ಟಾಲಿವುಡ್ ಸ್ಟಾರ್ ಜೂನಿಯರ್ ಎನ್ಟಿಆರ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ರಾಜಮೌಳಿ ನಿರ್ದೇಶನದ ಆರ್ಆರ್ಆರ್ ಸಿನಿಮಾ ಬಿಡುಗಡೆ ಆದಾಗಿನಿಂದ ಎನ್ಟಿಆರ್ ಇಮೇಜ್ ಬದಲಾಗಿದೆ. ತಾರಕ್, ಗ್ಲೋಬಲ್ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ವಿದೇಶದಲ್ಲಿ ಕೂಡಾ ಅವರಿಗೆ ಅಭಿಮಾನಿಗಳಿದ್ದಾರೆ. ಆಸ್ಕರ್ ಸಮಾರಂಭಕ್ಕಾಗಿ ಅಮೆರಿಕಾ ತೆರಳಿದ್ದಾಗ ಅಲ್ಲಿನ ಮಾಧ್ಯಮಗಳು ಜೂನಿಯರ್ ಎನ್ಟಿಆರ್ ಸಂದರ್ಶನ ಮಾಡಿ ಪ್ರಸಾರ ಮಾಡಿದ್ದವು. ಈಗ ತಾರಕ್ ಬಾಲಿವುಡ್ಗೆ ಕೂಡಾ ಎಂಟ್ರಿ ಕೊಟ್ಟಿದ್ದಾರೆ. ಈ ನಡುವೆ ಜೂನಿಯರ್ ಎನ್ಟಿಆರ್ ಅವರ ಹೊಸ ಫೋಟೋವೊಂದು ವೈರಲ್ ಆಗುತ್ತಿದ್ದು ಆ ಫೋಟೋ ನೋಡಿ ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಜೂನಿಯರ್ ಎನ್ಟಿಆರ್ ದುಬೈಗೆ ತೆರಳಿದ್ದರು. ಅಲ್ಲಿ ಅವರು ಉಳಿದುಕೊಂಡಿದ್ದ ಹೋಟೆಲ್ ಸಿಬ್ಬಂದಿಯೊಂದಿಗೆ ತೆಗೆಸಿಕೊಂಡ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆ ಫೋಟೋ ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ಇದ್ದಕ್ಕಿದ್ದಂತೆ ಜೂನಿಯರ್ ಎನ್ಟಿಆರ್ ಇಷ್ಟು ಸಣ್ಣ ಆಗಿರುವುದನ್ನು ನೋಡಿ ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಎನ್ಟಿಆರ್ ಹೈದರಾಬಾದ್ನಲ್ಲಿ ಸಿನಿಮಾ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದ್ದರು. ಆಗ ಅವರು ಎಂದಿನಂತೆ ಇದ್ದರು. ಆದರೆ ಈಗ ನೋಡಿದರೆ ಬಹಳ ಸಣ್ಣಗಾಗಿದ್ದಾರೆ. ಇಷ್ಟು ಬೇಗ ಅವರು ಸಣ್ಣ ಆಗೋಕೆ ಕಾರಣ ಏನು? ಯಾವುದಾದರೂ ಸಿನಿಮಾ ಪಾತ್ರಕ್ಕಾಗಿ ಅವರು ಸಣ್ಣ ಆಗಿದ್ದಾರಾ? ಅಥವಾ ಅವರಿಗೆ ಯಾವುದಾದರೂ ಆರೋಗ್ಯ ಸಮಸ್ಯೆ ಕಾಡುತ್ತಿದೆಯಾ ಎಂಬ ಚರ್ಚೆ ಶುರುವಾಗಿದೆ.

