ವಿಶ್ವದ ಅತಿದೊಡ್ಡ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಒಂದಾದ 45 ದಿನಗಳ ಮಹಾ ಕುಂಭಮೇಳ ಇಂದು ಕೊನೆಗೊಳ್ಳಲಿದೆ. 144 ವರ್ಷಗಳಿಗೊಮ್ಮೆ ಪ್ರಯಾಗ್ರಾಜ್ನಲ್ಲಿ ನಡೆಯುವ ಮಹಾ ಕುಂಭಮೇಳ ಇದಾಗಿದ್ದು, ಆಧ್ಯಾತ್ಮಿಕ ಶುದ್ಧೀಕರಣಕ್ಕೆ ಈ ಮೇಳವು ಅತ್ಯಂತ ಶುಭಕರ ಎಂದು ಪರಿಗಣಿಸಲಾಗಿದೆ. ಈಗಾಗಲೇ ಕೋಟ್ಯಾಂತರ ಮಂದಿ ಭಕ್ತರು ಮಹಾ ಕುಂಭಮೇಳದಲ್ಲಿ ಮಿಂದೆದಿದ್ದಾರೆ.
ಇಂತಿಪ್ಪ ಮಹಾ ಕುಂಭಮೇಳ ಅಂತಿಮ ಘಟ್ಟವನ್ನು ತಲುಪಿದ್ದು, ಮಹಾಶಿವರಾತ್ರಿಯಂದು ಅಮೃತ ಸ್ನಾನದ ಮೂಲಕ ಈ ಐತಿಹಾಸಿಕ ಧಾರ್ಮಿಕ ಕಾರ್ಯಕ್ರಮ ಕೊನೆಗೊಳ್ಳಲಿದೆ. 2025ರ ಜನವರಿ 13ರಂದು ಪ್ರಾರಂಭವಾದ ಮಹಾ ಕುಂಭಮೇಳಕ್ಕೆ ಈವರೆಗೂ 64 ಕೋಟಿ ಸಾಧು-ಸಂತರು, ಭಕ್ತರು ತ್ರಿವೇಣಿ ಸಂಗಮದಲ್ಲಿ ಮುಳುಗೆದ್ದು ಪವಿತ್ರ ಸ್ನಾನ ಕೈಗೊಂಡಿದ್ದಾರೆ.
ಅಮೃತ ಸ್ನಾನದ ಘಳಿಗೆ ಪ್ರಾರಂಭ:
ಇಂದು ಮಹಾಶಿವರಾತ್ರಿ. ಈ ದಿನದಂದೇ ಮಹಾ ಕುಂಭಮೇಳಕ್ಕೆ ತೆರೆ ಬೀಳಲಿದ್ದು, ಇಂದು ಬೆಳಗ್ಗೆ 11.08ರಿಂದ ನಾಳೆ(ಫೆ.27) ಬೆಳಿಗ್ಗೆ ೮:೫೪ರವರೆಗೆ ಮಹಾಶಿವರಾತ್ರಿ ಮುಹೂರ್ತವಿದೆ. ಈ ಸಮಯದಲ್ಲಿ ಕೋಟ್ಯಾಂತರ ಭಕ್ತ ಸಮೂಹ ಅಮೃತ ಸ್ನಾನದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಜನವರಿ 13, 14, 29, ಫೆಬ್ರವರಿ 3 ಹಾಗೂ 12ರಂದು ಒಟ್ಟು 5 ಅಮೃತ ಸ್ನಾನಗಳು ನಡೆದಿದ್ದು, ಇಂದು ಕೊನೆಯ ಅಮೃತ ಸ್ನಾನಕ್ಕೆ ಪ್ರಯಾಗ್ರಾಜ್ ಸಾಕ್ಷಿಯಾಗಿದೆ.

63.36 ಕೋಟಿ ಜನರಿಂದ ಪುಣ್ಯಸ್ನಾನ:
144 ವರ್ಷದಲ್ಲಿ ಒಮ್ಮೆ ನಡೆಯುವ ಪ್ರಯಾಗ್ರಾಜ್ನ ಮಹಾ ಕುಂಭಮೇಳದಲ್ಲಿ ಈವರೆಗೂ 63.36ಕೋಟಿ ಭಾಗವಹಿಸಿದ್ದಾರೆ. ಈ ಅವಧಿಯಲ್ಲಿ ತ್ರಿವೇಣಿ ಸಂಗಮದಲ್ಲಿ ಮಿಂದೆದ್ದರೆ ಬಹು ಜನ್ಮಗಳ ಪಾಪ ಶುದ್ಧವಾಗುತ್ತವೆ ಹಾಗೂ ಮೋಕ್ಷಕ್ಕೆ ಹತ್ತಿರವಾಗುತ್ತೇವೆ ಎಂಬ ನಂಬಿಕೆ ಜನರಲ್ಲಿ ದೃಢವಾಗಿರುವುದೇ ಕೋಟ್ಯಾಂತರ ಮಂದಿ ಪುಣ್ಯಸ್ನಾನ ಮಾಡಿರುವುದಕ್ಕೆ ಸಾಕ್ಷಿ.
