ನಾನು ಮೆಟ್ರೊ. ಬೆಂಗಳೂರಿನ ಜನ ನನ್ನನ್ನು ಪ್ರೀತಿಯಿಂದ ‘ನಮ್ಮ ಮೆಟ್ರೊ’ ಎನ್ನುತ್ತಾರೆ. ಇವರನ್ನೆಲ್ಲಾ ನನ್ನ ಒಡಲೊಳಗೆ ಇಟ್ಟುಕೊಂಡು, ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೊರಡುತ್ತೇನೆ. ನಾನು ಯಂತ್ರವೇ ಹೌದು.
ಆದರೆ, ನನ್ನೊಳಗೂ ಭಾವನೆಗಳಿವೆ. ಅವನ್ನು ಹೊರಹಾಕಲು ಬರುವುದಿಲ್ಲ. ನನ್ನೊಳಗೆ ಪ್ರಯಾಣಿಸುವ ಜನರಿಂದಲೇ ನನಗೆ ಭಾವನೆಗಳು ಬಂದಿವೆ. ಜನರನ್ನು ದಿನನಿತ್ಯ ಹೊತ್ತೊಯ್ಯುತ್ತೇನಲ್ಲ, ಆಗ ನನ್ನೊಳಗೆ ಭಾವಾಂಕುರವಾಗಿರಬಹುದೇನೋ….

ಬೆಂಗಳೂರು ಎಂದರೆ ರಸ್ತೆಯಲ್ಲಿ ಕಿಕ್ಕಿರಿದಿರುವ ವಾಹನಗಳು, ಒಂದಾದ ಮೇಲೊಂದು ಸಿಗ್ನಲ್ಗಳು, ಗಿಜಿಗುಡುವ ಟ್ರಾಫಿಕ್… ಈ ಎಲ್ಲದರ ಮಧ್ಯೆ ಗಂಟೆಗಟ್ಟಲೆ ರಸ್ತೆಯಲ್ಲಿಯೇ ಕಾದು ಕಾದು ಸುಸ್ತಾಗುವ ಜನ. ಈ ಎಲ್ಲ ಸಮಸ್ಯೆಗಳಿಗೆ ಪರಿಹಾರಾರ್ಥವಾಗಿ ನಾನು ಹುಟ್ಟು ಪಡೆದೆ. ದೇಶದ ಶಕ್ತಿಕೇಂದ್ರ ದೆಹಲಿ ಇದೆಯಲ್ಲ, ಅಲ್ಲಿಯೂ ನನ್ನಂಥ ‘ಮೆಟ್ರೊ’ ಇದೆ. ನಾನು ಬೆಂಗಳೂರಿನಲ್ಲಿ ಸಾಗುವ ದೂರಕ್ಕಿಂತ ಎರಡು ಮೂರರಷ್ಟು ದೂರ ಸಾಗುತ್ತದೆ. ದೆಹಲಿಯ ‘ಮೆಟ್ರೊ’ ಬಳಿಕ ನಾನೇ ಅತಿ ಹೆಚ್ಚು ದೂರ ಸಾಗುವುದು.
ರೈಲಿನ ಸುಧಾರಿತ ರೂಪವೇ ನಾನು. ನಿಮ್ಮೆಲ್ಲರೊಂದಿಗೆ ನಗರವನ್ನು ಸುತ್ತುವುದೇ ನನ್ನ ಕಾಯಕ. 2011ರ ಅಕ್ಟೋಬರ್ 20ರಂದು ಮೊದಲ ಬಾರಿಗೆ ಬೆಂಗಳೂರಿಗೆ ನಾನು ಕಾಲಿಟ್ಟೆ. ಅಂದಿನಿಂದ ಇಂದಿನವರೆಗೆ ನಿಮ್ಮ ಪಯಣದಲ್ಲಿ ನಾನು ಜೊತೆಯಾಗಿರುವೆ.
