ಇತ್ತೀಚೆಗೆ ಬೆಳಗಾವಿಯಲ್ಲಿ ಕಂಡಕ್ಟರ್ ಗಲಾಟೆಯೊಂದು ನಡೆದಿತ್ತು. ಇದು ಇಡೀ ರಾಜ್ಯಾದ್ಯಂತ ಸುದ್ದಿಯಾಗಿತ್ತು. ಸರ್ಕಾರ ಸಚಿವರು ಸೇರಿದಂತೆ ಕನ್ನಡ ಪರ ಸಂಘಟನೆಗಳು ಬಸ್ ಕಂಡಕ್ಟರ್ ಭೇಟಿ ಮಾಡಿ ಧೈರ್ಯ ತುಂಬಿದ್ದರು. ಈ ಮರಾಠಿಗರ ಅಟ್ಟಹಾಸಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಕನ್ನಡ ಪರ ಸಂಘಟನೆಗಳು ಬೃಹತ್ ಹೋರಾಟಕ್ಕೆ ಮುಂದಾಗಿವೆ.
ಹೌದು, ರಾಜ್ಯ ಮತ್ತೊಂದು ಬಾರಿ ಬಂದ್ ಆಗ್ತಾ ಇದೆ. ಕರ್ನಾಟಕದಲ್ಲಿ ಇದೀಗ ಮತ್ತೊಂದ ಬೃಹತ್ ಹೋರಾಟ ಘೋಷಿಸಿವೆ ಕನ್ನಡ ಪರ ಸಂಘಟನೆಗಳು. ಎಂಇಎಸ್ ಪುಂಡಾಟಿಕೆಗೆ ಶಾಶ್ವತ ನಿಯಂತ್ರಣ ಆಗ್ರಹಿಸಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ರಾಜ್ಯ ಬಂದ್ ಗೆ ಕರೆ ನೀಡಿದೆ. ಬೆಳಗಾವಿಯಲ್ಲಿ ಎಂಇಎಸ್ ಪುಂಡರ ಹಾವಳಿ ಮೀತಿ ಮೀರುತ್ತಿರುವ ಹಿನ್ನೆಲೆಯಲ್ಲಿ ಕನ್ನಡಪರ ಸಂಘಟನೆಗಳು ಸಿಡಿದೆದ್ದಿವೆ. ಈ ಸಂಬಂಧ ಕನ್ನಡ ಚಳುವಳಿ ಪಕ್ಷದ ನಾಯಕ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಇಂದು ಖಾಸಗಿ ಹೊಟೇಲ್ ನಲ್ಲಿ ಬೃಹತ್ ಸಭೆ ನಡೆಯಿತು. ಈ ಸಭೆಯಲ್ಲಿ ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘ, ಕನ್ನಡ ಸೇನೆ , ಕರ್ನಾಟಕ ರಕ್ಷಣಾ ಸಮಿತಿ, ಕಾರ್ಮಿಕ ಪರಿಷತ್ ,ನಮ್ಮ ಕರ್ನಾಟಕ ಸೇನೆ ಸೇರಿದಂತೆ ಸಾವಿರಕ್ಕೂ ಸಂಘಟನೆ ಭಾಗಿಯಾದ್ವು.

ಈ ವೇಳೆ ಹಂತ- ಹಂತವಾಗಿ ಹೋರಾಟಕ್ಕೆ ಕನ್ನಡ ಸಂಘಟನೆಗಳು ತೀರ್ಮಾನ ಮಾಡಿದ್ವು. ಮೊದಲು ಮಾರ್ಚ್ 4 ರಂದು ರಾಜಭವನ ಚಲೋ, ಮಾರ್ಚ್ 7 ರಂದು ಬೆಳಗಾವಿ ಚಲೋ, ಮಾರ್ಚ್11 ರಂದು ಮೇಕೆದಾಟಿಗಾಗಿ ಅತ್ತಿಬೆಲೆ ತಮಿಳುನಾಡು ಗಡಿ ಬಂದ್
ಮಾರ್ಚ್ 14 ರಾಮನಗರ ಮಂಡ್ಯ ಮೈಸೂರು ಜಿಲ್ಲಾಧಿಕಾರಿಗಳ ಕಚೇರಿ ಬಳಿ ಪ್ರತಿಭಟನೆ ಮಾಡಲಾಗುತ್ತದೆ. ಮಾರ್ಚ್ 17 ಹೊಸಕೋಟೆ– ಚೆನ್ನೈ ಹೆದ್ದಾರಿ ತಡೆ ಮಾಡಲಾಗುತ್ತದೆ. ಮಾರ್ಚ್ 18 ಕನ್ನಡಪರ ಸಂಘಟನೆಗಳ ಸಭೆ ಇರಲಿದೆ. ಮಾರ್ಚ್ 22 ರಂದು ಬೆಳಗ್ಗೆ 6ರಿಂದ ಸಂಜೆ 6 ರವರೆಗೆ ರಾಜ್ಯವ್ಯಾಪಿ ಬಂದ್ ನಡೆಸಲು ಕನ್ನಡಪರ ಸಂಘಟನೆ ತೀರ್ಮಾನ ಮಾಡಿದ್ವು. ಈ ವೇಳೆ ಮಾತನಾಡಿದ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್, ಬೆಳಗಾವಿಯಲ್ಲಿ ಕನ್ನಡಿಗರ ಮೇಲೆ ನಿರಂತರ ದಾಳಿ ನಡೆಯುತ್ತಿದೆ. ಬೆಳಗಾವಿ ನಮ್ಮದು. ಮರಾಠ ಪುಂಡರ, ಎಂಇಎಸ್ ಗೂಂಡಾಗಳ ವಿರುದ್ಧ ನಮ್ಮ ಹೋರಾಟ ನಡೆಯಲಿದೆ. ಕೂಡಲೇ ಸರ್ಕಾರ ಎಂಇಎಸ್ ಅನ್ನು ನಿಷೇಧಿಸಬೇಕು ಎಂದು ಆಗ್ರಹಿಸಿದರು.

