ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೂ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿ ಏಪ್ರಿಲ್ 7ರ ಎಪಿಸೋಡ್ ಕಥೆ ಇಲ್ಲಿದೆ. ಜಾಹ್ನವಿ ಮೊದಲಿನಂತೆ ಆಗಬೇಕು, ಅವಳ ಪ್ರೀತಿ ಗಳಿಸಬೇಕು ಎಂದು ಜಯಂತ್ ಮಾಡಿದ ಪ್ರಯತ್ನವೆಲ್ಲಾ ವ್ಯರ್ಥವಾಗಿದೆ. ಆದ್ದರಿಂದ ಅವಳಿಗೆ ತಿಳಿಯದಂತೆ ಶ್ರೀಲಂಕಾಗೆ ಕರೆದೊಯ್ದು ಅಲ್ಲಿ ಜಾಹ್ನವಿಯನ್ನು ಕಳೆದುಕೊಂಡಿದ್ದಾನೆ. ಜಯಂತನ ಹುಚ್ಚು ಪ್ರೀತಿ ಸಹಿಸಿಕೊಳ್ಳಲಾಗದೆ ಜಾಹ್ನವಿ ಅವನನ್ನು ಕ್ರೂಸ್ನಲ್ಲಿ ಕಟ್ಟಿ ಹಾಕಿ ತಾನು ಸಮುದ್ರಕ್ಕೆ ಬೀಳುತ್ತಾಳೆ.
ಜಾಹ್ನವಿಯನ್ನು ಕಳೆದುಕೊಂಡು ಜಯಂತ್ ಹುಚ್ಚನಂತಾಗುತ್ತಾನೆ. ಎಲ್ಲಿ ಹುಡುಕಿದರೂ ಅವಳ ಸುಳಿವೇ ಸಿಗುವುದಿಲ್ಲ. ತಾನೊಬ್ಬನೇ ಭಾರತಕ್ಕೆ ವಾಪಸ್ ಬರುತ್ತಾನೆ. ಜಯಂತ್ ಒಬ್ಬನನ್ನೇ ನೋಡಿ ಮನೆಯವರು ಗಾಬರಿಯಾಗುತ್ತಾರೆ. ಜಾಹ್ನವಿ ಸಮುದ್ರ ನೋಡಲು ಆಸೆ ಪಟ್ಟರು ಅವರನ್ನು ಕ್ರೂಸ್ನಲ್ಲಿ ಕರೆದೊಯ್ದೆ, ಆದರೆ ಅವರು ಕಾಲುಜಾರಿ ಸಮುದ್ರಕ್ಕೆ ಬಿದ್ದರು ಎಂದು ಜಯಂತ್ ಹೇಳುತ್ತಾನೆ. ಅದನ್ನು ಕೇಳಿ ಮನೆಯವರಿಗೆ ಆಕಾಶವೇ ತಲೆ ಮೇಲೆ ಬಿದ್ದಂತೆ ಆಗುತ್ತದೆ. ಜಾನು ಖುಷಿಯಾಗಿರಲಿಲ್ಲ ಎಂದು ಭಾವನಾ ಎಲ್ಲರೆದುರು ಹೇಳಿ ದುಃಖ ಪಡುತ್ತಾಳೆ. ನೀವು ಜೊತೆಗೇ ಹೋಗಿ ಜಾನು ಒಬ್ಬಳೇ ಸಮುದ್ರದಲ್ಲಿ ಬಿದ್ದಳು ಎಂದರೆ ಏನು ಅರ್ಥ ಎಂದು ಸಂತೋಷ್ , ಜಯಂತ್ ಮೇಲೆ ಕೋಪಗೊಳ್ಳುತ್ತಾನೆ. ಆದರೆ ಲಕ್ಷ್ಮೀ ಹಾಗೂ ಶ್ರೀನಿವಾಸ್ ಉಳಿದವರಿಗೆ ಸಮಾಧಾನ ಮಾಡುತ್ತಾರೆ.
ಶ್ರೀಲಂಕಾದಲ್ಲಿ ಸಮುದ್ರದಲ್ಲಿ ಬಿದ್ದ ಜಾಹ್ನವಿ ನೀರಿನಲ್ಲಿ ತೇಲುತ್ತಾ ಚೆನ್ನೈ ಸಮುದ್ರ ದಡಕ್ಕೆ ಸೇರುತ್ತಾಳೆ. ಮೀನುಗಾರರು ಅವಳನ್ನು ದಡದಿಂದ ಒಂದು ಬೋಟ್ ಒಳಗೆ ಮಲಗಿಸುತ್ತಾರೆ. ಅದೇ ಊರಿಗೆ ವ್ಯಾಪಾರನಿಮಿತ್ತ ಹೋಗುವ ನರಸಿಂಹಯ್ಯನ ಕಾರಿನಲ್ಲಿ ಜಾಹ್ನವಿ ಆತನಿಗೆ ತಿಳಿಯದಂತೆ ಬಚ್ಚಿಟ್ಟುಕೊಳ್ಳುತ್ತಾಳೆ. ನರಸಿಂಹಯ್ಯ ಮತ್ತೆ ವಾಪಸ್ ಊರಿಗೆ ಬರುತ್ತಾನೆ. ದಾರಿ ಮಧ್ಯೆ ಕಾರು ನಿಲ್ಲಿಸಿ ನರಸಿಂಹಯ್ಯ ಯಾರ ಜೊತೆಗೂ ಫೋನಿನಲ್ಲಿ ಮಾತನಾಡುತ್ತಾನೆ. ಮತ್ತೊಂದು ಕಡೆಯಿಂದ ಒಂದು ವ್ಯಾನ್ ವೇಗವಾಗಿ ಬರುತ್ತದೆ. ಆದರೆ ನರಸಿಂಹಯ್ಯ ಅತ್ತ ಗಮನಿಸದೆ ಫೋನಿನಲ್ಲಿ ಮಾತನಾಡುತ್ತಾನೆ. ಜಾಹ್ನವಿ ಎಷ್ಟು ಅರಚಿದರೂ ಆತ ಗಮನಿಸುವುದಿಲ್ಲ. ಆಗ ಜಾಹ್ನವಿ ಹತ್ತಿರ ಬಂದು ನರಸಿಂಹಯ್ಯನನ್ನು ಪಕ್ಕಕ್ಕೆ ತಳ್ಳಿ ಮುಂದಾಗಬಹುದಾದ ಅಪಘಾತವನ್ನು ತಪ್ಪಿಸುತ್ತಾಳೆ.
