ಗಾಂಧಿನಗರಕ್ಕೆ ಪ್ರತಿದಿನ ನೂರಾರು ಪ್ರತಿಭೆಗಳು ಬರುತ್ತಾರೆ. ಕೆಲವರು ಇಲ್ಲಿ ಗಟ್ಟಿಯಾಗಿ ನೆಲೆಯೂರಿದರೆ, ಕೆಲವರು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ವಾಪಸ್ ಹೋಗುತ್ತಾರೆ. ಕೆಲವರು ಇಂದಿಗೂ ಅವಕಾಶಕ್ಕಾಗಿ ಸೈಕಲ್ ಹೊಡೆಯುತ್ತಿದ್ದಾರೆ. ಹೊಸಬರು ಮಾತ್ರವಲ್ಲದೆ ಈಗಾಗಲೇ ಚಿತ್ರರಂಗದಲ್ಲಿ ಹೆಸರು ಮಾಡಿರುವ ಕಲಾವಿದರ ಕುಟುಂಬದಿಂದ ಕೂಡಾ ಅನೇಕರು ಸಿನಿಮಾಗೆ ಎಂಟ್ರಿ ಕೊಟ್ಟಿದ್ದಾರೆ. ಅದರಲ್ಲಿ ಡಾ ರಾಜ್ಕುಮಾರ್ ಮೊಮ್ಮಗ ಷಣ್ಮುಖ ಗೋವಿಂದರಾಜ್ ಕೂಡಾ ಒಬ್ಬರು.
ಅಣ್ಣಾವ್ರ ಕುಟುಂಬದಿಂದ ಅವರ ಮಕ್ಕಳ ನಂತರ ಈಗ ಮೊಮ್ಮಗಳು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಶಿವರಾಜ್ಕುಮಾರ್ ಪುತ್ರಿ ನಿವೇದಿತಾ ಚಿತ್ರರಂಗದಲ್ಲಿ ನಿರ್ಮಾಪಕಿಯಾಗಿದ್ದಾರೆ. ರಾಘವೇಂದ್ರ ರಾಜ್ಕುಮಾರ್ ಪುತ್ರರಾದ ವಿನಯ್ ರಾಜ್ಕುಮಾರ್, ಯುವ ರಾಜ್ಕುಮಾರ್ ನಾಯಕರಾಗಿ ಎಂಟ್ರಿ ಕೊಟ್ಟಿದ್ದಾರೆ. ಡಾ ರಾಜ್ಕುಮಾರ್ ಪುತ್ರಿ ಪೂರ್ಣಿಮಾ ಅಳಿಯ ರಾಮ್ಕುಮಾರ್ ಅವರ ಮಗ ಧೀರೆನ್ ಹಾಗೂ ಮಗಳು ಧನ್ಯಾ ಕೂಡಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈಗ ಅಣ್ಣಾವ್ರ ಹಿರಿಯ ಮಗಳು ಲಕ್ಷ್ಮೀ ಹಾಗೂ ಅಳಿಯ ಗೋವಿಂದರಾಜು ದಂಪತಿ ಪುತ್ರ ಷಣ್ಮುಖ ಗೋವಿಂದರಾಜ್ ಕೂಡಾ ಸ್ಯಾಂಡಲ್ವುಡ್ಗೆ ಬಂದಿದ್ದಾರೆ. ಷಣ್ಮುಖ ನಟಿಸಿರುವ ನಿಂಬಿಯಾ ಬನಾದ ಮ್ಯಾಗ ಸಿನಿಮಾ ಈಗಾಗಲೇ ರಿಲೀಸ್ ಆಗಿದೆ.

