ಕನ್ನಡದ ಇಬ್ಬರು ಮೇರು ನಟರು ಡಾ. ರಾಜ್ ಕುಮಾರ್ ಹಾಗೂ ಡಾ. ವಿಷ್ಣುವರ್ಧನ್. ಇವರಿಬ್ಬರು ಜೊತೆಯಾಗಿ ನಟಿಸಿದ ಏಕೈಕ ಸಿನಿಮಾ ಗಂಧದಗುಡಿ. ಈ ಸಿನಿಮಾ ಎಷ್ಟು ಸ್ಪೆಷಲ್ ಆಗಿದೆಯೋ ಅದೇ ರೀತಿ ಹೆಚ್ಚು ವಿವಾದಗಳಿಗೆ ಕಾರಣವಾದ ಸಿನಿಮಾ ಕೂಡ ಹೌದು. ಗಂಧದಗುಡಿ ಸಿನಿಮಾ ವಿವಾದಕ್ಕೆ ಕಾರಣವಾಗಿದ್ದು ಕ್ಲೈಮ್ಯಾಕ್ಸ್ ನ ಗನ್ ಫೈರಿಂಗ್ ದೃಶ್ಯಕ್ಕೆ. ಹೌದು, ಅಂದು ನಿಜವಾದ ಬುಲೆಟ್ ಹಾಕಿದ್ದು ಯಾರು? ಗನ್ ಫೈರ್ ಆಗಿದ್ದು ಯಾರಿಂದ? ಈ ಅಪವಾದ ಅವಮಾನ ಎಲ್ಲವೂ ವಿಷ್ಣುವರ್ಧನ್ ಅವರ ಮೇಲೆ ಬಂತು. ಇಂದಿಗೂ ಕೂಡ ಈ ವಿಷಯದ ಬಗ್ಗೆ ಚರ್ಚೆ ಆಗುತ್ತಲೇ ಇರುತ್ತದೆ. ಇವತ್ತಿಗೂ ಒಂದಷ್ಟು ಅಭಿಮಾನಿಗಳು ಈ ವಿಷಯದ ಬಗ್ಗೆ ತಪ್ಪು ತಿಳಿದುಕೊಂಡಿದ್ದಾರೆ. ಆದರೆ ಇದೀಗ ಗಂಧದಗುಡಿ ಸಿನಿಮಾದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ನಾಗೇಶ್ ಅವರು ಈ ವಿಷಯಕ್ಕೆ ಸ್ಪಷ್ಟನೆ ನೀಡಿದ್ದಾರೆ.

ಚಿತ್ರರಂಗದಲ್ಲಿ ಡಾ. ರಾಜ್ ಕುಮಾರ್ ಅವರು ಮತ್ತು ವಿಷ್ಣುವರ್ಧನ್ ಅವರು ಇಬ್ಬರೂ ಕೂಡ ಅಣ್ಣ ತಮ್ಮಂದಿರ ಹಾಗೆ ಇದ್ದವರು. ಇವರಿಬ್ಬರಲ್ಲಿಯೂ ಒಬ್ಬರ ಬಗ್ಗೆ ಮತ್ತೊಬ್ಬರಿಗೆ ಅಪಾರವಾದ ಗೌರವ, ಆತ್ಮೀಯತೆ, ಪ್ರೀತಿ ನಾವೆಲ್ಲರೂ ಒಂದೇ ಕುಟುಂಬ ಅನ್ನೋ ಮನೋಭಾವ ಇತ್ತು. ಇವರ ಕುಟುಂಬಗಳಲ್ಲಿ ಸಹ ಅದೇ ಪ್ರೀತಿ ಇತ್ತು. ಶಿವಣ್ಣ ಅವರಿಗೆ ವಿಷ್ಣು ಸರ್ ಅಂದ್ರೆ ತುಂಬಾ ಪ್ರೀತಿ. ವಿಷ್ಣು ಸರ್ ಜೊತೆ ಒಂದು ಸಿನಿಮಾ ಮಾಡಬೇಕು ಎಂದು ತುಂಬಾ ಆಸೆ ಇಟ್ಟುಕೊಂಡಿದ್ದರು. ಇನ್ನು ಅಪ್ಪು ಅವರೇ ಆಗಲಿ, ರಾಘಣ್ಣ ಅವರೇ ಆಗಲಿ ವಿಷ್ಣು ಸರ್ ಹಾಗೂ ಅವರ ಕುಟುಂಬದ ಜೊತೆಗೆ ಅಷ್ಟೇ ಆತ್ಮೀಯರಾಗಿ ಇರುತ್ತಿದ್ದರು. ಕುಟುಂಬದವರು ಈ ರೀತಿ ಅನ್ಯೋನ್ಯವಾಗಿ ಇದ್ದರೂ, ಜನರ ನಡುವೆ ಮತ್ತು ಅಭಿಮಾನಿಗಳ ನಡುವೆ ಆ ಒಂದು ವಿಷಯಕ್ಕೆ ಅಸಮಾಧಾನ ಇತ್ತು.

