ರಾಜ್ಯ ಕಾಂಗ್ರೆಸ್ ಸರ್ಕಾರ ವಿವಾದಾತ್ಮಕ ಕಾಯ್ದೆ ಜಾರಿ ಮಾಡಲು ಮುಂದಾಗಿದೆ. ಮುಸ್ಲಿಮರಿಗೆ ಕಾಮಗಾರಿಗಳ ಗುತ್ತಿಗೆ ನೀಡುವಲ್ಲಿ ಮೀಸಲಾತಿ ನೀಡಲು ಚಿಂತನೆ ನಡೆಸಿದೆ. ಈ ವಿಚಾರಕ್ಕೆ ಬಿಜೆಪಿ ನಾಯಕರು ಕೆಂಡಾಮಂಡಲರಾಗಿದ್ದಾರೆ. ಈ ಹಿಂದೆಯೂ ಈ ವಿಚಾರ ಚರ್ಚೆಯಲ್ಲಿ ಇತ್ತು. ಆದರೆ ಯಾವುದೂ ಫೈನಲ್ ಆಗಿರಲಿಲ್ಲ. ಆದರೆ ಈಗ ಬಿಜೆಪಿ ನಾಯಕರ ವಿರೋಧದ ನಡುವೆಯೂ ಮುಸ್ಲಿಮರಿಗೆ ಶೇಕಡಾ ನಾಲ್ಕರಷ್ಟು ಮೀಸಲಾತಿ ಕಲ್ಪಿಸಲು ಸರ್ಕಾರ ಮುಂದಾಗಿದೆ.
ಹೌದು, ಮುಸ್ಲಿಮರಿಗೆ ರಂಜಾನ್ ಪ್ರಯುಕ್ತ ಬಂಪರ್ ಗಿಫ್ಟ್ ನೀಡಲು ರಾಜ್ಯ ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಎಸ್ ಸಿ, ಎಸ್ ಟಿ ಹಾಗೂ ಹಿಂದುಳಿದ ಸಮುದಾಯಕ್ಕೆ ನೀಡಿರುವಂತೆ ಮುಸ್ಲಿಮರಿಗೂ ಶೇಕಡ 4ರಷ್ಟು ಮೀಸಲಾತಿ ಕಲ್ಪಿಸಲು ಸರ್ಕಾರ ಚಿಂತನೆ ನಡೆಸಿದೆ. ಕೆಟಿಟಿಪಿ ಕಾಯ್ದೆ ಸೆಕ್ಷನ್ 6ಕ್ಕೆ ತಿದ್ದುಪಡಿ ತರುವ ಪ್ರಕ್ರಿಯೆಗೂ ಸರ್ಕಾರ ಚಾಲನೆ ನೀಡಿದೆ ಎಂದು ಹೇಳಲಾಗುತ್ತಿದೆ. ಇದರ ಮಧ್ಯೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗಿನಿಂದಲೂ ಕೂಡ ಸರ್ಕಾರ ಓಲೈಕೆ ರಾಜಕಾರಣ ಮಾಡುತ್ತಿದೆ ಅಂತ ಆರೋಪಿಸುತ್ತಲೇ ಬಂದಿದೆ. ಈಗ ಈ ಮೀಸಲಾತಿ ವಿಚಾರ ಕೂಡ ಬಿಜೆಪಿ ನಾಯಕರನ್ನ ಕೆರಳಿಸಿದ್ದು, ಮತ್ತೆ ಓಲೈಕೆ ರಾಜಕಾರಣ ಅಂತಾ ತಿರುಗಿಬಿದ್ದಿದ್ದಾರೆ.

