಿಕ್ರಾವ್ ಕೊಕಾಟೆ ಅವರು ೨ ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ. ನಾಸಿಕ್ ಜಿಲ್ಲಾ ನ್ಯಾಯಾಲಯವು ಮುಖ್ಯಮಂತ್ರಿ ಕೋಟಾದಡಿಯಲ್ಲಿ ೨ ಫ್ಲಾಟ್ಗಳನ್ನು ಅಕ್ರಮವಾಗಿ ಸ್ವಾಧೀನ ಪಡಿಸಿಕೊಂಡಿದ್ದಾರೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ತೀರ್ಪನ್ನು ನೀಡಲಾಗಿದೆ.
ಏನಿದು ಪ್ರಕರಣ?
೧೯೯೫ಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದ್ದು, ಮಾಣಿಕ್ರಾವ್ ಕೊಕಟೆ ಹಾಗೂ ಸಹೋದರ ಸುನಿಲ್ ಕೊಕಟೆ ಅವರನ್ನೂ ಸಹ ಪ್ರಕರಣಕ್ಕೆ ಸಂಬಂಧಿಸಿದಂತೆ ದೋಷಿ ಎಂದು ಘೋಷಿಸಿದೆ. ನಾಸಿಕ್ನ ಯೋಲೇಕರ್ ಮಾಲಾದ ಕಾಲೇಜಿನ ರಸ್ತೆಯಲ್ಲಿರುವ ನಿರ್ಮಾಣ್ ವ್ಯೂ ಅಪಾರ್ಟ್ಮೆಂಟಿನ ಫ್ಲಾಟ್ಗಳನ್ನು ಪಡೆಯಲು ಕೊಕಟೆ ಸಹೋದರರು ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದರು ಎಂದು ಆರೋಪಿಸಿ ಮಾಜಿ ಸಚಿವ ದಿವಂಗತ ತುಕಾರಾಮ್ ದಿಘೋಲೆ ಪ್ರಕರಣ ದಾಖಲಿಸಿದ್ದರು. ಮುಖ್ಯಮಂತ್ರಿ ಕೋಟಾದಡಿಯಲ್ಲಿ ಫ್ಲಾಟ್ ಪಡೆಯುವ ನಿಟ್ಟಿನಲ್ಲಿ ಕೊಕಾಟೆ ಸಹೋದರರು ತಾವು ಕಡಿಮೆ ಆದಾಯದ(ಎಲ್ಐಜಿ) ಗುಂಪಿಗೆ ಸೇರಿದವರಾಗಿದ್ದು, ಬೇರೆ ಯಾವುದೇ ಆಸ್ತಿಗಳನ್ನು ಹೊಂದಿಲ್ಲ ಎಂದು ಹೇಳಿಕೊಂಡಿದ್ದರು. ಹಾಗಾಗಿ, ಮುಖ್ಯಮಂತ್ರಿಗಳ ಕೋಟಾದಡಿಯಲ್ಲಿ ಫ್ಲಾಟ್ಗಳನ್ನು ಪಡೆಯಲು ಅವಕಾಶ ಮಾಡಿಕೊಡಲಾಗಿತ್ತು. ಇದಕ್ಕೆ ಪೂರಕವಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸವಲತ್ತು ಪಡೆದುಕೊಂಡಿದ್ದರು ಎಂದು ತನಿಖೆಯಿಂದ ಸಾಬೀತಾಗಿದೆ.
ತೀರ್ಪಿನಲ್ಲಿ ಏನಿತ್ತು?
ಮಾಣಿಕ್ರಾವ್ ಕೊಕಟೆ ಹಾಗೂ ಸುನಿಲ್ ಕೊಕಟೆ ಸಹೋದರರಿಗೆ ನಾಸಿಕ್ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯವು ತಲಾ ೫೦,೦೦೦ರೂ. ದಂಡವನ್ನು ವಿಧಿಸಿದ್ದು, ಮಾಣಿಕ್ರಾವ್ ಅವರಿಗೆ ೨ ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ. ಪ್ರಕರಣಕ್ಕೆ ಸಂಬoಧಿಸಿದ ಇಬ್ಬರು ಆರೋಪಿಗಳನ್ನು ಖುಲಾಸೆಗೊಳಿಸಿ ತೀರ್ಪನ್ನು ನೀಡಲಾಗಿದೆ.
