ಡಿಕೆ ಶಿವಕುಮಾರ್ ಸಿನಿಮಾ ರಂಗದವರ ಮೇಲೆ ಇದ್ದ ಅಸಮಾಧಾನಕ್ಕೆ ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಸಿನಿಮಾದ ಕೆಲವರಿಗೆ ನಟ್ಟು ಬೋಲ್ಟ್ ಸರಿ ಮಾಡಬೇಕು ಅಂತ ನೀಡಿದ್ದ ಹೇಳಿಕೆ ಬಿಜೆಪಿ ಹಾಗೂ ಕೆಲವು ಸಿನಿಮಾದವರ ಕೆಂಗಣ್ಣಿಗೆ ಗುರಿಯಾಗಿತ್ತು. ಅಷ್ಟೆ ಅಲ್ಲ ಡಿಕೆ ಹೇಳಿಕೆ ಅವರ ಸಂಸ್ಕೃತಿಯನ್ನ ತೋರಿಸುತ್ತದೆ ಅಂತೆಲ್ಲಾ ಟೀಕೆ ವ್ಯಕ್ತವಾಗಿದ್ದವು. ಇದೀಗ ತಮ್ಮ ಹೇಳಿಕೆಯನ್ನ ಮತ್ತೊಮ್ಮೆ ಸಮರ್ಥನೆ ಮಾಡಿಕೊಂಡಿದ್ದಾರೆ. ಅಷ್ಟೆ ಅಲ್ಲ ಸಿನಿಮಾ ರಂಗದ ಸದ್ಯದ ಪರಿಸ್ಥಿತಿಯ ಬಗ್ಗೆಯೂ ಹೇಳಿದ್ದಾರೆ. ಜೊತೆಗೆ ಯಾರ್ಯಾರು ಏನೆಲ್ಲಾ ಮಾತನಾಡಿದ್ದರೋ ಅವರ ಬಗ್ಗೆಯೂ ಸುದೀರ್ಘವಾಗಿ ಹೇಳಿಕೆ ನೀಡಿದ್ದಾರೆ.
ಸದ್ಯ ಕನ್ನಡ ಚಿತ್ರರಂಗದಲ್ಲಿ ಯಾವುದೇ ಸ್ಟಾರ್ ಸಿನಿಮಾ ಬಂದರೂ ಅದು ೧೦೦ ದಿನ ಓಡೋದೇ ಡೌಟ್. ಆ ರೀತಿಯಲ್ಲಿ ಬೇರೆ ಬೇರೆ ಭಾಷೆಯ ಸಿನಿಮಾಗಳು ಕನ್ನಡ ಸಿನಿಮಾಗಳನ್ನ ತಿಂದು ಹಾಕುತ್ತಿವೆ. ಈ ಮಧ್ಯೆ ಯಾವ ಸಿನಿಮಾ ಮಾಡಬೇಕು, ಮಾಡಿದರೂ ಅದರಿಂದ ಯಾವ ರೀತಿ ಬಂಡವಾಳ ವಾಪಸ್ ತೆಗಯಬೇಕು ಹೀಗೆ ಅನೇಕ ಪ್ರಶ್ನೆ ಉದ್ಭವವಾಗಿದೆ. ಈ ವಿಚಾರವಾಗಿ ಡಿಕೆ ಸೂಚ್ಯವಾಗಿ ಮಾತನಾಡಿದ್ದಾರೆ.

ಸಿನಿಮಾ ರಂಗ ಸಾಯುತ್ತಿದೆ. ಅನೇಕ ಸಿನಿಮಾಗಳು ಓಡದೇ ಥಿಯೇಟರ್ ನಿಂದ ತೆಗೆಯುತ್ತಿದ್ದಾರೆ. ಹೊಸ ಸಿನಿಮಾಗಳು ಬರುತ್ತಿಲ್ಲ. ನಾನು ಇದೇ ರಂಗಕ್ಕೆ ಸೇರಿದವನು. ಈ ಹಿಂದೆ ಇಂದಿರಾಗಾಂಧಿ ಅವರ ಹೆಸರಿನಲ್ಲಿ ಟೂರಿಂಗ್ ಟಾಕೀಸ್ ನಡೆಸುತ್ತಿದ್ದೆ. ಈಗ ನಮ್ಮ ಒಡೆತನದ 23 ಸಿನಿಮಾ ಪ್ರದರ್ಶನ ಪರದೆಗಳು ಬೆಂಗಳೂರಿನಲ್ಲಿವೆ. ನಮ್ಮ ಕನ್ನಡ ಚಿತ್ರರಂಗಲದಲಿ ಇತ್ತೀಚೆಗೆ ಭಮದ ಒಂದೆರಡ ಸಿನಿಮಾಗಳು ಬಾಲಿವುಡ್ಗಿಂತ ಎತ್ತರಕ್ಕೆ ಬೆಳೆದಿದೆ. ಚಿತ್ರಗಳ ಗುಣಮಟ್ಟ ಹಾಲಿವುಡ್ ಗುಣಮಟ್ಟಕ್ಕೆ ಬೆಳೆಯುತ್ತಿದೆ. ಒಂದಷ್ಟು ಜನ ಇದಕ್ಕಾಗಿ ಶ್ರಮ ಪಡುತ್ತಿದ್ದಾರೆ. ಈ ಹೆಜ್ಜೆ ಗುರುತುಗಳು ಉಳಿಯಬೇಕು, ಇನ್ನೂ ಎತ್ತರಕ್ಕೆ ಚಿತ್ರರಂಗವನ್ನು ತೆಗೆದುಕೊಂಡು ಹೋಗಬೇಕು ಎಂಬುದು ನನ್ನ ಉದ್ದೇಶ. ಒಂದೆರಡು ಸಿನಿಮಾಗಳಿಂದ ಕನ್ನಡ ಚಿತ್ರರಂಗಕ್ಕೆ ಉತ್ತಮ ಯೋಗ ಬಂದಿದೆ. ಬಂದಿರುವ ಯೋಗವನ್ನು ಉಳಿಸಿಕೊಂಡು ಹೋಗಿ ಎಂದು ಹೇಳುತ್ತಿದ್ದೇನೆ ಅಷ್ಟೆ ಎಂದರು.
