ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೂ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿ ಏಪ್ರಿಲ್ 9ರ ಎಪಿಸೋಡ್ ಕಥೆ ಇಲ್ಲಿದೆ. ಜಾಹ್ನವಿಯನ್ನು ಕಳೆದುಕೊಂಡು ಜಯಂತ್ಗೆ ದಿಕ್ಕು ತೋಚದಂತೆ ಆಗಿದೆ. ಇಷ್ಟು ದಿನ ಚಿನ್ನುಮರಿ ಚಿನ್ನುಮರಿ ಎನ್ನುತ್ತಾ ಹೆಂಡತಿ ಹಿಂದೆ ಓಡಾಡುತ್ತಿದ್ದ ಜಯಂತನಿಗೆ ಮೊದಲು ತನಗೆ ಜೊತೆಯಾಗಿದ್ದ ಗಿಡಗಳೇ ಆಸರೆ ಆಗಿದೆ. ಮಾವನ ಮನೆಯಿಂದ ತನ್ನ ಮನೆಗೆ ವಾಪಸ್ ಬರುವ ಜಯಂತ್, ಜಾಹ್ನವಿ ಫೋಟೋ ನೋಡುತ್ತಾ, ಅವಳ ದನಿ ಕೇಳುತ್ತಾ ಅವಳೊಂದಿಗೆ ಕಳೆದ ಸಮಯವನ್ನು ಮೆಲುಕು ಹಾಕುತ್ತಿದ್ದಾನೆ.
ನಿಮಗೆ ನನ್ನ ಪ್ರೀತಿಯಿಂದ ಹಿಂಸೆ ಆಗುತ್ತಿದೆ ಎಂದು ನೀವು ಹೇಳಿಬಿಡಬೇಕಿತ್ತು, ನನ್ನ ಬಿಟ್ಟು ಹೋಗುವ ಮನಸ್ಸು ಹೇಗಾದರೂ ಬಂತು ನಿಮಗೆ ಎಂದು ತನ್ನಷ್ಟಕ್ಕೆ ತಾನೇ ಮಾತನಾಡಿಕೊಳ್ಳುತ್ತಾನೆ. ಗಿಡಗಳ ಜೊತೆ ಮಾತನಾಡುತ್ತಾ ಗಲಾಟೆ ಮಾಡಬೇಡಿ, ಊಟ ಕೊಡುತ್ತೇನೆ ತಿನ್ನಿ, 3 ದಿನಗಳು ಇಲ್ಲ ಎಂದರೆ ನಿಮ್ಮನ್ನು ನೀವು ನೋಡಿಕೊಳ್ಳಲು ಆಗುವುದಿಲ್ಲ. ನಿಮಗೆ ಯಾವ ಕಥೆ ಹೇಳುವುದು? ಸರಿ ಒಬ್ಬಳು ರಾಜಕುಮಾರಿ ಕಥೆ ಹೇಳುತ್ತೇನೆ ಕೇಳಿ, ಒಂದು ಊರಿನಲ್ಲಿ ರಾಜ ಇದ್ದ, ಅವನಿಗೆ ಪ್ರೀತಿ, ಪ್ರೇಮದ ಬಗ್ಗೆ ಏನೂ ಗೊತ್ತಿರಲಿಲ್ಲ, ಆಗ ಆ ಸಮಯಕ್ಕೆ ಅವನ ಬಾಳಿಗೆ ಒಬ್ಬಳು ರಾಜಕುಮಾರಿ ಬರುತ್ತಾಳೆ. ಪ್ರೀತಿ, ಪ್ರೇಮವನ್ನು ಅರ್ಥ ಮಾಡಿಸುತ್ತಾಳೆ. ಆದರೆ ರಾಜನನ್ನು ಅರ್ಧಕ್ಕೆ ಬಿಟ್ಟು ಹೋಗುತ್ತಾಳೆ ಎಂದು ಜಾಹ್ನವಿಯ ಬಗ್ಗೆ ಹೇಳುತ್ತಾ ಕಣ್ಣೀರಿಡುತ್ತಾನೆ.
