ಶ್ವಾನ ಪ್ರಿಯರಿಗೆ ಗುಡ್ ನ್ಯೂಸ್ ಒಂದು ಕಾದಿದೆ. ಹೌದು ಈ ಹಿಂದೆ ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಚಿತ್ರ, ಶಿವರಾಜ್ ಕೆ. ಆರ್ ಪೇಟೆ ಅಭಿನಯದ ನಾನು ಮತ್ತು ಗುಂಡ ಚಿತ್ರ ಶ್ವಾನ ಪ್ರಿಯರ ಮನ ಗೆಲ್ಲುವಂತೆ ಮಾಡಿತ್ತು. ಇದೀಗ ಮತ್ತೊಂದು ಶ್ವಾನ ಕಥೆಯೊಂದಿಗೆ ಒಂದು ತಂಡ ಚಿತ್ರ ನಿರ್ಮಿಸಲು ಮುಂದಾಗಿದೆ. ನಾನು ಮತ್ತು ಗುಂಡ ಹಾಗೂ 777 ಚಾರ್ಲಿ ಚಿತ್ರ ರಸಿಕರ ಮನಗೆಲುವಲ್ಲಿ ಯಶಸ್ವಿಯಾಗಿತ್ತು. ಅದರಲ್ಲೂ ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಚಿತ್ರ ಪ್ಯಾನ್ ಇಂಡಿಯಾ ಚಿತ್ರವಾಗಿ ಇಡೀ ಪ್ರಪಂಚದಲ್ಲಿ ಸದ್ದು ಮಾಡಿ 100 ಕೋಟಿಗೂ ಅಧಿಕ ಹಣವನ್ನ ಗಳಿಸುವುದರಲ್ಲಿ ಯಶಸ್ವಿಯಾಗಿದೆ.

ಇದೀಗ ಇಂತದ್ದೇ ವಿಭಿನ್ನ ಸ್ಟೋರಿಯೊಂದಿಗೆ ಶ್ವಾನದ ಕುರಿತಾದ ಹೊಸ ಚಿತ್ರವೊಂದು ಸಜ್ಜಾಗುತ್ತಿದ್ದು, ಯಾವ ಮೋಹನ ಮುರಳಿ ಕರೆಯಿತು ಎನ್ನುವ ವಿಭಿನ್ನ ಶೀರ್ಷಿಕೆಯನ್ನ ಈ ಚಿತ್ರಕ್ಕೆ ಇಡಲಾಗಿದೆ. ಮನುಷ್ಯ ಹಾಗೂ ಶ್ವಾನ ನಡುವೆ ಬೆಸೆದ ನಿಷ್ಕಲ್ಮಶ ಪ್ರೀತಿ ಕುರಿತಾದ ಚಿತ್ರವಾಗಿ, ಈ ಹಿಂದೆ ಕನ್ನಡದಲ್ಲಿ ಬಂದಿರುವ ಶ್ವಾನ ಕುರಿತಾದ ಚಿತ್ರಗಳಿಗಿಂತ ಭಿನ್ನವಾಗಿದೆ ಎನ್ನುವ ಮಾಹಿತಿ ಚಿತ್ರತಂಡ ನೀಡಿದೆ. ಭರವಸೆ ಹುಡುಕಾಟದಲ್ಲಿ ನಿರತವಾಗಿರುವ ಅಂಗವಿಕಲ ಹುಡುಗಿಗೆ ಶ್ವಾನ ಒಂದು ಆಸರೆಯಾಗುತ್ತೆ, ಅಷ್ಟೇ ಅಲ್ಲದೆ ಯುವತಿ ಹಾಗೂ ಶ್ವಾನದ ನಡುವೆ ಒಂದೊಳ್ಳೆ ಸಂಬಂಧ ಸೃಷ್ಟಿಯಾಗುತ್ತೆ.