ಇನ್ನು ತಮ್ಮ ನಟ್ಟು ಬೋಲ್ಟ್ ಹೇಳಿಕೆಯನ್ನ ಮತ್ತೆ ಸಮರ್ಥನೆ ಮಾಡಿಕೊಂಡಿರೋ ಡಿಕೆ ಶಿವಕುಮಾರ್, ಹಳ್ಳಿ ಭಾಷೆಯಲ್ಲಿ ನಾನು ಹಾಗೆ ಮಾತನಾಡಿದ್ದೇನೆ ಅಷ್ಟೆ. ನಾನು ನನ್ನ ಹಿತವಚನವನ್ನು ಒರಟಾಗಿ ಹೇಳಿದ್ದೇನೆ. ನನಗೂ ಚಿತ್ರರಂಗ ಉಳಿಯಬೇಕು ಎನ್ನುವ ಆಸೆಯಿದೆ ಹಾಗಾಗಿ ನನ್ನ ಮಾತು ಒರಟಾಗಿರಬಹುದು. ನನಗೆ ಬಣ್ಣ ಕಟ್ಟಿ ಮಾತನಾಡಲು ಬರುವುದಿಲ್ಲ. ನಾನು ನೇರವಾಗಿ ಹೇಳುತ್ತೇನೆ. ಕಲ್ಲು ಪ್ರಕೃತಿ, ಕಡೆದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ. ಇದು ನನ್ನ ಮಾತಿನ ಶೈಲಿ. ಶೈಲಿ ಸರಿ ಇಲ್ಲದಿದ್ದರೆ ಸರಿಪಡಿಸಿಕೊಳ್ಳುತ್ತೇನೆ ಆದರೆ ಸತ್ಯ ಹೇಳಿದ್ದೇನೆ ಎಂದು ಟೀಕೆ ಮಾಡುವವರಿಗೆ ತಿರುಗೇಟು ನೀಡಿದ್ದಾರೆ.

ನಾಡು ನುಡಿ ಅಂತ ಬಂದಾಗ ಎಲ್ಲರೂ ಒಟ್ಟಾಗಬೇಕು. ನಾವು ಮಾಡಿದ ಮೇಕೆದಾಟು ಹೋರಾಟ ಕಾಂಗ್ರೆಸ್ ರೂಪಿಸಿದ ಹೋರಾಟ ಅಂತಾರಲಾ ಕಳಸಾ- ಬಂಡೂರಿ ಹೋರಾಟಕ್ಕೆ ಚಿತ್ರರಂಗದವರು ಏಕೆ ಹುಬ್ಬಳ್ಳಿಗೆ ಹೋದರು. ರಾಜಕುಮಾರ್ ಅವರು ಪಕ್ಷ ಬೇಧ ಮರೆತು ಹೋರಾಟಕ್ಕೆ ಏಕೆ ಬರುತ್ತಿದ್ದರು. ಹಾಗಾದರೆ ಈಗಿನ ಚಿತ್ರರಂಗದ ಜವಾಬ್ದಾರಿ ಏನು. ರಾಜಕುಮಾರ್ ಅವರು ಇವರಿಗೆ ಮಾದರಿ ಅಲ್ಲವೇ ಎಂದು ಪ್ರಶ್ನಿಸಿದರು. ನಾಡು ನುಡಿ ನೀರು ಅಂತ ಬಂದಾಗ ಚಿತ್ರರಂಗದವರು ಹೊರತಾಗಿದ್ದಾರಾ. ಅವರೂ ರಾಜ್ಯದವರೇ..? ದುನಿಯಾ ವಿಜಯ್, ಪ್ರೇಮ್, ಸಾಧು ಕೋಕಿಲ, ಸಾ.ರಾ. ಗೋವಿಂದು ಮತ್ತಿತರರು ಹೋರಾಟದಲ್ಲಿ ಭಾಗವಹಿಸಿದ್ದರು. ಇವರೆಲ್ಲಾ ಕಾಂಗ್ರೆಸ್ ಪಕ್ಷದಿಂದ ಬಂದಿದ್ದರೇ..? ನನ್ನ ಮನೆಗೆ ನೀರು ತರಲು ಹೋರಾಟ ಮಾಡಲಿಲ್ಲ. ಇಡೀ ಬೆಂಗಳೂರಿಗೆ ನೀರು ತರಲು ಹೋರಾಟ ಮಾಡಿದ್ದೇವೆ. ಬೆಂಗಳೂರಲ್ಲಿ ಚಿತ್ರರಂಗದವರೂ ಇದ್ದಾರೆ. ಬರೀ ಕಾಂಗ್ರೆಸ್ ಕಾರ್ಯಕರ್ತರು ಇಲ್ಲ. ಚಿತ್ರಂಗದವರು ಬರದೇ ಇದ್ದರೂ ಹೋರಾಟ ಮಾಡುತ್ತೇವೆ.