ಅವಳನ್ನು ಉಪಚರಿಸುವ ನರಸಿಂಹಯ್ಯ, ನನ್ನ ಪ್ರಾಣ ಕಾಪಾಡಿದಕ್ಕೆ ಧನ್ಯವಾದ ಅರ್ಪಿಸುತ್ತಾನೆ. ನೀನು ಸಮುದ್ರ ದಡದಲ್ಲಿದ್ದ ಹುಡುಗಿ ತಾನೇ ಎಂದು ಕೇಳುತ್ತಾನೆ. ನನ್ನ ಬಗ್ಗೆ ಎಲ್ಲಾ ಗೊತ್ತಾದರೆ ಕಷ್ಟ ಎಂದು ತಿಳಿದು ಜಾಹ್ನವಿ, ನನ್ನ ಹೆಸರು ಚಂದನಾ, ಕುಂದಾಪುರದವಳು ನನಗೆ ಯಾರೂ ಇಲ್ಲ ಎನ್ನುತ್ತಾಳೆ. ಹಾಗಾದರೆ ನೀನು ನನ್ನ ಮನೆಗೆ ಬರಬಹುದು, ನನಗೂ ಒಂದು ಪುಟ್ಟ ಕುಟುಂಬ ಇದೆ. ನಿನ್ನ ಅಭ್ಯಂತರವಿಲ್ಲದಿದ್ದರೆ ನನ್ನ ಮನೆಗೆ ಬಂದು ಕೆಲಸ ಮಾಡಿಕೊಂಡು ಇರಬಹುದು ಎನ್ನುತ್ತಾನೆ. ಅದಕ್ಕೆ ಒಪ್ಪಿ ಜಾನು ನರಸಿಂಹಯ್ಯನ ಜೊತೆ ಹೊರಡುತ್ತಾಳೆ.
ಇತ್ತ ಜಾನುವನ್ನು ಕಳೆದುಕೊಂಡು ಮನೆಯವರು ಕಣ್ಣೀರಿಡುತ್ತಿದ್ದಾರೆ. ಜಾಹ್ನವಿ ಜೊತೆಗೆ ಅವಳ ಮಗು ಕೂಡಾ ಪ್ರಪಂಚ ನೋಡುವ ಮುನ್ನವೇ ಕಣ್ಣು ಮುಚ್ಚಿತಲ್ಲಾ ಎಂದು ಶ್ರೀನಿವಾಸ್ ಹಾಗೂ ಲಕ್ಷ್ಮೀ ದುಃಖಿಸುತ್ತಾರೆ. ಜಾಹ್ನವಿ ಬಂದು ಚಾಕು ಚುಚ್ಚಿದಂತೆ ರಾತ್ರಿ ಜಯಂತ ಕನಸು ಕಾಣುತ್ತಾನೆ. ಗಾಬರಿಯಾಗಿ ಜೋರಾಗಿ ಚಿನ್ನುಮರಿ ಎಂದು ಅರಚುತ್ತಾನೆ. ಶ್ರೀನಿವಾಸ್ ಬಂದು ಅವನನ್ನು ಸಮಧಾನ ಮಾಡುತ್ತಾನೆ. ಇತ್ತ ಭಾವನಾ ಕೂಡಾ ತಂಗಿಯನ್ನು ನೆನಪಿಸಿಕೊಂಡು ಅಳುತ್ತಾಳೆ. ಸಿದ್ದು , ಹೆಂಡತಿಯನ್ನು ಸಮಾಧಾನ ಮಾಡುತ್ತಾನೆ. ಮತ್ತೊಂದೆಡೆ ಚೆಲುವಿ, ಕಾಣೆಯಾದ ವೆಂಕಿಯನ್ನು ಹುಡುಕುತ್ತಾ ಅವನು ಎಲ್ಲೂ ಕಾಣದೆ ಕಂಗಾಲಾಗುತ್ತಾಳೆ.
ಜಾನು ತನ್ನ ತಂದೆ ಜೊತೆ ಬಂದಿದ್ದನ್ನು ನೋಡಿ ವಿಶ್ವ ಹೇಗೆ ಪ್ರತಿಕ್ರಿಯಿಸುತ್ತಾನೆ? ಚೆಲ್ವಿಗೆ ವೆಂಕಿ ಜೈಲಿಗೆ ಹೋಗಿರುವುದು ಗೊತ್ತಾಗುವುದಾ? ಮುಂದಿನ ಸಂಚಿಕೆಯಲ್ಲಿ ತಿಳಿಯಲಿದೆ.