ಜೀಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿಗಳಲ್ಲಿ ಅಮೃತಧಾರೆ ಪ್ರಮುಖವಾದದ್ದು. ಪ್ರತಿ ವಾರ ಟಿಆರ್ಪಿ ರೇಟಿಂಗ್ ನಲ್ಲಿ ಕೂಡ ಈ ಧಾರಾವಾಹಿ ಮುಂಚೂಣಿಯಲ್ಲಿದೆ. ಅಮೃತಧಾರೆ ಧಾರಾವಾಹಿ ಕಿರುತೆರೆ ವೀಕ್ಷಕರಿಗೆ ಒಳ್ಳೆಯ ಮನರಂಜನೆ ನೀಡುವ ಕಂಪ್ಲೀಟ್ ಪ್ಯಾಕೇಜ್ ಎಂದು ಹೇಳಿದರೆ ಖಂಡಿತ ತಪ್ಪಲ್ಲ. ಗೌತಮ್ ಭೂಮಿಯ ಪ್ರೀತಿ ತುಂಬಿದ ದಾಂಪತ್ಯ, ಶಕುಂತಲಾ ಹಾಗೂ ಜೈದೇವ್ ಕುತಂತ್ರ ಎಲ್ಲವೂ ಮೆಚ್ಚಿಕೊಳ್ಳುವಂಥದ್ದು.
ದಿನೇ ದಿನೇ ಕುತೂಹಲ ಹೆಚ್ಚಿಸುತ್ತಿರುವ ಈ ಧಾರಾವಾಹಿಗೆ ಈಗ ಎರಡು ಹೊಸ ಪಾತ್ರಗಳ ಎಂಟ್ರಿ ಆಗಿದೆ. ಇವರು ಯಾರು ಎಂದು ರಿವೀಲ್ ಆಗದೇ ಇದ್ದರೂ ಸಹ, ಈ ಎರಡು ಪಾತ್ರಗಳು ಗೌತಮ್ ದಿವಾನ್ ಅಮ್ಮ ಮತ್ತು ತಂಗಿ ಎಂದು ವೀಕ್ಷಕರು ಕಂಡುಹಿಡಿದಿದ್ದಾರೆ. ಇತ್ತೀಚೆಗೆ ಗೌತಮ್ ತನ್ನ ತಾಯಿ ಮತ್ತು ತಂಗಿಯ ವಿಚಾರವನ್ನ, ಇದ್ದಕ್ಕಿದ್ದಂತೆ ಒಂದು ದಿನ ತಾಯಿ ತನ್ನನ್ನು ಬಿಟ್ಟು ಹೋದ ವಿಚಾರವನ್ನ ಭೂಮಿಕಾ ಜೊತೆಗೆ ಹಂಚಿಕೊಳ್ಳುತ್ತಾನೆ. ಆಗ ಭೂಮಿಕಾ ಸಮಾಧಾನ ಮಾಡಿ, ನಿಮ್ಮ ತಾಯಿ ತಂಗಿ ಇಬ್ಬರು ಸಿಗುತ್ತಾರೆ ಎಂದು ಭರವಸೆ ನೀಡುತ್ತಾಳೆ.