ನಿಂಬಿಯಾ ಬನಾದ ಮ್ಯಾಗ ಸಿನಿಮಾ ನೋಡಿ ಕೆಲವರು ಮೆಚ್ಚಿದ್ದಾರೆ, ಅಣ್ಣಾವ್ರ ಕುಟುಂಬದಿಂದ ಮತ್ತೊಂದು ಕುಡಿ ಚಿತ್ರರಂಗಕ್ಕೆ ಬಂದಿರುವುದಕ್ಕೆ ಕೆಲವರು ಖುಷಿಯಾಗಿದ್ದಾರೆ. ಹೊಸ ಕಲಾವಿದರಿಗೆ ಪ್ರೋತ್ಸಾಹ ಕೊಟ್ಟು ಕನ್ನಡ ಚಿತ್ರರಂಗವನ್ನು ಬೆಳೆಸಬೇಕು ಅನ್ನೋದು ಇನ್ನೂ ಕೆಲವರ ಆಸೆ. ಆದರೆ ಇದೆಲ್ಲದರ ನಡುವೆ ಷಣ್ಮುಖ ಅವರ ಮೂಗಿನ ಬಗ್ಗೆ ಕಾಮೆಂಟ್ ಪಾಸ್ ಮಾಡುವವರು ಹೆಚ್ಚಾಗುತ್ತಿದ್ದಾರೆ. ಚಿತ್ರರಂಗದಲ್ಲಿ ಬಾಡಿ ಶೇಮಿಂಗ್ ಹೆಚ್ಚಾಗುತ್ತಿದೆ. ಸ್ಟಾರ್ ನಟಿಯರನ್ನೂ ಬಿಡದಂತೆ ಎಷ್ಟೋ ಜನರು ಮನಸ್ಸಿಗೆ ಬಂದಂತೆ ಕಾಮೆಂಟ್ ಮಾಡುತ್ತಾ ಬಂದಿದ್ದಾರೆ. ಕೆಲವರು ಅದಕ್ಕೆ ಸರಿಯಾದ ಉತ್ತರ ಕೊಟ್ಟರೆ, ಇನ್ನೂ ಕೆಲವು ಕಲಾವಿದರು ಯಾರ ಕಾಮೆಂಟ್ಗಳಿಗೂ ತಲೆ ಕೆಡಿಸಿಕೊಳ್ಳದೆ ತಾವಾಯ್ತು ತಮ್ಮ ಕೆಲಸವಾಯ್ತು ಎಂದು ಸುಮ್ಮನಾಗುತ್ತಾರೆ.

ಷಣ್ಮುಖ ಅವರು ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂದು ತಿಳಿದಾಗಿನಿಂದ ಅವರ ಮೂಗಿನ ಬಗ್ಗೆ ಅನೇಕರು ಕಾಮೆಂಟ್ ಮಾಡುತ್ತಿದ್ದಾರೆ. ದೊಡ್ಮನೆ ಕುಟುಂಬದವರಿಗೆ ಹಣಕ್ಕೇನೂ ಕೊರತೆ ಇಲ್ಲ, ಮೂಗಿಗೆ ಕಾಸ್ಮೆಟಿಕ್ ಸರ್ಜರಿ ಮಾಡಿಸಬಹುದಿತ್ತು ಎಂದು ಕೆಲವರು ವ್ಯಂಗ್ಯವಾಡಿದರೆ, ಕೆಲವರು ದಯವಿಟ್ಟು ಅಣ್ಣಾವ್ರ ಹೆಸರು ಹೇಳಿಕೊಂಡು ಪ್ರಚಾರ ಮಾಡುವುದನ್ನು ನಿಲ್ಲಿಸಿ ಎನ್ನುತ್ತಿದ್ದಾರೆ. ತಮ್ಮ ಬಗ್ಗೆ ಮಾತನಾಡಿಕೊಳ್ಳುವವರ ಬಗ್ಗೆ ಷಣ್ಮುಖ ಗೋವಿಂದರಾಜ್ ಪ್ರತಿಕ್ರಿಯಿಸಿದ್ದಾರೆ. ವಿಜಯಾ ವಾಹಿನಿ ಎಂಬ ಯೂಟ್ಯೂಬ್ ಚಾನೆಲ್ವೊಂದಕ್ಕೆ ಅವರು ನೀಡಿರುವ ಸಂದರ್ಶನದಲ್ಲಿ ತಮ್ಮ ಮೂಗಿನ ಬಗ್ಗೆ ಮಾತನಾಡುವವರ ಬಗ್ಗೆ ಹೀಗೆ ಹೇಳಿದ್ದಾರೆ.