ಮಾಣಿಕ್ರಾವ್ ರಾಜಕೀಯ ಹಾದಿ
ನಾಸಿಕ್ ಜಿಲ್ಲೆಯ ಸಿನ್ನಾರ್ನಿಂದ ೫ ಬಾರಿ ಶಾಸಕರಾಗಿರುವ ಮಾಣಿಕ್ರಾವ್ ಕೊಕಟೆ, ಪ್ರಸ್ತುತ ಅಜಿತ್ ಪವಾರ್ ನೇತೃತ್ವದ ಎನ್ಸಿಪಿ ಬಣದೊಂದಿಗೆ ಗುರುತಿಸಿಕೊಂಡಿದ್ದಾರೆ. ಈ ಹಿಂದೆ ಶಿವಸೇನೆ ಹಾಗೂ ಕಾಂಗ್ರೆಸ್ನಲ್ಲಿಯೂ ಕೈಜೋಡಿಸಿದ್ದ ಇವರು ನಂತರ ಎನ್ಸಿಪಿಗೆ ಸೇರ್ಪಡೆಗೊಂಡಿದ್ದರು. ಎನ್ಸಿಪಿಯ ವಿಭಜನೆ ವೇಳೆ ಅಜಿತ್ ಪವಾರ್ ಬಣವನ್ನು ಸೇರಿಕೊಂಡಿದ್ದರು. ಪ್ರಸ್ತುತ ದೇವೇಂದ್ರ ಫಡ್ನವೀಸ್ ನೇತೃತ್ವದ ಸರ್ಕಾರದಲ್ಲಿ ಕೃಷಿ ಸಚಿವರಾಗಿ ಅಧಿಕಾರವಹಿಸಿಕೊಂಡು, ಸಚಿವ ಸಂಪುಟದಲ್ಲಿ ಪ್ರಮುಖ ಸ್ಥಾನ ಪಡೆದುಕೊಂಡಿದ್ದರು.
ಇನ್ನೂ ತೀರ್ಪಿನ ನಂತರ ಮಾಧ್ಯಮಗಳನ್ನುದೇಶಿಸಿ ಮಾತನಾಡಿದ ಮಾಣಿಕ್ರಾವ್, ನ್ಯಾಯಾಲಯವು ತಮಗೆ ಜಾಮೀನು ನೀಡಿದ್ದು, ತೀರ್ಪಿನ ವಿರುದ್ಧ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದ್ದೇನೆ ಎಂದು ಹೇಳಿದ್ದಾರೆ. ಒಂದು ವೇಳೆ ಹೈಕೋರ್ಟ್ನಿಂದ ಯಾವುದೇ ಪರಿಹಾರ ಸಿಗದಿದ್ದರೆ ಮಾಣಿಕ್ರಾವ್ ಕೊಕಟೆ ಅವರು ಶಾಸಕ ಸ್ಥಾನದಿಂದ ಅನರ್ಹರಾಗುವ ಸಾಧ್ಯತೆಯಿರುತ್ತದೆ. ಕಾನೂನಿನ ಚೌಕಟ್ಟಿನಡಿಯಲ್ಲಿ, ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಜೈಲು ಶಿಕ್ಷೆಗೆ ಗುರಿಯಾದ ಯಾವುದೇ ಸಾರ್ವಜನಿಕ ಪ್ರತಿನಿಧಿಗಳು ಅಧಿಕಾರದಲ್ಲಿ ಮುಂದುವರಿಯಲು ಸಾಧ್ಯವಿರುವುದಿಲ್ಲ.