ಇದಾದ ಕೆಲ ದಿನಕ್ಕೆ ಸುಧಾ ಎಂಬ ಹೊಸ ಪಾತ್ರದ ಪರಿಚಯವಾಗಿದೆ. ರಸ್ತೆಯಲ್ಲಿ ಅಪರ್ಣಾಗೆ ಆಕ್ಸಿಡೆಂಟ್ ಆಗೋ ವೇಳೆ, ಬಂದು ಕಾಪಾಡುವ ಸುಧಾಳನ್ನು ಮೆಚ್ಚುವ ಆನಂದ್ ಅಪರ್ಣಾ ತಮ್ಮ ಮನೆಯಲ್ಲಿ ಕೆಲಸಕ್ಕೆ ಸೇರಿಸಿಕೊಂಡಿದ್ದಾರೆ. ಸುಧಾಳ ಅಡುಗೆ, ಆಕೆಯ ನಡವಳಿಕೆ ಎಲ್ಲವೂ ಆನಂದ್ ಅಪರ್ಣಾಗೆ ಅಚ್ಚುಮೆಚ್ಚಾಗಿದೆ. ಆದರೆ ಸುಧಾ ಹಿಂದೆ ಇನ್ಯಾರೋ ಇದ್ದು, ಬೇಕೆಂದೇ ಪ್ಲಾನ್ ಮಾಡಿ, ಆಕೆ ಆನಂದ್ ಮನೆಗೆ ಕೆಲಸಕ್ಕೆ ಸೇರುವ ಹಾಗೆ ಮಾಡಿದ್ದಾರೆ. ಇದೆಲ್ಲವೂ ಒಂದು ಕಡೆಯಾದರೆ, ಸುಧಾ ಹಿನ್ನಲೆಯೇ ಬೇರೆ ಇದೆ.

ಸುಧಾಳಿಗೆ ಗಂಡ ಇಲ್ಲ, ಇರೋದು ತಾಯಿ ಮತ್ತು ಅವಳ ಮುದ್ದು ಪುಟ್ಟ ಮಗಳು. ತಾನೇ ಮನೆ ಜವಾಬ್ದಾರಿ ಹೊತ್ತಿರುವ ಸುಧಾ ಒಳ್ಳೆ ಹುಡುಗಿಯೇ ಆದರೆ ತಾಯಿಗೆ ಅನಾರೋಗ್ಯ ಇರುವ ಕಾರಣ, ಅವರ ಮೆಡಿಕಲ್ ಖರ್ಚಿಗೆ ಹಣ ಬೇಕು ಎಂದು ಈ ಕೆಲಸ ಒಪ್ಪಿಕೊಂಡಿದ್ದಾಳೆ. ಸುಧಾಳ ತಾಯಿಯ ಹೆಸರು ಭಾಗ್ಯ, ಆಕೆಗೆ ಆರೋಗ್ಯ ಸರಿಯಿಲ್ಲ, ಒಂದೇ ಕಡೆ ಮಲಗಿರುತ್ತಾರೆ, ಏನು ಮಾತನಾಡಿದರೂ ಸ್ಪಂದಿಸುವುದಿಲ್ಲ. ಈ ಪಾತ್ರದಲ್ಲಿ ನಟಿಸುತ್ತಿರುವುದು ನಟಿ ಚಿತ್ಕಲಾ ಬಿರಾದಾರ್.
ಹೌದು, ಗೌತಮ್ ತಾಯಿ ಹೆಸರು ಕೂಡ ಭಾಗ್ಯ ಹಾಗೆಯೇ ಸುಧಾಳ ಸ್ವಭಾವ ಗೌತಮ್ ಗೆ ಹೋಲುವ ಹಾಗಿದೆ, ಈ ಕಾರಣಕ್ಕೆ ಭಾಗ್ಯ ಗೌತಮ್ ತಾಯಿಯೇ ಅನ್ನೋದು ಖಚಿತವಾಗಿದೆ. ಇನ್ನು ಕನ್ನಡತಿ ಧಾರಾವಾಹಿ ನಂತರ ಚಿತ್ಕಲಾ ಬಿರಾದಾರ್ ಅವರು ಅಮೃತಧಾರೆ ಧಾರಾವಾಹಿ ಇಂದ ಕಿರುತೆರೆಗೆ ಕಂಬ್ಯಾಕ್ ಮಾಡಿದ್ದಾರೆ. ಅವರ ಅಭಿಮಾನಿಗಳು ಇದರಿಂದ ಸಂತೋಷವಾಗಿದ್ದು, ಮುಂದಿನ ದಿನಗಳಲ್ಲಿ ಈ ಪಾತ್ರ ಯಾವ ರೀತಿ ಹೋಗುತ್ತದೆ ಎಂದು ಕಾದು ನೋಡಬೇಕಿದೆ.