ಹೀಗೆ ತನ್ನಷ್ಟಕ್ಕೆ ತಾನೇ ಮಾತನಾಡಿಕೊಳ್ಳುವ ಜಯಂತನಿಗೆ ಬಾಲ್ಯದಿಂದ ತನ್ನನ್ನು ಮಗನಂತೆ ನೋಡಿಕೊಳ್ಳುತ್ತಿದ್ದ ಶಾಂತಮ್ಮನ ನೆನಪಾಗುತ್ತದೆ. ತಾತ ನನ್ನನ್ನು ಕಡೆಗಣಿಸುತ್ತಿದ್ದಾಗ ನನ್ನ ಪರ ಇದ್ದು ನನಗೆ ಸಮಾಧಾನ ಹೇಳಿ, ನನ್ನನ್ನು ಮಗನಂತೆ ಶಾಂತಮ್ಮ ಉಪಚರಿಸುತ್ತಿದ್ದರು. ಈಗ ಅವರನ್ನೇ ಮನೆಗೆ ಕರೆದುಕೊಂಡು ಬರುತ್ತೇನೆ ಎಂದು ಶಾಂತಮ್ಮನನ್ನು ಹುಡುಕಿ ಹೊರಡುತ್ತಾನೆ. ಬಹಳ ದಿನಗಳ ನಂತರ ಜಯಂತ್ ತನ್ನನ್ನು ಹುಡುಕಿ ಬಂದಿದ್ದಕ್ಕೆ ಶಾಂತಮ್ಮ ಆಶ್ಚರ್ಯಗೊಳ್ಳುತ್ತಾಳೆ. ಮನೆಗೆ ಬಂದು ತನ್ನನ್ನು ನೋಡಿಕೊಳ್ಳುವಂತೆ ಜಯಂತ ಮನವಿ ಮಾಡುತ್ತಾನೆ. ಆದರೆ ಆತನ ಬಗ್ಗೆ ಗೊತ್ತಿರುವ ಶಾಂತಮ್ಮ ನಾನು ಬರಲು ಆಗುವುದಿಲ್ಲ, ನನ್ನ ಗಂಡನಿಗೆ ಆರೋಗ್ಯ ಸರಿ ಇಲ್ಲ ಎನ್ನುತ್ತಾಳೆ. ಅಂಕಲ್ ಬಳಿ ನಾನು ಮಾತನಾಡುತ್ತೇನೆ ಎಂದು ಜಯಂತ್ ಹೇಳುತ್ತಾನೆ.
ಅಷ್ಟರಲ್ಲಿ ಅಲ್ಲಿಗೆ ಶಾಂತಮ್ಮನ ಗಂಡ ಬರುತ್ತಾನೆ. ಜಯಂತ್ ಎಲ್ಲಾ ವಿಚಾರವನ್ನು ಅವನಿಗೆ ಹೇಳುತ್ತಾನೆ. ಬೇಡ ಎಂದು ಹೇಳುವಂತೆ ಶಾಂತಮ್ಮ ಸನ್ನೆ ಮಾಡುತ್ತಾಳೆ. ಆದರೆ ಜಯಂತನ ಕೈಯ್ಯಲ್ಲಿ ಹಣದ ಕಂತೆಯನ್ನು ನೋಡಿ ಶಾಂತಮ್ಮನ ಗಂಡ ಅವರು ಅಷ್ಟು ಕರೆಯುತ್ತಿದ್ದಾರೆ, ನೀನು ಹೋಗಿ ಸಹಾಯ ಮಾಡು ಎನ್ನುತ್ತಾನೆ. ಶಾಂತಮ್ಮನಿಗೆ ಇಷ್ಟವಿಲ್ಲದಿದ್ದರೂ ಜಯಂತನ ಜೊತೆ ಮನೆಗೆ ಬರುತ್ತಾಳೆ. ತಾನು ಜಾಹ್ನವಿಯನ್ನು ಪ್ರೀತಿಸಿದ್ದು, ಮದುವೆ ಆಗಿದ್ದು ಅವಳನ್ನು ಕಳೆದುಕೊಂಡಿದ್ದು ಎಲ್ಲವನ್ನೂ ಶಾಂತಮ್ಮನ ಬಳಿ ಹೇಳುತ್ತಾನೆ. ಜಾಹ್ನವಿ ಬಗ್ಗೆ ವಿವರಿಸುವಾಗ ಶಾಂತಮ್ಮನಿಗೆ ಎಲ್ಲವೂ ಅರ್ಥವಾಗುತ್ತದೆ. ನಿನ್ನ ಉಸಿರುಗಟ್ಟಿಸುವ ಪ್ರೀತಿ ಅವಳಿಗೆ ಕಷ್ಟವಾಗಿ ಅವಳೇ ಸಮುದ್ರಕ್ಕೆ ಹಾರಿ ಪ್ರಾಣ ಕಳೆದುಕೊಂಡಿರುತ್ತಾಳೆ ಎಂದುಕೊಳ್ಳುತ್ತಾಳೆ.