ಅದೇ ಸಂದರ್ಭದಲ್ಲಿ ಇನ್ನೊಬ್ಬ ವ್ಯಕ್ತಿಯ ಪ್ರವೇಶವಾಗುತ್ತೆ, ನಂತರ ಏನಾಗುತ್ತೆ ಎನ್ನುವುದೇ ಈ ಚಿತ್ರದ ಕಥಾಹಂದರವಾಗಿದೆ. ಸಿನಿಮಾ ಚಿತ್ರೀಕರಣ ಪೂರ್ಣಗೊಂಡು ಬಿಡುಗಡೆಗೆ ಚಿತ್ರ ಸಿದ್ದವಾಗಿದ್ದು, ಕೆಲವೇ ದಿನಗಳಲ್ಲಿ ಟ್ರೈಲರ್ ಕೂಡ ಬಿಡುಗಡೆಯಾಗಲಿದೆ. ಈ ಚಿತ್ರದ ನಿರ್ದೇಶನವನ್ನ ವಿಶ್ವಾಸ್ ಕೃಷ್ಣ ಮಾಡಿದ್ದು, ಇದು ಸಿನಿಮಾ ಲೋಕದಲ್ಲಿ ಪ್ರಥಮ ಪ್ರಯತ್ನವಾಗಿದೆ. ಖ್ಯಾತ ಕವಿ ಗೋಪಾಲಕೃಷ್ಣ ಅಡಿಗರು ಬರೆದ ಯಾವ ಮೋಹನ ಮುರಳಿ ಕರೆಯಿತು ಎನ್ನುವ ಹಾಡು ತುಂಬಾನೇ ಜನಪ್ರಿಯವಾಗಿದ್ದು,ಇದೀಗ ಈ ಹಾಡಿನ ಸಾಲು ಶೀರ್ಷಿಕೆಯಾಗಿದೆ.
ಕೆಲ ದಿನಗಳ ಹಿಂದೆಯಷ್ಟೇ ಈ ಚಿತ್ರದ ಕುರಿತಾದ ಟೀಸರ್ ಬಿಡುಗಡೆಗೊಂಡಿದ್ದು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ. ಮ. ಹರೀಶ್ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಇದೆ ಸಂದರ್ಭದಲ್ಲಿ ಉಪಾಧ್ಯಕ್ಷ ಶಿಲ್ಪ ಶ್ರೀನಿವಾಸ್ ಇನ್ನಿತರ ಗಣ್ಯರು ಭಾಗಿಯಾಗಿದ್ದರು. ಇನ್ನೂ ಸಿನಿಮಾದ ನಿರ್ಮಾಪಕ ಮಾತನಾಡಿ ನಾನು ಉದ್ಯಮ ಕ್ಷೇತ್ರದಲ್ಲಿರುವನು, ಕಿಕ್ ಬಾಕ್ಸಿಂಗ್ ನಲ್ಲಿ ಅಂತರಾಷ್ಟೀಯ ಮಟ್ಟದಲ್ಲಿ ಹೆಸರು ಮಾಡಿದ್ದು, ಸಿನಿಮಾ ಕುರಿತಾಗಿ ಅಷ್ಟೇನು ಗೊತ್ತಿಲ್ಲ, ಸಾಹಿತಿ ಗೌಸ್ ಫಿರ್ ಮುಕಾಂತರ ನಿರ್ದೇಶನ ಪರಿಚಯವಾಗಿದ್ದು, ಕಥೆ ಕೇಳಿದೆ ಕೇಳಿದೆ ಇಷ್ಟವಾಯ್ತು ಅದಕ್ಕೆ ನಿರ್ಮಾಣಕ್ಕೆ ಒಪ್ಪಿದೆ ಎಂದರು.
ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಬೇಬಿ ಪ್ರಕೃತಿ, ನಾಯಕನಾಗಿ ಮಾಧವ, ನಟಿಯಾಗಿ ಸ್ವಪ್ನ ಶೆಟ್ಟಿಗಾರ್ ಕಾಣಿಸಿಕೊಳ್ಳಲಾಗಿದೆ. ಈ ಚಿತ್ರ ಕುರಿತಾದ ಪ್ರೆಸ್ ಮೀಟ್ ನಲ್ಲಿ ಚಿತ್ರದ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳುವ ಶ್ವಾನ ರಾಕಿ ಕೂಡ ಆಗಮಿಸಿದ್ದು,ಟ್ರೈನರ್ ಸ್ವಾಮಿ ರಾಕಿಯ ದಿನಚರಿ ಬಗ್ಗೆ ವಿವರಿಸಿದ್ದರು. ಈ ಚಿತ್ರವು ಇನ್ನೇನು ಕೆಲವೇ ದಿನಗಳಲ್ಲಿ ಚಿತ್ರಮಂದಿರಗಳಲ್ಲಿ ಕಾಣಿಸಿಕೊಳ್ಳಲಿದ್ದು ಶ್ವಾನ ಪ್ರಿಯರಿಗೆ ಒಂದೊಳ್ಳೆ ಮನೋರಂಜನೆ ಸಿಗಲಿದ್ದು, 777 ಚಾರ್ಲಿ ಹಾಗೂ ನಾನು ಮತ್ತು ಗುಂಡ ಚಿತ್ರದ ಪಟ್ಟಿಗೆ ಯಾವ ಮೋಹನ ಮುರುಳಿ ಕರೆಯಿತು ಚಿತ್ರ ಕೂಡ ಸೇರ್ಪಡೆಯಾಗಲಿದೆ.