ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೂ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿ ಏಪ್ರಿಲ್ 11ರ ಎಪಿಸೋಡ್ ಕಥೆ ಇಲ್ಲಿದೆ. ಜಾಹ್ನವಿ ಸತ್ತಿದ್ದಾಳೆ ಎಂದುಕೊಂಡೇ ಮನೆಯವರು ಅವಳ ಹಾಲುತುಪ್ಪ ಕಾರ್ಯಕ್ಕೆ ಎಲ್ಲಾ ಸಿದ್ದತೆ ಮಾಡಿಕೊಳ್ಳುತ್ತಾರೆ. ಪುರೋಹಿತರನ್ನು ಮನೆಗೆ ಕರೆಸಿ ಮೃತದೇಹ ದೊರೆಯಲಿದ್ದರೆ ಯಾವ ರೀತಿ ಕಾರ್ಯ ಮಾಡಬಹುದು ಎಂದು ಕೇಳಿ ತಿಳಿದುಕೊಳ್ಳುತ್ತಾರೆ. ಕಾರ್ಯಕ್ಕೆ ಬೇಕಾದ ಎಲ್ಲಾ ಸಾಮಗ್ರಿಗಳ ಪಟ್ಟಿಯನ್ನು ಪುರೋಹಿತರು ಶ್ರೀನಿವಾಸನಿಗೆ ಕೊಡುತ್ತಾರೆ. ಮುನಿಸು ಮರೆತು ಅಣ್ಣ ತಮ್ಮಂದಿರು ಜಾಹ್ನವಿ ಕಾರ್ಯವನ್ನು ಮಾಡುವಂತೆ ಶ್ರೀನಿವಾಸ, ಮಕ್ಕಳಿಗೆ ಮನವಿ ಮಾಡುತ್ತಾನೆ,
ಜಯಂತ್, ಸಿದ್ದು ಹಾಗೂ ಭಾವನಾಗೆ ಶ್ರೀನಿವಾಸ್ ಕರೆ ಮಾಡಿ ಜಾಹ್ನವಿ ಹಾಲು ತುಪ್ಪ ಕಾರ್ಯಕ್ಕೆ ಆಹ್ವಾನಿಸುತ್ತಾನೆ. ಜಾಹ್ನವಿ ಸತ್ತಿಲ್ಲ, ಅವರು ಬದುಕಿದ್ದಾರೆ ಎಂದು ನನ್ನ ಮನಸ್ಸು ಹೇಳುತ್ತಿದೆ, ಆದರೂ ಅವರ ಮನೆಯವರು ನಂಬುತ್ತಿಲ್ಲ ಎಂದು ಜಯಂತ್ ಶಾಂತಮ್ಮ ಬಳಿ ಹೇಳುತ್ತಾನೆ. ಬೇಸರದಿಂದಲೇ ಮಾವನ ಮನೆಗೆ ಹೋಗುತ್ತಾನೆ. ಪುರೋಹಿತರು ಕಾರ್ಯವನ್ನು ಮುಗಿಸುತ್ತಾರೆ, ಆದರೆ ಲಕ್ಷ್ಮೀ ಮಾತ್ರ ಮಗಳನ್ನು ಕಳೆದುಕೊಂಡ ದುಃಖದಿಂದ ಪೂಜೆಯಲ್ಲಿ ಪಾಲ್ಗೊಳ್ಳುವುದಿಲ್ಲ. ಎಷ್ಟೇ ಸಮಾಧಾನ ಮಾಡಿದರೂ ಲಕ್ಷ್ಮೀ ರೂಮ್ ಬಿಟ್ಟು ಹೊರಗೆ ಬರುವುದಿಲ್ಲ. ಶಾಸ್ತ್ರೋಕ್ತವಾಗಿ ವಿಧಿ ವಿಧಾನಗಳನ್ನು ಪೂರೈಸುವ ಪುರೋಹಿತರು, ನಿಮ್ಮ ಮಗಳಿಗೆ ಈ ಪೂಜೆ ಇಷ್ಟವಾಗಿದ್ದಲ್ಲಿ ಇಂದು ರಾತ್ರಿ ಯಾವುದೋ ಒಂದು ರೂಪದಲ್ಲಿ ಬಂದು ಊಟ ಸ್ವೀಕರಿಸುತ್ತಾರೆ ಎನ್ನುತ್ತಾರೆ.