ಮತ್ತೊಂದೆಡೆ ವೆಂಕಿಯನ್ನು ನೆನಪಿಸಿಕೊಂಡು ಚೆಲ್ವಿ ಕಣ್ಣೀರಿನಲ್ಲಿ ದಿನ ದೂಡುತ್ತಿದ್ದಾಳೆ. ವೆಂಕಿ ಬಗ್ಗೆ ಅವರ ಮನೆಯವರಿಗೆ ಹೇಳುವಂತೆ ಅವಳ ತಾಯಿ ಹೇಳುತ್ತಾರೆ. ಚೆಲ್ವಿಗೆ ಅದು ಸರಿ ಎನಿಸಿ ಮಾವನ ಮನೆಗೆ ಬರುತ್ತಾಳೆ. ಆದರೆ ಅಲ್ಲಿ ಎಲ್ಲರೂ ಜಾನುವನ್ನು ನೆನಪಿಸಿಕೊಂಡು ಕಣ್ಣೀರಿಡುವುದುನ್ನು ನೋಡಿ ಈ ಸಮಯದಲ್ಲಿ ವೆಂಕಿ ಬಗ್ಗೆ ಹೇಳುವುದು ಸರಿ ಅಲ್ಲ ಎನಿಸುತ್ತದೆ. ನಾನು ಮನೆಗೆ ಹೋಗುತ್ತೇನೆ ಎಂದು ಚೆಲ್ವಿ ಹೊರಡುತ್ತಾಳೆ. ಚೆಲ್ವಿ ನಡೆ ಶ್ರೀನಿವಾಸನಿಗೆ ಅನುಮಾನ ಬಂದು ವೆಂಕಿ ಬಗ್ಗೆ ಕೇಳುತ್ತಾನೆ. ಚೆಲ್ವಿ ನಡೆದ ವಿಚಾರವನ್ನು ಹೇಳುತ್ತಾಳೆ. ಮನೆ ಪರಿಸ್ಥಿತಿ ಸರಿ ಇಲ್ಲದ್ದಕ್ಕೆ ನಿಮ್ಮಿಂದ ವಿಚಾರ ಮುಚ್ಚಿಟ್ಟಿದ್ದೆ ಎಂದು ಚೆಲ್ವಿ ಹೇಳುತ್ತಾಳೆ. ಭಾವನಾ ಜೊತೆ ವೆಂಕಿ ಏನಾದರೂ ಹೇಳಿದ್ದನಾ ಕೇಳುತ್ತೇನೆ ಎಂದು ಶ್ರೀನಿವಾಸ್, ಅವಳಿಗೆ ಫೋನ್ ಮಾಡುತ್ತಾನೆ. ಮಗಳನ್ನು ನೋಡಲು ಚೆಲ್ವಿ ಜೊತೆ ಹೊರಡುತ್ತಾನೆ.
ಜೈಲಿನಲ್ಲಿ ಇರುವುದು ವೆಂಕಿಯೇ ಎಂದು ಎಲ್ಲರಿಗೂ ಗೊತ್ತಾಗುವುದಾ? ಜಯಂತನ ಮನೆಯಲ್ಲಿ ಶಾಂತಮ್ಮ ಉಳಿದುಕೊಳ್ಳುತ್ತಾಳಾ? ಮುಂದಿನ ಸಂಚಿಕೆಗಳಲ್ಲಿ ತಿಳಿಯಲಿದೆ.