ಹೋರಾಗಾಗರು ರಾಜಕೀಯ ಪಕ್ಷ ಕಟ್ಟುವುದು ಹೊಸದಲ್ಲ, ಅಥವಾ ರಾಜಕೀಯಕ್ಕೆ ಧುಮುಕೋದೂ ಹೊಸದಲ್ಲ. ರಾಜಕೀಯಕ್ಕೆ ಬಂದು ಗೆದ್ದದ್ದೂ ಇದೆ, ಅದೇ ರೀತಿ ಸೋತು ಸುಣ್ಣವಾಗಿದ್ದೂ ಇದೆ. ಅದಕ್ಕೆ ಅನೇಕ ಉದಾಹರಣೆಗಳು ಇವೆ. ಹಿಂದೆ ವಾಟಾಳ್ ನಾಗರಾಜ್ ಕೂಡ ರಾಜಕೀಯ, ಹೋರಾಟ ಅಂತ ಯಶಸ್ವಿಯಾದವರು. ಈಗ ಮತ್ತೊಬ್ಬ ಕನ್ನಡ ಹೋರಾಟಗಾರರು ರಾಜಕೀಯಕ್ಕೆ ಧುಮುಕುವ ಸುಳಿವು ಕೊಟ್ಟಿದ್ದಾರೆ.
ಕನ್ನಡ ಪರ ಹೋರಾಟಗಳು ಅಂತ ಬಂದಾಗ ನೆನಪಾಗೋ ಹೆಸರುಗಳ ಪೈಕಿ ಕರವೇ ನಾರಾಯಣಗೌಡ ಕೂಡ ಒಬ್ಬರು. ಎಲ್ಲೇ ಕನ್ನಡ ಅಥವಾ ಕನ್ನಡಿಗರಿಗೆ ತೊಂದರೆ ಆದರೆ ಅಲ್ಲಿ ಕರವೇ ನಾರಾಯಣಗೌಡ ಇರ್ತಾರೆ. ಕನ್ನಡ ಪರ ಹೋರಾಟದಲ್ಲಿ ಕೇವಲ ಕನ್ನಡಿಗರು, ನಾಡು ನುಡಿ ಜನದ ಬಗ್ಗೆ ಮಾತ್ರ ಬೃಹತ್ ಹೋರಾಟ ಮಾಡಲು ಸಾಧ್ಯ ಎನ್ನುವಂಗಾಗಿದೆ. ಹೀಗಾಗಿ ರಾಜಕೀಯದಲ್ಲಿ ಇದ್ದರೆ ಅನೇಕ ಸಮಸ್ಯೆಗಳಿಗೆ ಪರಿಹಾರ ನೀಡಬಹುದು ಅನ್ನೋ ಉದ್ದೇಶ ಕರವೇ ನಾರಾಯಣ ಗೌಡರದ್ದು.

ಹೌದು, ಸದ್ಯ ರಾಜಕೀಯಕ್ಕೆ ಧುಮುಕುವ ನಿರ್ಧಾರ ಮಾಡಿದ್ದಾರಾ ನಾರಾಯಣಗೌಡರು ಅನ್ನೋ ಚರ್ಚೆ ಶುರುವಾಗಿದೆ. ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಇಂತಹದೊಂದು ಸುಳಿವು ಬಿಟ್ಟು ಕೊಟ್ಟಿದ್ದಾರೆ ಎನ್ನಲಾಗಿದೆ. ಸಹಜವಾಗಿ ರಾಜಕೀಯ ಅಂದಾಕ್ಷಣ ಯಾವ ಪಕ್ಷಕ್ಕೆ ಸೇರುತ್ತಾರೆ ಅನ್ನೋ ಪ್ರಶ್ನೆ ಎದ್ದೇಳುತ್ತೆ. ಹಾಗಾದ್ರೆ ನಾರಾಯಣಗೌಡ ಯಾವ ಪಕ್ಷಕ್ಕೆ ಸೇರ್ತಾರೆ, ಹೊಸ ಪಕ್ಷ ಕಟ್ಟುತ್ತಾರಾ ಅನ್ನೋದ ಕುರಿತು ಹೇಳ್ತೀವಿ ನೋಡಿ.