ಜ್ಯೂನಿಯರ್ ಎನ್ಟಿಆರ್ ಓಜೆಂಪಿಕ್ ಎಂಬ ಔಷಧ ಸೇವನೆ ಮಾಡುತ್ತಿದ್ದಾರೆ ಎಂಬ ಸುದ್ದಿ ಕೂಡಾ ಹರಿದಾಡುತ್ತಿದೆ. ಹೆಚ್ಚು ತೂಕ ಇರುವವರು ಅಡ್ಡ ಪರಿಣಾಮಗಳಿಲ್ಲದೆ ಕಡಿಮೆ ಅವಧಿಯಲ್ಲಿ ತೂಕ ಇಳಿಸಿಕೊಳ್ಳಲು ಆ ಔಷಧವನ್ನು ಸೇವಿಸುತ್ತಾರಂತೆ. ಅದನ್ನು ಮಧುಮೇಹದ ಚಿಕಿತ್ಸೆಗೆ ಕೂಡಾ ಬಳಸುತ್ತಾರೆ ಎನ್ನಲಾಗಿದೆ. ಅದರಲ್ಲೂ ಹೆಚ್ಚಾಗಿ ಹಾಲಿವುಡ್ ನಟ-ನಟಿಯರು ಈ ಔಷಧವನ್ನು ಹೆಚ್ಚಾಗಿ ಬಳಸುತ್ತಾರಂತೆ. ಆದರೆ ಎನ್ಟಿಆರ್ ಆ ಔಷಧ ಬಳಸುತ್ತಿರುವ ಕಾರಣ ಏನು ಎಂಬ ಆತಂಕ ಅವರ ಅಭಿಮಾನಿಗಳನ್ನು ಕಾಡುತ್ತಿದೆ. ಆದರೆ ಮತ್ತೊಂದೆಡೆ, ಜ್ಯೂನಿಯರ್ ಎನ್ಟಿಆರ್ ಯಾವುದೇ ರೀತಿಯ ಔಷಧ ಸೇವಿಸುತ್ತಿಲ್ಲ. ಅವರು ನೈಸರ್ಗಿಕವಾಗಿಯೇ ತೂಕ ಇಳಿಸಿದ್ದಾರೆ. ವರ್ಕೌಟ್ ಹಾಗೂ ಒಳ್ಳೆ ಡಯಟ್ ಫಾಲೋ ಮಾಡುತ್ತಿದ್ದಾರೆ ಎಂದು ಅವರ ಆಪ್ತ ಮೂಲಗಳು ಹೇಳುತ್ತಿದೆ.
ನಂದಮುರಿ ತಾರಕ್ ರಾಮಾರಾವ್, ಜೂನಿಯರ್ ಎನ್ಟಿಆರ್ ಎಂದೇ ಫೇಮಸ್. ಕುಟುಂಬದ ಬಗ್ಗೆ ಹೇಳುವುದಾದರೆ, ಇವರ ತಂದೆ ನಂದಮುರಿ ಹರಿಕೃಷ್ಣ. ತಾತ ಎನ್ಟಿ ರಾಮಾರಾವ್ ತೆಲುಗು ಚಿತ್ರರಂಗದ ಆರಾಧ್ಯ ದೈವ. ತಾತ, ತಂದೆ ಸೇರಿದಂತೆ ಕುಟುಂಬದಲ್ಲೇ ಬಹಳಷ್ಟು ಮಂದಿ ಚಿತ್ರರಂಗದಲ್ಲಿ ಇದ್ದಿದ್ದರಿಂದ ತಾರಕ್ ಚಿತ್ರರಂಗಕ್ಕೆ ಬರುವುದು ಸುಲಭವಾಯ್ತ. 1991 ರಲ್ಲಿ ಬ್ರಹ್ಮಶ್ರೀ ವಿಶ್ವಾಮಿತ್ರ ಚಿತ್ರದಲ್ಲಿ ಬಾಲನಟನಾಗಿ ಅಭಿನಯಿಸುವ ಮೂಲಕ ತಾರಕ್ ಚಿತ್ರರಂಗಕ್ಕೆ ಬಂದರು. 1997ರಲ್ಲಿ ನಿನ್ನು ಚೂಡಾಲನಿ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುವ ಮೂಲಕ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದರು.

ಸ್ಟೂಡೆಂಟ್ ನಂಬರ್ 1, ಸಿಂಹಾಂದ್ರಿ, ನರಸಿಂಹುಡು, ಯಮದೊಂಗ, ನಾನಕು ಪ್ರೇಮತೋ, ಜನತಾ ಗ್ಯಾರೇಜ್ ಸೇರಿದಂತೆ ತಾರಕ್ ಸುಮಾರು 30ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ದೇವರ ಸಿನಿಮಾ ತೆರೆ ಕಂಡಿತ್ತು. ಸಿನಿಮಾ ಮುಂದುವರೆದ ಭಾಗ ಮುಂದಿನ ವರ್ಷ ರಿಲೀಸ್ ಆಗಲಿದೆ. ಇದರ ಜೊತೆಗೆ ತಾರಕ್ ಇತ್ತೀಚೆಗೆ ಬಾಲಿವುಡ್ಗೆ ಕೂಡಾ ಎಂಟ್ರಿ ಕೊಟ್ಟಿದ್ದಾರೆ. ಹೃತಿಕ್ ರೋಷನ್ ಜೊತೆ ವಾರ್ 2 ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ಜೊತೆ ಸಿನಿಮಾ ಮಾಡಲು ಸಜ್ಜಾಗುತ್ತಿದ್ದಾರೆ. ಈ ಚಿತ್ರಕ್ಕೆ ಡ್ಯ್ರಾಗನ್ ಎಂದು ಹೆಸರಿಡಲಾಗಿದೆ.