ಜಯಂತ, ಕಾರ್ಯ ಮುಗಿಸಿ ಮನೆಗೆ ವಾಪಸ್ ಆಗುತ್ತಾನೆ. ಬೇಸರದಲ್ಲಿದ್ದ ಜಯಂತನನ್ನು ನೋಡಿ ಶಾಂತಮ್ಮ ಮಾತನಾಡಿಸುತ್ತಾಳೆ. ಮಾವನ ಮನೆಯಲ್ಲಿ ಜಾಹ್ನವಿ ಹಾಲು ತುಪ್ಪ ಕಾರ್ಯ ಇತ್ತು ಶಾಂತಮ್ಮ ಅಲ್ಲಿಗೆ ಹೋಗಿದ್ದೆ, ಜಾಹ್ನವಿ ಸತ್ತಿದ್ದಾಳೆ ಎಂದರೆ ನನಗೆ ನಂಬಲು ಆಗುತ್ತಿಲ್ಲ, ಅವರು ಇಲ್ಲೆ ಎಲ್ಲೋ ಇದ್ದಾರೆ ಎನಿಸುತ್ತಿದೆ, ಜಾಹ್ನವಿಗೆ ಪೂಜೆ ಇಷ್ಟವಾದರೆ ರಾತ್ರಿ ಬಂದು ಊಟ ಸ್ವೀಕರಿಸುತ್ತಾರೆ ಎಂದು ಪುರೋಹಿತರು ಹೇಳಿದರು, ಅದು ನಿಜಾನಾ ಶಾಂತಮ್ಮ ಎನ್ನುತ್ತಾನೆ, ಹೌದು ಎಂದು ಶಾಂತಮ್ಮ ಹೇಳುತ್ತಾರೆ. ಹಾಗಾದರೆ ಅಪ್ಪನ ಮನೆಗೆ ಬರುವ ಜಾಹ್ನವಿ ಇಲ್ಲಿಗೂ ಬರುತ್ತಾರೆ ತಾನೇ, ನಾನಂತೂ ಅವರನ್ನು ನೋಡಲು ಕಾಯುತ್ತಿದ್ದೇನೆ, ನಾನು ಮಾವನ ಮನೆಗೆ ಹೋಗುತ್ತೇನೆ ಎನ್ನುತ್ತಾನೆ, ಜಯಂತ್ ನಾನು ಹೇಳಿದ್ದು ಜಾಹ್ನವಿ ಆತ್ಮ ಬರುತ್ತದೆ ಅಂತ ಎಂದು ಶಾಂತಮ್ಮ ಹೇಳುತ್ತಾಳೆ. ಆದರೆ ಸೈಕೋ ಜಯಂತನಿಗೆ ಅದು ಅರ್ಥವಾಗುವುದಿಲ್ಲ, ಹೇಗಾದರೂ ಸರಿ ನಾನು ಇಂದು ನನ್ನ ಚಿನ್ನುಮರಿಯನ್ನು ನೋಡಲೇಬೇಕು ಎಂದು ಮಾವನ ಮನೆಗೆ ಹೊರಡುತ್ತಾನೆ, ಜಯಂತನ ಹುಚ್ಚಾಟ ಕಂಡು ಶಾಂತಮ್ಮ ದಂಗಾಗುತ್ತಾಳೆ.
ಮತ್ತೊಂದೆಡೆ ಪ್ರಕಾಶ ಬಂದು ಜವರೇಗೌಡ ಹಾಗೂ ಮರೀಗೌಡನ ಬಳಿ ಆಕ್ಸಿಡೆಂಟ್ ಕೇಸ್ನಲ್ಲಿ ಸರಂಡರ್ ಆದವನ ಬಗ್ಗೆ ಮಾತನಾಡುತ್ತಾನೆ, ನಮಗೆ ಒಳ್ಳೆ ಹುಡುಗನನ್ನು ಹಿಡಿದುಕೊಟ್ಟಿದ್ದೀಯ ಬಿಡು ಪ್ರಕಾಶ, ನಿನ್ನಿಂದ ಬಹಳ ಸಹಾಯ ಆಯ್ತು, ಯಾವುದಕ್ಕೂ ಒಮ್ಮೆ ಅವನ ಮುಖ ನೋಡೋಣ ನಿನ್ನ ಬಳಿ ಇದ್ದರೆ ಫೋಟೋ ತೋರಿಸು ಎನ್ನುತ್ತಾನೆ, ಅವರಿಗೆ ಫೋಟೋ ತೋರಿಸಬೇಕು ಎನ್ನುವಷ್ಟರಲ್ಲಿ ಅಲ್ಲಿಗೆ ಸಿದ್ದು