ಮಾಜಿ ಸಿಎಂ ಕುಮಾರಸ್ವಾಮಿ ಕೇಂದ್ರ ಸಚಿವ ಆದ ಬಳಿಕ ಜೆಡಿಎಸ್ ಪಕ್ಷ ಹಳಿ ತಪ್ಪುತ್ತಿದೆ ಅನ್ನೋ ಮಾತುಗಳು ಜೆಡಿಎಸ್ ವಲಯದಲ್ಲೇ ಕೇಳಿ ಬಂದಿದ್ದ ಮಾತು. ಯಾಕಂದ್ರೆ ಒಂದು ಕಡೆ ನಿಖಿಲ್ ಕುಮಾರಸ್ವಾಮಿ ಸೋತಿದ್ದು, ಪ್ರಜ್ವಲ್ ರೇವಣ್ಣ, ಸೂರಜ್ ರೇವಣ್ಣ ಜೈಲಿಗೆ ಹೋಗಿದ್ದು, ದೇವೇಗೌಡರ ಆರೋಗ್ಯ ಸರಿಇಲ್ಲದ್ದು ಎಲ್ಲವೂ ಕೂಡ ಇಂತಹದೊಂದು ಚರ್ಚೆಗೆ ಕಾರಣವಾಗಿತ್ತು. ಅದರಲ್ಲೂ ರೇವಣ್ಣ ಅರೆಸ್ಟ್ ಆದ ಬಳಿಕವಂತೂ ದೇವೇಗೌಡರು ಇನ್ನೂ ಕುಗ್ಗಿ ಹೋಗಿದ್ದರು. ಜೆಡಿಎಸ್ ನ ಅಂದಿನ ಪರಿಸ್ಥಿತಿಗೆ ನಿಜಕ್ಕೂ ಕಾರ್ಯಕರ್ತರು ಕಣ್ಣೀರಾಕಿದ್ದಿದೆ. ಅಷ್ಟೆ ಅಲ್ಲ ಪಕ್ಷದ ಮುಂದಿನ ಅಸ್ತಿತ್ವದ ಬಗ್ಗೆಯೂ ಮಾತನಾಡಿದ್ದಿದೆ.
ಪೆನ್ ಡ್ರೈವ್ ವಿಚಾರವಾಗಿ ಇಡೀ ದೇವೇಗೌಡರ ಕುಟುಂಬ, ಕಾರ್ಯಕರ್ತರು ಕೂಡ ಮಾನಸಿಕವಾಗಿ ಕುಗ್ಗಿ ಹೋದದ್ದೂ ಇದೆ. ಇದರಿಂದ ಕುಟುಂಬ ಹಾಗೂ ಕಾರ್ಯಕರ್ತರನ್ನ ಹೊರತರೋದಕ್ಕೆ ಕುಮಾರಸ್ವಾಮಿ ಪ್ರಯತ್ನಗಳನ್ನು ಮಾಡುತ್ತಲೇ ಬರುತ್ತಿದ್ದಾರೆ. ಅತ್ತ ಕೇಂದ್ರ ಸಚಿವ ಸ್ಥಾನ ನಿಭಾಯಿಸೋದ್ರ ಜೊತೆಗೆ ಪಕ್ಷವನ್ನ ಬಲವರ್ಧನೆ ಮಾಡೋ ಚಾಲೆಂಜ್ ಕೂಡ ಕುಮಾರಸ್ವಾಮಿಗೆ ಇತ್ತು. ಅತ್ತ ಕುಮಾರಸ್ವಾಮಿ ಕೂಡ ಇಲ್ಲ, ಇತ್ತ ರೇವಣ್ಣ ಕುಟುಂಬದ ಕಥೆ ಹೀಗಾಯ್ತು ಮುಂದೇನು ಅನ್ನೋ ಪ್ರಶ್ನೆ ಸಹಜವಾಗಿ ಮೂಡಿತ್ತು.