ನನ್ನ ಮೂಗಿನ ಬಗ್ಗೆ ಮಾತನಾಡುವವರಿಗೆ ನಾನು ಏನೇ ಸಂದೇಶ ಕೊಟ್ಟರೂ ಅವರು ಸ್ವೀಕರಿಸುವುದಿಲ್ಲ, ಅದಕ್ಕೆ ನಾನು ನನ್ನ ಎನರ್ಜಿಯನ್ನು ವ್ಯರ್ಥ ಮಾಡಿಕೊಳ್ಳುವುದಿಲ್ಲ. ಏನೇ ಆದರೂ ಜೀವನ ಮುಂದೆ ಹೋಗಬೇಕು, ನಾನು ಇರೋದರ ಬಗ್ಗೆ, ನನ್ನ ಮೂಗಿನ ಬಗ್ಗೆ, ನನ್ನ ಆಕಾರದ ಬಗ್ಗೆ ಜನರು ಕಾಮೆಂಟ್ ಮಾಡುತ್ತಿದ್ದಾರೆ, ಅದು ಅವರಿಗೆ ಬಿಟ್ಟಿದ್ದು, ಏಕೆಂದರೆ ನಾನು ಅದನ್ನೆಲ್ಲಾ ಮನಸ್ಸಿಗೆ ತೆಗೆದುಕೊಂಡರೆ ಈ ಫೀಲ್ಡ್ ಬೇಡ ಎಂದು ಬಿಟ್ಟು ಹೋಗಬೇಕು ಅಷ್ಟೇ, ಅದೊಂದೇ ನನ್ನ ಆಯ್ಕೆ ಎಂದಿದ್ದಾರೆ. ಜೊತೆಗೆ ನೆಪೋಟಿಸಂ ಬಗ್ಗೆ ಕೂಡಾ ಮಾತನಾಡಿದ್ದಾರೆ. ಚಿತ್ರರಂಗದಲ್ಲಿ ನೆಪೋಟಿಸಂ ಇರಬಹುದು, ಅದು ನನಗೆ ಅರ್ಥವಾಗುತ್ತದೆ. ಅದರೆ ಇಲ್ಲಿ ನೆಪೋಟಿಸಂಗಿಂಥ ಪ್ರತಿಭೆ ಮುಖ್ಯ. ಜಗ್ಗೇಶ್, ಯಶ್ ಅವರಂಥ ನಟರು ಹೊರಗಿನಿಂದ ಬಂದು ದೊಡ್ಡ ಹೆಸರು ಮಾಡಿದ್ದಾರೆ ಎಂದು ಷಣ್ಮುಖ ಗೋವಿಂದರಾಜ್ ಹೇಳಿದ್ದಾರೆ.
ಷಣ್ಮುಖ ಗೋವಿಂದರಾಜ್, ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನಲ್ಲಿ ಬಿಬಿಎಂ ಮುಗಿಸಿದ ನಂತರ ಮೆಲ್ಬೊರ್ನ್ನಲ್ಲಿ ಎಂಬಿಎ ಪದವಿ ಪಡೆದು ಅಲ್ಲೇ ಕೆಲಸ ಮಾಡುತ್ತಿದ್ದರು. ಅಲ್ಲಿಂದ ಬೆಂಗಳೂರಿಗೆ ಬಂದು ಎಂಎನ್ಸಿ ಕಂಪನಿಯೊಂದಕ್ಕೆ ಸೇರಿದ್ದರು. 2018ರಲ್ಲಿ ಶಿವಮೊಗ್ಗ ವಕೀಲರಾದ ಬರೂರು ನಾಗರಾಜ್ ಅವರ ಪುತ್ರಿ ಸಿಂಧೂ ಅವರನ್ನು ಮದುವೆ ಆದರು. ತಂದೆ ಗೋವಿಂದರಾಜ್ ಜೊತೆ ಪರದೆ ಹಿಂದೆ ಅನೇಕ ಕೆಲಸಗಳನ್ನು ಮಾಡಿರುವ ಷಣ್ಮುಖ, ಈಗ ನಾಯಕರಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ‘ನಿಂಬಿಯಾ ಬನಾದ ಮ್ಯಾಗ’ ಸಿನಿಮಾ ನಂತರ ‘ಚಿನ್ನದ ಮಲ್ಲಿಗೆ ಹೂವೇ’ ಎಂಬ ಇನ್ನೊಂದು ಸಿನಿಮಾದಲ್ಲಿ ಕೂಡಾ ನಟಿಸುತ್ತಿದ್ದಾರೆ.