ಇನ್ನು ಮರಾಠಿಗರ ದಬ್ಬಾಳಿಕೆ ವಿರುದ್ಧ ಸರಣಿ ಪ್ರತಿಭಟನೆಗಳನ್ನು ಕೈಗೊಳ್ಳಲು ನಿರ್ಧರ ಮಾಡಿದ್ದೇವೆ. ಪ್ರತಿ ಬಾರಿಯೂ ನಾವು ಎಮ್ ಇಎಸ್ ನಿಷೇಧ ಮಾಡಿ ಅಂತೀವಿ ಆದರೆ ಸರ್ಕಾರ ಕ್ರಮ ವಹಿಸಲ್ಲ. ಈ ಹಿಂದೆ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದಾಗಲೂ ಮನವಿ ಮಾಡಿದ್ದೆವು. ಆಗ ಎಂಇಎಸ್ ನಿಷೇಧ ಮಾಡುತ್ತೇವೆ ಎಂದಿದ್ದರು. ಬಂದ್ ಮಾಡುವವರು ಆಗ ಹಿಂದೆ ಪಡೆದಿದ್ದೆ. ನನ್ನ ಜೀವನದಲ್ಲಿ ಮುಂದೆ ಇಟ್ಟ ಹೆಜ್ಜೆ ಹಿಂದಕ್ಕೆ ಇಟ್ಟಿರಲಿಲ್ಲ. ಎಂಇಎಸ್ ನಿಷೇಧ ಮಾಡಬಹುದು ಎಂದು ನಂಬಿಕೆಯಿಂದ ಬಂದ್ ವಾಪಸ್ ಪಡೆದಿದ್ದೆವು. ಆದರೆ ಅವರು ಮಾತಿಗೆ ತಪ್ಪಿದರು. ಈ ಬಾರಿ ಬಂದ್ ವಾಪಸ್ ಪಡೆಯುವ ಮಾತೇ ಇಲ್ಲ. ಸಿಎಂ ಸಿದ್ದರಾಮಯ್ಯನವರೇ ನೀವಾದರೂ ಎಂಇಎಸ್ ಅನ್ನು ನಿಷೇಧಿಸಿ ಎಂದು ಆಗ್ರಹಿಸಿದರು.
ಇನ್ನು ಇದೇ ವೇಳೆ ರಾಜ್ಯದ ವಿಚಾರದಲ್ಲಿ ಕೇಂದ್ರ ಸರ್ಕಾರ ತೋರುತ್ತಿರುವ ಮಲತಾಯಿ ಧೋರಣೆಯನ್ನು ಖಂಡಿಸಿಯೂ ಕೇಂದ್ರದ ವಿರುದ್ಧದ ನಮ್ಮ ಬಂದ್ ಇರಲಿದೆ ಎಂದರು. ಒಟ್ನಲ್ಲಿ ಮಾರ್ಚ್ 22 ರಂದು ಕರ್ನಾಟಕ ಬಂದ್ ಗೆ ಕರೆಯೇನೋ ಕೊಡಲಾಗಿದೆ. ಸರ್ಕಾರ ಇದಕ್ಕೆ ಯಾವ ರೀತಿ ಪ್ರತಿಕ್ರಿಸುತ್ತದೆ ಕಾದು ನೋಡಬೇಕು