73.81 ಕಿ.ಮೀ. ಓಡಾಡುವ ನನಗೆ ಸದ್ಯ ಎರಡು ಬಣ್ಣಗಳಿವೆ. ವೈಟ್ಫೀಲ್ಡ್ ನಿಲ್ದಾಣದಿಂದ ಚಲ್ಲಘಟ್ಟ ಟರ್ಮಿನಲ್ ನಡುವೆ 43.49 ಕಿ.ಮೀ ದೂರದ ಮಾರ್ಗದಲ್ಲಿ ಸಂಚರಿಸುವಾಗಿನ ನನ್ನ ಬಣ್ಣ ನೇರಳೆ. ನಾಗಸಂದ್ರ ಮತ್ತು ರೇಷ್ಮೆ ಸಂಸ್ಥೆ ನಡುವೆ 43.49 ಕಿಮೀ ದಾರಿಯಲ್ಲಿ ನನ್ನ ಬಣ್ಣ ಹಸಿರು. ಮುಂದೆ ಹಳದಿ, ಗುಲಾಬಿ ಮತ್ತು ನೀಲಿ ಬಣ್ಣಗಳಲ್ಲೂ ನಾನು ಕಾಣಿಸಕೊಳ್ಳಲಿದ್ದೇನೆ.
ಎರಡೇ ಮಾರ್ಗಗಳಿಗೆ ಸೀಮಿತವಾಗಿರುವ ನನಗೆ ಬೆಂಗಳೂರಿನಾದ್ಯಂತ ಸಂಚರಿಸುವ ಆಸೆ. ಇನ್ನೂ ಕೆಲವೇ ವರ್ಷಗಳಲ್ಲಿ ಅದೂ ನನಾಸಾಗಲಿದೆ. ರಾಜಧಾನಿಯಿಂದ ಹೊರಗೂ ನನ್ನನ್ನು ಕರೆದುಕೊಂಡು ಹೋಗುತ್ತಾರೆ. ಈವರೆಗೆ ನನಗೊಬ್ಬ ಸಾರಥಿ ಇರುತ್ತಿದ್ದ ಆತ ಕರೆದುಕೊಂಡು ಹೋದ ಕಡೆ ನಾನು ಹೋಗುತ್ತಿದ್ದೆ. ಇದೀಗ ಚಾಲಕ ರಹಿತ ಮೆಟ್ರೊ ಎಂಬ ಸುಧಾರಿತ ರೂಪದಲ್ಲಿಯೂ ಕಾಣಿಸಿಕೊಳ್ಳಲು ಸಜ್ಜಾಗಿದ್ದೇನೆ.
ಬೆಳಿಗ್ಗೆಯಿಂದ ರಾತ್ರಿವರೆಗೆ ನನ್ನ ಕೆಲಸ ಮುಗಿಯುವವರೆಗೆ ಸಾವಿರಾರು ಜನರು ನನ್ನನ್ನು ಭೇಟಿಯಾಗುತ್ತಾರೆ. ಒಮ್ಮೊಮ್ಮೆ ನನಗೆ ಅನಿಸುವುದುಂಟು ಬೆಂಗಳೂರು ಎಂದರೆ ಸಾಗರವಿದ್ದಂತೆ. ಇಲ್ಲಿ ಎಲ್ಲ ಬಗೆಯ ಮೀನುಗಳು ಸಿಗುತ್ತವೆ. ಭಿನ್ನ ಭಿನ್ನ ರೂಪ, ಭಾಷೆ, ಭಾವನೆ ಮತ್ತು ನಡವಳಿಕೆಗಳಿರುವ ಜನರು ಪ್ರತಿನಿತ್ಯ ಕಾಣಸಿಗುತ್ತಾರೆ.

ಬೆಳ್ಳಂಬೆಳಿಗ್ಗೆ ಜಿಮ್, ಜಾಗಿಂಗ್ ಮುಗಿಸಿ ಬರುವ ಜನ, ಕೆಲಸಕ್ಕೆ ಹೋಗುವ ಧಾವಂತದಲ್ಲಿ ಓಡೋಡಿ ಬಂದು ನನ್ನೊಳಗೆ ಸೇರಿಕೊಂಡು, ಪ್ರಯಾಣದ ಉದ್ದಕ್ಕೂ ಪದೇ ಪದೇ ವಾಚ್ ನೋಡುತ್ತಾ, ಏನೋ ಯೋಚನೆ ಮಾಡುವ ಉದ್ಯೋಗಸ್ಥರು, ಹರಟೆ ಹೊಡೆದುಕೊಂಡು ಶಾಲೆ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು, ವೈಯುಕ್ತಿಕ ಕೆಲಸಕ್ಕಾಗಿ ಸಂಚರಿಸುವವರು, ಸಂಜೆಯಾದರೆ ಮತ್ತೆ ತಮ್ಮ ತಮ್ಮ ಗೂಡುಗಳತ್ತ ಓಡುವವರು, ವೀಕೆಂಡ್ ಬಂದರೆ ಜಾಲಿ ತಾಣಗಳಿಗೆ ತೆರಳುವ ಯುವಕರು ಮತ್ತು ಕುಟುಂಬಗಳು… ಇವರೆಲ್ಲರೂ ನನ್ನ ಸ್ನೇಹಿತರೇ ಆಗಿದ್ದಾರೆ.