ಹೌದು, ಬೆಳಗಾವಿಯಲ್ಲಿ ನಡೆದ ಕಂಡಕ್ಟರ್ ಗಲಾಟೆ ಸಂಬಂಧ ಸರ್ಕಾರ ಹಾಗೂ ಸಚಿವರನ್ನ ತರಾಟೆಗೆ ತೆಗೆದುಕೊಂಡಿರೋ ನಾರಾಯಣಗೌಡ್ರು, ಅಸಮಾಧಾವನ್ನೂ ಹೊರ ಹಾಕಿದರು. ಕನ್ನಡಿಗರ ವಿಚಾರದಲ್ಲಿ ಸರ್ಕಾರದ ಸಚಿವರು ಯಾವ ರೀತಿ ನಡೆದುಕೊಳ್ತಿದೆ ಅಂತ ಬೇಸರ ವ್ಯಕ್ತಪಡಿಸಿದರು. ಈ ವೇಳೆಯಲ್ಲೇ ತಾವು ರಾಜಕೀಯದಲ್ಲಿ ಇದ್ದಿದ್ದರೆ ಈ ರೀತಿ ಆಗ್ತಾ ಇರಲಿಲ್ಲ ಅನ್ನೋ ಅರ್ಥದಲ್ಲಿ ಮಾತಾನಾಡಿದರು. ಇದೆಲ್ಲವನ್ನ ನೋಡಿದ್ರೆ ರಾಜಕೀಯ ಎಂಟ್ರಿಗೆ ಸುಳಿವು ಬಿಟ್ರಾ ನಾರಾಯಣಗೌಡ ಅಂತ ಚರ್ಚೆಆಗುತ್ತಿದೆ.
ಶಿವರಾತ್ರಿ ಹಬ್ಬದ ದಿನವೇ ಇಂತಹದೊಂದು ಹೇಳಿಕೆ ನೀಡಿದ್ದಾರೆ ನಾರಾಯಣಗೌಡ. ಇವತ್ತು ಮಹಾಶಿವರಾತ್ರಿ. ಶಿವ ನನ್ನ ಇಷ್ಟದೈವ. ಶಿವ ತನ್ನನ್ನು ನಂಬಿದವರನ್ನು ಎಂದೂ ಕೈಬಿಟ್ಟವನಲ್ಲ. ಅವನು ತನ್ನ ಇಷ್ಟದಂತೆ ಬದುಕಿದವನು. ಅವನಲ್ಲಿ ಕಪಟವಿಲ್ಲ, ಕುತಂತ್ರವಿಲ್ಲ. ಹೀಗಾಗಿಯೇ ಶಿವ ನನಗೆ ಇಷ್ಟ. ಆದರೆ ಈ ವರ್ಷ ಶಿವರಾತ್ರಿಯ ಸಡಗರ ನನಗೆ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮುಂದುವರೆದು ಮಾತನಾಡಿರೊ ಅವರು, ನಿನ್ನೆ ಬೆಳಗಾವಿಯ ಪ್ರತಿಭಟನೆ ಮುಗಿಸಿ ವಾಪಸ್ ಬೆಂಗಳೂರಿಗೆ ಬಂದೆ. ತಡರಾತ್ರಿಯವರೆಗೆ ಕರೆಗಳು ಬರುತ್ತಲೇ ಇದ್ದವು. ಆ ಕರೆಗಳು ಕೆಪಿಎಸ್ಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಮಾಡಿದ್ದು. ಕರೆ ಮಾಡಿದ ಎಲ್ಲರೂ ಕೂಡ ನ್ಯಾಯ ಕೊಡಿಸಿ ಎಂದು ಹೇಳುವವರೇ.

ನಾವು ರಾಜಕೀಯದವರನ್ನ ನಂಬುತ್ತಿಲ್ಲ. ಅವರಿಂದ ನಮಗೆ ಯಾವುದೇ ಉಪಯೋಗ ಆಗ್ತಾ ಇಲ್ಲ. ಅವರಿಂದ ನಮಗೆ ಯಾವುದೇ ಲಾಭವೂ ಇಲ್ಲ. ನೀವೇ ನಮಗೆ ನ್ಯಾಯ ಒದಗಿಸಬೇಕು ಅಂಥ ಕೇಳಿಕೊಂಡರು. ನಮಗೆ ನ್ಯಾಯ ಸಿಗದೇ ಹೋದ್ರೆ ನಾವು ಸಾಯುವ ಸ್ಥಿತಿ ಬರಲಿದೆ ಅನ್ನೋ ಅರ್ಥದಲ್ಲಿ ನೋವು ತೋಡಿಕೊಂಡರು ಎಂದು ಬೇಸರದಲ್ಲಿ ಹೇಳಿದರು.