ಇದರ ಮಧ್ಯೆ ಬಿಜೆಪಿ ಜೊತೆಗಿನ ಮೈತ್ರಿ ಆಗ್ಗಾಗ್ಗೆ ಹಳಿ ತಪ್ಪಿದ್ದೂ ಇದೆ. ಲೋಕಸಭೆಗೆ ಮೈತ್ರಿ ಮಾಡದೇ ಹೋದ್ರೆ ಪಕ್ಷದ ಅಸ್ತಿತ್ವ ಉಳಿಯಲ್ಲ ಅನ್ನೋದನ್ನ ಅರಿತ ದೇವೇಗೌಡರು ಮೋದಿ ಜೊತೆ ಕೈ ಜೋಡಿಸಿದ್ರೆ. ಇದಕ್ಕೆ ಕಾರಣ ವಿಧಾನಸಭೆಯಲ್ಲಿ ತೆಗೆದುಕೊಂಡ ಸ್ಥಾನಗಳು. ಅತ್ತ ರೇವಣ್ಣ ಕುಟುಂಬದ್ದು ಆ ಕಥೆ ಆದರೆ, ಇತ್ತ ಪಕ್ಷ ಮುನ್ನಡೆಸುವ ಸಾರಥಿ ಬಗ್ಗೆಯೂ ಯೋಜನೆ ಇತ್ತು. ಸದ್ಯ ಇದೆಲ್ಲದರಿಂದ ಹೊರ ಬರೋದಕ್ಕೆ ಕುಮಾರಸ್ವಾಮಿ ತಂತ್ರ ಮಾಡಿದಂತಿದೆ. ದೇವೇಗೌಡರ ನಿರ್ದೇಶನದಂತೆ ಕುಮಾರಸ್ವಾಮಿ ಮಾರ್ಗದರ್ಶನದಂತೆ ಅಣ್ಣ ತಮ್ಮಂದಿರು ಪಕ್ಷ ಕಟ್ಟೋದಕ್ಕೆ ಮುಂದಾಗ್ತಾ ಇದ್ದಾರಂತೆ. ಸ್ವಂತ ಬಲದ ಮೇಲೆಯೇ ಪಕ್ಷವನ್ನ ಅಧಿಕಾರಕ್ಕೆ ತರಬೇಕು. ಜೊತೆಗೆ ಕಾರ್ಯಕರ್ತರಿಗೆ ಬಲ ತುಂಬಬೇಕು ಅನ್ನೋ ನಿಟ್ಟಿನಲ್ಲಿ ಸಭೆಗಳನ್ನ ಮಾಡುತ್ತಿದ್ದಾರಂತೆ ನಿಖಿಲ್ ಕುಮಾರಸ್ವಾಮಿ ಹಾಗೂ ಸೂರಜ್ ರೇವಣ್ಣ.

ಹೌದು, ಸದ್ಯ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಜೆಡಿಎಸ್ ಪಕ್ಷವನ್ನ ಮತ್ತೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಶ್ರಮ ಹಾಕುತ್ತಿದ್ದಾರಂತೆ ಅಣ್ತಮ್ಮಾಸ್. ಇಷ್ಟು ದಿನ ನಿಖಿಲ್ ಕುಮಾರಸ್ವಾಮಿ ಒಬ್ಬರೇ ರಾಜ್ಯ ಪ್ರವಾಸಕ್ಕೆ ಮುಂದಾಗಿದ್ದ ನಿಖಿಲ್ ಕುಮಾರಸ್ವಾಮಿಗೆ ಈಗ ಸೂರಜ್ ರೇವಣ್ಣ ಸಾಥ್ ನೀಡುತ್ತಿದ್ದಾರೆ. ಜಿಲ್ಲೆಗಳಲ್ಲಿ ಅಧ್ಯಕ್ಷರುಗಳ ನೇಮಕ, ಪಕ್ಷ ಸಂಘಟನೆಯ ಕಾರ್ಯಕ್ರಮಗಳಲ್ಲಿ ತೊಡಗಿಕೊಳ್ತಾ ಇದ್ದಾರಂತೆ.
ಕುಮಾರಸ್ವಾಮಿ ಅವರಿಗೆ ಕೇಂದ್ರ ನಾಯಕರು ಆಗಿರೋದ್ರಿಂದ ದೊಡ್ಡ ಜವಬ್ದಾರಿ ತಲೆ ಮೇಲೆ ಇದೆ. ಈ ಜವಬ್ದಾರಿ ನಿಭಾಯಿಸೋದ್ರ ಜೊತೆಗೆ ರಾಜ್ಯದ ತಮ್ಮ ಪಕ್ಷವನ್ನೂ ನೋಡಿಕೊಳ್ಳಬೇಕಿದೆ. ಇದು ಅಸಾಧ್ಯ ವಾಗ್ತಾ ಇರೋದ್ರಿಂದ ಅದರ ಜವಬ್ದಾರಿಯನ್ನ ಯಾರಾದ್ರೂ ಸೂಕ್ತ ನಾಯಕರ ಹೆಗಲಿಗೆ ಹಾಕಲೇ ಬೇಕು. ಆದರೆ ಯಾರ ಮೇಲೆ ಹಾಕಬೇಕು ಅನ್ನೋ ಚರ್ಚೆ ಕೂಡ ಇದೆ. ಈಗಾಗಲೇ ಜಿಟಿ ದೇವೇಗೌಡರು ಪಕ್ಷದಿಂದ ದೂರ ಇರೋದ್ರಿಂದ ಮುಂದೇನು ಅನ್ನೋ ಪ್ರಶ್ನೆ ಬೆನ್ನಲ್ಲೇ ಈಗ ನಿಖಿಲ್ ಕುಮಾರಸ್ವಾಮಿ ಜವಬ್ದಾರಿ ತೆಗೆದುಕೊಂಡತಿದೆ.