ಕೊನೆಯ ಅಮೃತ ಸ್ನಾನಕ್ಕೆ ಸಕಲ ಸಿದ್ಧತೆ:
ಇಂದು ನಡೆಯುತ್ತಿರುವ ಕೊನೆಯ ಹಂತದ ಅಮೃತ ಸ್ನಾನಕ್ಕೆ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಲಕ್ನೋ ಹಾಗೂ ಪ್ರತಾಪ್ಗಢದಿಂದ ಬರುವ ಭಕ್ತರಿಗೆ ಫಫಮೌಘಾಟ್, ರೇವಾನ್, ಬಂದಾ, ಚಿತ್ರಕೂಟ ಹಾಗೂ ಮಿರ್ಜಾಪುರದಿಂದ ಬರುವ ಭಕ್ತರಿಗೆ ಅರೈಲ್ ಘಾಟ್, ಕೌಶಂಬಿಯಿಂದ ಬರುವ ಭಕ್ತಾಧಿಗಳಿಗೆ ಸಂಗಮ್ ಘಾಟ್ನಲ್ಲಿ ವ್ಯವಸ್ಥೆ ಮಾಡಲಾಗಿದೆ. ಜನಸಂದಣಿ ಹೆಚ್ಚಿದ್ದು, ಸುರಕ್ಷತೆಯ ದೃಷ್ಟಿಯಿಂದ ಮಹಾ ಕುಂಭಮೇಳದ ಸಂಪೂರ್ಣ ಪ್ರದೇಶಕ್ಕೆ ವಾಹನ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

ಧಾರ್ಮಿಕ-ಸಾಂಸ್ಕೃತಿಕ ಪರಂಪರೆಗೆ ಭಾರತವೇ ವೇದಿಕೆ:
ಭಾರತವು ಬಲಿಷ್ಠ ಧಾರ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿದೆ ಎಂಬುದಕ್ಕೆ ಪ್ರಯಾಗ್ರಾಜ್ನ ಈ ಮಹಾ ಕುಂಭಮೇಳವೇ ಸಾಕ್ಷಿ. ಗಂಗಾ, ಯಮುನಾ ಹಾಗೂ ಪೌರಣಿಕವಾಗಿ ಗುಪ್ತವಾಗಿ ಹರಿಯುವ ಸರಸ್ವತಿ ನದಿಗಳು ಒಂದೆಡೆ ಸಂಗಮಿಸುವ ಸ್ಥಳವನ್ನು ತ್ರಿವೇಣಿ ಸಂಗಮವೆಂದು ಕರೆಯಲಾಗುತ್ತಿದ್ದು, ಈ ಸ್ಥಳ ಪ್ರಯಾಗ್ರಾಜ್ನಲ್ಲಿದೆ. ಸೂರ್ಯ, ಚಂದ್ರ ಹಾಗೂ ಗುರು ಗ್ರಹಗಳ ಸ್ಥಾನದ ಆಧಾರದ ಮೇಲೆ ಪ್ರತಿ 12 ವರ್ಷಗಳಿಗೊಮ್ಮೆ ಕುಂಭಮೇಳವನ್ನು ಆಚರಿಸಲಾಗುತ್ತದೆ. ದೇಶ, ಗಡಿ, ಭಾಷೆಗಳನ್ನು ಮೀರಿ ಪ್ರಪಂಚದ ಎಲ್ಲೆಡೆಯಿಂದ ಸಾಧು-ಸಂತರು ಹಾಗೂ ಭಕ್ತರು ಒಂದೆಡೆ ಸೇರುವುದೇ ಮಹಾ ಕುಂಭಮೇಳದ ವಿಶೇಷವಾಗಿದೆ.
ಮುಂಬರುವ ಕುಂಭ ಮೇಳಗಳು:
ಇಂದು ಕೊನೆಗೊಳ್ಳುತ್ತಿರುವ ಮಹಾ ಕುಂಭಮೇಳದ ನಂತರ 2027ರಲ್ಲಿ ಮಹಾರಾಷ್ಟ್ರದ ನಾಸಿಕ್ನಲ್ಲಿ ಮುಂದಿನ ಪೂರ್ಣ ಕುಂಭಮೇಳ, 2033ರಲ್ಲಿ ಹರಿದ್ವಾರದಲ್ಲಿ ಮಹಾ ಕುಂಭಮೇಳ ಆಯೋಜನೆಗೊಳ್ಳಲಿವೆ.
2037ಕ್ಕೆ ಮುಂದಿನ ಮಹಾ ಕುಂಭ:
2037ರಲ್ಲಿ ಪ್ರಯಾಗ್ರಾಜ್ನಲ್ಲಿಯೇ 12 ವರ್ಷಗಳಿಗೊಮ್ಮೆ ನಡೆಯುವ ಮಹಾ ಕುಂಭಮೇಳವು ಜರುಗಲಿದ್ದು, ಮಕರ ಸಂಕ್ರಾಂತಿಯ ಜ.14, ಮೌನಿ ಅಮಾವಾಸ್ಯೆಯ ಜ.16, ವಸಂತ ಪಂಚಮಿಯ ಜ.21ರಂದು ಅಮೃತ ಸ್ನಾನಗಳು ನಡೆಯಲಿವೆ.