ಇನ್ನು ಈ ವಿದ್ಯಾರ್ಥಿಗಳಿಗೆ ನಾನು ಹೇಳಿದೆ ನಾನು ಯಾವ ಅಧಿಕಾರ ಸ್ಥಾನದಲ್ಲೂ ಇಲ್ಲ. ಸರ್ಕಾರಕ್ಕೆ ಅಥವಾ ಸಂಬಂಧಪಟ್ಟವರಿಗೆ ಹೇಳಬಹುದು ಅಷ್ಟೆ ಅಲ್ಲ ನಿಮ್ಮ ಜೊತೆ ಸೇರಿ ನ್ಯಾಯಕ್ಕಾಗಿ ಹೋರಾಟ ಮಾಡಬಹುದು ಅಷ್ಟೆ ಎಂದೆ. ಅದಕ್ಕೆ ಆ ಮಕ್ಕಳು ಗೌಡ್ರೇ ನೀವೇ ಯಾಕೆ ಒಂದು ಪ್ರಾದೇಶಿಕ ಪಕ್ಷ ಸ್ಥಾಪಿಸಬಾರದು, ನಾವೆಲ್ಲ ನಿಮ್ಮ ಜೊತೆ ಇರುತ್ತೇವೆ ಎಂದು ಹೇಳಿದರು. ಅದಕ್ಕೆ ನಾನು ಅವರಿಗೆ ಮನವರಿಕೆ ಮಾಡಿಕೊಟ್ಟೆ, ಪಕ್ಷ ಸ್ಥಾಪಿಸುವುದು, ಚುನಾವಣೆಯಲ್ಲಿ ಸೆಣೆಸುವುದು ಅಷ್ಟು ಸುಲಭದ ವಿಷಯವಲ್ಲ. ಈಗ ಅದಕ್ಕೆ ಸರಿಯಾದ ಕಾಲವೂ ಅಲ್ಲ. ಕರ್ನಾಟಕ ಜನರಿಗೆ ಕನ್ನಡ ಕೇಂದ್ರಿತ ರಾಜಕೀಯ ಪಕ್ಷವೊಂದು ಬೇಕು. ಅದರ ಅಗತ್ಯ ಇದೆ ಅಂತ ಅನ್ನಿಸಿದಾಗಲೇ ಪಕ್ಷ, ಚುನಾವಣೆ ಸಾಧ್ಯ.
ಆಗ ಮಾತ್ರ ಚುನಾವಣೆ ಸ್ಪರ್ಧೆ ಮಾಡಲು, ರಾಜಕೀಯ ಪಕ್ಷ ಕಟ್ಟಲು ಸಾಧ್ಯ ಎಂದೆ ಎಂದು ಹೇಳಿದ್ದಾರೆ. ಸದ್ಯ ನಾರಾಯಣಗೌಡರಿಗೆ ಚುನಾವಣೆ ಅಥವಾ ರಾಜಕೀಯಕ್ಕೆ ಬರುವ ಮನಸ್ಸು ಹಿಂದೆಯೇ ಮಾಡಿಲ್ಲ ಅಂತಲ್ಲ. ಹಿಂದೆಯೂ ಸಾಕಷ್ಟು ಆಫರ್ ಗಳು ಇದ್ದರೂ ಹೋಗಿಲ್ಲ ಅವರು ಎನ್ನುವ ಸುದ್ದಿಗಳು ಇದ್ದವು. ಈಗ ಅವರ ಬಾಯಲ್ಲೇ ರಾಜಕೀಯ ಪಕ್ಷದ ವಿಚಾರ ಬಂದಿರೋದು ಹೊಸ ಪಕ್ಷ ಕಟ್ಟಲು ರೆಡಿಯಾಗಿದ್ದಾರ ಅನ್ನೋದು ಚರ್ಚೆ ಆಗುತ್ತಿದೆ.