ನನ್ನೊಡನೆ ಪ್ರಯಾಣಿಸುವವರನ್ನೆಲ್ಲ ನಾನು ಗಮನಿಸುತ್ತಿರುತ್ತೇನೆ. ಅವರ ಮನದ ಮಾತನ್ನು ನಾನು ಅರಿಯಬಲ್ಲೆನು. ಬದುಕಿನಲ್ಲಿ ಏನೋ ಒಳ್ಳೆಯದು ನಡೆದಿರುವ ಬಗ್ಗೆ ಸಂತೋಷ, ನೆಮ್ಮದಿಯಿಂದ ಲವಲವಿಕೆ ಬರುವವರು ಕೆಲವರಾದರೆ, ಇನ್ನೂ ಕೆಲವರು ಬದುಕಿನ ಜಂಜಾಟ, ವೈಯುಕ್ತಿಕ ಸಮಸ್ಯೆಗಳಿಂದ ಭಾರವಾದ ಮನಸ್ಸಿನಿಂದ ನನ್ನೊಡನೆ ಬರುತ್ತಾರೆ. ಸಂತೋಷವಾಗಿ ಪ್ರಯಾಣಿಸುವವರನ್ನು ಕಂಡಾಗ ನಾನು ಅವರೊಡನೆ ಒಟ್ಟುಗೂಡಬೇಕು ಎನಿಸುತ್ತದೆ. ಅದೇ ದುಃಖದಲ್ಲಿ ನನ್ನ ಕಂಬ ಮತ್ತು ಗೋಡಗಳಿಗೆ ಒರಗಿ ಯೋಚಿಸುತ್ತಿರುವವರನ್ನು ಕಂಡಾಗ ನನಗೂ ಕೈ ಇದ್ದಿದ್ದರೆ ನಾನು ಅವರನ್ನು ಸಂತೈಸಬಹುದಿತ್ತಲ್ಲಾ ಎನಿಸಿ ಬೇಸರವಾಗುತ್ತದೆ.
ಒಂದಿಷ್ಟು ಜನ ನನ್ನ ಹಳಿಯ ಮೇಲೆ ಬಿದ್ದು ಪ್ರಾಣ ಬಿಟ್ಟಾಗ ನನ್ನೊಡಲು ದಹಿಸುತ್ತದೆ. ಅದಕ್ಕಾಗಿಯೇ, ಎಚ್ಚರ ವಹಿಸಿ ಎಂದು ಸಾರಿ ಸಾರಿ ಹೇಳುತ್ತೇನೆ. ಆದರೆ ಹುಚ್ಚು ಮನಸುಗಳಿಗೆ ನನ್ನ ಮಾತುಗಳು ಕೇಳುವುದಿಲ್ಲ. ಪದೇ ಪದೇ ಸೂಚನೆ ನೀಡುತ್ತ ಪ್ರಯಾಣಿಕರಿಗೆ ಸಹಾಯ ಮಾಡುತ್ತಿರುತ್ತೇನೆ. ಇದು ನನ್ನ ಕರ್ತವ್ಯವೂ ಹೌದು. ನನ್ನ ಮಾತುಗಳನ್ನು ಸುಮಧುರವಾಗಿ ಇಂಪೆನಿಸುವಂತೆ ಕೇಳಿಸುವ, ಕನ್ನಡವನ್ನೆ ಉಸಿರಾಡುತ್ತಿದ್ದ ಅಪರ್ಣ ಅವರನ್ನು ನಾನೆಂದಿಗೂ ಮರೆಯಲಾರೆ.
ಹೇಳುತ್ತಾ ಹೋದರೆ ನನ್ನೊಳಗೆ ಅಸಂಖ್ಯ ಕಥೆಗಳಿವೆ. ಆದರೆ ಓದುಗರಾದ ನಿಮ್ಮ ನಿಲ್ದಾಣ ಸಮೀಪಿಸಿದೆ. ಪ್ರಯಾಣ ಸುಖಕರವಾಗಿತ್ತೆಂದು ಭಾವಿಸುತ್ತೇನೆ. ನನ್ನೊಂದಿಗೆ ಹೀಗೆ ಪ್ರಯಾಣ ಮಾಡುತ್ತಿರಿ, ಸುರಕ್ಷಿತವಾಗಿರಿ.