ಈಗಾಗಲೇ ಆರ್ಥಿಕ ಇಲಾಖೆಯಿಂದ ತಿದ್ದುಪಡಿ ಮಸೂದೆಯ ಕರಡು ಕೂಡ ಸಿದ್ಧವಾಗಿದೆ. ಕಾಯ್ದೆಗೆ ಕಾನೂನು ಇಲಾಖೆ ಸಹಮತ ಸೂಚಿಸಿದೆ ಎನ್ನಲಾಗಿದೆ. ಸಚಿವ ಸಂಪುಟ ಸಭೆಗೂ ಕರಡು ಮಸೂದೆಯ ಪ್ರಸ್ತಾವ ಸಲ್ಲಿಕೆಯಾಗಿದ್ದು ಚರ್ಚೆಗೆಯಾಗಲಿದೆ. ಸಿಎಂ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ಅನುಮೋದನೆ ನೀಡಿದ್ರೆ, ಶೀಘ್ರದಲ್ಲೇ ಕಾಯ್ದೆ ಜಾರಿಯಾಗಲಿದೆ.
ಕೆಟಿಪಿಪಿ ಕಾಯ್ದೆಗೆ ಸರ್ಕಾರ ಈ ಹಿಂದೆಯೇ ತಿದ್ದುಪಡಿ ಮಾಡಲಾಗಿತ್ತು. ಎಸ್ ಸಿ ಎಸ್ ಟಿ ಗುತ್ತಿಗೆದಾರರಿಗೆ ಐವತ್ತು ಲಕ್ಷದವರೆಗಿನ ಕಾಮಗಾರಿಗಳಲ್ಲಿ ಶೇಕಡಾ 24.10ರಷ್ಟು ಮೀಸಲಾತಿ ಕಲ್ಪಿಸಿಲಾಗಿತ್ತು. 2023ರ ಮಾರ್ಚ್ 29ರಂದು ಮತ್ತೆ ತಿದ್ದುಪಡಿ ಮಾಡಿ ಒಂದು ಕೋಟಿಯವರೆಗಿನ ವೆಚ್ಚದ ಕಾಮಗಾರಿಗಳಿಗೆ ಮೀಸಲಾತಿ ವಿಸ್ತರಿಸಲಾಗಿತ್ತು. ಅದಕ್ಕೆ ಗೆಜೆಟ್ ನೋಟಿಫಿಕೇಶನ್ ಕೂಡ ಸಿದ್ದರಾಮಯ್ಯ ಸರ್ಕಾರ ಹೊರಡಿಸಿತ್ತು. ಒಂದು ಕೋಟಿವರೆಗಿನ ವೆಚ್ಚದ ಕಾಮಗಾರಿಗಳಲ್ಲಿ ಹಿಂದುಳಿದ ವರ್ಗಗಳ ಪ್ರವರ್ಗ ಒಂದರ ಜಾತಿಗಳಿಗೆ ಸೇರಿದ ಗುತ್ತಿಗೆದಾರರಿಗೆ ಶೇಕಡಾ ನಾಲ್ಕರಷ್ಟು, ಪ್ರವರ್ಗ 2ಎ ಜಾತಿಗಳಿಗಳ ಗುತ್ತಿಗೆದಾರರಿಗೆ ಶೇಕಡಾ 15ರಷ್ಟು ಮೀಸಲಾತಿ ನೀಡಿತ್ತು.