ಈಗ ನಿಖಿಲ್ ಗೆ ಸಾಥ್ ಕೊಡೋದಕ್ಕೆ ಸೂರಜ್ ರೇವಣ್ಣ ಕೂಡ ಮುಂದಾಗಿದ್ದಾರೆ. ಇಷ್ಟು ದಿನ ರೇವಣ್ಣ ಕುಟುಂಬದ ಕುರಿತು ಒಂದಿಷ್ಟು ಅಸಮಾಧಾನ ಹೊಂದಿದ್ದ ಕುಮಾರಸ್ವಾಮಿ ಈಗ ಬದಲಾಗಿದ್ದಾರೆ ಅನ್ನಿಸುತ್ತಿದೆ. ಪ್ರಜ್ವಲ್ ರೇವಣ್ಣ ಕೇಸ್ ಆದಾಗಲೂ ಕೂಡ ನೇರವಾಗಿ ರೇವಣ್ಣ ಕುಟುಂಬ ಬೇರೆ ನಮ್ಮ ಕುಟುಂಬ ಬೇರೆ ಅಂದಿದ್ದರು ಕುಮಾರಸ್ವಾಮಿ. ಆದರೆ ಈಗ ನಮ್ಮ ಕುಟುಂಬ ಬಿಟ್ಟು ಬೇರೆ ಯಾರಿಗಾದ್ರೂ ಜವಬ್ದಾರಿ ನೀಡಿದರೆ ಮುಂದೇನು ಅನ್ನೋ ಪ್ರಶ್ನೆ ಕೂಡ ಎದ್ದಿದೆ. ಹೀಗಾಗಿ ದೇವೇಗೌಡರ ಕುಡಿಗಳೇ ಪಕ್ಷ ಕಟ್ಟೋದಿಕ್ಕೆ ಮುಂದಾಗಿದ್ದಾರೆ.
ಅದರಲ್ಲೂ ಹಳೆ ಮೈಸೂರು ಭಾಗದಲ್ಲಿ ಲೋಕಸಭಾ ಹಾಗೂ ವಿಧಾನಸಭೆ ಚುನಾವಣೆಗಳಲ್ಲಿ ಜೆಡಿಎಸ್ ಪಕ್ಷ ತೀರ ಕಳಪೆ ಪ್ರದರ್ಶನ ನೀಡಿದೆ. ಅಲ್ಲಿ ಮತ್ತೊಮ್ಮೆ ಪಕ್ಷ ಬಲವರ್ಧನೆ ಆಗಬೇಕಿದೆ. ಕಾರ್ಯಕರ್ತರಿಗೆ ಹುಮ್ಮಸ್ಸು ತುಂಬುವ ಕೆಲಸ ಆಗಬೇಕಿದೆ. ಇಳಿ ವಯಸ್ಸಿನಲ್ಲೂ ಕೂಡ ಪಕ್ಷ ಸಂಘಟನೆಗಾಗಿ ಒದ್ದಾಡುತ್ತಿರುವ ಸಂಧರ್ಭದಲ್ಲಿ ಯುವ ನಾಯಕರ ಅವಶ್ಯಕತೆ ಜೆಡಿಎಸ್ ಗೆ ಇದ್ದೇ ಇದೆ. ಹೀಗಾಗಿ ಈ ಯುವ ನಾಯಕರು ಪಕ್ಷ ಸಂಘಟನೆಗೆ ಮುಂದಾಗ್ತಾ ಇದ್ದಾರೆ.

ಮೊಮ್ಮಕ್ಕಳು ಜೈಲಿಗೆ ಹೋದರು ಅನ್ನೋ ನೋವಿನ ನಡುವೆಯೇ ಪಕ್ಷ ಉಳಿಸಬೇಕು ಅಂತಿದ್ದ ದೇವೇಗೌಡರಿಗೆ ಮೊಮ್ಮಕ್ಕಳ ಈ ಬೆಳವಣಿಗೆ ಒಂದು ರೀತಿ ಖುಷಿ ನೀಡೋದ್ರಲ್ಲಿ ಯಾವುದೇ ಅನುಮಾನ ಇಲ್ಲ. ಆದರೆ ಮೂರು ಬಾರಿ ಸೋತ ನಿಖಿಲ್ ಕುಮಾರಸ್ವಾಮಿ, ಜೈಲಿಗೆ ಹೋದ ಆರೋಪದಡಿ ಇರುವ ಸೂರಜ್ ರೇವಣ್ಣರನ್ನ ಪಕ್ಷದ ಕಾರ್ಯಕರ್ತರೋ ಅಥವಾ ಮತದಾರರೋ ಯಾವ ರೀತಿ ಸ್ವೀಕರಿಸುತ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.