ವಿಷ್ಣುದಾದ ಅವರೇ ಅಂದು ಗುಂ*ಡು ಹಾರಿಸಿದ್ದು, ಸ್ವಲ್ಪ ಹೆಚ್ಚು ಕಡಿಮೆ ಆಗಿದ್ದರೂ ಸಹ ಅಣ್ಣಾವ್ರು ಅಂದೆ ಹೋಗಿ ಬಿಡಬಹುದಿತ್ತು ಎನ್ನುವ ಒಂದು ವಿಷಯ ಈ ಇಬ್ಬರು ಕಲಾವಿದರು ಮತ್ತೆ ಜೊತೆಯಾಗಿ ನಟಿಸುವುದಕ್ಕೆ ಬಿಡಲಿಲ್ಲ. ನಡೆದದ್ದು ಆಕಸ್ಮಿಕವಾಗಿ, ಯಾವುದು ಬೇಕೆಂದು ಮಾಡಿದ ವಿಷಯ ಅಲ್ಲ, ಇದರಲ್ಲಿ ವಿಷ್ಣು ಸತ್ ಅವರದ್ದು ಯಾವುದೇ ತಪ್ಪು ಇಲ್ಲ ಎಂದು ಹಲವು ಬಾರಿ ಸ್ಪಷ್ಟನೆ ಕೊಟ್ಟಿದ್ದರು ಸಹ ಕೆಲವು ಅಭಿಮಾನಿಗಳು ವಿಷ್ಣು ಸರ್ ಬಗ್ಗೆ ತಪ್ಪು ಹೊರೆಸುವುದನ್ನು ಮಾತ್ರ ಬಿಡಲೇ ಇಲ್ಲ. ಈ ಒಂದು ಘಟನೆಯ ಕಾರಣಕ್ಕೆ, ವಿಷ್ಣುವರ್ಧನ್ ಅವರು ಬಹಳಷ್ಟು ಅವಮಾನಗಳನ್ನು ಅನುಭವಿಸಬೇಕಾಯಿತು. ಅಭಿಮಾನಿಗಳು ಇವರ ಬಗ್ಗೆ ತಪ್ಪು ತಿಳಿದುಕೊಂಡರು. ಇವತ್ತಿಗೂ ಕೆಲವರು ವಿಷ್ಣು ಸರ್ ಬಗ್ಗೆ ತಪ್ಪಾಗಿಯೇ ಮಾತನಾಡುತ್ತಾರೆ. ಆದರೆ ಅಸಲಿ ವಿಷಯ ಬೇರೆಯೇ ಇದೆ.
ಗಂಧದಗುಡಿ ಕ್ಲೈಮ್ಯಾಕ್ಸ್ ಚಿತ್ರೀಕರಣ ನಡೆಯುವ ವೇಳೆ ಆದ ಘಟನೆಯೇ ಬೇರೆ. ಈ ಬಗ್ಗೆ ಸಿನಿಮಾದ ಸಹಾಯಕ ನಿರ್ದೇಶಕರಾಗಿದ್ದ ನಾಗೇಶ್ ಅವರು ಇತ್ತೀಚಿನ ಸಂದರ್ಶನ ಒಂದರಲ್ಲಿ ಮಾತನಾಡಿ ಎಲ್ಲಾ ಊಹಾಪೋಹಕ್ಕೆ ಸ್ಪಷ್ಟನೆ ನೀಡಿದ್ದಾರೆ. ಗಂಧದಗುಡಿ ಸಿನಿಮಾ ತೆರೆಕಂಡಿದ್ದು 1973 ರಲ್ಲಿ, ಇದು 51 ವರ್ಷಗಳ ಹಿಂದೆ ನಡೆದಿರುವ ಘಟನೆ ಆಗಿದೆ. ಗಂಧದಗುಡಿ ಸಿನಿಮಾದ ನಿರ್ಮಾಪಕ ಎಂ.ಪಿ. ಶಂಕರ್ ಅವರು. ಇವರು ಸಾಕಿರುವ ಪ್ರಾಣಿಗಳನ್ನು ಮತ್ತು ಇವರ ಬಳಿ ಇದ್ದ ಬಂದೂಕುಗಳನ್ನೇ ಸಿನಿಮಾ ಚಿತ್ರೀಕರಣಕ್ಕೆ ಬಳಸಿಕೊಳ್ಳಲಾಗುತ್ತಿತ್ತು, ಇನ್ನು ಸಿನಿಮಾ ಕಥೆ ಬಗ್ಗೆ ನಮಗೆಲ್ಲಾ ಗೊತ್ತೇ ಇದೆ. ಸಿನಿಮಾ ಶುರುವಿನಿಂದಲು ಅಣ್ಣಾವ್ರು ಮತ್ತು ವಿಷ್ಣುವರ್ಧನ್ ಅವರು ಹೀರೋ ವಿಲ್ಲನ್ ರಂತೆಯೇ ಇರುತ್ತಾರೆ. ಆದರೆ ಕೊನೆಯ ದೃಶ್ಯಗಳಲ್ಲಿ ವಿಷ್ಣುವರ್ಧನ್ ಅವರ ಪಾತ್ರಕ್ಕೆ ಅಣ್ಣಾವ್ರು ತನ್ನ ಸ್ವಂತ ಅಣ್ಣ ಎಂದು ಗೊತ್ತಾಗುತ್ತದೆ.