ಬರುತ್ತಾನೆ, ಸಿದ್ದುಗೆ ಫೋಟೋ ತೋರಿಸಬೇಡ, ಈ ವಿಚಾರವನ್ನೂ ಅವನ ಮುಂದೆ ಮಾತನಾಡಬೇಡ ಎಂದು ಮರೀಗೌಡ ಸನ್ನೆ ಮಾಡುತ್ತಾನೆ, ಅದನ್ನು ಕೇಳಿ ಪ್ರಕಾಶ ಮೊಬೈಲನ್ನು ಜೇಬಿನೊಳಗೆ ಇಡುತ್ತಾನೆ, ನನಗೆ ಗೊತ್ತು ನೀವು ಆ ವ್ಯಕ್ತಿಯ ಬಗ್ಗೆ ಮಾತನಾಡುತ್ತಿದ್ದೀರಿ, ನಾನು ಬಂದ ಕೂಡಲೇ ಮಾತು ಬದಲಿಸಿದಿರಿ ಅವನು ಯಾರೆಂದು ನಾನು ತಿಳಿದುಕೊಳ್ಳಬೇಕು ಎನ್ನುತ್ತಾನೆ, ಅಷ್ಟರಲ್ಲಿ ಪ್ರಕಾಶ, ಮನೆಯಿಂದ ಕಾಲ್ ಬಂದಂತೆ ನಾಟಕವಾಗಿ ಅಲ್ಲಿಂದ ಹೊರಡುತ್ತಾನೆ.
ದಾರಿಯಲ್ಲಿ ಪ್ರಕಾಶನಿಗೆ ಚೆಲ್ವಿ ಎದುರಾಗುತ್ತಾಳೆ. ನಾನು ಪೊಲೀಸ್ ಸ್ಟೇಷನ್ಗೆ ಹೋಗಿ ವೆಂಕಿ ಕಾಣೆಯಾಗಿದ್ದರ ಬಗ್ಗೆ ಕಂಪ್ಲೇಂಟ್ ಕೊಟ್ಟು ಬಂದಿದ್ದೇನೆ ನಮ್ಮ ಸಂಬಂಧಿಯೊಬ್ಬರು ನನಗೆ ಸಹಾಯ ಮಾಡಿದರು ಎಂದು ಎಲ್ಲವನ್ನೂ ವಿವರಿಸುತ್ತಾಳೆ. ಅದನ್ನು ಕೇಳಿ ಪ್ರಕಾಶ ಶಾಕ್ ಆಗುತ್ತಾನೆ. ಛೇ ಮೊದಲೇ ಗೊತ್ತಿದ್ದರೆ ವೆಂಕಿಯನ್ನು ಸರಂಡರ್ ಮಾಡುತ್ತಿರಲಿಲ್ಲ ಎಂಥ ಎಡವಟ್ಟು ಆಯ್ತು ಎಂದುಕೊಳ್ಳುತ್ತಾನೆ, ಇತ್ತ ಇನ್ಸ್ಪೆಕ್ಟರ್ ಜವರೇಗೌಡನ ಬಳಿ ಬಂದು ವಿಚಾರ ತಿಳಿಸುತ್ತಾನೆ, ಅದನ್ನು ಕೇಳಿ ಜವರೇಗೌಡ ಕೂಡಾ ಶಾಕ್ ಆಗುತ್ತಾನೆ, ಇದಕ್ಕೆಲ್ಲಾ ಒಂದು ಅಂತ್ಯ ಹಾಡಲೇಬೇಕು, ಆದಷ್ಟು ಬೇಗ ಅವನನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿ ಜೈಲಿಗೆ ಕಳಿಸಿ ಮುಂದಿನದನ್ನು ನಂತರ ನೋಡಿಕೊಳ್ಳೋಣ ಎನ್ನುತ್ತಾನೆ.
ಜವರೇಗೌಡ-ಮರೀಗೌಡನಿಂದ ವೆಂಕಿ ಶಾಶ್ವತವಾಗಿ ಜೈಲಿಗೆ ಹೋಗುತ್ತಾನಾ? ಜಾಹ್ನವಿ ನಿಜವಾಗಲೂ ಅಪ್ಪನ ಮನೆಗೆ ಬರುತ್ತಾಳಾ? ಜಯಂತ್ ಅವಳನ್ನು ನೋಡುತ್ತಾನಾ? ಸೋಮವಾರದ ಸಂಚಿಕೆಯಲ್ಲಿ ತಿಳಿಯಲಿದೆ.