ಮುಸ್ಲಿಮರಿಗೆ ಸರ್ಕಾರಿ ಗುತ್ತಿಗೆ ಕಾಮಗಾರಿಗಳಲ್ಲಿ ಮೀಸಲಾತಿ ನೀಡ್ತಿರೋದಕ್ಕೆ ಬಿಜೆಪಿ ನಾಯಕರು ಕೆರಳಿ ಕೆಂಡವಾಗಿದ್ದಾರೆ. ಈಗಗಲೇ ಓಲೈಕೆ ಮಾಡುತ್ತಿರೋ ಸರ್ಕಾರ ಈಗ ಗುತ್ತಿಗೆದಾರಿಕೆಯಲ್ಲೂ ಕೂಡ ಓಲೈಕೆ ಮಾಡುತ್ತಿದೆ. ಅಲ್ಪಸಂಖ್ಯಾತರು ಅಂದರೆ ಮುಸ್ಲಿಮರು ಮಾತ್ರನಾ. ಕಾಂಗ್ರೆಸ್ ನವ್ರು ಓಲೈಕೆ ರಾಜಕಾರಣ ಬಿಡಬೇಕು. ಅಂತ ಮುಸ್ಲಿಮರಿಗೆ ಪ್ರತ್ಯೇಕವಾಗಿ ನಾಲ್ಕು ಪರ್ಸೆಂಟ್ ಮೀಸಲಾತಿ ನೀಡ್ತಿರೋದಕ್ಕೆ ಬಿಜೆಪಿ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಇನ್ನು ಬಿಜೆಪಿ ನಾಯಕರ ಆರೋಪಕ್ಕೆ ಶಾಸಕ ರಿಜ್ವಾನ್ ಅರ್ಷದ್ ತಿರುಗೇಟು ನೀಡಿದ್ದು, ಗುತ್ತಿಗೆಯಲ್ಲಿ ಮೀಸಲಾತಿ ತಂದಿದ್ದು ಕಾಂಗ್ರೆಸ್ ಪಕ್ಷ. ಅಲ್ಪಸಂಖ್ಯಾತ ಸಣ್ಣ ಗುತ್ತಿಗೆದಾರರಿಗೆ ಮೀಸಲಾತಿ ಕೊಡಿ ಎಂದು ಕೇಳಿದ್ದೆವು. ಸರ್ಕಾರ ಕೊಟ್ಟರೆ ಸ್ವಾಗತ ಮಾಡುತ್ತೇವೆ. ವಿಜಯೇಂದ್ರಗೆ ಏನ್ ಸಮಸ್ಯೆ. ಇದು ಓಲೈಕೆ ಹೇಗಾಗುತ್ತೆ ಅಂತಾ ಕೌಂಟರ್ ಕೊಟ್ರು.
ಇನ್ನು ಈ ಪ್ರಸ್ತಾವನೆ ಮುಸ್ಲಿಮರಿಗೆ ಗುತ್ತಿಗೆ ಕಾಮಗಾರಿಗಳಲ್ಲಿ ನಾಲ್ಕು ಪರ್ಸೆಂಟ್ ಮೀಸಲಾತಿ ಸಂಬಂಧ ಕಳೆದ ನವೆಂಬರ್ ತಿಂಗಳಿನಲ್ಲಿಯೇ ಬಂದಿತ್ತು. ಮುಸ್ಲಿಂ ಸಚಿವರು ಹಾಗೂ ಶಾಸಕರು ಸಿಎಂ ಭೇಟಿಯಾಗಿ ಮನವಿ ಮಾಡಿದ್ದರು. ಅಂದೇ ಈ ವಿಚಾರವಾಗಿ ವಿರೋಧ ಕೂಡ ಬಂದಿತ್ತು. ಆದರೆ ಕಾಂಗ್ರೆಸ್ ನಾಯಕರು ತುಟಿ ಬಿಚ್ಚಿರಲಿಲ್ಲ. ಭೇಟಿ ವಿಚಾರ ಕೂಡ ಬಹಿರಂಗ ಮಾಡಿರಲಿಲ್ಲ. ಈಗ ಇದು ಬಹಿರಂಗವಾಗ್ತಿದ್ದಂತೆ ಬಿಜೆಪಿ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಇದೇ ಬಜೆಟ್ ಅಧಿವೇಶನದಲ್ಲಿ ಕಾಯ್ದೆ ಜಾರಿಯಾಗಬೇಕು ಅಂತಾ ಮುಸ್ಲಿಂ ಸಮುದಾಯದ ಸಚಿವರು, ಶಾಸಕರು ಸಿಎಂ ಮೇಲೆ ಒತ್ತಡ ಹೇರುತ್ತಿದ್ದಾರೆ. ಹೀಗಾಗಿ ಈ ವಿಚಾರ ವಾಗ್ಯುದ್ಧಕ್ಕೆ ಕಾರಣವಾಗಿದೆ.