ಈ ವಿಚಾರ ಗೊತ್ತಾಗಿ ಅಣ್ಣ ಎಂದು ಕರೆಯುವ ವೇಳೆಗೆ ವಿಷ್ಣುವರ್ಧನ್ ಅವರ ಪಾತ್ರ ಕೂಡ ಸತ್ತು ಹೋಗಿರುತ್ತದೆ.. ಹಾಗಾಗಿ ಅವರು ಗುಂಡು ಹಾರಿಸುವ ಸನ್ನಿವೇಶ ಬರುವುದಿಲ್ಲ, ಆ ರೀತಿ ಮಾಡುವುದಕ್ಕೆ ಸಾಧ್ಯವೇ ಇಲ್ಲ. ಆ ದೃಶ್ಯದಲ್ಲಿ ರಾಜ್ ಕುಮಾರ್ ಅವರ ಮೇಲೆ ಬಾಲಣ್ಣ ಅವರು ಗುಂಡು ಹಾರಿಸುವ ದೃಶ್ಯವಿದೆ. ಆ ದೃಶ್ಯದಲ್ಲಿ ತಮ್ಮದೇ ಗನ್ ಬಳಸಿಕೊಳ್ಳಿ ಎಂದು ಎಂ.ಪಿ. ಶಂಕರ್ ಅವರು ಹೇಳಿದರಂತೆ. ಬಾಲಣ್ಣ ಅವರು ಆ ಗನ್ ತೆಗೆದುಕೊಂಡು, ಎರಡು ಸಾರಿ ಟ್ರಿಗರ್ ಎಳೆದರಂತೆ, ಆದರೆ ಗನ್ ಫೈರ್ ಆಗಲಿಲ್ಲ. ಇದ್ಯಾವ ಗನ್ ಕೊಟ್ಟಿದ್ದೀರಾ ಕೆಲಸ ಮಾಡುತ್ತಿಲ್ಲ ಎಂದು ಬಾಲಣ್ಣ ಅವರು ಹೇಳಿದರಂತೆ. ಕೊನೆಗೆ ಎಂ.ಪಿ ಶಂಕರ್ ಅವರು ಬಂದು, ತಮ್ಮ ಕೈಗೆ ಗನ್ ತೆಗೆದುಕೊಂಡು, ಆಕಾಶಕ್ಕೆ ತಿರುಗಿಸಿ, 10 ಸೆಕೆಂಡ್ ಹಾಗೆಯೇ ಹಿಡಿದುಕೊಂಡು ನಂತರ ಟ್ರಿಗರ್ ಒತ್ತಿದಾಗ ಫೈರ್ ಆಯ್ತಂತೆ. ಅಂದು ನಡೆದಿರುವ ಘಟನೆ ಆಗಿರುವುದು ಈ ರೀತಿಯಲ್ಲಿ, ಎಲ್ಲವೂ ಅಚಾನಕ್ ಆಗಿ ನಡೆದಿದೆ.
ಆಕಸ್ಮಿಕವಾಗಿ ನಡೆದ ಘಟನೆಗಳಿಗೆ ಯಾರು ಹೊಣೆಯಲ್ಲ, ಅದರಲ್ಲಿ ಯಾರದ್ದು ತಪ್ಪು ಇರುವುದುಲ್ಲ. ಆದರೆ ಪಾಪ ಎಲ್ಲಾ ತಪ್ಪುಗಳು ಕೇಳಿಬಂದಿದ್ದು ಆ ಒಬ್ಬ ವ್ಯಕ್ತಿಯ ಮೇಲೆ. ಇನ್ನು ಗನ್ ಒಳಗೆ ಒರಿಜಿನಲ್ ಬುಲೆಟ್ ಹೋಗಿದ್ದು ಹೇಗೆ ಎನ್ನುವ ಮತ್ತೊಂದು ಪ್ರಶ್ನೆ ಎಲ್ಲರಲ್ಲೂ ಇದೆ. ಅದಕ್ಕೆ ಉತ್ತರವನ್ನು ಕೂಡ ನಾಗೇಶ್ ಅವರು ನೀಡಿದ್ದಾರೆ. ಆಗೆಲ್ಲಾ ಶೂಟಿಂಗ್ ಮುಗಿದ ಬಳಿಕ ಬಂದೂಕು ತೆಗೆದುಕೊಂಡು ಬೇಟೆಗೆ ಹೋಗುತ್ತಿದ್ದರಂತೆ. ಅದೇ ರೀತಿ ಬೇಟೆಗೆ ಹೋಗುವಾಗ ಒರಿಜಿನಲ್ ಬುಲೆಟ್ ಹಾಕಿಕೊಂಡು ಹೋಗುತ್ತಿದ್ದರು. ಬೇಟೆ ಮುಗಿಸಿ ಬಂದ ಕೂಡಲೇ ಬುಲೆಟ್ ಅನ್ನು ಬದಲಾಯಿಸಿ ಡಮ್ಮಿ ಬುಲೆಟ್ ಗಳನ್ನು ಇಡುತ್ತಿದ್ದರು, ಆದರೆ ಆ ದಿವಸ ಬೆಳಗ್ಗೆ ತೆಗೆದು ಇಟ್ಟರಾಯಿತು ಎಂದು ಮರೆತಿರಬಹುದು, ಆ ಕಾರಣಕ್ಕೆ ಒರಿಜಿನಲ್ ಬುಲೆಟ್ ಗನ್ ಒಳಗೆ ಇದ್ದಿರಬಹುದು ಎಂದು ನಾಗೇಶ್ ಅವರು ಹೇಳಿದ್ದಾರೆ.
ಚಿತ್ರತಂಡದ ಜೊತೆಗೆ ಇದ್ದ, ಆ ದಿನ ಶೂಟಿಂಗ್ ನಲ್ಲಿದ್ದ ನಾಗೇಶ್ ಅವರು ಪ್ರತ್ಯಕ್ಷದರ್ಶಿಯಾಗಿ ಈ ಒಂದು ವಿಷಯವನ್ನು ತಿಳಿಸಿದ್ದಾರೆ. ಈ ಬಗ್ಗೆ ಜನರು ತಪ್ಪು ತಿಳಿದುಕೊಂಡು, ವಿಷ್ಣುದಾದ ಅವರ ಬಗ್ಗೆ ಹಗೆ ಸಾಧಿಸುತ್ತಿರುವಾಗ, ನಾಗೇಶ್ ಅವರು ಈ ವಿಚಾರಕ್ಕೆ ಸ್ಪಷ್ಟನೆ ಕೊಡುತ್ತೇನೆ ಎಂದು ಹೇಳಿದಾಗ ವಿಷ್ಣುದಾದ ಅವರು ಬೇಡ ಬಿಡಿ ಈಗ ಜನರು ಆ ವಿಷಯಗಳನ್ನು ಮರೆತುಬಿಟ್ಟಿರುತ್ತಾರೆ ಎಂದು ಹೇಳಿದರಂತೆ. ನಡೆದಿದ್ದು ಈ ರೀತಿ, ಆದರೆ ಎಲ್ಲರೂ ತಪ್ಪು ತಿಳಿದಿಕೊಂಡಿದ್ದು ವಿಷ್ಣುವರ್ಧನ್ ಅವರ ಬಗ್ಗೆ. ಇದರಿಂದಾಗಿ ಆ ಇಬ್ಬರು ಮೇರು ಕಲಾವಿದರು ಜೊತೆಯಾಗಿ ಮತ್ತೊಂದು ಸಿನಿಮಾ ಮಾಡೋಕೆ ಸಾಧ್ಯ ಆಗಲಿಲ್ಲ ಅನ್ನೋದು ಬೇಸರದ ವಿಷಯ. ಇಬ್ಬರು ಇಂದು ನಮ್ಮೊಡನೆ ಇಲ್ಲ, ಅಭಿಮಾನಿಗಳು ಈಗಲಾದರೂ ಹಳೆಯ ತಪ್ಪು ತಿಳುವಳಿಕೆಗಳನ್ನು ಬದಿಗಿಟ್ಟು, ಇಬ್ಬರೂ ಕಲಾವಿದರನ್ನು ಗೌರವಿಸಬೇಕು.